Advertisement

ಜಿಲ್ಲೆ ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ

04:38 PM Aug 24, 2019 | Team Udayavani |

ಕೋಲಾರ: ಮೂರು ದಿನಗಳ ಕಾಲ ಜಿಲ್ಲೆಯ ಅಂಗನವಾಡಿ, ಶಾಲೆ, ನ್ಯಾಯಬೆಲೆ ಅಂಗಡಿಗಳು, ಗೋಡನ್‌ಗಳು ಹಾಗೂ ಹಾಸ್ಟೆಲ್ಗಳಿಗೆ ಭೇಟಿ ನೀಡಿ ಇಲ್ಲಿನ ವಾಸ್ತವ ಪರಿಸ್ಥಿತಿ ಪರಿಶೀಲನೆ ನಡೆಸಲಾಗಿದ್ದು, ಸರ್ಕಾರಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಎನ್‌.ಕೃಷ್ಣಮೂರ್ತಿ ತಿಳಿಸಿದರು.

Advertisement

ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆಹಾರ ಆಯೋಗವು 2017 ಜು.5 ರಂದು ಅಸ್ತಿತ್ವಕ್ಕೆ ಬಂದಿದ್ದು, 5 ಜನ ಸದಸ್ಯರನ್ನು ಒಳಗೊಂಡಿದೆ. ಇದರವರೆಗೂ 19 ಜಿಲ್ಲೆಗಳಿಗೆ ಭೇಟಿ ನೀಡಿ ಜಿಲ್ಲೆಗಳ ಆಹಾರ ಸುರಕ್ಷತೆ, ಸರಬರಾಜು ಹಾಗೂ ಆಹಾರ ಭದ್ರತೆ ಬಗ್ಗೆ ಪರಿಶೀಲಿಸಿದೆ. ಆಯೋಗವು ಜಾರಿಗೆ ಬಂದ ನಂತರ ಗೋಡನ್‌ಗಳಲ್ಲಿ ಕೊಳೆಯುತ್ತಿದ್ದ ಕೋಟಿಗಟ್ಟಲೆ ಆಹಾರ ಪದಾರ್ಥಗಳನ್ನು ಸಂರಕ್ಷಿಸಿ, ಸರ್ಕಾರಕ್ಕೆ ಆಗುತ್ತಿದ್ದ ನಷ್ಟ ತಪ್ಪಿಸಲಾಗಿದೆ ಎಂದರು.

ಪರಿಶೀಲನೆ: ಜಿಲ್ಲೆಯಲ್ಲಿ ಸರ್ಕಾರವು ಜಾರಿಗೆ ತಂದಿರುವ ಬಿಸಿಯೂಟ ಯೋಜನೆ, ಹಾಸ್ಟೆಲ್ಗಳ ಸೌಲಭ್ಯ, ಅಂಗವಾಡಿಗಳಲ್ಲಿ ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರ, ಗರ್ಭಿಣಿ ಮತ್ತು ತಾಯಂದಿರಿಗೆ ನೀಡುವ ಪೌಷ್ಟಿಕ ಆಹಾರ, ನ್ಯಾಯಬೆಲೆ ಅಂಗಡಿಗಳಲ್ಲಿ ನೀಡುವ ಅನ್ನಭಾಗ್ಯ ಯೋಜನೆ ಸರಿಯಾಗಿ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಲಾಗಿದೆ ಎಂದು ಹೇಳಿದರು.

ಉತ್ತಮ ಜಾರಿ: ಅಪೌಷ್ಟಿಕ ಮಕ್ಕಳನ್ನು (ಸ್ಯಾಮ್‌ ಚಿಲ್ಡ್ರನ್ಸ್‌) ಪೋಷಿಸಲು ಪ್ರತಿ ಜಿಲ್ಲೆಗೆ 10 ಬೆಡ್‌ಗಳ ಆಸ್ಪತ್ರೆ ಕಲ್ಪಿಸಲಾಗಿದ್ದು, ತಾಯಿ ಮತ್ತು ಮಗುವಿನ ಪೋಷಣೆಗೆ ತಲಾ 125 ರೂ. ಹಾಗೂ ಮಗುವಿನ ಔಷಧಿ ಖರ್ಚಿಗೆ 125 ರೂ. ನೀಡಿ 14 ದಿನಗಳು ಪೋಷಣೆ ಮಾಡಿ ಮಕ್ಕಳ ತೂಕವನ್ನು ಹೆಚ್ಚಿಸಲಾಗುತ್ತದೆ. ಈ ಯೋಜನೆಯು ಜಿಲ್ಲೆಯ ಎಸ್‌.ಎನ್‌.ಆರ್‌ ಆಸ್ಪತ್ರೆಯಲ್ಲಿ ಉತ್ತಮವಾಗಿ ನಡೆಯುತ್ತಿದೆ ಎಂದು ಶ್ಲಾಘಿಸಿದರು.

ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ: ಆಯೋಗದ ಸದಸ್ಯರಾದ ಬಿ.ಬಿ.ಹಸಬಿ ಮಾತನಾಡಿ, 3 ದಿನಗಳಲ್ಲಿ 8 ರಿಂದ 10 ನ್ಯಾಯಬೆಲೆ ಅಂಗಡಿಗಳಿಗೆ, 3 ಹಾಸ್ಟೆಲ್ಗಳಿಗೆ ಭೇಟಿ ನೀಡಲಾಗಿದೆ. ಶ್ರೀನಿವಾಸಪುರದ ಬಾಲಕರ ಹಾಸ್ಟೆಲ್ನ ಸ್ಥಿತಿಯು ಹದಗೆಟ್ಟಿದ್ದು, ಕಟ್ಟಡವು ಶಿಥಿಲಾವಸ್ಥೆಯಲ್ಲಿದೆ. ಪಕ್ಕದಲ್ಲೇ ಕೆರೆ ಇರುವುದರಿಂದ ಸೊಳ್ಳೆಗಳು ಹೆಚ್ಚಿವೆ. ಜಿಲ್ಲೆಯಲ್ಲಿ ಹಾಸ್ಟೆಲ್ಗಳಿಗೆ ವಿದ್ಯಾರ್ಥಿಗಳು ಕಡಿಮೆ ಸಂಖ್ಯೆಯಲ್ಲಿ ದಾಖಲಾಗಿದ್ದಾರೆ ಎಂದರು. ಆಯೋಗದ ಸದಸ್ಯರಾದ ಮಂಜುಳಾಬಾಯಿ, ಜಿಲ್ಲಾಧಿಕಾರಿ ಜೆ.ಮಂಜುನಾಥ್‌, ಆಹಾರ ಇಲಾಖೆ ಉಪನಿರ್ದೇಶಕ ನಾಗರಾಜಯ್ಯ ಕೆಳಗಿನಮನಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next