Advertisement

ವಸತಿ ಸೌಲಭ್ಯಕ್ಕೆ ಫ‌ಲಾನುಭವಿಗಳ ಆಯ್ಕೆ ವಿಳಂಬ

03:15 PM Jul 18, 2019 | Naveen |

ಕೋಲಾರ: ಗ್ರಾಮೀಣ ಪ್ರದೇಶದಲ್ಲಿ ಸೂರು ಕಲ್ಪಿಸುವ ನಿಟ್ಟಿನಲ್ಲಿ ಜಾರಿಗೊಂಡಿರುವ ವಿವಿಧ ವಸತಿ ಯೋಜನೆಯಡಿ ಫಲಾನುಭವಿಗಳನ್ನು ಈವರೆಗೂ ಗುರುತಿಸದ ಪಿಡಿಒಗಳನ್ನು ಜಿಪಂ ಸಿಇಒ ಜಿ.ಜಗದೀಶ್‌ ತರಾಟೆಗೆ ತೆಗೆದುಕೊಂಡರು.

Advertisement

ನಗರದ ಜಿಪಂ ಕಚೇರಿಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಮೊದಲು ಮನೆಗಳು ಮಂಜೂರಾಗಿದೆ. ಅಂದಿನಿಂದ ಫಲಾನುಭವಿಗಳನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದರೆ ಇನ್ನೇನು ಕೆಲಸ ಮಾಡುತ್ತೀರಾ ಎಂದು ಪ್ರಶ್ನಿಸಿದರು.

ತಿಂಗಳಾಂತ್ಯದಲ್ಲಿ ಪಟ್ಟಿ ಕಳುಹಿಸಿ: ಜಿಲ್ಲೆಯಲ್ಲಿ 4,456 ಮನೆಗಳು ಜಿಲ್ಲೆಗೆ ಮಂಜೂರಾಗಿ ಎರಡೂ ತಿಂಗಳು ಹೆಚ್ಚು ಸಮಯವಾಗಿದೆ, ಫಲಾನುಭವಿಗಳನ್ನು ಗುರುತಿಸಲು ಪ್ರತಿ ಗ್ರಾಪಂಗೂ ಹಂಚಿಕೆ ಮಾಡಲಾಗಿದೆ. ನೀತಿ ಸಂಹಿತೆ ಮುಗಿದ ಮೇಲೂ ನಿಮಗೆ ಏನು ಕೆಲಸವಿತ್ತು. ಜುಲೈ ಅಂತ್ಯದೊಳಗೆ ಪಟ್ಟಿ ತಯಾರಿಸಿ ಜಿಪಂ ಕಳುಹಿಸಬೇಕು ಎಂದು ಸೂಚಿಸಿದರು.

ಗುರುತಿಸಿ: ಈಗಲೂ ಜಿಲ್ಲೆಯಲ್ಲಿ ವಸತಿ, ನಿವೇಶನ ಇಲ್ಲದೆ ವಾಸ ಮಾಡುತ್ತಿರುವವರು ಇದ್ದಾರೆ. ಈಗಾಗಲೇ ವಸತಿ ಹಾಗೂ ನಿವೇಶನ ರಹಿತರ ಪಟ್ಟಿ ತಯಾರಿಸಲಾಗಿದೆ. ಆ ಪಟ್ಟಿಯಲ್ಲಿನ ಫಲಾನುಭವಿಗಳನ್ನು ಗುರುತಿಸಬೇಕು ಎಂದು ಹೇಳಿದರು.

ತಾಲೂಕಿನ ಬೆಳ್ಳೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂಪರಾಜ್‌ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಹಿಂದೆ ಪಟ್ಟಿ ತಯಾರಿಸುವಾಗ ಕೆಲವರ ಹೆಸರು ಬಿಟ್ಟು ಹೋಗಿದೆ. ಅದನ್ನು ಸೇರಿಸಲು ಗ್ರಾಪಂ ಸದಸ್ಯರು ಒತ್ತಾಯ ಮಾಡುತ್ತಿದ್ದಾರೆ ಎಂದು ತಿಳಿಸಿದರು.

Advertisement

ಹೊಸದಾಗಿ ಹೆಸರು ಸೇರಿಸಬೇಡಿ: ಇದಕ್ಕೆ ಗರಂ ಅದ ಜಿಪಂ ಸಿಇಒ ಜಿ.ಜಗದೀಶ್‌, ಮೊದಲ ಬಾರಿಯೂ ನೀವೇ ಪಟ್ಟಿ ತಯಾರಿಸಿರುವುದು, ಉಳಿದವರ ಹೆಸರು ಹೇಗೆ ಕೈಬಿಟ್ಟಿದೆ, ಅವರೇನು ಆಕಾಶದಿಂದ ಬಂದಿದ್ದಾರೇನು, ಹೊಸದಾಗಿ ಹೆಸರನ್ನು ಸೇರಿಸಬೇಡಿ ಎಂದು ವಿವರಿಸಿದರು.

ವಸತಿ ಕಲ್ಪಿಸದಿದ್ದರೆ ಅಪರಾಧ: ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ಜಿಲ್ಲೆಗೆ 1,700 ಮನೆಗಳ ನಿರ್ಮಾಣದ ಗುರಿ ನೀಡಿದ್ದಾರೆ. ಈ ಯೋಜನೆಯ ಪ್ರಯೋ ಜನೆ ಯನ್ನು ವಸತಿ ರಹಿತ ಹಾಗೂ ನಿವೇಶನ ರಹಿತರೇ ಇರ ಬೇಕು, ಬಡವರಿಗೆ ವಸತಿ ಕಲ್ಪಿಸಲು ಅಗದಿದ್ದರೆ ಅದು ಅಪರಾಧವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇಚ್ಛಾಶಕ್ತಿ ಕೊರತೆ: ನರೇಗಾ ಯೋಜನೆಯಡಿ ಪಂಚಾಯ್ತಿಗಳಿಗೆ ಕೊಟ್ಟಿದ್ದ ಮಾನವ ದಿನ ಸೃಜನ ಗುರಿ ಸಾಧನೆ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದೀರಿ, ವಿವಿಧ ಇಲಾಖೆಗಳ ಸಹಕಾರ ಪಡೆದುಕೊಂಡಿದ್ದರೆ ಸಾಧನೆ ಮಾಡಬಹುದಿತ್ತು. ಇದರಲ್ಲಿ ನಿಮ್ಮಲ್ಲಿ ಇಚ್ಛಾಶಕ್ತಿ ಕೊರತೆ ಕಾಣುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತ್ಯಾಜ್ಯ ಘಟಕ ಪ್ರಾರಂಭಿಸಿ: ಜಿಲ್ಲೆಯ 13 ಗ್ರಾಪಂ ವ್ಯಾಪ್ತಿಯಲ್ಲಿ ಘನ, ದ್ರವ ತ್ಯಾಜ್ಯ ಘಟಕ ನಿರ್ಮಾಣ ಮಾಡಲು 10 ಲಕ್ಷ ರೂ. ಬಿಡುಗಡೆ ಮಾಡಲಾಗಿತ್ತು, 6.5 ಲಕ್ಷ ರೂ. ಕಾರ್ಯಪಾಲಕ ಅಭಿಯಂತರಿಗೆ ಬಿಡುಗಡೆ ಮಾಡಿ, ಕಾಮಗಾರಿ ಕೈಗೊಳ್ಳಲು ತಿಳಿಸಬೇಕು, ಉಳಿದ ಸಣ್ಣಪುಟ್ಟ ಕೆಲಸಗಳನ್ನು ಪಂಚಾಯ್ತಿಯಿಂದಲೇ ಕೈಗೊಳ್ಳಬೇಕು ಎಂದು ಹೇಳಿದರು.

ಘಟಕ ಸ್ಥಾಪನೆಗೆ ಜಾಗ ಸಿಕ್ಕಿಲ್ಲ ಎಂದು ಸುಮ್ಮನೆ ಕುಳಿತಬೇಡಿ, ತಾಲೂಕು ಕಚೇರಿಗೆ ಹೋಗಿ ತಹಶೀಲ್ದಾರ್‌ ಕಡೆಯಿಂದ ಮಾಹಿತಿ ಪಡೆದುಕೊಳ್ಳಿ, ಆನಂತರ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಜಾಗ ಮಂಜೂರು ಮಾಡಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ಪಿಡಿಒಗಳನ್ನು ವಿದ್ಯಾರ್ಥಿನಿಲಯಗಳಿಗೆ ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಿದ್ದು, ಪ್ರತಿ ವಾರ ಭೇಟಿ ನೀಡಿ ಮಕ್ಕಳೊಂದಿಗೆ ಚರ್ಚಿಸಿ ಸ್ಥಿತಿಗತಿ ಬಗ್ಗೆ ವರದಿ ನೀಡಬೇಕು. ಮಕ್ಕಳೊಂದಿಗೆ ಕುಳಿತು ಕೊಂಡು ಊಟ ಮಾಡಬೇಕು, ಶುಚಿ ರುಚಿಯ ಬಗ್ಗೆಯೂ ಮಾಹಿತಿ ನೀಡಬೇಕು ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮಿನಾರಾಯಣ, ಯೋಜನಾ ನಿರ್ದೇಶಕ ಮುನಿಕೃಷ್ಣ, ಸಹಾಯಕ ಯೋಜನಾ ನಿರ್ದೇಶಕ ವಸಂತ್‌ಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next