Advertisement
2019ರ ಲೋಕಸಭಾ ಚುನಾವಣೆಯಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿ ತನ್ನ ಅಭ್ಯರ್ಥಿ ಎಸ್.ಮುನಿಸ್ವಾಮಿಯನ್ನು ಗೆಲ್ಲಿಸಿಕೊಳ್ಳುವ ಮೂಲಕ ಶುಭಾರಂಭ ಮಾಡಿತ್ತು. ಮುಂದಿನ ಚುನಾವಣೆಯಲ್ಲಿ ಇದೇ ಬಿಜೆಪಿಗೆ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಸವಾಲು ಎದುರಾಗಿತ್ತು. ಆದರೆ, ಹೊಂದಾಣಿಕೆಯ ವಿಚಾರ ಬಂದಾಗ ಜೆಡಿಎಸ್ ಕೋಲಾರ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವುದು ಖಚಿತವಾಗುತ್ತಿದೆ.
Related Articles
Advertisement
2019ರ ಬಲಾಬಲ:
2019ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲ ವ್ಯಕ್ತಪಡಿಸಿದಾಗಲೂ ಕಾಂಗ್ರೆಸ್‌ನ ಕೆ.ಎಚ್.ಮುನಿಯಪ್ಪ 4.98 ಲಕ್ಷ ಮತಗಳನ್ನು ಪಡೆದುಕೊಂಡಿದ್ದರು. ಇದು ಕೆ.ಎಚ್.ಮುನಿಯಪ್ಪ ತನ್ನ ಲೋಕಸಭಾ 28 ವರ್ಷಗಳ ಅವಧಿಯಲ್ಲಿ ತೆಗೆದುಕೊಂಡ ಅತ್ಯಧಿಕ ಮತಗಳಾಗಿದ್ದವು. ಸಾಮಾನ್ಯವಾಗಿ ಕೆ.ಎಚ್.ಮುನಿಯಪ್ಪ 4 ಲಕ್ಷ ಆಸುಪಾಸಿನಲ್ಲಿ ಮತ ಪಡೆದು ತನ್ನ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಗಿಂತಲೂ 15, 20 ಸಾವಿರ ಮತಗಳ ಅಂತರದಿಂದಷ್ಟೇ ಗೆಲುವು ದಾಖಲಿಸುತ್ತಿದ್ದರು. ಹಿಂದಿನ ಯಾವುದೇ ಚುನಾವಣೆಯಲ್ಲಿ 4 ಲಕ್ಷ ಮತಗಳನ್ನು ದಾಟದ ಬಿಜೆಪಿ 2019ರ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪ ವಿರೋಧಿ ಅಲೆಯನ್ನು ಭರ್ಜರಿಯಾಗಿ ಸದ್ಬಳಸಿಕೊಂಡು 5.79 ಲಕ್ಷ ಮತಗಳನ್ನು ಪಡೆದು ಕ್ಷೇತ್ರದಲ್ಲಿ ಮೊದಲ ಗೆಲುವು ದಾಖಲಿಸಿತ್ತು.
ಕಳೆದ 2023ರ ವಿಧಾನಸಭಾ ಚುನಾವಣೆ: ಮತ ಚಲಾವಣೆ:
ಕೇವಲ ನಾಲ್ಕು ತಿಂಗಳ ಹಿಂದಷ್ಟೇ ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾವಣಾ ವಿಚಾರದಲ್ಲಿ ಮಹತ್ವದ ಬದಲಾವಣೆ ಕಂಡು ಬಂದಿತ್ತು. ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕೋಲಾರದ ಆರು ವಿಧಾನಸಭಾ ಕ್ಷೇತ್ರಗಳು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ, ಶಿಡ್ಲಘಟ್ಟ ಕ್ಷೇತ್ರಗಳು ಸೇರಿದಂತೆ ಮತದಾರರು ಕಾಂಗ್ರೆಸ್‌ನತ್ತ ಒಲವು ತೋರಿಸಿದ್ದರು. ಲೋಕಸಭಾ ವ್ಯಾಪ್ತಿಯ ಕ್ಷೇತ್ರಗಳಲ್ಲಿ ಒಟ್ಟಾರೆಯಾಗಿ ಕಾಂಗ್ರೆಸ್ 5.79 ಲಕ್ಷ ಮತ ಪಡೆದುಕೊಂಡಿದ್ದರೆ, ಜೆಡಿಎಸ್ 4.71 ಲಕ್ಷ ಮತ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಆದರೆ, ಬಿಜೆಪಿ ಕೇವಲ 1.93 ಲಕ್ಷ ಮತಗಳನ್ನು ಪಡೆದು ಯಾವುದೇ ಶಾಸಕರನ್ನು ಗೆಲ್ಲಿಸಿಕೊಳ್ಳಲಾಗದಂತ ಹೀನಾಯ ಸ್ಥಿತಿ ಗಿಳಿದುಬಿಟ್ಟಿತ್ತು.
ಅಭ್ಯರ್ಥಿ ಗುಟ್ಟು ಬಿಟ್ಟು ಕೊಡದ ಜೆೆಡಿಎಸ್:
ವಿಧಾನಸಭಾ ಚುನಾವಣೆಯಲ್ಲಿ ಬಿದ್ದಿರುವ 4.71 ಲಕ್ಷ ಮತಗಳೇ ಇಂದು ಜೆಡಿಎಸ್‌ಗೆ ಕೋಲಾರ ಕ್ಷೇತ್ರದ ಮೇಲೆ 40 ವರ್ಷಗಳ ನಂತರ ಪ್ರೀತಿ ಹುಟ್ಟಲು ಕಾರಣವಾಗಿದೆ. ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ತಮಗೆ ಬಿದ್ದಿರುವ 4.71 ಲಕ್ಷ ಮತಗಳನ್ನು ಕಾಪಾಡಿಕೊಂಡು ಬಿಜೆಪಿಗೆ ಬಿದ್ದಿರುವ 1.93 ಲಕ್ಷ ಮತಗಳನ್ನು ತನ್ನತ್ತ ವರ್ಗಾಯಿಸಿಕೊಂಡರೆ 6 ಲಕ್ಷಕ್ಕೂ ಅಧಿಕ ಮತಗಳು ಬೀಳುವ ಸಾಧ್ಯತೆ ಇರುವುದರಿಂದ ಜೆಡಿಎಸ್ 40 ವರ್ಷಗಳ ನಂತರ ಕೋಲಾರವನ್ನು ಬಿಜೆಪಿ ಬೆಂಬಲದೊಂದಿಗೆ ಗೆಲ್ಲಲೇಬೇಕೆಂದು ನಿರ್ಧರಿಸಿ ಹೊಂದಾಣಿಕೆಯಲ್ಲಿ ತನಗೆ ಕೋಲಾರ ಬಿಟ್ಟು ಕೊಡಬೇಕೆಂದು ಕೇಳುತ್ತಿದೆ. ಮೇಲ್ನೋಟಕ್ಕೆ ಗೆಲುವಿನ ಲೆಕ್ಕಾಚಾರ ಹಾಕಿ ಕ್ಷೇತ್ರ ಕೇಳುತ್ತಿರುವ ಜೆಡಿಎಸ್ ತನ್ನ ಅಭ್ಯರ್ಥಿ ಯಾರೆಂಬುದರ ಗುಟ್ಟು ಇದುವರೆಗೂ ಬಿಟ್ಟು ಕೊಟ್ಟಿಲ್ಲ. 2019ರಲ್ಲಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ತಮಗೆ ಗೆಲುವು ಹೇಗೆ ಸಿಕ್ಕಿತೆಂಬುದರ ಅರಿವು ಇರುವುದರಿಂದಲೇ ಬಿಜೆಪಿ ಸುಲಭವಾಗಿ ಜೆಡಿಎಸ್‌ಗೆ ಕೋಲಾರ ಕ್ಷೇತ್ರ ಬಿಟ್ಟುಕೊಡಲು ಒಪ್ಪಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಗೊಂದಲ:
ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಲೋಕಸಭಾ ವ್ಯಾಪ್ತಿಯಲ್ಲಿ 5.79 ಲಕ್ಷ ಪಡೆದರೂ, ಕಾಂಗ್ರೆಸ್‌ನಲ್ಲಿ ಲೋಕಸಭಾ ಚುನಾವಣೆ ಗೆಲ್ಲಲು ಸಿದ್ಧತೆಗಳು ನಿರೀಕ್ಷಿತ ಮಟ್ಟದಲ್ಲಿ ಕಾಣಿಸುತ್ತಿಲ್ಲ. ಕಾಂಗ್ರೆಸ್‌ನ ಗುಂಪುಗಾರಿಕೆ ಈ ಗೊಂದಲಕ್ಕೆ ಕಾರಣವಾಗಿದೆ. ಕೋಲಾರವನ್ನು 28 ವರ್ಷಗಳ ಕಾಲ ಸಂಸತ್ತಿನಲ್ಲಿ ಪ್ರತಿನಿಧಿಸಿದ್ದ ಕೆ.ಎಚ್.ಮುನಿಯಪ್ಪ ಮತ್ತೆ ಸ್ಪರ್ಧಿಸಲು ಇಚ್ಛಿಸುತ್ತಿದ್ದಾರೆ. ತಾವು ಅಥವಾ ತಾವಲ್ಲದೆ ತಮಗೆ ಬೇಕಾದವರಿಗೆ ಟಿಕೆಟ್ ನೀಡಬೇಕೆಂದು ಈಗಾಗಲೇ ಪಕ್ಷದ ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದಾರೆ. ಇವರ ವಿರೋಧಿ ಗುಂಪು ಹಲವು ಹೆಸರನ್ನು ಪ್ರಸ್ತಾಪಿಸುತ್ತಾ ತೂಕದ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದೆ. ಕಾಂಗ್ರೆಸ್‌ನಲ್ಲಿ ಯಾರ ಕೈ ಮೇಲಾಗುತ್ತದೋ ಆ ಗುಂಪಿಗೆ ಟಿಕೆಟ್ ಸಿಗುತ್ತದೆ. ಇಲ್ಲವೇ ಪಕ್ಷವು ಕಡೇ ಕ್ಷಣದಲ್ಲಿ ಎರಡೂ ಗುಂಪಿಗೂ ಸೇರದ ಮೂರನೇ ವ್ಯಕ್ತಿಗೆ ಟಿಕೆಟ್ ನೀಡುವ ಮೂಲಕ ಗೆಲ್ಲಿಸಿಕೊಂಡು ಬರುವಂತೆ ತಾಕೀತು ಮಾಡುವ ಸಾಧ್ಯತೆ ಇವೆ. ಏಕೆಂದರೆ ಕೋಲಾರದಲ್ಲಿ ಇತ್ತೀಚಿಗೆ ಕಡೇ ಕ್ಷಣದಲ್ಲಿ ಟಿಕೆಟ್ ಪಡೆದವರಿಗೆ ಮತದಾರರು ಗೆಲುವಿನ ಆಶೀರ್ವಾದ ಮಾಡುತ್ತಿದ್ದಾರೆ.
ಲೋಕಸಭಾ ಚುನಾವಣೆ: ಸಂಸದ ಮುನಿಸ್ವಾಮಿ ಮೇಲೆ ತೂಗುಗತ್ತಿ:
2019ರ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪ ವಿರೋಧಿ ಅಲೆಯಲ್ಲಿ ಕಾಂಗ್ರೆಸ್, ಜೆಡಿಎಸ್‌ನ ಪರೋಕ್ಷ ಬೆಂಬಲದೊಂದಿಗೆ ಗೆಲುವು ದಾಖಲಿಸಿದ ಎಸ್.ಮುನಿಸ್ವಾಮಿ ಬಿಜೆಪಿ ಜೆಡಿಎಸ್ ಹೊಂದಾಣಿಕೆಗೆ ಬಲಿಯಾಗುವ ಮೊದಲ ವ್ಯಕ್ತಿಯಾಗಲಿದ್ದಾರೆ. ಏಕೆಂದರೆ, ಕಳೆದ ನಾಲ್ಕು ವರ್ಷಗಳಲ್ಲಿ ಕೋಲಾರ ರಾಜಕಾರಣದ ಏಕೈಕ ಪ್ರಭಾವಿ ವ್ಯಕ್ತಿಯಾಗಿ ಮಿಂಚಿದ್ದ ಎಸ್.ಮುನಿಸ್ವಾಮಿ ಇದೇ ಕ್ಷೇತ್ರದಲ್ಲಿ ಪುನರಾಯ್ಕೆಯಾಗುವ ಕನಸು ಕಾಣುತ್ತಿದ್ದರು. ಇದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಆದರೆ, ಇದೇ ವೇಳೆಗೆ ಹೊಂದಾಣಿಕೆ ರಾಜಕಾರಣದಲ್ಲಿ ಜೆಡಿಎಸ್ ಕೋಲಾರ ಕ್ಷೇತ್ರವನ್ನು ಬಿಟ್ಟುಕೊಡುವಂತೆ ಬೇಡಿಕೆ ಇಡುತ್ತಿರುವುದರಿಂದ ಸಹಜವಾಗಿಯೇ ಬಿಜೆಪಿ ಹಾಲಿ ಸಂಸದ ಎಸ್.ಮುನಿಸ್ವಾಮಿ ಪುನರಾಯ್ಕೆಗೆ ಸಂಚಕಾರ ಎದುರಿಸಬೇಕಾಗಿದೆ. ಬಿಜೆಪಿಯಲ್ಲಿ ಉಳಿದು ಪಕ್ಷದ ಹೊಂದಾಣಿಕೆ ತೀರ್ಮಾನವನ್ನು ಗೌರವಿಸುತ್ತಾರೋ ಇಲ್ಲ ಚುನಾವಣೆಗೆ ಸ್ಪರ್ಧಿಸಲೇಬೇಕೆಂದು ಇತರೇ ಅವಕಾಶ ಆಯ್ಕೆ ಮಾಡಿಕೊಳ್ಳುತ್ತಾರೋ ಕಾದುನೋಡಬೇಕಿದೆ.
-ಕೆ.ಎಸ್.ಗಣೇಶ್