Advertisement

ಹಾಲಿನ ಗುಣಮಟ್ಟ ಕಾಪಾಡದಿದ್ದರೆ ವರ್ಗಾವಣೆ

04:00 PM Sep 05, 2019 | Naveen |

ಕೋಲಾರ: ಹಾಲಿನ ಗುಣಮಟ್ಟ ಕಾಪಾಡದಿದ್ದರೆ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದೇನೆ ಎಂದು ಕೋಚಿಮುಲ್ ತಾಲೂಕು ನಿರ್ದೇಶಕ ಡಿ.ವಿ.ಹರೀಶ್‌ ಹೇಳಿದರು.

Advertisement

ತಾಲೂಕಿನ ಚಿಕ್ಕಹಸಾಳ ಗ್ರಾಮದಲ್ಲಿ ಬುಧವಾರ ನಡೆದ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ಒಕ್ಕೂಟವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿದ್ದೇವೆ. ಇಲ್ಲಿ ಯಾವುದೇ ರಾಜಕೀಯ ಮಾಡುತ್ತಿಲ್ಲ. ವೈಯಕ್ತಿಕ ಉದ್ದೇಶಕ್ಕೆ ಅಧಿಕಾರಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಒಕ್ಕೂಟಕ್ಕೆ ಪ್ರತಿ ದಿನ 10.50 ಲಕ್ಷ ಲೀಟರ್‌ ಹಾಲು ಪೂರೈಕೆಯಾಗುತ್ತಿದ್ದು, ಇದರ ಮಾರಾಟ ಮಾಡಲು ಸಮಸ್ಯೆಯಾಗಿದೆ. ಪೌಂಡರ್‌ ಮಾಡಲು ಆಂಧ‌್ರಪ್ರದೇಶಕ್ಕೆ ಕಳುಹಿಸಲಾಗಿದ್ದು, ರಾಮನಗರ ಜಿಲ್ಲೆಯಲ್ಲಿ ಪೌಂಡರ್‌ ತಯಾರಿಕ ಘಟಕ ಸ್ಥಾಪನೆಯಾಗಿದ್ದು, ಅಲ್ಲಿಗೆ ಕಳುಹಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸ್ಥಳ ಮಂಜೂರಿಗೆ ಶ್ರಮ: ಹಿಂದಿನ ಆಡಳಿತ ಮಂಡಳಿ ಅಥವಾ ಅಧಿಕಾರಿಗಳ ವೈಫಲ್ಯದಿಂದ ಎಂವಿಕೆ ಕಾರ್ಯಕ್ರಮಕ್ಕೆ 80 ಲಕ್ಷ ರೂ.ವೆಚ್ಚ ಮಾಡಿದ್ದಾರೆ. ವಾರ್ಷಿಕವಾಗಿ ನೀರು ಖರೀದಿಗೂ 1.70 ಕೋಟಿ ರೂ. ವೆಚ್ಚವಾಗುತ್ತಿದೆ. ಇದನ್ನು ತಪ್ಪಿಸಲು ಕ್ರಮ ಕೈಗೊಂಡಿದ್ದು, ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಡಿ.ಕೆ.ರವಿ ತಾಲೂಕಿನ ಹೊಳಲಿ ಬಳಿ 40 ಎಕರೆ ಜಮೀನು ಮಂಜೂರು ಮಾಡಲು ಸ್ಥಳ ಗುರುತಿಸಿದ್ದಾರೆ. ಆನಂತರ ಇದನ್ನು ಆಡಳಿತ ಮಂಡಳಿಯವರು ನೆನಗುದಿಗೆ ಬಿಟ್ಟಿದರು. ಈಗ ಕಡೆ ತೆಗೆಸಿದ್ದು, ಒಕ್ಕೂಟದ ಹೆಸರಿಗೆ ಮಾಡಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.

ಜಾಗವನ್ನು ಒಕ್ಕೂಟಕ್ಕೆ ಮಾಡಿಸಿಕೊಂಡರೆ ಕೊಳವೆಬಾವಿ ಕೊರೆಯಿಸಿ ನೀರಿನ ಸಮಸ್ಯೆ ನಿವಾರಣೆ ಮಾಡಿಕೊಳ್ಳಬಹುದು, ತಾಲೂಕಿನ 23 ಕಡೆ ಬಿಎಂಸಿ ಕೇಂದ್ರ ಸ್ಥಾಪನೆ ಮಾಡಲಾಗಿದ್ದು ಇನ್ನು ಹೆಚ್ಚಿಗೆ ಮಾಡಿದರೆ ಮಾತ್ರ ಗುಣಮಟ್ಟದ ಹಾಲು ಉತ್ಪಾದನೆಗೆ ಸಹಕಾರಿ ಎಂದರು.

Advertisement

ದುರುಪಯೋಗಕ್ಕೆ ಅವಕಾಶ ನೀಡಲ್ಲ: ಒಕ್ಕೂಟದ ಮಾಜಿ ನಿರ್ದೇಶಕ ಆರ್‌.ರಾಮಕೃಷ್ಣೇಗೌಡ ಮಾತನಾಡಿ, ಒಕ್ಕೂಟದಲ್ಲಿ ರಾಜಕೀಯ ಮಾಡುವವರಿಗೆ ಎಂದಿಗೂ ಒಳ್ಳೆಯದಾಗಲ್ಲ. ಅಧಿಕಾರಿಗಳ ಮೂಲಕ ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿರುವ ವದಂತಿ ಕೇಳಿ ಬರುತ್ತಿದ್ದು, ಇದಕ್ಕೆಲ್ಲಾ ಸಹಕಾರ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ನಮ್ಮ ಅವಧಿಯಲ್ಲಿ ಪಕ್ಷಾತೀತವಾಗಿ ಕೆಲಸ ಮಾಡಿ ದ್ದೇವೆ, ಚಿಕ್ಕಹಾಸಳ ಗ್ರಾಮದಲ್ಲಿ ಸಂಘ ಸ್ಥಾಪನೆಯಾಗಿ 2 ಎರಡು ವರ್ಷವಾಗಿದ್ದರೂ ಅಭಿವೃದ್ಧಿಯಾಗಿದೆ. ಇದಕ್ಕೆ ಒಕ್ಕೂಟಕ್ಕೆ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.

ಸಹಕಾರ ನೀಡಿ: ಎಸ್‌ಎನ್‌ಎಫ್‌ ಫಲಿತಾಂಶದ ಆಧಾರದ ಮೇರೆಗೆ ಹಾಲಿಗೆ ದರ ನಿಗದಿ ಮಾಡಿದ ಮೇಲೆ ಪೌಷ್ಟಿಕ ಆಹಾರಕ್ಕೆ ಬೇಡಿಕೆ ಹೆಚ್ಚಾಗಿದೆ. ಬಿಎಂಸಿ ಕೇಂದ್ರಗಳ ಸ್ಥಾಪನೆಯಾದ ಮೇಲೆ ಗುಣಮಟ್ಟದ ಹಾಲು ಉತ್ಪಾದನೆ ಹೆಚ್ಚಾಯಿತು. ಬರಗಾಲದಲ್ಲೂ ನಿರೀಕ್ಷೆಗೂ ಮೀರಿ ಹಾಲು ಉತ್ಪಾದನೆ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಒಕ್ಕೂಟದಿಂದ ಸಹಕಾರ ನೀಡಬೇಕೆಂದರು.

ಒಕ್ಕೂಟ ರೈತರ ಆರ್ಥಿಕ ಅಭಿವೃದ್ಧಿ ಜತೆಗೆ ಆರೋಗ್ಯ ಸೇವೆ ನೀಡಲು ಕೋಮುಲ್ ವಿಮಾ ಯೋಜನೆ ಜಾರಿಗೊಳಿಸಲಾಯಿತು, ಚಿಕಿತ್ಸೆಗಾಗಿ ಆಸ್ಪತ್ರೆಗೆ ರೈತರ ಮತ್ತು ಕುಟುಂಬದ ಸದಸ್ಯರು ದಾಖಲಾದರೆ 30 ಸಾವಿರ ಒಂದು ವೇಳೆ ಮೃತಪಟ್ಟರೆ 3 ಲಕ್ಷ ಹಣ ನೀಡಲಾಗುವುದು, ಇದರ ಪ್ರಯೋಜನೆ ರೈತರಿಗೆ ಕಲ್ಪಿಸಲು ಅಧಿಕಾರಿಗಳು ಮುಂದಾಗಬೇಕೆಂದರು.

ಇದೇ ವೇಳೆ 2019-20ನೇ ಸಾಲಿಗೆ ಅಂದಾಜು ಬಜೆಟ್ ಮಂಜೂರಿಗೆ ಅನುಮೋದನೆ ನೀಡಲಾಯಿತು.

ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಶ್ರೀನಿವಾಸ ಗೌಡ, ಸಂಘದ ಅಧ್ಯಕ್ಷ ವಿ.ಮುನಿರಾಜು, ನಿರ್ದೇಶಕರಾದ ಎಲ್.ಕೆಂಪಣ್ಣ, ಎಂ.ಮಂಜುನಾಥ್‌, ಸಿ.ಚಲಪತಿ, ಸಿ.ರನ್‌.ಮಂಜುನಾಥ್‌, ವಿ.ರಮೇಶ್‌, ಎಸ್‌.ಶ್ರೀನಿವಾಸ್‌, ರತ್ನಮ್ಮ, ಬಿ.ಕೆ.ನಾಗವೇಣಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next