Advertisement

ಕುಡಿವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಿ

03:40 PM Mar 01, 2020 | Naveen |

ಕೋಲಾರ: ಮುಂಬರುವ ಬೇಸಿಗೆಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸದಂತೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪ್ರಭಾರ ಜಿಲ್ಲಾಧಿಕಾರಿ ಎಚ್‌.ವಿ. ದರ್ಶನ್‌ ಸೂಚಿಸಿದರು.

Advertisement

ಜಿಲ್ಲಾಡಳಿತ ಭವನದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳ ಸಭೆ ನಡೆಸಿದ ಅವರು, ಮಾರ್ಚ್‌ನಿಂದ ಮೇ ತಿಂಗಳವರೆಗೆ ಕುಡಿಯುವ ನೀರಿನ ಪರಿಸ್ಥಿತಿಯನ್ನು ನಿಭಾಯಿಸುವುದು ಅತ್ಯಂತ ಪ್ರಮುಖವಾದ ಕೆಲಸ. ನೀರಿನ ಸಮಸ್ಯೆ ಕಂಡುಬರ ಬಹುದಾದ ಗ್ರಾಮಗಳನ್ನು ಈಗಿನಿಂದಲೇ ಗುರುತಿಸಿಟ್ಟುಕೊಳ್ಳಿ, ಸಮಸ್ಯೆ ಎದುರಾದ ತಕ್ಷಣ ಬಗೆಹರಿಸಲು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಿ ಎಂದು ತಿಳಿಸಿದರು.

ಮಂಜೂರಾತಿ ಪಡೆದುಕೊಳ್ಳಿ: ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ಪೋ ರ್ಸ್‌ ಸಮಿತಿ ಸಭೆ ನಡೆಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕೈಗೊಳ್ಳ ಬೇಕಾದ ಕ್ರಮಗಳ ಕುರಿತು ಚರ್ಚಿಸಿ ಕ್ರಿಯಾ ಯೋಜನೆಯೊಂದಿಗೆ 15 ದಿನಗಳ ಒಳಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ ಅವರು, ಈಗಾಗಲೇ ಕ್ರಿಯಾಯೋಜನೆ ಇಲ್ಲದೆ ಕೊರೆದಿರುವ ಬೋರ್‌ವೆಲ್‌ ಗಳಿಗೆ ಘಟನೋತ್ತರ ಮಂಜೂರಾತಿ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

1.50 ಲಕ್ಷ ರೂ. ಹೆಚ್ಚು ನೀಡಲ್ಲ: ಕುಡಿಯುವ ನೀರಿನ ಸಮಸ್ಯೆ ಕಂಡುಬಂದಲ್ಲಿ ಮೊದಲ ಆಯ್ಕೆಯಾಗಿ ಖಾಸಗಿ ಬೋರ್‌ವೆಲ್‌ಗ‌ಳನ್ನು ಪಡೆದುಕೊಳ್ಳಿ, ಮಾಸಿಕ ನಿಗದಿತ ಮೊತ್ತವನ್ನು ನೀಡಲಾಗುವುದು. ನಂತರದ ಆಯ್ಕೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುವುದಾಗಿರಲಿ. ಬೊರ್‌ವೆಲ್‌ ಮರು ಕೊರೆಯಿಸಲು 1.50 ಲಕ್ಷ ರೂ. ಹೆಚ್ಚು ನೀಡಲು ಸಾಧ್ಯವಿಲ್ಲ. ಹಾಗಾಗಿ 700 ಅಡಿಗಿಂತ ಹೆಚ್ಚು ಕೊರೆದಿರುವ ಬೋರ್‌ವೆಲ್‌ ರೀಡ್ರಿಲ್‌ ಮಾಡಲು ಹೋಗಬೇಡಿ ಎಂದು ಸೂಚಿಸಿದರು.

ಮಾಹಿತಿ ಅಪ್‌ಲೋಡ್‌ ಮಾಡಿ: ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುವ ಸಂಬಂಧ  ಆ್ಯಪ್ ನಲ್ಲಿ ಫೋಟೋ, ಮಹಜರು ನಡೆಸಿರುವ ಬಗ್ಗೆ ಮಾಹಿತಿ ಅಪ್‌ಲೋಡ್‌ ಮಾಡಬೇಕು, ನೀರಿನ ಮೂಲವನ್ನು ವಾರಕ್ಕೆ ಎರಡ್ಮೂರು ಬಾರಿಯಾದರೂ ಗುಣಮಟ್ಟದ ಪರೀಕ್ಷೆ ನಡೆಸಬೇಕು. ನೀರು ಸರಬರಾಜು ವಿಚಾರದಲ್ಲಿ ಆಡಿಟ್‌ ವರದಿಯಲ್ಲಿ ವ್ಯಕ್ತವಾಗಿರುವ ಆಕ್ಷೇಪಣೆಗಳನ್ನು ಗಮನ ದಲ್ಲಿಟ್ಟುಕೊಂಡು ಟ್ರಿಪ್‌ಶೀಟ್‌, ಲಾಗ್‌ಬುಕ್‌ಗಳನ್ನು ಕಡ್ಡಾಯವಾಗಿ ನಿರ್ವಹಿಸಬೇಕೆಂದು ತಿಳಿಸಿದರು.

Advertisement

ಎಇಇಗೆ ತರಾಟೆ: ಕಳೆದ ಏಪ್ರಿಲ್‌ನಿಂದ ಈವರೆಗೆ ಕ್ರಿಯಾಯೋಜನೆಯಲ್ಲಿ ಇಲ್ಲದೆ 126 ಬೋರ್‌ವೆಲ್‌ ಕೊರೆಯಿಸಿರುವ ಬಗ್ಗೆ ಗ್ರಾಮೀಣ ನೀರು ಸರಬರಾಜು ಇಲಾಖೆ ಪ್ರಭಾರ ಎಇಇ ಶ್ರೀನಿವಾಸ್‌ ಸಭೆಗೆ ಮಾಹಿತಿ ನೀಡಿದಾಗ ಅಸಮಾಧಾನಗೊಂಡ ಡೀಸಿ, ಕ್ರಿಯಾ ಯೋಜನೆ ಇಲ್ಲದೆ ಬೋರ್‌ವೆಲ್‌ ಕೊರೆಯಿಸದಂತೆ ಕಳೆದ ತಿಂಗಳ ಹಿಂದೆಯೇ ಸೂಚನೆ ನೀಡಿದ್ದರೂ ಇನ್ನೂ ಕೊರೆಯಿಸುತ್ತಲೇ ಇದ್ದೀರಿ, ಹಣ ಪಾವತಿ ಹೇಗೆ ಮಾಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.

ಬೆಳಗ್ಗೆ 7ರಿಂದ ರಾತ್ರಿ 10 ಗಂಟೆಯವರೆಗೆ ವಿವಿಧ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಬಗ್ಗೆ ತಮಗೆ ದೂರವಾಣಿ ಕರೆ ಬರುತ್ತದೆ. ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಸ್ಪಂದಿಸಲು ಸಹಾಯವಾಣಿ ಆರಂಭಿಸಿ, ಕಚೇರಿ ಅವಧಿಯಲ್ಲಿ ಬಂದ ಎಲ್ಲ ಕರೆಗಳಿಗೆ ಸಂಬಂಧಿಸಿದಂತೆ ಗ್ರಾಮದ ಹೆಸರು, ಕರೆ ಮಾಡಿದವರ ಸಂಪರ್ಕ ಸಂಖ್ಯೆಯನ್ನು ದಾಖಲಿಸಿಕೊಳ್ಳಲು ವ್ಯವಸ್ಥೆ ಮಾಡುವಂತೆ ತಹಸೀಲ್ದಾರ್‌ ಹಾಗೂ ತಾಪಂ ಇಒಗಳಿಗೆ ಸೂಚಿಸಿದರು.

ಎಡೀಸಿ ಶಿವಸ್ವಾಮಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಎಇ ವೆಂಕಟಾಚಲಯ್ಯ, ತಾಪಂ ಇಒ, ತಹಶೀಲ್ದಾರ್‌, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next