ಕೋಲಾರ: ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸದಿರಲು ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪರ ಕೈವಾಡವೇ ಕಾರಣ ಎಂಬ ತೀರ್ಮಾನಕ್ಕೆ ಕೋಲಾರ ವಿಧಾನ ಸಭಾಕ್ಷೇತ್ರದ ಸಿದ್ದರಾಮಯ್ಯ ಬೆಂಬಲಿಗರು ಬಂದು ಬಿಟ್ಟಿದ್ದಾರೆ.
ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ತಮಗಿರುವ ದೆಹಲಿ ಪ್ರಭಾವವನ್ನು ಹಲವಾರು ಹೈಕಮಾಂಡ್ ಮುಖಂಡರ ಮೇಲೆ ಬೀರುವ ಮೂಲಕ ಸಿದ್ದು ಕೋಲಾರದಲ್ಲಿ ಸ್ಪರ್ಧಿಸುವ ವಿಚಾರವನ್ನು ವಿವಾದವಾಗಿ ಮಾರ್ಪಡಿಸಿದ್ದಾರೆ. ಸಿದ್ದರಾಮಯ್ಯರಿಗೆ ಕೋಲಾರ ಸುರಕ್ಷಿತವಲ್ಲ ಎಂಬ ಸಂದೇಶವನ್ನು ಮುಟ್ಟುವಂತೆ ತೆರೆಮರೆಯಲ್ಲಿ ಕೆಲಸ ಮಾಡಿದ್ದಾರೆ. ಅಂತಿಮವಾಗಿ ಸಿದ್ದರಾಮಯ್ಯ ಕೋಲಾರ ತೊರೆದು ವರುಣಾ ಆಯ್ಕೆ ಮಾಡಿಕೊಳ್ಳಲು ಕಾರಣರಾಗಿದ್ದಾರೆ ಎಂಬುದನ್ನು ಸಿದ್ದು ಬೆಂಬಲಿಗರು ಖಚಿತಪಡಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ತಮ್ಮ 2ನೇ ಆಯ್ಕೆಯ ಕ್ಷೇತ್ರವಾಗಿ ಆಯ್ಕೆ ಮಾಡಿ ಕೊಳ್ಳಲು ಸಾಧ್ಯವಾಗದಿದ್ದರೆ, ಕೆ.ಎಚ್.ಮುನಿಯಪ್ಪ ಹಾಗೂ ಅವರ ಪುತ್ರಿ ರೂಪಕಲಾರಿಗೆ ಚುನಾವಣೆಯಲ್ಲಿ ಬಿಸಿ ಮುಟ್ಟಿಸಲು ಬೆಂಬಲಿಗರು ನಿರ್ಧರಿಸಿದ್ದಾರೆ.
ಕಠಿಣ ನಿಲುವಿಗೆ ಸಿದ್ಧ: ಈ ಕುರಿತು ಚರ್ಚಿಸಲು ಮಂಗಳವಾರ ಸಂಜೆ ಕೋಲಾರದಲ್ಲಿಯೇ ಒಂದೆಡೆ ಸಭೆ ಸೇರಿದ್ದ ಸಿದ್ದರಾಮಯ್ಯ ಬೆಂಬಲಿಗರು, ಸಿದ್ದರಾಮಯ್ಯರನ್ನು ಕೋಲಾರದಿಂದ ಹೇಗಾದರೂ ಮಾಡಿ ಸ್ಪರ್ಧಿಸುವಂತೆ ಮಾಡಲೇಬೇಕು. ಇಲ್ಲವಾದಲ್ಲಿ ಈವರೆವಿಗೂ ಸಿದ್ದು ಸ್ಪರ್ಧೆಗಾಗಿ ನಡೆಸಿರುವ ಪೂರ್ವಸಿದ್ಧತೆಗಳು ವ್ಯರ್ಥವಾಗಲಿದೆ. ಕಾಂಗ್ರೆಸ್ ಪಕ್ಷದಲ್ಲಿ ಕೆ.ಎಚ್.ಮುನಿಯಪ್ಪರೇ ಹೈಕಮಾಂಡ್‌ನಲ್ಲಿ ಬಲಿಷ್ಠ ಎಂಬ ಸಂದೇಶವನ್ನು ಕಾರ್ಯಕರ್ತರ ವಲಯದಲ್ಲಿ ರವಾನಿಸಿದಂತಾಗುತ್ತದೆ, ಆದ್ದರಿಂದ ಇದಕ್ಕಾಗಿ ಎಂತದ್ದೇ ಕಠಿಣ ನಿಲುವು ತೆಗೆದುಕೊಳ್ಳಲು ಸಿದ್ಧವಾಗಿರಬೇಕೆಂಬ ತೀರ್ಮಾನಕ್ಕೆ ಬಂದಿದ್ದಾರೆ.
ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರುವ ತಂತ್ರವನ್ನು ರೂಪಿಸುವ ಸಲುವಾಗಿ, ಏಪ್ರಿಲ್ 5 ನ್ನು ಗಡುವಾಗಿ ನೀಡಲು ನಿರ್ಧರಿಸಿದ್ದಾರೆ. ಏ.5 ಕ್ಕೆ ಕೋಲಾರ ನಗರಕ್ಕೆ ಕಾಂಗ್ರೆಸ್ ವರಿಷ್ಠ ರಾಹುಲ್‌ಗಾಂಧಿ ಆಗಮಿಸುತ್ತಿದ್ದು, ಅಷ್ಟರೊಳಗಾಗಿ ಸಿದ್ದರಾಮಯ್ಯ ಕೋಲಾರದಿಂದಲೂ ಸ್ಪರ್ಧಿಸುತ್ತಾ ರೆಂಬ ಎರಡನೇ ಪಟ್ಟಿಯನ್ನು ಪ್ರಕಟಿಸಬೇಕು ಎನ್ನು ವುದು ಬಹುತೇಕ ಬೆಂಬಲಿಗರ ಆಗ್ರಹವಾಗಿತ್ತು.
Related Articles
ರೂಪಕಲಾ ಮುನಿಯಪ್ಪಗೆ ಬಿಸಿ ಮುಟ್ಟಿಸಲು ನಿರ್ಧಾರ: ಕೋಲಾರಕ್ಕೆ ಆಗಮಿಸುವ ರಾಹುಲ್ ಗಾಂಧಿಯವರೇ ಅಂತಿಮವಾಗಿ ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆಂದು ಘೋಷಿಸಬೇಕು. ಇಲ್ಲವಾದಲ್ಲಿ ಸಿದ್ದರಾಮಯ್ಯ ಕೋಲಾರ ಸ್ಪರ್ಧೆಗೆ ಅಡ್ಡಿಪಡಿಸಿದ ಕೆ.ಎಚ್.ಮುನಿಯಪ್ಪ ಹಾಗೂ ಅವರ ಪುತ್ರಿ ರೂಪಕಲಾ ಸ್ಪರ್ಧಿಸುವ ದೇವನಹಳ್ಳಿ ಮತ್ತು ಕೆಜಿಎಫ್ ಕ್ಷೇತ್ರಗಳಲ್ಲಿ ಅವರ ವಿರೋಧಿ ನಿಲುವು ತೆಗೆದುಕೊಂಡು ಸಂಘಟಿತ ಪ್ರಯತ್ನದ ಮೂಲಕ ಬಿಸಿ ಮುಟ್ಟಿಸಲು ನಿರ್ಧರಿಸಿದ್ದಾರೆ.
ಈ ಸಭೆಯಲ್ಲಿ ಸಿದ್ದರಾಮಯ್ಯ ಬೆಂಬಲಿಗ ದಲಿತ ಬಲಗೈ ಮುಖಂಡರು ಸೇರಿದಂತೆ ಭೋವಿ, ಪರಿಶಿಷ್ಟ ವರ್ಗ, ಕುರುಬ, ಅಲ್ಪಸಂಖ್ಯಾತ ಹಾಗೂ ಇನ್ನಿತರ ಹಿಂದುಳಿದ ವರ್ಗಗಳ ಮುಖಂಡರು ಭಾಗವಹಿಸಿರುವುದು ವಿಶೇಷ.
ಒತ್ತಡ ಹೇರಲು ತಂತ್ರಗಾರಿಕೆ: ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಲು ಸಾಧ್ಯವಾಗದಿದ್ದರೆ, ತಮ್ಮೆಲ್ಲರ ವಿರೋಧವನ್ನು ಕೇವಲ ಕೆ.ಎಚ್.ಮುನಿ ಯಪ್ಪ ಮಾತ್ರವಲ್ಲದೆ ಅವರ ಪುತ್ರಿ ರೂಪಕಲಾ ಸ್ಪರ್ಧಿಸುವ ಕ್ಷೇತ್ರಗಳಲ್ಲಿಯೂ ಮುಂದುವರೆಸ ಬೇಕೆಂಬ ನಿರ್ಧಾರ ತೆಗೆದುಕೊಂಡಿದ್ದಾರೆ. ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪರಿಗೆ ಮೊದಲ ಪಟ್ಟಿಯಲ್ಲಿಯೇ ದೇವನಹಳ್ಳಿಯಿಂದ ಸ್ಪರ್ಧಿಸುವಂತೆ ಹೆಸರು ಪ್ರಕಟವಾಗಿದ್ದು, ಕೆಜಿಎಫ್ ಕ್ಷೇತ್ರದಲ್ಲಿ ಗೆಲ್ಲುವ ನೆಚ್ಚಿನ ಸ್ಥಾನದಲ್ಲಿರುವ ಅವರ ಪುತ್ರಿ ರೂಪಕಲಾರಿಗೆ ಸಿದ್ದರಾಮಯ್ಯ ಬೆಂಬಲಿಗರು ಬಿಸಿ ಮುಟ್ಟಿಸುವ ತಯಾರಿ ನಡೆಸುವ ಮೂಲಕ ಪ್ರತ್ಯಕ್ಷವಾಗಿಯೇ ಎಚ್ಚರಿಕೆ ರವಾನಿಸಿದ್ದಾರೆ. ಸಿದ್ದರಾಮಯ್ಯರನ್ನು ಕೋಲಾರದಿಂದ ಎರಡನೇ ಆಯ್ಕೆಯ ಕ್ಷೇತ್ರವಾಗಿ ಆಯ್ಕೆ ಮಾಡಿಕೊಳ್ಳಲು ಹೈಕಮಾಂಡ್ ವಲಯದಲ್ಲಿ ಕೆ.ಎಚ್.ಮುನಿಯಪ್ಪ ಅನಿವಾರ್ಯವಾಗಿ ಪ್ರಯತ್ನಿಸಬೇಕು, ಯಾವುದೇ ಹಂತದಲ್ಲಿ ಅಡ್ಡಿಪಡಿಸಬಾರದು ಎಂಬ ಒತ್ತಡ ಹೇರುವ ತಂತ್ರಗಾರಿಕೆ ಇದಾಗಿದೆಯೆಂಬ ಅಭಿಮತ ಸಿದ್ದು ಬೆಂಬಲಿಗರ ಸಭೆಯಲ್ಲಿ ಕೇಳಿ ಬಂದಿದೆ.
ಪ್ರತಿತಂತ್ರ ರೂಪಿಸಬಹುದೇ: ಸಿದ್ದರಾಮಯ್ಯ ಕೋಲಾರ ಸ್ಪರ್ಧೆ ವಿಚಾರವು ದೇವನಹಳ್ಳಿಯಲ್ಲಿ ಕೆ.ಎಚ್.ಮುನಿಯಪ್ಪರ ಮೇಲೂ, ಕೆಜಿಎಫ್ನಲ್ಲಿ ರೂಪಕಲಾರ ಮೇಲೂ ಹೇಗೆ ಕಂಟಕವಾಗಬಹುದು, ಈ ತಂತ್ರಕ್ಕೆ ಕೆ.ಎಚ್.ಮುನಿಯಪ್ಪ ಮತ್ತು ರೂಪಕಲಾ ಯಾವ ಪ್ರತಿತಂತ್ರವನ್ನು ರೂಪಿಸ ಬಹುದು ಎಂಬುದನ್ನು ಕಾದು ನೋಡಬೇಕಿದೆ.
-ಕೆ.ಎಸ್.ಗಣೇಶ್