ಕೋಲಾರ: ಒಡೆದ ಮನೆಯಂತಾಗಿರುವ ಜಿಲ್ಲಾ ಕಾಂಗ್ರೆಸ್‌ಗೆ ಮಾಜಿ ಸಿಎಂ ಸಿದ್ದರಾಮಯ್ಯ ಬೆಸುಗೆ ಹಾಕುವರೇ ಎಂಬುದು ಸದ್ಯಕ್ಕೆ ಜಿಲ್ಲೆಯ ರಾಜಕೀಯ ವಲಯದ ಚರ್ಚೆಯಾಗಿದೆ.
ನ.13 ರಂದು ಸಿದ್ದರಾಮಯ್ಯ ಕೋಲಾರಕ್ಕೆ ಆಗಮಿಸಿ ಕುರುಡುಮಲೆ ಗಣೇಶ, ಇನ್ನಿತರ ದೇಗುಲ, ಚರ್ಚ್, ದರ್ಗಾ ಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು, ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆಯನ್ನು ಪರೋಕ್ಷವಾಗಿ ಖಚಿತಪಡಿಸುತ್ತಿದೆ.
ಇಬ್ಭಾಗವಾದ ಗುಂಪುಗಳು: ಕೋಲಾರ ಜಿಲ್ಲೆಯಲ್ಲಿ ಹಳೇ ಮತ್ತು ಹೊಸ ಕಾಂಗ್ರೆಸ್ ಗುಂಪುಗಳು ಕಳೆದ ಲೋಕಸಭಾ ಚುನಾವಣೆ ಸಂದರ್ಭ ದಲ್ಲಿ ಮತ್ತೆಂದೂ ಸೇರಲಾರದಂತೆ ಇಬ್ಭಾಗವಾಗಿವೆ. ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸಬೇಕೆಂಬ ವಿಚಾರದಲ್ಲಿಯೂ ಈ ಗುಂಪುಗಳು ಪರಸ್ಪರ ವಿರೋಧಿ ಧೋರಣೆಯನ್ನೇ ಹೊಂದಿವೆ. ಈ ಗುಂಪುಗಳಿಗೆ ಬೆಸುಗೆ ಹಾಕದೆ ಸಿದ್ದರಾಮಯ್ಯ ಸ್ಪರ್ಧೆ ಫಲಪ್ರದ ಸಾಧ್ಯವೇ ಎಂಬ ವಿಷಯ ಚರ್ಚೆಗೆ ಕಾರಣವಾಗಿದೆ.
ವೈಯಕ್ತಿಕ ಕಾರಣಗಳಿಂದಾಗಿ ದೂರವಾಗಿರುವ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಮತ್ತು ಮಾಜಿ ಕೇಂದ್ರ ಸಚಿವ ಕೆ.ಎಚ್.ಮನಿಯಪ್ಪ ಎರಡೂ ಕಾಂಗ್ರೆಸ್ ಗುಂಪುಗಳ ನಾಯಕತ್ವ ವಹಿಸಿಕೊಂಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕೆ.ಎಚ್. ಮುನಿಯಪ್ಪ ಸೋಲಿಗೆ ರಮೇಶ್‌ಕುಮಾರ್ ಗುಂಪು ಶಕ್ತಿ ಮೀರಿ ಶ್ರಮಿಸಿತ್ತು. ಈ ಹಿನ್ನೆಲೆಯಲ್ಲಿ ಕೆ.ಎಚ್.ಮುನಿಯಪ್ಪ ಮತ್ತವರ ಗುಂಪು ವಿಧಾನಸಭಾ ಚುನಾವಣೆಯಲ್ಲಿ ಸೇಡು ತೀರಿಸಿಕೊಳ್ಳಲು ಕಾದಿವೆ.
Related Articles
ಹಾವು ಏಣಿ ಆಟವಾದ ಪೈಪೋಟಿ: ಕಾಂಗ್ರೆಸ್ ಗುಂಪುಗಳ ಪೈಪೋಟಿ ಸದ್ಯಕ್ಕೆ ಹಾವು ಏಣಿ ಆಟದಂತಿದೆ. ಲೋಕಸಭಾ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪ ಸೋತ ನಂತರ ರಮೇಶ್‌ಕುಮಾರ್ ತಂಡ ಅವರ ಮೇಲೆ ಗದಾ ಪ್ರಹಾರವನ್ನೇ ಮಾಡಿತ್ತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕೆ.ಎಚ್.ಮುನಿಯಪ್ಪ ಬೆಂಬಲಿಗರು ಆಗದಂತೆ ಸಮರ್ಥವಾಗಿ ತಡೆದಿತ್ತು. ವಿಧಾನ ಪರಿಷತ್ ಚುನಾವಣೆಯಲ್ಲಿ ರಮೇಶ್‌ಕುಮಾರ್ ಬಣದ ಅನಿಲ್ ಕುಮಾರ್ ಸ್ಪರ್ಧಿಸುವಂತೆ ಮಾಡಿ ಗೆಲುವು ಸಂಪಾದಿಸಿಕೊಂಡಿತ್ತು. ಕೆ.ಎಚ್.ಮುನಿಯಪ್ಪ ಪ್ರಬಲ ವಿರೋಧಿಗಳಾಗಿರುವ ಚಿಂತಾಮಣಿ ಸುಧಾಕರ್ ಮತ್ತು ಕೊತ್ತೂರು ಮಂಜು ನಾಥ್‌ರನ್ನು ದೆಹಲಿಯಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಸಿದರು. ಇವೆಲ್ಲಾ ಬೆಳವಣಿಗೆಗಳಲ್ಲಿ ಮೇಲಿಂದ ಮೇಲೆ ಬಿದ್ದ ಏಟಿಗೆ ಕೆ.ಎಚ್.ಮುನಿಯಪ್ಪ ಮೂಲೆಗುಂಪಾಗಿದ್ದರು. ರಾಜ ಕೀಯವಾಗಿ ಹೈರಾಣಾಗಿದ್ದರು. ಇದೇ ಕಾರಣಕ್ಕೆ ಪಕ್ಷ ಬಿಡುತ್ತಾರೆಂಬ ವದಂತಿಯೂ ಹರಡಿತ್ತು.
ಆದರೆ, ರಾಹುಲ್ ಗಾಂಧಿ ಪಾದಯಾತ್ರೆಯಲ್ಲಿ ಕೆ.ಎಚ್. ಮುನಿಯಪ್ಪ ಪುಟಿದೆದ್ದರು. ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾದ ನಂತರ ಪಕ್ಷದಲ್ಲಿ ತಮ್ಮ ಸ್ಥಾನ ಮಾನವನ್ನು ಗಟ್ಟಿಗೊಳಿಸಿಕೊಂಡರು. ಎಐಸಿಸಿ ಕಾರ್ಯಕಾರಿ ಸಮಿತಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಇದೀಗ ಮತ್ತದೇ ಹುಮ್ಮಸ್ಸಿ ನಿಂದ ವಿರೋಧಿ ಬಣಕ್ಕೆ ಟಾಂಗ್ ನೀಡಲು ಸಜ್ಜಾಗುತ್ತಿ ದ್ದಾರೆ. ಇದೇ ಅವಧಿಯಲ್ಲಿ ರಮೇಶ್‌ಕುಮಾರ್ ಬಣ ಹಿನ್ನೆಡೆ ಅನುಭವಿಸಿದಂತೆ ಕಾಣಿಸುತ್ತಿದೆ.
ಸಿದ್ದರಾಮಯ್ಯಗೆ ಆಹ್ವಾನ: ಕಾಂಗ್ರೆಸ್ ಗುಂಪುಗಳ ಸಂಘರ್ಷ ಪರಾಕಾಷ್ಠೆ ತಲುಪಿರುವ ಈ ಸನ್ನಿವೇಶದಲ್ಲಿ ರಮೇಶ್‌ಕುಮಾರ್ ನೇತೃತ್ವದ ಗುಂಪು ಕೆ.ಎಚ್.ಮುನಿಯಪ್ಪ ತಂಡದ ವಿರೋಧವನ್ನು ಹಿಮ್ಮೆಟ್ಟಿಸುವ ಮಾರ್ಗೋಪಾಯಗಳನ್ನು ಹುಡುಕುತ್ತಿತ್ತು. ಆಗ ಹೊಳೆದಿದ್ದೆ ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ವಿಚಾರ. ಅಹಿಂದ ಮತದಾರರು ಹೆಚ್ಚಾಗಿರುವ ಕೋಲಾರ ಕ್ಷೇತ್ರ ದಿಂದ ಸಿದ್ದರಾಮಯ್ಯ ಸ್ಪರ್ಧಿಸಿದರೆ ಕೆ.ಎಚ್.ಮುನಿಯಪ್ಪರ ವಿರೋಧವನ್ನು ಸಮರ್ಥವಾಗಿ ಹಿಮ್ಮೆಟ್ಟಿಸಬಹುದು ಎಂಬ ರಾಜಕೀಯ ಲೆಕ್ಕಾಚಾರದಲ್ಲಿ ರಮೇಶ್‌ಕುಮಾರ್, ಎಸ್.ಎನ್. ನಾರಾಯಣಸ್ವಾಮಿ ಇದ್ದಾರೆ ಎನ್ನುವುದು ಜಿಲ್ಲೆಯ ಮನೆ ಮಾತಾಗಿದೆ.
ಈವರೆಗಿನ ಬೆಳವಣಿಗೆಗಳಲ್ಲಿ ಸಿದ್ದರಾಮಯ್ಯರನ್ನು ಕೋಲಾರದಿಂದ ಸ್ಪರ್ಧಿಸುವಂತೆ ಆಹ್ವಾನಿಸುವಲ್ಲಿ ರಮೇಶ್‌ಕುಮಾರ್ ಗುಂಪು ತೋರಿಸಿದ್ದ ಅತ್ಯುತ್ಸಾಹವನ್ನು ಕೆ.ಎಚ್.ಮುನಿಯಪ್ಪ ಗುಂಪು ತೋರಿಸಿಯೇ ಇಲ್ಲ. ಸಿದ್ದರಾಮಯ್ಯ ಸ್ಪರ್ಧೆ ಕುರಿತು ತಮಗೇನೂ ಗೊತ್ತೇ ಇಲ್ಲವೆಂದು ಇತ್ತೀಚಿಗೆ ಸುದ್ದಿಗೋಷ್ಠಿಯಲ್ಲಿ ಕೆ.ಎಚ್.ಮುನಿಯಪ್ಪ ಘೋಷಿಸಿ ವಿರೋಧಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿದ್ದರು.
ಪರ ವಿರುದ್ಧ ನಿಲುವು: ಇಂತ ಸನ್ನಿವೇಶದಲ್ಲೂ ನ.13 ಕೋಲಾ ರಕ್ಕೆ ಸಿದ್ದರಾಮಯ್ಯ ಭೇಟಿ ನೀಡುವುದು ಬಹುತೇಕ ಖಚಿತ ವಾಗಿದೆ. ಆದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಭಿನಂದನಾ ಸಮಾರಂಭದವರೆವಿಗೂ ಒಗ್ಗೂಡದ ಕೋಲಾ ರದ ಕಾಂಗ್ರೆಸ್ ಗುಂಪುಗಳು ಸಿದ್ದರಾಮಯ್ಯರನ್ನು ಹೇಗೆ ಸ್ವಾಗತಿಸುತ್ತವೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಒಡಕಿನ ಮನೆಯಲ್ಲಿ ಒಗ್ಗಟ್ಟು ಸಾಧ್ಯವೇ?
ಸಿದ್ದರಾಮಯ್ಯ ಸ್ಪರ್ಧೆ ಕಾರಣಕ್ಕೆ ಜೆಡಿಎಸ್ ಕೋಲಾರದಿಂದ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. ಸಿದ್ದರಾಮಯ್ಯರಿಗೆ ಪೈಪೋಟಿ ನೀಡುವ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಬಿಜೆಪಿ ವರ್ತೂರು ಪ್ರಕಾಶ್ ಮೂಲಕ ಬಲಗೊಳ್ಳುತ್ತಿದೆ. ಇಂತ ಸಂದರ್ಭದಲ್ಲಿ ಸಿದ್ದರಾಮಯ್ಯರಿಗೆ ವಿರೋಧ ಪಕ್ಷಗಳ ತಂತ್ರಗಾರಿಕೆಯತ್ತ ಚಿತ್ತ ಹರಿಸದಷ್ಟು ಸಮಸ್ಯೆ ಸವಾಲುಗಳು ಸ್ವಂತ ಪಕ್ಷದಲ್ಲಿಯೇ ಸೃಷ್ಟಿಯಾಗಿದೆ. ಕೆ.ಎಚ್.ಮುನಿಯಪ್ಪ ಮತ್ತು ರಮೇಶ್‌ಕುಮಾರ್ ಅವರನ್ನು ಎಡ ಬಲಕ್ಕಿಟ್ಟುಕೊಂಡು ನ.13 ರ ಪ್ರವಾಸ ಮಾಡಿದರೆ ಮಾತ್ರವೇ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಒಗ್ಗಟ್ಟಿನ ಸಂದೇಶ ರವಾನಿಸಲು ಸಾಧ್ಯವಾಗುತ್ತದೆ. ಇಲ್ಲವಾದರೆ ಒಡಕಿನ ಮನೆಯಲ್ಲಿ ಓಡಾಟ ಮಾಡಿದಂತಿರುತ್ತದೆ.
ಸಿದ್ಧು ಮುಂದೆ ಹಲವು ಸವಾಲು ಕೆ.ಶ್ರೀನಿವಾಸಗೌಡ ಜೆಡಿಎಸ್‌ನಿಂದ ದೂರವಾದ ನಂತರ ಅವರ ಬೆಂಬಲಿಗರ ಪೈಕಿ ಕೆಲವರು ಕಾಂಗ್ರೆಸ್ ಬಾವುಟ ಹಿಡಿಯಬಹುದು. ಹಾಗೆಯೇ ವರ್ತೂರು ಪ್ರಕಾಶ್ ಬಿಜೆಪಿಗೆ ಹೋಗಿರುವುದರಿಂದ ಕಾಂಗ್ರೆಸ್ ಹಳೆ ಗುಂಪು ಬಿಜೆಪಿ ಗುಂಪಾಗಿ ಬದಲಾಗಿ ಬಿಟ್ಟಿದೆ. ಇಂತ ಸ್ಥಿತಿಯಲ್ಲಿ ರಮೇಶ್‌ಕುಮಾರ್ ಆಗಲಿ, ಕೆ.ಎಚ್.ಮುನಿಯಪ್ಪ ಆಗಲಿ ತಾವು ಸಿದ್ದರಾಮಯ್ಯರನ್ನು ಗೆಲ್ಲಿಸಿಯೇ ಬಿಡುತ್ತೇವೆ ಎಂದು ಧೈರ್ಯದಿಂದ ಹೇಳುವ ವಾತಾವರಣ ಕೋಲಾರದಲ್ಲಿಲ್ಲ. ಆದರೆ, ಅಹಿಂದ ಮತದಾರರೇ ನಿರ್ಣಾಯಕವಾಗಿರುವ ಕೋಲಾರದಲ್ಲಿ ಪಕ್ಷವನ್ನು ಮೀರಿ ಸಿದ್ದರಾಮಯ್ಯರ ಪರ ಅಭಿಮಾನ ಮತ್ತು ಒಲವಿರುವ ಮತದಾರರ ಸಂಖ್ಯೆ ಹೆಚ್ಚಿದೆ. ಆದರೆ,ಅಭಿಮಾನವನ್ನು ಮತಗಳಾಗಿ ಮಾರ್ಪಡಲು ಪರ ವಿರೋಧಿ ಗುಂಪುಗಳು ಬಿಡುತ್ತವೆಯೇ? ಎಂಬ ಪ್ರಶ್ನೆಯಿದ್ದು, ಪ್ರಸ್ತುತ ಹಲವು ಸವಾಲುಗಳು ಸಿದ್ದರಾಮಯ್ಯ ಅವರ ಮುಂದಿದೆ.
ಮುಂದಿನ ದಿನಗಳಲ್ಲಿ ಸಮಯ ಸಂದರ್ಭ ಬಂದಾಗ ಇಬ್ಬರು (ಕೆ.ಎಚ್.ಮುನಿಯಪ್ಪ ಜೊತೆ )ಒಟ್ಟಾಗಿ ಕಾಣಿಸಿಕೊಳ್ತೀವಿ. ●ರಮೇಶ್‌ಕುಮಾರ್
ಸಿದ್ದರಾಮಯ್ಯ ರಾಜ್ಯದಲ್ಲಿ ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು, ಕೋಲಾರದಿಂದ ಸ್ಪರ್ಧಿಸುತ್ತಿರುವುದು ತಮಗೇನೂ ಗೊತ್ತಿಲ್ಲ. ಪಕ್ಷದಲ್ಲಿ ಚರ್ಚೆಯೂ ಆಗಿಲ್ಲ. ● ಕೆ.ಎಚ್.ಮುನಿಯಪ್ಪ
●ಕೆ.ಎಸ್.ಗಣೇಶ್