ಕೋಲಾರ: ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ಪವರ್‌ಗ್ರಿಡ್ ವಿದ್ಯುತ್ ಮಾರ್ಗಕ್ಕೆ ರೈತರಿಂದ ಸ್ವಾಧೀನ ಪಡಿಸಿಕೊಂಡಿರುವ ಜಮೀನಿಗೆ ಸೂಕ್ತ ಪರಿಹಾರ ನೀಡದೇ ವಂಚಿಸುತ್ತಿರುವ ಅಧಿಕಾರಿಗಳು ಹಾಗೂ ತಾಲೂಕಾಡಳಿತದ ವಿರುದ್ಧ ಆ.2ರಂದು ಪ್ರತಿಭಟನೆ ನಡೆಸಲು ರೈತ ಸಂಘ ನಿರ್ಧರಿಸಿದೆ.
ಕೂಡಲೇ ಪ್ರತಿಕಂಬಕ್ಕೆ 25 ಲಕ್ಷ ರೂ., ತಂತಿ ಹಾದುಹೋಗಿರುವ ಜಮೀನಿಗೆ 15 ಲಕ್ಷ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿ ಶುಕ್ರವಾರ ಕಂಬಗಳನ್ನು ಹತ್ತಿ ನೆಟ್ಟು ಬೊಲ್rಗಳನ್ನು ಬಿಚ್ಚುವ ವಿಭಿನ್ನ ರೀತಿಯ ಚಳವಳಿ ಮಾಡಲು ನೊಂದ ರೈತರ ಜಮೀನಿನಲ್ಲಿ ಮಂಗಳವಾರ ಕರೆದಿದ್ದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಪರಿಹಾರ ನೀಡದೇ ವಂಚನೆ: ಸಭೆಯಲ್ಲಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಸರ್ಕಾರಗಳು ಅಭಿವೃದ್ಧಿ ಹೆಸರಿನಲ್ಲಿ ಕೃಷಿ ಜಮೀನನ್ನು ರಸ್ತೆ, ಕೈಗಾರಿಕೆ, ಸೋಲಾರ್ ಮತ್ತು ಪವರ್‌ಗ್ರಿಡ್ ವಿವಿಧ ಯೋಜನೆಗಳಿಗಾಗಿ ವಶಪಡಿಸಿಕೊಂಡು ಅದನ್ನೇ ನಂಬಿ ಜೀವನ ಮಾಡುತ್ತಿದ್ದ ರೈತರನ್ನು ಬೀದಿ ಪಾಲು ಮಾಡಲಾಗುತ್ತಿದೆ. ಜೊತೆಗೆ ಸೂಕ್ತ ಪರಿಹಾರ ನೀಡದೇ ವಂಚಿಸಲಾಗುತ್ತಿದೆ ಎಂದು ಆರೋಪಿಸಲಾಯಿತು.
ಜಮೀನು, ಮರಗಳು ನಾಶ: ವಶಪಡಿಸಿಕೊಂಡ ಜಮೀನಿಗೆ ಎಲ್ಲಾ ದಾಖಲೆಗಳು ನೀಡಿದರೂ ಪರಿಹಾರ ಮಾತ್ರ ನೀಡದೇ ವಂಚನೆ ಮಾಡುತ್ತಿರುವ ಅಧಿಕಾರಿಗಳಿಗೆ ಶ್ರೀರಕ್ಷೆಯಾಗಿ ಸರ್ಕಾರಗಳು ನಿಂತಿರುವುದು ನಾಚಿಕೆಗೇಡಿನ ಸಂಗತಿ. ತಮಿಳುನಾಡಿನಿಂದ ಬರುವ ಪವರ್‌ಗ್ರಿಡ್ ವಿದ್ಯುತ್ ಮಾರ್ಗಕ್ಕೆ ಮಾಲೂರು ವ್ಯಾಪ್ತಿಯ ತೊಳಸನದೊಡ್ಡಿ, ಅಸಂಡಹಳ್ಳಿ, ತಿಪ್ಪಸಂದ್ರ, ಮುತ್ಯಾನಹಟ್ಟಿ, ಮತ್ತಿತರ ಗ್ರಾಮಗಳ 100ಕ್ಕೂ ಹೆಚ್ಚು ರೈತರ ಜಮೀನು ಹಾಳುತ್ತಿದೆ. ಜೊತೆಗೆ ಜಮೀನಿನಲ್ಲಿದ್ದ ತೆಂಗು, ಮಾವು, ಮತ್ತಿತರ ವಾಣಿಜ್ಯ ಮರಗಳು ಈ ಕಾಮಗಾರಿಯಿಂದ ಹಾಳಾಗುತ್ತಿದೆ ಎಂದು ಆರೋಪಿಸಿದರು.
ಎಂಜಿನಿಯರ್‌ರಿಂದ ಕಾನೂನು ಅಸ್ತ್ರ: ಇದನ್ನೇ ನಂಬಿದ್ದ ರೈತರು ಸೂಕ್ತ ಪರಿಹಾರ ಸಿಗದೆ ಪರದಾಡುವಂತಾಗಿದೆ. ಪ್ರತಿ ಗುಂಟೆಗೆ 5 ಸಾವಿರ ರೂ., ಪ್ರತಿ ಮರಕ್ಕೆ 8 ಸಾವಿರ ರೂ.ನಂತೆ ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತಿದ್ದು, ಅದರಲ್ಲೂ ಏಕರೂಪದ ಪರಿಹಾರ ನೀಡದೇ ಅಮಾಯಕ ರೈತರನ್ನು ವಂಚನೆ ಮಾಡುತ್ತಿರುವ ಎಂಜಿನಿಯರ್ ಮೂರ್ತಿಯನ್ನು ಕೇಳಿದರೆ, ರೈತರ ಮೇಲೆ ಕಾನೂನು ಎಂಬ ಅಸ್ತ್ರವನ್ನು ಉಪಯೋಗಿಸಿ ಬೆದರಿಕೆ ಹಾಕುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಕಂಬವೇರಿ ಬೋಲ್ಟ್ ಬಿಚ್ಚಲು ನಿರ್ಧಾರ: ಕೂಡಲೇ ತಹಶೀಲ್ದಾರ್ ವಾರದೊಳಗೆ ಪವರ್‌ಗ್ರಿಡ್ ಸಂಬಂಧಪಟ್ಟ ಅಧಿಕಾರಿಗಳನ್ನು ಮತ್ತು ರೈತರನ್ನು ಸಭೆ ಕರೆದು ಪ್ರತಿ ಕಂಬಕ್ಕೆ 25 ಲಕ್ಷ ರೂ., ತಂತಿ ಹಾದುಹೋಗಿರುವ ಜಮೀನಿಗೆ 15 ಲಕ್ಷ ರೂ. ಪರಿಹಾರ ಕೊಡಿಸಬೇಕೆಂದು ಒತ್ತಾಯಿಸಿ ಆ.2ರಂದು ವಿದ್ಯುತ್ ಹರಿಯುತ್ತಿರುವ ಕಂಬಗಳನ್ನು ಏರಿ ಬೋಲ್r ಬಿಚ್ಚುವ ಚಳವಳಿ ಮಾಡಲು ನೊಂದ ರೈತರ ಜಮೀನಿನಲ್ಲಿ ಕರೆದಿದ್ದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಭೆಯಲ್ಲಿ ತಾಲೂಕು ಆಧ್ಯಕ್ಷ ಹೊಸಹಳ್ಳಿ ವೆಂಕಟೇಶ್, ನಾಗಮ್ಮ, ಚಿಕ್ಕತಮ್ಮಯ್ಯ, ವೆಂಕಟೇಶಪ್ಪ, ನಾರಾಯಣಪ್ಪ, ವೆಂಕಟರಾಮಪ್ಪ, ಮುತ್ತಪ್ಪ, ಚವನ ದೊಡ್ಡಪ್ಪ, ಲಕ್ಷ್ಮಮ್ಮ, ಶಾಂತಮ್ಮ, ಕೊಮ್ಮೇನಹಳ್ಳಿ ಚಂದ್ರು, ರಾಮಸ್ವಾಮಿ, ಜಿಲ್ಲಾ ಸಂಚಾಲಕ ಕೆ. ಶ್ರೀನಿವಾಸಗೌಡ, ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್, ಲಕ್ಷ್ಮೀಸಾಗರ ಮೀಸೆ ವೆಂಕಟೇಶಪ್ಪ, ಮುನಿಶ್ಯಾಮಪ್ಪ, ರೂಪೇಶ್, ಮಾವೇ ಪ್ರಕಾಶ್, ಹರ್ಷ, ವಕ್ಕಲೇರಿ ಹನುಮಯ್ಯ, ಚಂದ್ರಮ್ಮ, ಚಂದ್ರಪ್ಪ, ವೆಂಕಟರಮಣಪ್ಪ, ಶಾಂತಮ್ಮ ಮುಂತಾದವರಿದ್ದರು.