Advertisement

ಜಾತಿ ಮೂಲಕ ಜನರ ವಿಭಜನೆ ಸರಿಯಲ್ಲ

04:45 PM Feb 28, 2020 | Naveen |

ಕೋಲಾರ: ಭಾರತ ದೇಶದಲ್ಲಿ ಜಾತಿ ಭೇದದ ಮೂಲಕ ಜನರನ್ನು ವಿಭಜನೆ ಮಾಡಿದವರಿಗೆ ಶಾಪ ಹಾಕಲೇ ಬೇಕೆಂದು ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು.

Advertisement

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ದಲಿತ ವಚನಕಾರರ ಜಯಂತ್ಸುತ್ಸವ ಉದ್ಘಾಟಿಸಿ ಮಾತನಾಡಿದರು.

ಸಮಾನತೆಯ ಕನಸು ನನಸಾಗಿಲ್ಲ: ದೇಶಕ್ಕೆ ಸ್ವಾತಂತ್ರ್ಯ ಬಂದು 73 ವರ್ಷಗಳಾದರೂ ಇಂದಿಗೂ ಅಸಮಾನತೆ, ಅಸ್ಪೃಶ್ಯತೆ ಆಚರಣೆ ಹೋಗಿಲ್ಲವೆಂಬುದನ್ನು ನೆನಪಿಸಿಕೊಂಡರೆ ನಾವೆಂತ ಜನ ಎನಿಸುತ್ತದೆ. ಅಂಬೇಡ್ಕರ್‌ ಕಂಡ ಸಮಾನತೆಯ ಕನಸು ಇಂದಿಗೂ ನನಸಾಗಿಲ್ಲವೆಂದು ವಿಷಾದಿಸಿದರು.

ದೇಶದ ಪ್ರಗತಿಗೆ ಅಡ್ಡಿ: ತಾವು ವಿಶ್ವದ ಬಹುತೇಕ ದೇಶಗಳನ್ನು ಸುತ್ತಿದ್ದು, ಭಾರತದಲ್ಲಿರುವಷ್ಟು ಜಾತಿ ಪದ್ಧತಿ ಬೇರ್ಯಾವ ದೇಶದಲ್ಲಿಯೂ ಇಲ್ಲ, ಜಾತಿ ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸುವ ಪದ್ಧತಿ ದೇಶದ ಪ್ರಗತಿಗೆ ಅಡ್ಡಿಯಾಗಿದೆ, ಮನುಷ್ಯರಾಗಿ ಹುಟ್ಟಿ ಜಾತಿ ಧರ್ಮ ಮೇಲು ಕೀಳು ಆಚರಿಸುವುದು ನೋವು ತರಿಸುತ್ತದೆ. ಅಂಬೇಡ್ಕರ್‌ ಹಾಗೂ ದಲಿತ ವಚನಕಾರರು ಸಮಾನತೆಯ ಸಮಾಜಕ್ಕಾಗಿಯೇ ಶ್ರಮಿಸಿದ್ದರು, ಅವರ ಆದರ್ಶಗಳಡಿ ದೇಶದ ನಾಗರಿಕರು ಸಮಾನತೆಯ ಆಶಯಗಳನ್ನು ಪಾಲಿಸುವಂತಾ ದರೆ ದೇಶಕ್ಕೆ ಒಳಿತು ಎಂದು ತಿಳಿಸಿದರು.

ವಚನಕಾರರ ಆದರ್ಶ ಅನುಕರಣೆ ಮಾಡಿ: ಜಿಪಂ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌ ಮಾತನಾಡಿ, ಜಾತಿ ಮತ ಭೇದವೆಣಿಸದೆ ನಾವೆಲರೂ ಒಂದೇ ಎಂಬ ಭಾವನೆ ಮೂಡಿಸಿಕೊಳ್ಳಲು ವಚನಕಾರರ ಆದರ್ಶ ಅನುಕರಣೆ ಮಾಡಬೇಕು ಎಂದು ಹೇಳಿದರು.

Advertisement

ಸಮ ಸಮಾಜಕ್ಕಾಗಿ ಶ್ರಮಿಸುತ್ತಿರುವ ಪತ್ರಕರ್ತರು,ಕಲಾವಿದರು ಹಾಗೂ ಸಮಾಜದ ಸಾಧಕರಿಗೆ ನಿವೇಶನಗಳನ್ನು ಹಂಚುವ ಸಲುವಾಗಿಯೇ 50 ಎಕರೆ ಜಮೀನು ಮೀಸಲಿಡುವಂತೆ ಜಿಲ್ಲಾಧಿಕಾರಿಗಳೊಂದಿಗೆ ತಾವು ಮಾತನಾಡಿರುವುದಾಗಿ ಹೇಳಿದರು.

ಜಿಪಂ ಸದಸ್ಯ ಅರುಣ್‌ಪ್ರಸಾದ್‌ ಮಾತನಾಡಿ, ದಲಿತ ವಚನಕಾರರು ಹಾಗೂ ಅಂಬೇಡ್ಕರ್‌ರ ಆಶಯ ಗಳಂತೆ ಪ್ರತಿಯೊಬ್ಬರೂ ಸಮ ಸಮಾಜಕ್ಕಾಗಿ ಶ್ರಮಿಸಬೇಕು ಎಂದರು. ಪ್ರೊ.ರಂಗಾರೆಡ್ಡಿ ಕೋಡಿರಾಮಪುರ ಅವರು ದಲಿತ ವಚನಕಾರರ ಕುರಿತು ಉಪನ್ಯಾಸ ನೀಡಿದರು.

ತಾಪಂ ಅಧ್ಯಕ್ಷ ಸೂಲೂರು ಅಂಜಿನಪ್ಪ, ಅಪರ ಡೀಸಿ ಶಿವಸ್ವಾಮಿ, ಉಪ ವಿಭಾಗಾಧಿಕಾರಿ ಸೋಮಶೇಖರ್‌, ತಹಶೀಲ್ದಾರ್‌ ಶೋಭಿತಾ, ದಲಿತ ಮುಖಂಡರಾದ ಡಾ.ಚಂದ್ರಶೇಖರ್‌, ಪಿವಿಸಿ ಕೃಷ್ಣಪ್ಪ, ಡಿಎಸ್‌ಎಸ್‌ಕೆ ಮಂಜುಳಾ, ಕಸಾಪ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್‌, ಎನ್‌.ಆರ್‌.ಜ್ಞಾನಮೂರ್ತಿ, ದಲಿತ ನಾರಾಯಣಸ್ವಾಮಿ, ಚೇತನ್‌ಬಾಬು, ಮಾಜೇìನಹಳ್ಳಿ ಮಹೇಶ್‌, ಖಾದ್ರಿಪುರ ಬಾಬು ಇದ್ದರು.

ಈನೆಲ ಈಜನ ವೆಂಕಟಾಚಲಪತಿ ತಂಡದಿಂದ ಗಾಯನ ನೆರವೇರಿತು. ಜನ್ನಘಟ್ಟ ಕೃಷ್ಣಮೂರ್ತಿ, ಮತ್ತಿಕುಂಟೆ ಕೃಷ್ಣ ಇತರರಿಂದ ನಾಡಗೀತೆ ಗಾಯನ ನಡೆಯಿತು.

ಪುಷ್ಪಾರ್ಚನೆ: ವಿವಿಧ ದಲಿತ ಸಂಘಟನೆಗಳ ಮುಖಂಡರು ಹಾಗೂ ಅಧಿಕಾರಿಗಳು ವೇದಿಕೆಯ ಮೇಲಿದ್ದ ದಲಿತ ವಚನ ಕಾರರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಮಂಜಯ್ಯ, ಉರಿಲಿಂಗಪೆದ್ದಿ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next