Advertisement

ಜಿಲ್ಲೆಯ 4 ಶಾಲೆಗಳಲ್ಲಿ ಸಿರಿಧಾನ್ಯ ಬಿಸಿಯೂಟ ಪ್ರಯೋಗ

05:37 PM Oct 24, 2019 | Naveen |

ಕೋಲಾರ: ಮಧ್ಯಾಹ್ನದ ಬಿಸಿಯೂಟದಲ್ಲಿ ಸಿರಿಧಾನ್ಯಗಳ ಬಳಕೆಯನ್ನು ಪ್ರಾಯೋಗಿಕವಾಗಿ ಕೈಗೊಳ್ಳಲು ಕೋಲಾರ ತಾಲೂಕಿನ ನಾಲ್ಕು ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದ್ದು, ಸಾಧಕಬಾಧಕಗಳನ್ನು ಗಮನಿಸಿದ ನಂತರ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತಿರಿಸುವುದಾಗಿ ರಾಜ್ಯ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಂಟಿ ನಿರ್ದೇಶಕ ಮಾರುತಿ ತಿಳಿಸಿದರು.

Advertisement

ತಾಲೂಕಿನ ವಡಗೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಸಾಮೆ ಅನ್ನ,ಸಾಂಬಾರು ಹಾಗೂ ಕಾಳಹಸ್ತಿಪುರದಲ್ಲಿ ನವಣೆಯಿಂದ ತಯಾರಿಸಿದ ಬಿಸಿಬೇಳೆಬಾತ್‌ ಬಡಿಸಿ ಮಾತನಾಡಿದರು.

ಮಕ್ಕಳಿಗೆ ಹೆಚ್ಚಿನ ಪೌಷ್ಟಿಕಾಂಶ ಭರಿತ ಆಹಾರ ನೀಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗುತ್ತಿದೆ. ಸದ್ಯ ಪ್ರಾಯೋಗಿವಾಗಿ ಕೋಲಾರ ತಾಲೂಕಿನ ವಡಗೂರು, ಟಮಕ, ಕಾಳಹಸ್ತಿಪುರ, ಕುಂಬಾರಹಳ್ಳಿಗಳಲ್ಲಿ ಪ್ರತಿ ಬುಧವಾರದಂದು ಮಾತ್ರ ಸಿರಿಧಾನ್ಯಗಳ ಊಟ ನೀಡಲಿದ್ದು, ಇದನ್ನು 10 ಬುಧವಾರಗಳಂದು ನೀಡಿದ ನಂತರ ಮಕ್ಕಳಿಂದ ಪ್ರತಿಕ್ರಿಯೆ ಪಡೆದು ಇಡೀ ರಾಜ್ಯಕ್ಕೆ ವಿಸ್ತರಿಸಲು ಕ್ರಮವಹಿಸುವುದಾಗಿ ತಿಳಿಸಿದರು.

ಸರ್ಕಾರದ ಬಹು ನಿರೀಕ್ಷಿತ ಈ ಪ್ರಯೋಗಾತ್ಮಕ ಕಾರ್ಯಕ್ರಮ ಅತ್ಯುತ್ತಮ ರೀತಿಯಲ್ಲಿ ಯಶಸ್ವಿಗೊಳಿಸಲು ಹೆಚ್ಚಿನ ನಿಗಾವಹಿಸಲಾಗಿದೆ ಎಂದ ಅವರು, ಊಟ ತಿಂದ ನಂತರ ಮಕ್ಕಳಿಂದ ಊಟದ ರುಚಿ, ಅವರ ಅನಿಸಿಕೆಗಳನ್ನು ದಾಖಲಿಸಿಕೊಂಡರು. ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಲು ಮತ್ತು ಉತ್ತಮ ಆರೋಗ್ಯಕ್ಕೆ ಇಂದು ಸಿರಿಧಾನ್ಯಗಳ ಬಳಕೆಗೆ ಒತ್ತು ನೀಡಬೇಕಾಗಿದ್ದು, ಈ ನಿಟ್ಟಿನಲ್ಲಿ ಈ ಯೋಜನೆ ಯಶಸ್ಸಿಗೆ ಸಹಕರಿಸಿ ಎಂದರು.

ಪೈಲೆಟ್‌ ಯೋಜನೆಯಡಿ ಆಯ್ಕೆಯಾದ ಶಾಲೆಗಳ ಮುಖ್ಯ ಶಿಕ್ಷಕರು ಮಕ್ಕಳಿಗೆ ಸಿರಿಧಾನ್ಯಗಳ ಮಹತ್ವವನ್ನು ತಿಳಿಸಿಕೊಟ್ಟು ಅದನ್ನು ಮಕ್ಕಳು ಖುಷಿಯಿಂದ ತಿನ್ನಲು ವ್ಯವಸ್ಥೆ ಮಾಡಿ ಎಂದು ಹೇಳಿದರು.

Advertisement

ಡಿಡಿಪಿಐ ಕೆ.ರತ್ನಯ್ಯ ಮಾತನಾಡಿ, ಸಿರಿಧಾನ್ಯಗಳ ಬಿಸಿಯೂಟ ಯೋಜನೆ ಚಾಲನೆಗೆ ಕೋಲಾರ ಜಿಲ್ಲೆಯನ್ನೇ ಮೊದಲು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ಇಲಾಖೆಯ ಅಧಿಕಾರಿಗಳಿಗೆ ಅವರು ಅಭಿನಂದನೆ ಸಲ್ಲಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್‌.ನಾಗರಾಜಗೌಡ, ಸಿರಿಧಾನ್ಯಗಳ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಟ್ಟು, ಇದು ಉತ್ತಮ ಆರೋಗ್ಯದ ಜತೆಗೆ ನಿಮಗೆ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಲಿದೆ ಎಂದರು. ಬಿಸಿಯೂಟ ಯೋಜನೆಯ ಜಿಲ್ಲಾ ಶಿಕ್ಷಣಾ ಕಾರಿ ತಿಮ್ಮರಾಯಪ್ಪ, ಅಡುಗೆ ಸಿಬ್ಬಂದಿ ಹೆಚ್ಚಿನ ಮುತುವರ್ಜಿ ವಹಿಸಿ, ಶುದ್ದತೆ, ರುಚಿ, ಶುಚಿಗೆ ಆದ್ಯತೆ ನೀಡಿ, ಸಮವಸ್ತ್ರವನ್ನು ಕಡ್ಡಾಯವಾಗಿ ಬಳಸಿ, ನಿಮ್ಮ ಮನೆ ಮಕ್ಕಳೆಂದು ಭಾವಿಸಿ ಅಡುಗೆ ತಯಾರಿಸಿ ಎಂದು ತಿಳಿಸಿದರು.

ತಾಲೂಕು ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಬಾಲಾಜಿ, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ರುದ್ರಪ್ಪ, ಇಸಿಒ ಆರ್‌ ಶ್ರೀನಿವಾಸನ್‌, ಸಿಆರ್‌ಪಿ ಸುಜಾತಾ, ಗಂಗಾಧರ್‌, ಮುಖ್ಯಶಿಕ್ಷಕರಾದ ಮುನಿನಾರಾಯಣಪ್ಪ, ರಾಜೇಂದ್ರಾಚಾರಿ ಜಯಲಕ್ಷ್ಮಮ್ಮ ವಾಣಿಶ್ರೀ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next