Advertisement

ಕೆಪಿಎಸ್‌ ಪ್ರತಿ ಶಾಲೆಗೆ 3 ಕೋಟಿ ರೂ.

11:20 AM May 30, 2019 | Naveen |

ಕೋಲಾರ: ಕರ್ನಾಟಕ ಪಬ್ಲಿಕ್‌ ಶಾಲೆ(ಕೆಪಿಎಸ್‌)ಗಳ ಮೂಲಕ ಮಕ್ಕಳಿಗೆ ಎಲ್ಕೆಜಿಯಿಂದ ದ್ವಿತೀಯ ಪಿಯುಸಿವರೆಗೂ ಒಂದೇ ಸೂರಿನಲ್ಲಿ ಆಂಗ್ಲ ಮಾಧ್ಯಮದಲ್ಲಿ ಉಚಿತ ಶಿಕ್ಷಣ ನೀಡಲಿದ್ದು, ಮೂಲ ಸೌಲಭ್ಯಗಳಿಗಾಗಿ ಪ್ರತಿ ಶಾಲೆಗೂ ತಲಾ 3 ಕೋಟಿ ರೂ. ಬಿಡುಗಡೆ ಮಾಡಲಾಗುತ್ತಿದೆ ಎಂದು ಡಿಡಿಪಿಐ ಕೆ.ರತ್ನಯ್ಯ ತಿಳಿಸಿದರು.

Advertisement

ತಾಲೂಕಿನ ನರಸಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬುಧವಾರ ಕರ್ನಾಟಕ ಪಬ್ಲಿಕ್‌ ಶಾಲೆ ಪ್ರಾರಂಭೋತ್ಸವ ಹಾಗೂ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ವಿತರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 24 ಕೆಪಿಎಸ್‌ ಶಾಲೆಗಳು ಆರಂಭಗೊಂಡಿದ್ದು, ಈ ಶಾಲೆಗಳಲ್ಲಿ ಉಚಿತ ಶಿಕ್ಷಣದ ಜತೆಗೆ ಎಲ್ಕೆಜಿಯಿಂದ ದ್ವಿತೀಯ ಪಿಯುಸಿವರೆಗೂ ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣವನ್ನು ಆಧುನಿಕ ಸೌಲಭ್ಯಗಳೊಂದಿಗೆ ಒದಗಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಖಾಸಗಿ ವ್ಯಾಮೋಹ ಬಿಟ್ಟು ಈ ಶಾಲೆಗಳಲ್ಲಿ ಸಿಗುವ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ ಎಂದು ಪೋಷಕರಿಗೆ ಮನವಿ ಮಾಡಿದರು.

ಸರ್ಕಾರ ಪ್ರತಿ ಶಾಲೆಗೂ ತಲಾ 3 ಕೋಟಿ ರೂ. ನೀಡುತ್ತಿದ್ದು, ಆಧುನಿಕ ಪ್ರಯೋಗಾಲಯ, ಗ್ರಂಥಾಲಯ, ಗಣಕ ಶಿಕ್ಷಣ, ಶೌಚಾಲಯ, ಸುಸಜ್ಜಿತ ಶಾಲಾ ಕೊಠಡಿ ಸೇರಿ ವಿವಿಧ ಸೌಲಭ್ಯಗಳಿಗಾಗಿ ಈ ಹಣ ಬಳಸಿಕೊಳ್ಳಬೇಕಾಗಿದೆ ಎಂದು ವಿವರಿಸಿದರು.

ಸರ್ಕಾರಿ ಶಾಲೆ ಬಗ್ಗೆ ಕೀಳರಿಮೆ ಬೇಡ: ಸರ್ಕಾರಿ ಶಾಲೆಗಳೆಂದರೆ ಕೀಳಿರಿಮೆ ಬೇಡ, ಅನೇಕ ಸಾಧಕರು ಇಲ್ಲೇ ಓದಿದವರು, ಗುಣಾತ್ಮಕ ಶಿಕ್ಷಣದ ಮೂಲಕ ಶೇ.100 ಸಾಧನೆಯತ್ತ ಸಾಗುತ್ತಿದ್ದೇವೆ, ಸಮಾನ ಶಿಕ್ಷಣಕ್ಕಾಗಿ ಈ ಶಾಲೆಗಳ ಬಲವರ್ಧನೆ ಅಗತ್ಯ ಎಂದು ತಿಳಿಸಿದರು. ಖಾಸಗಿ ಶಾಲೆಗಳ ಪೈಪೋಟಿಯನ್ನು ನಮ್ಮ ಶಿಕ್ಷಕರು ಸಮರ್ಥವಾಗಿ ಎದುರಿಸಿದ್ದಾರೆ, ಗುಣಾತ್ಮಕತೆಯಲ್ಲಿ ಸಾಧನೆ ಮಾಡಿದ್ದಾರೆ ಎಂದ ಅವರು, ಇಲ್ಲಿ ನೀಡುವ ಉಚಿತ ಪಠ್ಯ, ಬಿಸಿಯೂಟ, ಕ್ಷೀರಭಾಗ್ಯ, ಶೂಭಾಗ್ಯ ಮತ್ತಿತರ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸಾಧಕರಾಗಿ ಎಂದು ಮಕ್ಕಳಿಗೆ ಸಲಹೆ ನೀಡಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ವೆಂಕಟಸ್ವಾಮಿ, ರಾಜ್ಯ ಸರ್ಕಾರ ಕಳೆದ ವರ್ಷ 170 ಕೆಪಿಎಸ್‌ ಶಾಲೆ ಆರಂಭಿಸಿದ್ದು, ಈ ಬಾರಿ ಮತ್ತೆ 100 ಶಾಲೆ ನೀಡಿದೆ. ಕೆಜಿಎಫ್‌ ಹೊಸ ತಾಲೂಕು ಆಗಿರುವುದರಿಂದ ಆ ತಾಲೂಕಿನ ಕೋಟಾದಲ್ಲಿ ಸುಂದರಪಾಳ್ಯದಲ್ಲಿ ಈ ಬಾರಿ ಕೆಪಿಎಸ್‌ ಶಾಲೆ ಆರಂಭವಾಗಿದೆ. ಸರ್ಕಾರ ಉಚಿತ ಶಿಕ್ಷಣದಡಿ ನೀಡುತ್ತಿರುವ ಈ ಸೌಲಭ್ಯ ಬಳಸಿಕೊಳ್ಳಿ, ಖಾಸಗಿ ಶಾಲೆ ವ್ಯಾಮೋಹ ಬಿಟ್ಟು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.

Advertisement

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೌಢಶಾಲಾ ಮುಖ್ಯ ಶಿಕ್ಷಕ ಶಿವಪ್ರಸಾದ್‌, ಸರ್ಕಾರಿ ಶಾಲೆಗಳು ಉತ್ತಮ ಸ್ಥಿತಿಯಲ್ಲಿವೆ, ಉತ್ತಮ ವಾತಾವರಣ, ಕಲಿಕೆಗೆ ಪೂರಕವಾಗಿದ್ದು, ಶೇ.100 ಫಲಿತಾಂಶದ ಸಾಧನೆಯನ್ನೂ ಮಾಡುತ್ತಿವೆ. ಇದೀಗ ಇಂಗ್ಲಿಷ್‌ ಮಾಧ್ಯಮ ಶಿಕ್ಷಣದಿಂದ ಮತ್ತಷ್ಟು ಬಲಗೊಳ್ಳಲಿವೆ ಎಂದು ಹೇಳಿದರು. ಎಸ್‌ಡಿಎಂಸಿ ಅಧ್ಯಕ್ಷ ಎಂಟಿಬಿ ಶ್ರೀನಿವಾಸ್‌, ಶಾಲೆಯ ಸಮಗ್ರ ಅಭಿವೃದ್ಧಿಗೆ ಸಮಿತಿ ಮತ್ತು ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು. ಈ ವೇಳೆ 40 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕ ವಿಜಯಕುಮಾರ್‌ ಹಾಗೂ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಮುನಿರಾಜ್‌ರನ್ನು ಶಾಲೆಯಿಂದ ಸನ್ಮಾನಿಸಲಾಯಿತು. ಗ್ರಾಪಂ ಅಧ್ಯಕ್ಷೆ ಶೈಲಾ ಬಸವರಾಜ್‌, ಎವೈಪಿಸಿ ಸಿದ್ದೇಶ್‌, ಡಿಪಿಒ ಮಂಜುನಾಥ್‌, ಪ್ರಾಂಶುಪಾಲೆ ಕ್ರಿಸ್ಟ್‌ ಜಯಂ, ಇಸಿಒಗಳಾದ ಮುನಿರತ್ನಯ್ಯಶೆಟ್ಟಿ, ಆರ್‌.ಶ್ರೀನಿವಾಸನ್‌, ಬೈರೆಡ್ಡಿ, ಮುಖ್ಯ ಶಿಕ್ಷಕ ಸೊಣ್ಣೇಗೌಡ, ಶಿಕ್ಷಕರಾದ ಶೈಲಾ, ರೇಣುಕಾ, ಎಚ್.ನಾರಾಯಣಸ್ವಾಮಿ, ಬಿಆರ್‌ಪಿ ಗೋಪಾಲ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next