Advertisement

Kolara: ಗಗನಕ್ಕೇರುತ್ತಿರುವ ಟೊಮೆಟೋ ಬೆಲೆ

03:08 PM Jun 19, 2024 | Team Udayavani |

ಕೋಲಾರ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಟೊಮೆಟೋ ಧಾರಣೆ ಏರಿಕೆ ಕಂಡಿದೆ. ಮಂಗಳವಾರ ಟೊಮೆಟೋ 15 ಕೆ.ಜಿ. ಬಾಕ್ಸ್‌ ಧಾರಣೆ 300 ರೂ.ಗಳಿಂದ 900 ರೂ.ಗಳವರೆಗೆ ಮಾರಾಟವಾಗಿದೆ. ಆದರೆ, ಇದೇ ದಿನ ಅತ್ಯುತ್ತಮ ಗುಣಮಟ್ಟದ ಟೊಮೆಟೋ ಪ್ರತಿ ಬಾಕ್ಸ್‌ 1200 ರೂ. ಗಳಿಗೆ ಮಾರಾಟವಾಗುವ ಮೂಲಕ ಪ್ರಗತಿ ಸಾಧಿಸಿದೆ.

Advertisement

ಕಳೆದ ವರ್ಷ ದಾಖಲೆ: ಕೋಲಾರ ಎಪಿಎಂಸಿ ಮಾರುಕಟ್ಟೆಯನ್ನು ಭಾರತದ ಅತಿ ದೊಡ್ಡ ಟೊಮೆಟೋ ಮಾರುಕಟ್ಟೆ ಎಂದು ಗುರುತಿಸಲಾಗಿದೆ. ಮಹಾರಾಷ್ಟ್ರದ ನಾಸಿಕ್‌ ಅಥವಾ ದೇಶದ ಇನ್ನಿತರ ಭಾಗದ ಮಾರುಕಟ್ಟೆಯಲ್ಲಿ ವರ್ಷದಲ್ಲಿ ಕೆಲವೇ ತಿಂಗಳು ಮಾತ್ರವೇ ಟೊಮೆಟೋ ಮಾರಾಟ ಆಗುತ್ತದೆ. ಆದರೆ, ಕೋಲಾರ ಮಾರುಕಟ್ಟೆಯಲಿ ಎಂಥ ಬರಗಾಲ ಇದ್ದರೂ ನಿತ್ಯವೂ ಟೊಮೆಟೋ ಆವಕವಾಗುತ್ತದೆ.

ಜಗತ್ತಿನ ಟೊಮೆಟೋ ಇತಿಹಾಸದಲ್ಲಿ 2023 ಆ. 1 ರಂದು ಟೊಮೆಟೋ ಧಾರಣೆ ಪ್ರತಿ 15 ಕೆ.ಜಿ. ಬಾಕ್ಸ್‌ಗೆ 2700 ರೂ.ಗೆ ಅಂದರೆ ಪ್ರತಿ ಕೆ.ಜಿ. 180 ರೂ. ದಾಖಲೆ ಬೆಲೆಗೆ ಮಾರಾಟವಾಗಿತ್ತು. ಗ್ರಾಹಕರ ಮಾರುಕಟ್ಟೆಯಲ್ಲಿ ಟೊಮೆಟೋ ಪ್ರತಿ ಕೆ.ಜಿ.ಗೆ 250 ರಿಂದ 500 ರೂ. ಗಳವರೆಗೆ ಮಾರಾಟವಾಗಿತ್ತು. ಟೊಮೆಟೋ ಫಸಲಿಗೆ, ಸಾಗಾಣಿಕೆಗೆ ಪೊಲೀಸ್‌ ಬಂದೋಬಸ್ತ್ ಇಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೋಲಾರ ಮಾರುಕಟ್ಟೆಯಲ್ಲಿ ಟೊಮೆಟೋ ತುಂಬಿದ್ದ ಲಾರಿಗಳು ಮಾಲು ಸಮೇತ ಕಳವಾಗಿದ್ದವು.

ಟೊಮೆಟೋ ಸೀಸನ್‌: ಕೋಲಾರ ಟೊಮೆಟೋ ಮಾರುಕಟ್ಟೆ ಒಂದು ವಾರದ ಧಾರಣೆಯನ್ನು ಗಮನಿಸಿದರೆ ಈ ವರ್ಷವೂ ಅಂತದ್ದೇ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ನಿರೀಕ್ಷಿಸಲಾಗು ತ್ತಿದೆ. ಏಕೆಂದರೆ, ದೇಶದ ನಾಸಿಕ್‌ ಸೇರಿದಂತೆ ಇನ್ನಿತರ ರಾಜ್ಯಗಳ ಟೊಮೆಟೋ ಮಾರುಕಟ್ಟೆಗಳು ಸ್ಥಗಿತಗೊಂಡಿದ್ದರೆ ಕೋಲಾರ ಮಾರುಕಟ್ಟೆ ಮಾತ್ರವೇ ಜೂನ್‌ನಲ್ಲಿ ಸೀಸನ್‌ ಎಂದು ಗುರುತಿಸಿಕೊಂಡಿದೆ. ಈ ಅವಧಿಯಲ್ಲಿ ಅತಿ ಹೆಚ್ಚು ಟೊಮೆಟೋ ಆವಕವಾ ಗುತ್ತದೆ. ಟೊಮೆಟೋ ಧಾರಣೆಯೂ ಉತ್ತಮವಾಗಿ ರೈತರಿಗೆ ಉತ್ತಮ ಲಾಭ ಸಿಗುವಂತಾಗುತ್ತದೆ ಎಂಬ ನಿರೀಕ್ಷೆ ಇರುತ್ತದೆ. ಇದೇ ಕಾರಣಕ್ಕೆ ಕೋಲಾರದ ಟೊಮೆಟೋ ಬೆಳೆಗಾರರು ಮೇ ಮಧ್ಯ ಭಾಗದಿಂದ ಆಗಸ್ಟ್‌ವರೆವಿಗೂ ಟೊಮೆಟೋ ಹೆಚ್ಚು ಬೆಳೆದು ಲಾಭ ಮಾಡಿಕೊಳ್ಳುತ್ತಾರೆ.

ವಾರದ ಧಾರಣೆ: ಕೋಲಾರ ಮಾರುಕಟ್ಟೆಯಲ್ಲಿ ಒಂದು ವಾರದಿಂದ ಧಾರಣೆ ಏರಿಕೆ ಕ್ರಮದಲ್ಲಿದೆ. ಜೂ.12 ರಂದು 9936 ಕ್ವಿಂಟಲ್‌ ಟೊಮೆಟೋ ಆವಕವಾಗಿದ್ದು, ಪ್ರತಿ ಕ್ವಿಂಟಲ್‌ ಕನಿಷ್ಠ 530 ಗರಿಷ್ಠ 4670 ರೂ.ಗಳಿಗೆ ಮಾರಾಟವಾಗಿತ್ತು. ಜೂ.13 ರಂದು 10,560 ಕ್ವಿಂಟಲ್‌ ಆವಕವಾಗಿದ್ದು, ಕ್ವಿಂಟಾಲ್‌ ಗೆ ಕನಿಷ್ಠ 530 ರೂ., ಗರಿಷ್ಠ 4530 ರೂ.ಗೆ ಮಾರಾಟವಾಗಿತ್ತು. ಜೂ.14 ರಂದು 8028 ಕ್ವಿಂಟಲ್‌ ಆವಕವಾಗಿದ್ದು, ಕನಿಷ್ಠ 400 ರೂ., ಗರಿಷ್ಠ 5,000 ರೂ.ಗೆ ಮಾರಾಟವಾಗಿತ್ತು. ಜೂ.15 ರಂದು 10,365 ಕ್ವಿಂಟಲ್‌ ಆವಕವಾಗಿದ್ದು, ಕನಿಷ್ಠ 530 ರೂ., ಗರಿಷ್ಠ 5330 ರೂ.ಗೆ ಮಾರಾಟವಾಗಿತ್ತು. ಆದರೆ, ಜೂ.18 ರಂದು ಮಾರುಕಟ್ಟೆಗೆ 9,129 ಕ್ವಿಂಟಲ್‌ ಆವಕವಾ ಗಿದ್ದು, ಕನಿಷ್ಠ 2,667 ರೂ.ಗೆ, ಗರಿಷ್ಠ 6,667 ರೂ.ಗೆ ಮಾರಾಟವಾಗುವ ಮೂಲಕ ಮತ್ತಷ್ಟು ನಿರೀಕ್ಷೆ ಹುಟ್ಟಿಸಿದೆ.

Advertisement

ಆವಕ ಕಡಿಮೆ ಧಾರಣೆ ಹೆಚ್ಚಳ:  ಕೋಲಾರ ಎಪಿಎಂಸಿ ಟೊಮೆಟೋಗೆ ಆವಕವಾಗುತ್ತಿರುವ ಪ್ರಮಾಣವು ಗಣನೀಯ ಪ್ರಮಾಣದಲ್ಲಿ ಇಳಿಕೆಯಾದ ಕಾರಣ ಟೊಮೆಟೋ ಧಾರಣೆ ಹೆಚ್ಚಾಗುತ್ತಿದೆ ಎಂದು ಎಪಿಎಂಸಿ ಮಾರುಕಟ್ಟೆ ಅಧಿಕಾರಿಗಳು ವಿವರಿಸುತ್ತಾರೆ. ಜೂ.17 ರಂದು 2023ರಲ್ಲಿ ಕೋಲಾರ ಮಾರುಕಟ್ಟೆಗೆ 11,700 ಕ್ವಿಂಟಲ್‌ ಟೊಮೆಟೋ ಆವಕವಾಗಿದ್ದರೆ ಈ ವರ್ಷ ಇದೇ ದಿನ ಕೇವಲ 7,400 ಕ್ವಿಂಟಲ್‌ ಟೊಮೆಟೋ ಮಾತ್ರವೇ ಆವಕವಾಗಿದೆ. ಇದರಿಂದ ಜೂ.17 ರಂದು ಕೋಲಾರ ಮಾರುಕಟ್ಟೆಗೆ ಸುಮಾರು 3 ಸಾವಿರ ಕ್ವಿಂಟಲ್‌ ಟೊಮೆಟೋ ಕಡಿಮೆ ಬಂದಿದೆ. ಹಾಗೆಯೇ 78 ಬಾಕ್ಸ್‌ ಟೊಮೆಟೋ ಬದಲಿ ಕೇವಲ 48 ಬಾಕ್ಸ್‌ ಮಾತ್ರವೇ ಹರಾಜು ಪ್ರಕ್ರಿಯೆಗೊಳಾಗಿದೆ.

ಇನ್ನೊಂದು ತಿಂಗಳು ಇದೇ ಸ್ಥಿತಿ: ಈಗ ಇರುವ ರೀತಿಯಲ್ಲಿಯೇ ಮಳೆಯ ಪ್ರಮಾಣ ಮುಂದಿನ ಒಂದು ತಿಂಗಳು ಮುಂದುವರಿದರೆ ಟೊಮೆಟೋ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಮುಂದಿನ 20-30 ದಿನಗಳ ಕಾಲ ಟೊಮೆಟೋ ಧಾರಣೆ ಏರುಮುಖದಲ್ಲೇ ಸಾಗಲಿದೆ ಎಂದು ಹೇಳಲಾಗುತ್ತಿದೆ. ಹಿಂದಿನ ವರ್ಷ ಜೂ. 24 ರಂದು ಬಾಕ್ಸ್‌ ಟೊಮೆಟೋ 1100 ರೂ.ಗಳಿಗೆ ಹಾಗೂ ಆಗಸ್ಟ್‌ 1 ರಂದು 2700 ರೂ.ಗಳಿಗೆ ಮಾರಾಟವಾಗಿತ್ತು.ಆನಂತರ ಆ. 4 ರ ನಂತರ ಧಾರಣೆ ಇಳಿಕೆಯಾಗಿತ್ತು. ಹಿಂದಿನ ವರ್ಷದಂತೆ ಬಾಕ್ಸ್‌ ಟೊಮೆಟೋ ಗರಿಷ್ಠ 2,700 ರೂ. ತಲುಪಬಹುದೇ ಅಥವಾ ಅದನ್ನು ಮೀರುವ ನಿರೀಕ್ಷೆ ರೈತರದ್ದಾಗಿದೆ.

 ನೆರೆರಾಜ್ಯಗಳಲ್ಲಿ ಟೊಮೆಟೋ ಫಸಲಿಲ್ಲ

ಮೇ, ಜೂನ್‌ ಮತ್ತು ಆಗಸ್ಟ್‌ ತಿಂಗಳಿನಲ್ಲಿ ದಕ್ಷಿಣ ಭಾರತದ ರಾಜ್ಯಗಳ ಕೆಲವು ಭಾಗಗಳಲ್ಲಿ ಮಾತ್ರವೇ ಟೊಮೆಟೋ ಬೆಳೆಯಲಾಗುತ್ತದೆ. ಮಹಾರಾಷ್ಟ್ರದ ನಾಸಿಕ್‌ ಮಾರುಕಟ್ಟೆ ಆಗಸ್ಟ್‌ ಮಧ್ಯಭಾಗದಲ್ಲಿ ಆರಂಭವಾಗುತ್ತದೆ. ಅಲ್ಲಿಯವರೆವಿಗೂ ದಕ್ಷಿಣ ರಾಜ್ಯಗಳ ಟೊಮೆಟೋ ರಾಷ್ಟ್ರಕ್ಕೆ ಸರಬರಾಜಾಗುತ್ತದೆ. ಆದರೆ, ಈ ಬಾರಿ ಆಂಧ್ರಪ್ರದೇಶದಲ್ಲಿ ಅಲ್ಪಸ್ವಲ್ಪ ಟೊಮೆಟೋ ಉತ್ಪಾದನೆಯಾಗುತ್ತಿದ್ದರೆ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಟೊಮೆಟೋ ಉತ್ಪಾದನೆ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದಾಗಿ ಕೋಲಾರದ ಟೊಮೆಟೋ ಕಡಿಮೆ ಆವಕವಾಗುತ್ತಿದ್ದರೂ, ಕೇರಳ, ತಮಿಳುನಾಡು ಹಾಗೂ ಸ್ವಲ್ಪ ಆಂಧ್ರಪ್ರದೇಶ ಮತ್ತು ದೇಶದ ಇನ್ನಿತರ ಭಾಗಗಳಿಗೆ ಸರಬರಾಜಾಗುತ್ತಿದೆ. ಇದರಿಂದ ಕೋಲಾರಕ್ಕೆ ಕಡಿಮೆ ಟೊಮೆಟೋ ಬರುತ್ತಿದೆ ಎಂದು ಅಂದಾಜಿಸಲಾಗಿದೆ.

 ಕಡಿಮೆ ಆವಕಕ್ಕೆ ಮಳೆಯೇ ಕಾರಣ

ಈ ಬಾರಿ ಟೊಮೆಟೋ ಮಾರುಕಟ್ಟೆಗೆ ಕಡಿಮೆ ಬರಲು ಮಳೆಯೇ ಮುಖ್ಯ ಕಾರಣವಾಗಿದೆ. ಟೊಮೆಟೋಗೆ ಅಗತ್ಯವಿರುವ ಉಷ್ಣಾಂಶ ಕಡಿ ಮೆಯಾಗಿದ್ದು, ಇದರ ಪರಿಣಾಮ ಫಸಲಿನ ಮೇಲಾಗಿದೆ. ಇದರಿಂದ ಮಾರುಕಟ್ಟೆಗೆ ಬರಬೇ ಕಾಗಿದ್ದ ಮಾಲಿನಲ್ಲಿ ಕಡಿತವುಂಟಾಗಿದೆ. ಮಳೆ ಜತೆಗೆ ಇತ್ತೀಚಿಗೆ ರೈತರನ್ನು ಕಾಡುತ್ತಿರುವ ನಕಲಿ ಬೀಜಗಳು, ಟೊಮೆಟೋ ಗುಣಮಟ್ಟದ ಕೊರತೆ ಮತ್ತಿತರ ಸಮಸ್ಯೆಗಳಿಂದಾಗಿ ಟೊಮೆಟೋ ಉತ್ಪಾದನೆ ಪ್ರಮಾಣದಲ್ಲೂ ಕುಸಿತ ಕಂಡಿದೆ.

“ಮಳೆ ಕಾರಣಕ್ಕಾಗಿ ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಬಂದ ಟೊಮೆಟೋ ಪ್ರಮಾಣ ಕಡಿಮೆಯಾಗಿದೆ. ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಟೊಮೆಟೋ ಉತ್ಪಾದನೆ ಇಲ್ಲದಿರುವುದರಿಂದ ಕೋಲಾರದ ಟೊಮೆಟೋ ಹೆಚ್ಚು ಆ ರಾಜ್ಯಗಳಿಗೆ ಸರಬರಾಜಾಗುತ್ತಿದೆ. ಮಳೆ ವಾತಾ ವರಣ ಮುಂದುವರಿದರೆ ಮುಂದಿನ 20 ದಿನಗಳ ಕಾಲ ಟೊಮೆಟೋ ಧಾರಣೆ ಏರುಮುಖದಲ್ಲಿ ಸಾಗಬಹುದು ಎಂದು ನಿರೀಕ್ಷಿಸಲಾಗಿದೆ.” ವಿಜಯಲಕ್ಷ್ಮಿ, ಕೋಲಾರ ಎಪಿಎಂಸಿ ಕಾರ್ಯದರ್ಶಿ

 

-ಕೆ.ಎಸ್‌.ಗಣೇಶ್‌

 

Advertisement

Udayavani is now on Telegram. Click here to join our channel and stay updated with the latest news.

Next