ಕೋಲಾರ: ಕಳೆದ ಮೂರು ತಿಂಗಳಿನಿಂದಲೂ ಹರಾಜು ಮಾರುಕಟ್ಟೆ ಧಾರಣೆ ಸ್ಥಿರಗೊಂಡಿರುವುದರಿಂದ ಜಿಲ್ಲೆಯ ಟೊಮೆಟೋ ಬೆಳೆಗಾರರ ಮುಖದಲ್ಲಿ ಮಂದಹಾಸ ಕಾಣುವಂತಾಗಿದೆ.
Advertisement
ಜಿಲ್ಲೆಯ ರೈತರು ಅತಿ ಹೆಚ್ಚು ಟೊಮೆಟೋ ಬೆಳೆಯುವರಾಗಿದ್ದು, ಮಳೆ ಕುಂಠಿತ, ಕೊಳವೆ ಬಾವಿಗಳಲ್ಲಿ ನೀರು ಅಲಭ್ಯ, ವಿದ್ಯುತ್ ಸಮಸ್ಯೆ, ಅಕಾಲಿಕ ಮಳೆ, ಆಲಿಕಲ್ಲು ಹಾವಳಿ, ಟೊಮೆಟೋಗೆ ಕಾಡುವ ರೋಗಗಳು, ಇತ್ಯಾದಿ ಸಮಸ್ಯೆಗಳಿಂದ ರೈತಾಪಿ ವರ್ಗ ಕಳೆದೆರೆಡು ವರ್ಷಗಳಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದರು. ಆದರೂ, ನಂಬಿಕೆ ಕಳೆದುಕೊಳ್ಳದ ಜಿಲ್ಲೆಯ ರೈತರು ಟೊಮೆಟೋ ಬೆಳೆಯುವುದನ್ನು ಬಿಟ್ಟಿರಲಿಲ್ಲ. ರೈತರ ನಂಬಿಕೆ ಪರಿಪೂರ್ಣವಲ್ಲದಿದ್ದರೂ, ಸಮಾಧಾನಕರವಾಗಿ ತೃಪ್ತಿ ತಂದುಕೊಡುವ ಮಟ್ಟಿಗೆ ಧಾರಣೆ ಸ್ಥಿರಗೊಂಡಿರುವುದು ರೈತರ ಸಂತಸಕ್ಕೆ ಕಾರಣವಾಗುತ್ತಿದೆ.
Related Articles
Advertisement
ಜಿಲ್ಲೆಯ ಟೊಮೆಟೋ ಮಾತ್ರವಲ್ಲದೆ, ದಾವಣಗೆರೆ, ಬೆಂಗಳೂರು, ಮಂಡ್ಯ ಜಿಲ್ಲೆಗಳಿಂದಲೂ ಟೊಮೆಟೋ ಕೋಲಾರದ ಮಾರುಕಟ್ಟೆಗೆ ಬರುತ್ತಿರುವುದರಿಂದ ಮಾರುಕಟ್ಟೆಯ ವಹಿವಾಟು ಕುದುರಿಕೊಳ್ಳುವಂತಾಗಿದೆ.
ಧಾರಣೆಯು ಸ್ಥಿರ: ಕೋಲಾರ ಎಪಿಎಂಸಿ ಮಾರುಕಟ್ಟೆಯನ್ನು ಏಷ್ಯಾದಲ್ಲಿಯೇ ಅತಿ ದೊಡ್ಡ ಟೊಮೆಟೋ ಮಾರುಕಟ್ಟೆ ಎಂದು ಕರೆಯಲಾಗುತ್ತದೆ. ಪ್ರತಿ ನಿತ್ಯವೂ ಮಾರುಕಟ್ಟೆಗೆ ಸಾವಿರಾರು ಕ್ವಿಂಟಲ್ ಟೊಮೆಟೋ ಆವಕವಾಗುತ್ತದೆ. ಸಾಮಾನ್ಯವಾಗಿ ಜೂನ್, ಜುಲೈ ತಿಂಗಳನ್ನು ಟೊಮೆಟೋ ಬೆಳೆಯ ಸೀಸನ್ ಎಂದೇ ಗುರುತಿಸಲಾಗಿದೆ. ಆದರೆ, ಕಳೆದೆರೆಡು ವರ್ಷಗಳಲ್ಲಿ ಟೊಮೆಟೋ ಬೆಳೆದ ರೈತರಿಗೆ ಸೀಸನ್‌ನಲ್ಲಿ ಉತ್ತಮ ಧಾರಣೆ ಸಿಗಲಿಲ್ಲ. ಆದರೆ, ಈ ಬಾರಿ ಕಳೆದ ಸಾಲಿಗೆ ಹೋಲಿಸಿದರೆ ಈಗ ಶೇ.10 ಟೊಮೆಟೋ ಆವಕ ಹೆಚ್ಚಾಗಿದೆ. ಸರಾಸರಿ ಮಾರುಕಟ್ಟೆಗೆ ಪ್ರತಿ ನಿತ್ಯವೂ 15 ಸಾವಿರ ಕ್ವಿಂಟಲ್ ಟೊಮೆಟೋ ಆವಕವಾಗುತ್ತಿದೆ. ಮೂರು ತಿಂಗಳಿನಿಂದಲೂ ಧಾರಣೆಯೂ ಸ್ಥಿರ ಗೊಂಡಿದೆ. ಪ್ರಸ್ತುತ ಮಾರುಕಟ್ಟೆಗೆ ಆವಕವಾಗುತ್ತಿರುವ ಟೊಮೆಟೋ ಪ್ರತಿ ಹದಿನೈದು ಕೆ.ಜಿ. ಬಾಕ್ಸ್‌ಗೆ 450 ರಿಂದ 500 ರೂ. ಗರಿಷ್ಠ ಧಾರಣೆ ಸಿಗುತ್ತಿದೆ. ಕನಿಷ್ಠ 300 ರಿಂದ 350 ರೂ. ದರ ಸಿಗುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಗರಿಷ್ಠ ಧಾರಣೆಯೇ ಕೇವಲ 350 ರೂ.ಗೆ ಮಿತಿಗೊಂಡಿತ್ತು. ಈ ಬಾರಿ ಪ್ರತಿ ಬಾಕ್ಸ್ ಮೇಲೆ ಸರಾಸರಿ 100 ರೂ. ಹೆಚ್ಚಳವಾಗಿದೆ.
ಬೇಡಿಕೆ ಕಡಿಮೆ: ಹಿಂದೆಲ್ಲಾ ಕೋಲಾರದ ಟೊಮೆಟೋವನ್ನು ಏಷ್ಯಾ ಖಂಡದ ಬಹುತೇಕ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿತ್ತು. ಪಾಕಿಸ್ತಾನ್, ಶ್ರೀಲಂಕಾ, ಬಾಂಗ್ಲಾ ಇತ್ಯಾದಿ ರಾಷ್ಟ್ರಗಳಿಗೆ ಕೋಲಾರದ ಟೊಮೆಟೋಗೆ ಬಹು ಬೇಡಿಕೆ ಇರುತ್ತಿತ್ತು. ಆದರೆ, ಪುಲ್ವಾಮಾ ದಾಳಿಯ ನಂತರ ಕೋಲಾರದ ಟೊಮೆಟೋವನ್ನು ಪಾಕಿಸ್ತಾನಕ್ಕೆ ಕಳುಹಿಸುವುದಿಲ್ಲವೆಂದು ಇಲ್ಲಿನ ರೈತಾಪಿ ವರ್ಗ ನಿರ್ಧಾರ ತೆಗೆದುಕೊಂಡಿತ್ತು. ಇದರಿಂದ ಸದ್ಯಕ್ಕೆ ಬಾಂಗ್ಲಾಗೆ ಮಾತ್ರವೇ ಟೊಮೆಟೋ ರಫ್ತಾಗುತ್ತಿದೆ.
ನೆರೆಯ ಆಂಧ್ರಪ್ರದೇಶ, ತಮಿಳುನಾಡಿನಿಂದ ಶ್ರೀಲಂಕಾ, ನೇಪಾಳ ಮತ್ತಿತರ ರಾಷ್ಟ್ರಗಳಿಗೆ ಟೊಮೆಟೋ ರಫ್ತಾಗುತ್ತಿರುವುದರಿಂದ ಕೋಲಾರದ ಟೊಮೆಟೋಗೆ ಬೇಡಿಕೆ ಕಡಿಮೆಯಾಗಿದೆ. ಆದರೂ, ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿಯೂ ಮಾರುಕಟ್ಟೆ ಹುಡುಕಿಕೊಂಡಿರುವುದರಿಂದ ಕೋಲಾರದ ಟೊಮೆಟೋಗೆ ಧಾರಣೆ ಸ್ಥಿರಗೊಳ್ಳುವಂತಾಗಿದೆ.
ಭಾರೀ ಲಾಭವಿಲ್ಲ: ಸಾಮಾನ್ಯವಾಗಿ ಈ ಬಾರಿ ಆಲಿಕಲ್ಲು ಮಳೆಯಿಂದ ಆದ ನಷ್ಟ ಇತ್ಯಾದಿ ಕಾರಣಗಳಿಂದ ಉತ್ತಮ ಗುಣಮಟ್ಟದ ಟೊಮೆಟೋ ಬೆಳೆದವರಿಗೆ ಬಾಕ್ಸ್‌ಗೆ 750 ರೂ. ಸಿಗುತ್ತದೆಯೆಂದೇ ನಿರೀಕ್ಷಿಸಲಾಗಿತ್ತು. ಆದರೆ, ಕನಿಷ್ಠ 300 ರಿಂದ ಗರಿಷ್ಠ 500 ವರೆಗೂ ಸದ್ಯಕ್ಕೆ ಧಾರಣೆ ಸಿಗುತ್ತಿರುವುದು ಕೊಂಚ ಸಮಾಧಾನ ಮೂಡಿಸಿದೆ.
ಎಪಿಎಂಸಿ ಅಧಿಕಾರಿಗಳ ಪ್ರಕಾರ, ಕಳೆದ ಮೂರು ತಿಂಗಳಿನಿಂದಲೂ ಇರುವ ಟೊಮೆಟೋ ಧಾರಣೆ ಸ್ಥಿರತೆ ಮುಂದಿನ ಎರಡು ತಿಂಗಳು ಮುಂದುವರೆಯುವ ಸಾಧ್ಯತೆಗಳಿವೆ. ಆದ್ದರಿಂದ ಟೊಮೆಟೋ ಬೆಳೆದ ರೈತರಿಗೆ ಕೈಕಚ್ಚುವ ಭಯವಿಲ್ಲವೆಂದು ಹೇಳುತ್ತಿದ್ದಾರೆ.
ಸೀಸನ್ ಸಮಯದಲ್ಲಿ ಭಾರೀ ಪ್ರಮಾ ಣದ ಟೊಮೆಟೋ ಮಾರುಕಟ್ಟೆಗೆ ಬಂದು ಹರಾ ಜಾಗದೆ ಕಸದಂತೆ ಬಿಸಾಡಿ ಹೋಗುವ, ರಸ್ತೆಗೆ ಎಸೆ ಯುವ ಅಥವಾ ತೋಟಗಳಲ್ಲಿಯೇ ಬಿಟ್ಟು ಬಿಡುವ ವಾತಾವರಣ ಇಲ್ಲದಿರುವುದು ರೈತರ ನೆಮ್ಮದಿಗೆ ಕಾರಣವಾಗಿದೆ.