Advertisement
ಕೋಲಾರ ನಗರ, ಮಾಲೂರು, ಬಂಗಾರಪೇಟೆ ಪಟ್ಟಣ ಮತ್ತು ಮಾರ್ಗ ಮಧ್ಯದ 45ಕ್ಕೂ ಹೆಚ್ಚು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಯರಗೋಳ್ ಯೋಜನೆ ರೂಪಿಸಲಾಗಿತ್ತು. ಧರ್ಮಸಿಂಗ್ ಸಿಎಂ ಆಗಿದ್ದಾಗ ಜಿಲ್ಲೆಯಲ್ಲಿ ಮೇಘನ್ಪೋಟ ಮಳೆ ಸುರಿದಿತ್ತು. ಆಗ ಬಂಗಾರಪೇಟೆಯಲ್ಲಿ ಎಂಜಿನಿಯರ್ ಆಗಿದ್ದ ಪಾಪೇಗೌಡಗೆ ಜಿಲ್ಲೆಯಿಂದ ತಮಿಳುನಾಡಿಗೆ ಹರಿದು ಹೋಗುತ್ತಿರುವ ಅಗಾಧ ನೀರಿನ ಪ್ರಮಾಣದ ಅರಿವಾಗಿತ್ತು.
Related Articles
Advertisement
ಕೋಲಾರ ದಲ್ಲಿ ಹತ್ತು ಬೃಹತ್ ಗಾತ್ರದ ಓವರ್‌ಹೆಡ್ ಟ್ಯಾಂಕ್ ನಿರ್ಮಾಣ ಮಾಡಲಾಗಿತ್ತು. ಸಿದ್ದು ಸರ್ಕಾರದಿಂದ ಮತ್ತಷ್ಟು ನೆರವು: 2008ರ ನಂತರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳ ನಿರ್ಲಕ್ಷ್ಯಕ್ಕೆ ತುತ್ತಾಗಿದ್ದ ಯರಗೋಳ್ ಯೋಜನೆಯ ಅಣೆಕಟ್ಟೆ ನಿರ್ಮಾಣ ಆಗಲೇ ಇಲ್ಲ. ಆನಂತರ ಸಿದ್ದರಾಮಯ್ಯ ಸಿಎಂ ಆದ ಮೇಲೆ ಯೋಜನೆಗೆ ಆರ್ಥಿಕ ನೆರವು ನೀಡಿ ಯೋಜನೆ ಪೂರ್ಣಗೊಳ್ಳಲು ಸಹಕಾರ ಮಾಡಿದ್ದರು. ಆದರೂ, ಕುಂಟುತ್ತಾ, ಆಗ್ಗಾಗ್ಗೆ ಎಚ್ಚರಿಸಿ ಕೊಳ್ಳುತ್ತಾ ಹೆಚ್ಚುವರಿ ಅನುದಾನ ದಕ್ಕಿಸಿಕೊಳ್ಳುತ್ತಾ ಅಂತೂ ಇಂತೂ ಅಣೆಕಟ್ಟೆ ನಿರ್ಮಾಣ ಕಾಮಗಾರಿ ಯನ್ನು ಗುತ್ತಿಗೆದಾರರು 2020ರಲ್ಲಿ ಪೂರ್ಣಗೊಳಿಸಿದ್ದರು.
ಮೈದುಂಬಿದ ಅಣೆಕಟ್ಟೆ: 2021ರಲ್ಲಿ ಸುರಿದ ಭಾರೀ ಮಳೆಯಿಂದಾಗಿ ಯರಗೋಳ್ ಅಣೆಕಟ್ಟೆಗೆ ಸಾಕಷ್ಟು ನೀರು ಹರಿದು ಬಂದಿತ್ತು. 125 ಅಡಿ ಎತ್ತರದ ಕಟ್ಟೆಯಲ್ಲಿ 115 ಅಡಿ ನೀರು ಸಂಗ್ರಹವಾಗಿತ್ತು. ಆನಂತರ ಮಳೆ ಪ್ರಮಾಣ ಕಡಿಮೆ ಆಗಿ ನೀರು 85 ಅಡಿಗೆ ಕುಸಿದಿತ್ತು. ಇತ್ತೀಚಿಗೆ ಧಾರಾಕಾರವಾಗಿ ಮಳೆ ಸುರಿದ ಕಾರಣ ಆ.3ರಂದು ಯರಗೋಳ್ ಅಣೆಕಟ್ಟೆ ಮೈದುಂಬಿ ಹರಿಯುತ್ತಿದೆ.
ಪೈಪೋಟಿಗೆ ಬಿದ್ದವರಂತೆ ಬಾಗಿನ: ಯರಗೋಳ್ ಕೋಡಿ ಹರಿಯಲು ಆರಂಭವಾಗುತ್ತಿದ್ದಂತೆಯೇ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಜನಪ್ರತಿನಿಧಿಗಳು ಪೈಪೋಟಿಗೆ ಬಿದ್ದವರಂತೆ ಬಾಗಿನ ಅರ್ಪಿಸಲು ಮುಂದಾಗುತ್ತಿದ್ದಾರೆ. ಯೋಜನೆಗೆ ಭೂಮಿಪೂಜೆ ನೆರವೇರಿಸಿದ್ದ ಕುಮಾರಸ್ವಾಮಿ ಸಾಕಷ್ಟು ಟ್ವೀಟ್‌ಗಳ ಮೂಲಕ ಯರಗೋಳ್ ಯೋಜನೆಯ ಕ್ರೆಡಿಟ್ ಪಡೆದುಕೊಳ್ಳಲು ಪ್ರಯತ್ನಿಸಿದ್ದರು. ಶೀಘ್ರವೇ ಜೆಡಿಎಸ್ ನಿಂದ ಬಾಗಿನ ಬಿಡುವುದಾಗಿಯೇ ಘೋಷಿಸಿದ್ದರು. ಕಾಂಗ್ರೆಸ್ ಶಾಸಕರು ಇದು ತಮ್ಮದೇ ಸಾಧನೆ ಎಂಬಂತೆ ಹೇಳಿಕೆಗಳನ್ನು ನೀಡಿದ್ದಲ್ಲದೆ ಸಿದ್ದರಾಮೋತ್ಸವದಿಂದ ವಾಪಸ್ ಬರುತ್ತಿದ್ದಂತೆಯೇ ವರಮಹಾಲಕ್ಷ್ಮಿ ಹಬ್ಬದ ದಿನವೇ ಬಾಗಿನ ಅರ್ಪಿಸಿ ಕೃತಾರ್ಥರಾದರು.
ಬಿಜೆಪಿಯಿಂದಲೂ ಬಾಗಿನಕ್ಕೆ ಸಿದ್ಧತೆ: ಇನ್ನು ಬಿಜೆಪಿ ಯರಗೋಳ್ ಯೋಜನೆಯಲ್ಲಿ ಸಿಎಂ ಆಗಿದ್ದ ಯಡಿ ಯೂರಪ್ಪರ ಪಾಲು ಇದೆ ಎಂದು ಪ್ರಚಾರ ಮಾಡುತ್ತಿದೆ. ಯರಗೋಳ್ ಅಣೆಕಟ್ಟೆಯಿಂದ ಪೈಪ್‌ಲೈನ್ ಹಾಕಿಸಿ ಓವರ್ ಹೆಡ್ ಟ್ಯಾಂಕ್‌ಗಳ ನಿರ್ಮಾಣಕ್ಕೆ ಕಾರಣರಾಗಿದ್ದ ವರ್ತೂರು ಪ್ರಕಾಶ್ ಈಗ ಬಿಜೆಪಿ ಸೇರಿರುವುದರಿಂದ ಇದು ನಮ್ಮದೇ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದೆ. ಬಿಜೆಪಿಯಿಂದಲೂ ಬಾಗಿನ ಅರ್ಪಣೆಗೆ ಸಂಸದ ಮುನಿಸ್ವಾಮಿ ನೇತೃತ್ವವಹಿಸುವುದು ಖಚಿತವಾಗಿದೆ. ಆದರೆ, ಈ ಯಾವುದೇ ಪಕ್ಷಗಳ ಜನಪ್ರತಿನಿಧಿಗಳಿಗೆ ಈ ಯೋಜನೆಯಡಿ ಇನ್ನೂ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಬಗ್ಗೆ ಕಿಂಚಿತ್ತೂ ಯೋಚನೆ ಇಲ್ಲ.
ಕೋಲಾರದ ಪಾಪೇಗೌಡ, ರವಿಕುಮಾರ್, ತ್ಯಾಗರಾಜು ಮಿತ್ರತ್ರಯರು ಇಂತದ್ದೊಂದು ಯೋಜನೆ ಗುರುತಿಸಿ ಕೋಲಾರ ಜಿಲ್ಲೆಗೆ ಅನುಕೂಲ ಮಾಡಿಕೊಡಲು ಮುಂದಾಗಿದ್ದರು. ಈ ಮೂಲಕ ತಮಿಳುನಾಡಿಗೆ ವ್ಯರ್ಥವಾಗಿ ಮಳೆ ನೀರು ಹರಿದು ಹೋಗದೆ ನೀರಿನ ಅಭಾವ ಎದುರಿಸುತ್ತಿದ್ದ ಕೋಲಾರ ಜಿಲ್ಲೆಯ ಜನತೆಗೆ ಒಳಿತಾಗಲಿ ಎಂಬ ಉದ್ದೇಶವೇ ಯೋಜನೆಯಲ್ಲಿ ಮುಖ್ಯವಾಗಿತ್ತು. ಆದರೆ, ಈಗ 125 ಅಡಿ ತುಂಬಿ ಯರಗೋಳ್ ಅಣೆಕಟ್ಟೆಯಿಂದ ನೀರು ಹರಿದು ಮತ್ತದೇ ತಮಿಳುನಾಡಿಗೆ ಸೇರುತ್ತಿದೆ. ಅಣೆಕಟ್ಟೆಯಲ್ಲಿ ನಿಂತ ನೀರನ್ನು ಜಿಲ್ಲೆಯ ಜನತೆ ನೋಡಿ ಸಂತೃಪ್ತರಾಗುತ್ತಿದ್ದಾರೆ. ರಾಜಕಾರಣಿಗಳು ಅಣೆಕಟ್ಟೆಯನ್ನು ಪೈಪೋಟಿಯ ಮೇಲೆ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ನೀರಿನ ಸದ್ಬಳಕೆ ಮರೆತು ಬಿಟ್ಟಿದ್ದಾರೆ.
ಅಣೆಕಟ್ಟೆಯಿಂದ ನೀರು ಕೋಲಾರ, ಬಂಗಾರಪೇಟೆ, ಮಾಲೂರು ಮತ್ತು 45ಕ್ಕೂ ಹೆಚ್ಚು ಹಳ್ಳಿಗಳಿಗೆ ಪೂರೈಕೆ ಮಾಡಿದಾಗ ಮಾತ್ರವೇ ಯೋಜನೆಯ ಸಾಕಾರ ಎಂಬ ಬಗ್ಗೆ ಲವಲೇಶದ ಕಾಳಜಿಯೂ ಜನಪ್ರತಿನಿಧಿಗಳಿಗೆ ಇಲ್ಲವಾಗಿದೆ. ಜಲಾಶಯದ ನೀರು ಸದ್ಬಳಕೆಯತ್ತ ಗಮನ ಹರಿಸಲಿ ಮಳೆ ನೀರು ವ್ಯರ್ಥ ಆಗಬಾರದೆಂದು ಯರಗೋಳ್ ಅಣೆಕಟ್ಟೆ ನಿರ್ಮಿಸಲಾಗಿದೆ. ಆದರೆ, ಕೋಡಿ ಹರಿಯುತ್ತಾ ನೀರು ತಮಿಳುನಾಡಿನತ್ತ ಹರಿಯುತ್ತಿದ್ದರೂ ಕೋಲಾರದ ರಾಜಕಾರಣಿಗಳು ಸದ್ಬಳಕೆ ಮಾಡಿಕೊಳ್ಳದೇ ಸಂಭ್ರಮಿಸುತ್ತಿದ್ದಾರೆ. ಅವರ ಜನಪರ ಕಾಳಜಿ ಎಂತದ್ದೆಂಬುದು ಜನತೆಗೆ ಅರಿವಾಗುತ್ತಿದೆ.
ಯರಗೋಳ್ ಅಣೆಕಟ್ಟೆಯನ್ನು ತುಂಬಿಸಿ ತಮಿಳುನಾಡಿಗೆ ನೀರು ಬಿಡಲು ನಿರ್ಮಿಸಿದ್ದಲ್ಲ, ಕೋಲಾರ ಜಿಲ್ಲೆಯ ಮೂರು ತಾಲೂಕುಗಳ, 45 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಎಂಬ ವಿಚಾರವನ್ನು ರಾಜ್ಯ ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ಮರೆತೇ ಬಿಟ್ಟಿದ್ದಾರೆ.
ಜನರು ಅಣೆಕಟ್ಟೆಯನ್ನೇ ರಜಾ ದಿನಗಳ ಕಾಲ ಕಳೆಯುವ ತಾಣವಾಗಿ ಗಮನಿಸುತ್ತಿದ್ದಾರೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಯರಗೋಳ್‌ನಿಂದ ನೀರು ಪಂಪ್ ಮಾಡಲು ಮೋಟಾರು, ಯಂತ್ರೋಪಕರಣ ತುರ್ತಾಗಿ ಅಳವಡಿಸಿ, ವಿದ್ಯುತ್ ಸಂಪರ್ಕ ಕಲ್ಪಿಸಿ ಕೋಲಾರ ಜಿಲ್ಲೆಯ ಜನತೆಗೆ ನೀರು ಸರಬರಾಜು ಮಾಡದಿದ್ದರೆ ಯರಗೋಳ್ ಅಣೆಕಟ್ಟೆ ನಿರ್ಮಾಣಕ್ಕೆ ವೆಚ್ಚವಾಗಿರುವ 250 ಕೋಟಿ ರೂ., ನಿರ್ಮಾಣಗೊಂಡಿರುವ ಅಣೆಕಟ್ಟೆಯಲ್ಲಿ ಸಂಗ್ರಹವಾಗಿರುವ 125 ಅಡಿ ಎತ್ತರ ಹಿನ್ನೀರು ವ್ಯರ್ಥ ಎಂಬುದನ್ನು ಬಾಗಿನ ಅರ್ಪಿಸುತ್ತಿರುವ ರಾಜಕಾರಣಿಗಳು, ಕೋಲಾರ ಜಿಲ್ಲೆಯ ಜನತೆ ಅರ್ಥ ಮಾಡಿಕೊಳ್ಳಬೇಕಾಗಿದೆ
– ಕೆ.ಎಸ್.ಗಣೇಶ್