ಕೋಲಾರ: ದೇಶದ ಮೊದಲ ಮಹಿಳಾ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಎನ್‌ಡಿಎ ಸರ್ಕಾರದ ಎರಡನೇ ಅವಧಿಯ ಮೊದಲ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು ಸನ್ನದ್ಧರಾಗಿದ್ದಾರೆ. ದೇಶಾದ್ಯಂತ ಮೋದಿ ಸರ್ಕಾರದ ಎರಡನೇ ಅವಧಿಯ ಮೊದಲ ಬಜೆಟ್ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಇದರಿಂದ ಜಿಲ್ಲೆಯೂ ಹೊರತಾಗಿಲ್ಲ.
Advertisement
ಪ್ರಧಾನಿ ಮೋದಿ ನೇತೃತ್ವದ ಮೊದಲ ಅವಧಿಯ ಸರ್ಕಾರದಲ್ಲಿ ಜಿಲ್ಲೆಗೆ ಯಾವುದೇ ವಿಶೇಷ ಯೋಜನೆ ಘೋಷಣೆಯಾಗಿಲ್ಲ. ಯುಪಿಎ ಸರ್ಕಾರ ರೈಲ್ವೆ ಬಜೆಟ್ನಲ್ಲಿ ಘೋಷಿಸಿದ್ದ ಯೋಜನೆಗಳಿಗೂ ಚಾಲನೆ ನೀಡಲಿಲ್ಲ. ಈಗ ಕ್ಷೇತ್ರದಲ್ಲಿ ಬಿಜೆಪಿ ಸಂಸದ ಗೆದ್ದಿದ್ದು, ಜು.5ರಂದು ಮಂಡಿಸಲಾಗುವ ಕೇಂದ್ರದ ಪೂರ್ಣ ಪ್ರಮಾಣದ ಬಜೆಟ್‌ನಲ್ಲಿ ಘೋಷಣೆಯಾಗಿದ್ದ ರೈಲ್ವೆ ಯೋಜನೆಗಳಿಗೆ ಚಾಲನೆ, ಹೊಸ ಯೋಜನೆ ಜೊತೆಗೆ, ಸದಾ ನೀರಿನ ಸಮಸ್ಯೆಯಿಂದ ನರಳುತ್ತಿರುವ ಜಿಲ್ಲೆಗೆ ನದಿ ಜೋಡಣೆಯಿಂದ ಶಾಶ್ವತ ಪರಿಹಾರ ಒದಗಿಸಬೇಕೆಂಬ ದೊಡ್ಡ ಧ್ವನಿಯ ಆಗ್ರಹ ಜನರಿಂದ ಕೇಳಿ ಬರುತ್ತಿದೆ.
Related Articles
Advertisement
ರೈಲ್ವೆ ಬೇಡಿಕೆಗಳು: ಯುಪಿಎ ಎರಡನೇ ಅವಧಿಯಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಕೆ.ಎಚ್.ಮುನಿಯಪ್ಪ, ಜಿಲ್ಲೆಯ ಬಹುತೇಕ ರೈಲ್ವೆ ಬೇಡಿಕೆಗಳು ಬಜೆಟ್‌ನಲ್ಲಿ ಪ್ರಕಟಗೊಳ್ಳುವಂತೆ ಮಾಡಿಬಿಟ್ಟಿದ್ದಾರೆ. ಆದರೆ, ಈ ಯೋಜನೆಗಳು ಎನ್‌ಡಿಎ ಸರ್ಕಾರದಲ್ಲಿ ಕಡತಗಳಲ್ಲಿಯೇ ಉಳಿದು ಬಿಟ್ಟಿದೆ.
ಹಳೇ ಯೋಜನೆಗೆ ಚಾಲನೆ ನೀಡಲಿ: ಹೊಸದಾಗಿ ಬಜೆಟ್‌ನಲ್ಲಿ ಏನನ್ನು ಘೋಷಿಸುವ ಅಗತ್ಯವಿಲ್ಲದಿದ್ದರೂ, ಯುಪಿಎ ಸರ್ಕಾರ ಘೋಷಿಸಿರುವ ರೈಲ್ವೆ ಕೋಚ್ ಫ್ಯಾಕ್ಟರಿ, ಮುಳಬಾಗಿಲು ಪಟ್ಟಣದ ಮೇಲೆ ಕೋಲಾರ ಮಾರ್ಗವಾಗಿ ವೈಟ್ಫೀಲ್ಡ್ಗೆ ಸಂಪರ್ಕ ಹೊಸ ರೈಲ್ವೆ ಮಾರ್ಗ ಅಳವಡಿಕೆ, ನೆರೆ ರಾಜ್ಯದ ರೈಲ್ವೆ ನಿಲ್ದಾಣಗಳಿಗೆ ಜಿಲ್ಲೆಯ ರೈಲ್ವೆ ನಿಲ್ದಾಣಗಳನ್ನು ಸಂಪರ್ಕಿಸುವ ಯೋಜನೆಗಳಿಗೆ ಚಾಲನೆ ನೀಡಲಿ ಎಂದು ಜಿಲ್ಲೆಯ ಜನತೆ ಬಯಸುತ್ತಿದ್ದಾರೆ.
ಚಿನ್ನದ ಗಣಿ ಪುನರಾರಂಭವಾಗಲಿ: 19 ವರ್ಷಗಳ ಹಿಂದೆ ಬಿಜಿಎಂಎಲ್ ಹೆಸರಿನ ಚಿನ್ನದ ಗಣಿ ಮುಚ್ಚಲ್ಪಟ್ಟಿದ್ದರಿಂದ ಕೆಜಿಎಫ್ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಪ್ರತಿ ನಿತ್ಯವೂ ಹತ್ತು ಸಾವಿರಕ್ಕಿಂತಲೂ ಹೆಚ್ಚು ಮಂದಿ ರೈಲಿನಲ್ಲಿ ಬೆಂಗಳೂರಿಗೆ ಕೆಲಸಕ್ಕಾಗಿ ಹೋಗಿ ಬರುತ್ತಿದ್ದಾರೆ.ಆದ್ದರಿಂದ ಚಿನ್ನದ ಗಣಿಗಳನ್ನು ಅತ್ಯಾಧುನಿಕ ವಿಧಾನಗಳಿಂದ ಪುನಾರಂಭಗೊಳಿಸಬೇಕು, ಗಣಿ ಕಾರ್ಮಿಕರಿಗೆ ಉದ್ಯೋಗವಕಾಶ ಕಲ್ಪಿಸಬೇಕು, ರಾಜ್ಯ ಸರ್ಕಾರವು ಕೆಜಿಎಫ್ ಭಾಗದಲ್ಲಿ ಹೊಸ ಕೈಗಾರಿಕಾ ವಲಯಗಳನ್ನು ಪ್ರಾರಂಭಿಸಿ ನೂತನ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಕೆಲಸ ಕೊಡಬೇಕೆಂದು ಜನತೆ ಬಯಸುತ್ತಿದ್ದಾರೆ.
ಬೆಮೆಲ್ ಸಾರ್ವಜನಿಕ ಉದ್ದಿಮೆ ಆಗಿ ಉಳಿಯಲಿ: ಕೋಲಾರ ಜಿಲ್ಲೆಯಲ್ಲಿ ಬಿಜಿಎಂಎಲ್ ನಂತರ ದೊಡ್ಡ ಸಾರ್ವಜನಿಕ ಉದ್ದಿಮೆ ಬೆಮೆಲ್ ಕಾರ್ಖಾನೆ. ಇದನ್ನು ಖಾಸಗಿಯವರಿಗೆ ಮಾರಾಟ ಮಾಡುವ ಹುನ್ನಾರ ಹಿಂದಿನ ಎನ್‌ಡಿಎ ಸರ್ಕಾರದಲ್ಲಿ ನಡೆದಿತ್ತು. ಇದಕ್ಕೆ ಕಾರ್ಮಿಕ ವಲಯದಿಂದ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಿತ್ತು. ಆದ್ದರಿಂದ ಬೆಮೆಲ್ಅನ್ನು ಸಾರ್ವಜನಿಕ ಉದ್ದಿಮೆಯಾಗಿಯೇ ಉಳಿಸಿಕೊಳ್ಳಬೇಕು, ರಕ್ಷಣಾ ಇಲಾಖೆ ಬಳಸುವ ವಾಹನ ಮತ್ತು ಯುದ್ಧದೋಪಕರಣ ಸಾಗಿಸುವ ವಾಹನಗಳ ತಯಾರಿಕಾ ಆರ್ಡರ್‌ಗಳನ್ನು ಬೆಮೆಲ್ ಕಾರ್ಖಾನೆಗೆ ನೀಡಬೇಕಿದೆ.
ಕ್ರೀಡೆಗೂ ಅಗತ್ಯ ಯೋಜನೆ: ಜಿಲ್ಲಾ ಕೇಂದ್ರ ಸೇರಿದಂತೆ ಪ್ರತಿ ತಾಲೂಕು ಮಟ್ಟದಲ್ಲಿಯೂ ಅತ್ಯಾಧುನಿಕ ಕ್ರೀಡಾಂಗಣಗಳ ನಿರ್ಮಾಣವಾಗಬೇಕು. ಕೇಂದ್ರ ಪ್ರಾಯೋಜಿತ ಕ್ರೀಡಾಕೂಟಗಳು ಜಿಲ್ಲೆಯಲ್ಲಿ ನಡೆಸಲು ಸೂಕ್ತ ವೇದಿಕೆ ಸೃಷ್ಟಿಸಬೇಕು. ಈ ಮೂಲಕ ಕೋಲಾರ ಜಿಲ್ಲೆಯಲ್ಲಿರುವ ಕ್ರೀಡಾ ಪ್ರತಿಭೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಕಿಗೆ ತರುವಂತೆ ಮಾಡಲು ಅಗತ್ಯ ಯೋಜನೆಗಳನ್ನು ಘೋಷಿಸಬೇಕು.