Advertisement

ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ

03:50 PM Jul 11, 2019 | Naveen |

ಕೋಲಾರ: ಕ್ರೀಡೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ತಿಳಿಸಿದರು.

Advertisement

ನಗರದ ಕಚೇರಿ ನ್ಯಾಯಾಂಗ ಸಭಾಂಗಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವದಲ್ಲೇ ದೊಡ್ಡ ಕ್ರೀಡೆಗಳಲ್ಲಿ ಹೊಂದಾಗಿರುವ ಕ್ರಿಕೆಟ್, ಭಾರತೀಯರ ಅಚ್ಚುಮೆಚ್ಚು. ಇದನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲೆಯ ಹುತ್ತೂರು ಹೋಬಳಿ, ಹೊಳಲಿ ಗ್ರಾಮದ ಬಳಿ 16 ಎಕರೆ ಸರ್ಕಾರಿ ಗೋಮಾಳ ಲಭ್ಯವಿದೆ. ಸರ್ಕಾರವು ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ ಬೆಂಗಳೂರು ಅವರ ಸಹಯೋಗದೊಂದಿಗೆ ಇಲ್ಲಿ ಕ್ರೀಡಾಂಗಣ ಸ್ಥಾಪನೆ ಮಾಡಲು ನಿರ್ಧರಿಸಿದೆ ಎಂದು ತಿಳಿಸಿದರು.

ಕ್ರೀಡಾಭಿಮಾನಿಗಳಿಗೆ ಅನುಕೂಲ: ಕರ್ನಾಟಕ ಭೂ ಮಂಜೂರಾತಿ 1969 ನಿಯಮ 22(ಎ) 1, 6ರ ಅನ್ವಯ ಮಾರ್ಗಸೂಚಿ ಬೆಲೆಯ ಶೇ.5 ವಾರ್ಷಿಕ ಗುತ್ತಿಗೆ ದರವನ್ನು ನಿಗದಿಪಡಿಸಿ, ಎರಡು ವರ್ಷಕ್ಕೊಮ್ಮೆ ಶೇ.10 ಗುತ್ತಿಗೆ ದರವನ್ನು ಹೆಚ್ಚಿಸಿಕೊಂಡು ಹೋಗುವಂತಹ ಷರತ್ತಿಗೆ ಒಳಪಟ್ಟು 30 ವರ್ಷಗಳ ಗುತ್ತಿಗೆ ಆಧಾರದ ಮೇಲೆ ಜಮೀನನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ಗೆ ಮಂಜೂರು ಮಾಡಲಾಗಿದೆ. ಇದರಿಂದ ಜಿಲ್ಲೆಯ ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

3.90 ಲಕ್ಷ ರೂ.: ಹೊಳಲಿ ಗ್ರಾಮದಲ್ಲಿರುವ ಒಂದು ಎಕರೆ ಜಮೀನಿನ ಬೆಲೆ 3.90 ಲಕ್ಷ ರೂ. ಇದೆ. ಕ್ರಿಕೆಟ್ ಕ್ರೀಡಾಂಗಣದ 16 ಎಕರೆ ಜಮೀನಿಗೆ ವಾರ್ಷಿಕವಾಗಿ 3,17,600 ರೂ. ಅನ್ನು ಶೇ.5ರ ದರದಲ್ಲಿ ನಿಗದಿಮಾಡಲಾಗಿದೆ. ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್‌ ಈ ಹಣವನ್ನು ಸರ್ಕಾರಕ್ಕೆ ಪಾವತಿ ಮಾಡಬೇಕಾಗುತ್ತದೆ ಎಂದು ವಿವರಿಸಿದರು.

ಕ್ರೀಡೆಗೆ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಇದು ದೊಡ್ಡ ಹೆಜ್ಜೆಯಾಗಿದೆ. ಕ್ರಿಕೆಟ್ ಕ್ರೀಡಾಂಗಣದ ಕರಡು ಪ್ರತಿ ಸಿದ್ಧವಾಗಿದ್ದು, ಸರ್ವೆ ಇಲಾಖೆಯ ತಹಶೀಲ್ದಾರ್‌ರ ಸಲಹೆ ಮೇರೆಗೆ ಕ್ರೀಡಾಂಗಣದ ಸ್ಥಳಕ್ಕೆ ಬೌಂಡರಿ ನಿರ್ಮಿಸಲಾಗುವುದು. ರಾಷ್ಟ್ರೀಯ ಹೆದ್ದಾರಿಯಿಂದ ಹೊಳಲಿ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸಲಾಗುವುದು ಹಾಗೂ ಗ್ರಾಮದ ರಸ್ತೆಯನ್ನು ಅಗಲೀಕರಣ ಮಾಡಲು ನಿರ್ಧರಿಸಲಾಗಿದೆ. ಕ್ರೀಡಾಂಗಣ ನಿರ್ಮಾಣಕ್ಕೆ ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು, ವಿಧಾನಸಭಾ ಸ್ಪೀಕರ್‌ ರಮೇಶ್‌ ಕುಮಾರ್‌, ಜಿಲ್ಲಾ ಪ್ರತಿನಿಧಿಗಳ ಪಾತ್ರ ಬಹುಮುಖ್ಯವಾಗಿದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಸಹಾಯಕ ಆಯುಕ್ತ ಸೋಮಶೇಖರ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next