Advertisement

ಹಳೆ ಕಾಮಗಾರಿಗಳ ಹಣ ಪಾವತಿಸದ್ದಕ್ಕೆ ಅಸಮಾಧಾನ

02:57 PM Aug 08, 2019 | Team Udayavani |

ಕೋಲಾರ: ನಗರಸಭೆಯಲ್ಲಿ ಈ ಹಿಂದೆ ಮಾಡಿರುವ ಕಾಮಗಾರಿ, ಇತರ ಕೆಲಸಗಳಿಗೆ ಹಣ ಪಾವತಿ ಮಾಡದಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ ಜೆ.ಮಂಜುನಾಥ್‌, ಸಿಬ್ಬಂದಿ ಸಂಬಳಕ್ಕೂ ಹಣವಿಲ್ಲದಿರುವಾಗ ಈ ಬಿಲ್ ಹೇಗೆ ಪಾವತಿಸುವಿರಿ ಎಂದು ಪ್ರಶ್ನಿಸಿದರು.

Advertisement

ತಮ್ಮ ಕಚೇರಿಯಲ್ಲಿ ನಗರಸಭೆಯ ಖರ್ಚು ವೆಚ್ಚಗಳ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿ, ಹಿಂದಿನ ವರ್ಷಗಳಲ್ಲಿ ಆಗಿರುವ ಕೆಲಸಗಳಿಗೆ ಬಿಲ್ ಪಾವತಿ ಮಾಡಲು ನಿಮಗೇನು ಸಮಸ್ಯೆಯಾಗಿತ್ತು ಎಂದು ಪ್ರಶ್ನಿಸಿದ ಅವರು,ಪ್ರತಿ ತಿಂಗಳು ಖರ್ಚು ವೆಚ್ಚದ ಬಗ್ಗೆ ಸಭೆ ನಡೆಸಿದ್ದರೆ ಸಮಸ್ಯೆ ಬರುತ್ತಿರಲಿಲ್ಲ. ಈಗ ಅದಕ್ಕೆಲ್ಲ ಎಲ್ಲಿಂದ ದುಡ್ಡು ತರಬೇಕು ಹೇಳಿ? ಸಮರ್ಪಕವಾಗಿ ತೆರಿಗೇನೂ ವಸೂಲಿ ಮಾಡಲ್ಲ, ನಿಮಗೆ ಸಂಬಳ ಮಾತ್ರ ಸಮಯಕ್ಕೆ ಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.

2 ಕೋಟಿ ರೂ. ಬಾಕಿ: ಪೌರಾಯುಕ್ತ ಸತ್ಯನಾರಾಯಣ, ಹಿಂದೆ ಮಾಡಿರುವ ಕೆಲಸಗಳಿಗೆ ಆಗಿನ ಆಯುಕ್ತರು ಬಿಲ್ ಪಾವತಿ ಮಾಡಿಲ್ಲ, ಗುತ್ತಿಗೆದಾರರು ಈಗ ಬಂದು ಬಿಲ್ಗೆ ಒತ್ತಾಯ ಮಾಡುತ್ತಿದ್ದು, 2 ಕೋಟಿ ರೂ. ಬಾಕಿ ಇದೆ ಎಂದು ತಿಳಿಸಿದರು.

ಡೀಸೆಲ್, ದುರಸ್ತಿ ಕಾರ್ಯಕ್ಕೆ ದುಡ್ಡು ಬೇಕು: ನಗರಸಭೆ ವಾಹನಗಳಿಗೆ ಡಿಸೇಲ್, ಸಿಬ್ಬಂದಿ ವೇತನ ಸೇರಿ ತಿಂಗಳಿಗೆ 30 ಲಕ್ಷ ರೂ.ಗೂ ಹೆಚ್ಚು ಹಣ ಬೇಕಾಗುತ್ತದೆ. 9 ನೀರಿನ ಟ್ಯಾಂಕರ್‌, 18 ಕಸ ವಿಲೇವಾರಿ ವಾಹನಗಳು ಇದ್ದು, ಡಿಸೇಲ್ಗೆ 4 ಲಕ್ಷ ರೂ.ಬೇಕಾಗುತ್ತದೆ, ಬೀದಿದೀಪ, ಕೊಳವೆಬಾವಿಗೆ ಪಂಪ್‌ಮೋಟಾರ್‌ ರಿಪೇರಿ, ಹಿಂದಿನ ಸಣ್ಣಪುಟ್ಟ ಕೆಲಸಗಳ ಬಿಲ್ ಬಾಕಿ ಇದೆ ಎಂದು ವಿವರಿಸಿದರು.

ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಮಾತನಾಡಿ, ನಗರದಲ್ಲಿ 35 ವಾರ್ಡ್‌ಗಳಿದ್ದು, ಎಸ್‌ಎಫ್‌ಎಸ್‌ ಯೋಜನೆಯಡಿ 70 ಸಾವಿರ ರೂ.ನಿಂದ 80 ಸಾವಿರ ರೂ. ವಿದ್ಯುತ್‌ ಬಿಲ್ ಪಾವತಿಯಾಗುತ್ತಿದೆ. ಕೊಳವೆಬಾವಿ ಸೇರಿ ಎಷ್ಟು ವಿದ್ಯುತ್‌ ಸಂಪರ್ಕಗಳಿವೆ ಎಂದು ಪ್ರಶ್ನಿಸಿದರು.

Advertisement

8000 ಬೀದಿದೀಪ: ಇದಕ್ಕೆ ಉತ್ತರಿಸಿದ ಎಂಜನಿಯರ್‌ ಸುಧಾಕರ್‌ ಶೆಟ್ಟಿ, 35 ವಾರ್ಡ್‌ನಲ್ಲಿ 300 ಕೊಳÊೆಬಾವಿಗಳಿದ್ದು, 120 ಚಾಲನೆಯಲ್ಲಿವೆ, ತಿಂಗಳಿಗೆ 2 ರಿಂದ 3 ಕೊಳವೆಬಾವಿಗಳು ಬತ್ತಿ ಹೋಗುತ್ತಿವೆ. 8000 ಬೀದಿದೀಪಗಳು ಇವೆ ಎಂದರು.

ಜವಾಬ್ದಾರಿ ಇಲ್ಲವೆ?: ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಮಾತನಾಡಿ, ಕೊಳವೆಬಾವಿ ಕೊರೆಯುವ ಸಂದರ್ಭದಲ್ಲಿ ಎಂಜಿನಿಯರ್‌ಗಳು ಸ್ಥಳಕ್ಕೆ ಹೋಗುವುದಿಲ್ಲ ಎಂಬ ದೂರುಗಳು ಬಂದಿವೆ. ಅಭಿವೃದ್ಧಿ ಕಾಮಗಾರಿಗಳಲ್ಲಿ ಕಳಪೆ ನಡೆಯುತ್ತಿದ್ದರೂ ಹಣ ಬಿಡುಗಡೆಗೆ ಶಿಫಾರಸ್ಸು ಮಾಡುತ್ತಿರಾ? ಏನ್‌ ಕೆಲಸ ಮಾಡಬೇಕು ಎಂಬುದು ಜವಾಬ್ದಾರಿಯಿಲ್ಲವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಗರದ ಕೆವಿ ಎಸ್‌ ಕಲ್ಯಾಣ ಮಂಟಪ ಸಮೀಪದ ರಾಜಕಾಲುವೆ ಯಲ್ಲಿ ಮ್ಯಾನ್‌ಹೋಲ್ ಹಾನಿ ಮಾಡಿರುವ ವ್ಯಕ್ತಿ ವಿರುದ್ಧ ದೂರು ದಾಖಲಿಸಿ ದುರಸ್ತಿ ಪಡಿಸಬೇಕು ಎಂದು ಪೌರಾಯುಕ್ತರಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next