ಕೋಲಾರ: ಲಾಕ್‌ಡೌನ್ ಆದ ಮೊದಲ ದಿನ ದಿಂದಲೂ ಕೊರೊನಾಗೆ ಕಡಿವಾಣ ಹಾಕುವಲ್ಲಿ ಸಫಲವಾಗಿರುವ ಜಿಲ್ಲಾಧಿಕಾರಿ ಸಿ.ಸತ್ಯ ಭಾಮ ಹಾಗೂ ಅಧಿಕಾರಿಗಳ ತಂಡದ ಚುರುಕಿನ ಕಾರ್ಯವೈಖರಿ ಕೋಲಾರಕ್ಕೆ ಇದುವರೆಗೂ ಕೋವಿಡ್ 19 ಕಾಲಿಡದಂತೆ ಮಾಡಿದೆ.
ಯಾವುದೇ ವಿಚಾರದಲ್ಲಿಯೂ ಲೋಪವಾಗದಂತೆ ಆರೋಗ್ಯ ಸಿಬ್ಬಂದಿ, ಕಂದಾಯ ಇಲಾಖೆ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಪೊಲೀಸ್ ಬಂದೋಬಸ್ತ್ ಕಟ್ಟೆಚ್ಚರ, ಇವುಗಳ ಮೇಲೆ ಉಸ್ತುವಾರಿ ನಿಗಾವಹಿಸಿರುವ ಡಿ.ಸಿ. ಸತ್ಯಭಾಮ ಕೊರೊನಾವನ್ನು ಕೋಲಾರ ಗಡಿ ದಾಟಿ ಬರಲು ಬಿಟ್ಟಿಲ್ಲ. ತುರ್ತು ಗಮನ: ಜಿಲ್ಲೆಯಲ್ಲಿ ಲಾಕ್‌ಡೌನ್ ಆದ ಮೊದಲ ದಿನದಿಂದಲೇ ಕೋವಿಡ್ 19 ಶಂಕಿತ ವ್ಯಕ್ತಿಗಳ ಬಗ್ಗೆ ತುರ್ತು ಗಮನ ಹರಿಸಲಾಗುತ್ತಿದೆ. ಶಂಕಿತರು ಹಾಗೂ ಅವರ ಸಂಪರ್ಕಕ್ಕೆ ಬಂದವರನ್ನು ಕಟ್ಟುನಿಟ್ಟಾಗಿ ಕ್ವಾರಂಟೈನ್ ಮಾಡಲಾಗುತ್ತಿದೆ.
ಇದರ ಜೊತೆಗೆ ಜಿಲ್ಲೆಯೊಳಕ್ಕೆ ಯಾವುದೇ ವ್ಯಕ್ತಿ ವಾಹನ ಅನಗತ್ಯವಾಗಿ ನುಸುಳದಂತೆ ಚೆಕ್‌ಪೋಸ್ಟ್‌ಗಳನ್ನು ರಚಿಸಲಾಗಿದೆ. ದಿನದ 24 ಗಂಟೆಯೂ ಈ ಚೆಕ್‌ಪೋಸ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಇದಕ್ಕೆ ಪೂರಕವಾಗಿ ಬಹುತೇಕ ಗ್ರಾಮಗಳಲ್ಲಿ ಹೊರಗಿನ ವ್ಯಕ್ತಿಗಳ ಪ್ರವೇಶ ನಿರಾಕರಿಸಲಾಗಿದೆ. ಸಾಮಾಜಿಕ ಅಂತರಕ್ಕೆ ಒತ್ತು ನೀಡಲಾಗುತ್ತಿದೆ.
ಶಂಕಿತರು ಮತ್ತವರ ಸಂಪರ್ಕದಲ್ಲಿರುವವರ ಗಂಟಲ ದ್ರಾವಣವನ್ನು ಕೊರೊನಾ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇಲ್ಲಿಯವರೆಗೂ 350ಕ್ಕೆ ಹೆಚ್ಚು ಮಂದಿಯ ಮೇಲೆ ನಿಗಾ ಇಟ್ಟು ಕ್ವಾರಂಟೈನ್ ಮಾಡಲಾಗಿದೆ. ಶಂಕಿತ 168 ಮಂದಿ ಗಂಟಲ ದ್ರವ ಜಿಲ್ಲೆಯಿಂದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದು ಪಾಸಿಟಿವ್ ಇಲ್ಲದ ಜಿಲ್ಲೆಗಳಲ್ಲಿ ಅತ್ಯಧಿಕ.
ಗಡಿಗಳಲ್ಲಿ ಕಟ್ಟೆಚ್ಚರ: ಕೋಲಾರ ಜಿಲ್ಲೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗೆ ಹೊಂದಿಕೊಂಡಿದೆ. ಆಂಧ್ರಪ್ರದೇಶ ಮತ್ತು ತಮಿಳುನಾಡು ಗಡಿಗಳನ್ನು ಹೊಂದಿವೆ. ಕೋಲಾರ ಜಿಲ್ಲೆಯ ಗಡಿಯಾಚೆಗಿನ ಎಲ್ಲಾ ಜಿಲ್ಲೆಗಳಲ್ಲಿಯೂ ಕೋವಿಡ್ 19 ಸೋಂಕಿತರಿ ದ್ದಾರೆ. ಆದರೆ, ಕೋಲಾರ ಜಿಲ್ಲೆಗೆ ಇದುವರೆಗೂ ಕಾಲಿಡದಂತೆ ಮಾಡುವಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್, ಆರೋಗ್ಯ ಇಲಾಖೆಯ ಶ್ರಮ ಎದ್ದು ಕಾಣಿಸುತ್ತಿದೆ. ತಂಡವಾಗಿ ಕೆಲಸ: ಕೊರೊನಾಕ್ಕೆ ಕಡಿವಾಣ ಹಾಕುವ ವಿಚಾರದಲ್ಲಿ ಡಿ.ಸಿ. ವಿವಿಧ ಇಲಾಖೆ ಗಳ ಜಿಲ್ಲಾ ಅಧಿಕಾರಿಗಳ ನೇತೃತ್ವದ ವಿವಿಧ ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳಿಗೆ ವಿವಿಧ ಪ್ರದೇಶಗಳ ಉಸ್ತುವಾರಿ ಹಾಗೂ ಸಕಲ ಜವಾಬ್ದಾರಿಯನ್ನು ನೀಡಲಾಗಿದೆ. ಪೊಲೀಸ್, ಆರೋಗ್ಯ ಇಲಾಖೆ, ಆಶಾ, ಅಂಗನವಾಡಿ ಕಾರ್ಯಕರ್ತೆಯವರು ಸಮರ ಯೋಧರಂತೆ ಕೊರೊನಾ ವಿರುದ್ಧದ ಸಮರಕ್ಕೆ ಸಜ್ಜಾಗಿ ಶ್ರಮಿಸುತ್ತಿದ್ದಾರೆ. ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಇಷ್ಟೆಲ್ಲಾ ಶ್ರಮಿಸುತ್ತಿದ್ದರೂ, ದೇವರ ಆಶೀ ರ್ವಾದವೇ ಕೋಲಾರವನ್ನು ಕಾಪಾಡುತ್ತಿದೆಯೆಂದು ಡಿ.ಸಿ. ಸತ್ಯಭಾಮ ವಿನೀತರಾಗುತ್ತಾರೆ.
ಶಂಕಿತರ ಬಗ್ಗೆ ತುರ್ತು ಗಮನ, ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರಿಂದ ಕಟ್ಟುನಿಟ್ಟಿನ ಕ್ರಮ, ಸಾಮಾಜಿಕ ಅಂತರ, ಹೊರಗಿನ ವ್ಯಕ್ತಿಗಳಿಗೆ ಜಿಲ್ಲೆ ಪ್ರವೇಶ ನಿಷೇಧ, ಶಂಕಿತರ ಬಗ್ಗೆ ಫಾಲೋಅಪ್, ಸರ್ವೇಕ್ಷಣಾಧಿಕಾರಿ ಡಾ. ಚಾರಣಿಯವರ ಪರಿಶ್ರಮ, ದೇವರ ಆಶೀರ್ವಾದದಿಂದ ಕೋಲಾರಕ್ಕೆ ಇದುವರೆಗೂ ಕೋವಿಡ್ 19 ಕಾಲಿಟ್ಟಿಲ್ಲ
.- ಸಿ.ಸತ್ಯಭಾಮ, ಡಿ.ಸಿ, ಕೋಲಾರ.
ಕೋಲಾರ ಜಿಲ್ಲೆ ಸಂಪರ್ಕಿಸುವ ನೆರೆ ರಾಜ್ಯಗಳ ಗಡಿಗಳಲ್ಲಿ ಚೆಕ್ ಪೋಸ್ಟ್, ಅಗತ್ಯ ವಸ್ತುಗಳ ಹೊರತುಪಡಿಸಿ ಯಾವುದೇ ವಾಹನ, ವ್ಯಕ್ತಿ ಗಳ ಅನಗತ್ಯ ಓಡಾಟಕ್ಕೆ ಅವಕಾಶ ನಿರಾಕರಣೆ, ಸಾಮಾ ಜಿಕ ಅಂತರದ ಕಟ್ಟುನಿಟ್ಟಿನ ಸೂಚನೆ ಜಿಲ್ಲೆಗೆ ಇದು ವರೆಗೂ ಕೊರೊನಾ ಕಾಲಿಡದಂತೆ ಮಾಡಲು ಸಹಕಾರಿಯಾಗಿದೆ.
–ಸುಜೀತಾ ಮಹಮದ್, ಎಸ್ಪಿ, ಕೆಜಿಎಫ್
–ಕೆ.ಎಸ್.ಗಣೇಶ್