ಮಹಾರಾಷ್ಟ್ರ: ಪ್ರೀತಿಗೆ ಕಣ್ಣಿಲ್ಲ, ವಯಸ್ಸಿಲ್ಲ. ಪವಿತ್ರವಾದ ಪ್ರೀತಿ ಹುಟ್ಟಲು ಯಾವ ವಯಸ್ಸಾದರೂ ಆಗಬಹುದು. ಈ ಮಾತಿಗೆ ಉದಾಹರಣೆಯಾಗಿ ನಿಂತಿದ್ದಾರೆ 75 ರ ವಯಸ್ಸಿನಲ್ಲಿ ಬಾಳ ಸಂಗಾತಿಯನ್ನು ಹುಡುಕಿದ ಬಾಬುರಾವ್ ಪಾಟೀಲ್.
ಇದು ಮಹಾರಾಷ್ಟ್ರದ ʼಜಾನಕಿʼ ವೃದ್ಧಾಶ್ರಮದಲ್ಲಿ ಹುಟ್ಟಿದ ಪ್ರೇಮ ಕಥೆ. ತನ್ನ ಪತ್ನಿಯನ್ನು ಕಳೆದುಕೊಂಡು ಕಳೆದ ಕೆಲ ವರ್ಷಗಳಿಂದ ಜಾನಕಿ ವೃದ್ಧಾಶ್ರಮದಲ್ಲಿ ಬಾಬುರಾವ್ ಪಾಟೀಲ್ ವಾಸುತ್ತಿದ್ದಾರೆ. ಇತ್ತ ಪತಿ ನಿಧನದ ಬಳಿಕ ವೃದ್ಧಾಶ್ರಮವನ್ನೇ ಮನೆ ಮಾಡಿಕೊಂಡು 70 ವರ್ಷದ ಅನುಸಯಾ ಶಿಂಧೆ ಅವರು ವಾಸಿಸುತ್ತಿದ್ದಾರೆ.
75 ವರ್ಷದ ಬಾಬುರಾವ್ ಹಾಗೂ 70 ವರ್ಷದ ಅನುಸಯಾ ಶಿಂಧೆ ಅವರ ಬದುಕಿನ ಒಂಟಿತನಕ್ಕೆ ನೆರವಾದದ್ದು ʼಜಾನಕಿʼ ವೃದ್ದಾಶ್ರಮ. ಪ್ರತಿನಿತ್ಯ ನಗುಮುಖದ ಮಾತಿನೊಂದಿಗೆ ಆರಂಭವಾಗುತ್ತಿದ್ದ ಬಾಬುರಾವ್, ಅನುಸಯಾ ಅವರ ದಿನಚರಿ, ತಿಂಗಳುಗಳು ಹೋಗುತ್ತಿದ್ದಂತೆ ಆತ್ಮೀಯತೆ ಹೆಚ್ಚಾಗುತ್ತ ಹೋಯಿತು. ಸ್ನೇಹ, ಪರಿಚಯ ಪ್ರೇಮದ ಬಂಧಕ್ಕೆ ತಿರುಗಿತು.
ʼವೃದ್ದಾಶ್ರಮʼದಲ್ಲಿ ಇದ್ದ ಇತರರು ಇಬ್ಬರ ಆಪ್ತತೆ ನೋಡಿ, ಇಬ್ಬರು ಮದುವೆಯಾಗಿ ಎಂದು ಅನೇಕಬಾರಿ ಹೇಳಿದ್ದರು. ಕೆಲ ದಿನಗಳ ಹಿಂದೆ ಬಾಬುರಾವ್ ಅನುಸಯಾ ಅವರಲ್ಲಿ ಮದುವೆಯ ಪ್ರಸ್ತಾಪವನ್ನು ಮಾಡಿದ್ದರು. ಮೊದಲಿಗೆ ಪ್ರಪೋಸಲ್ ನಿರಾಕರಿಸಿದ್ದ ಅನುಸಯಾ ಆ ಬಳಿಕ ಎಂಟು ದಿನಗಳ ನಂತರ ಆಯಿತೆಂದು ಮದುವೆಗೆ ಸಮ್ಮತಿಸಿದ್ದಾರೆ.
ಇಬ್ಬರ ಮದುವೆಯನ್ನು ಆಶ್ರಮದಲ್ಲೇ ಎಲ್ಲರೂ ಸೇರಿಕೊಂಡು ಮಾಡಿಸಿದ್ದಾರೆ. ಹಿರಿ ವಯಸ್ಸಿನಲ್ಲಿ ಪರಸ್ಪರ ಜೊತೆಯಾಗಿ ಇರುವ ಕಾರಣದಿಂದ ಮದುವೆಯಾಗಿದ್ದೇವೆ ಎನ್ನುವುದು ನೂತನ ದಂಪತಿಯ ಮಾತು.