ಕೋಲಾರ: ಮೂರು ನಾಲ್ಕು ದಿನಗಳ ಹಿಂದಷ್ಟೇ ಕೋಲಾರದ ಗಡಿಯಾರ ಗೋಪುರದ ಮೇಲೆ ತ್ರಿವರ್ಣ ಧ್ವಜ ಹಾರಾಡಿಸಿತ್ತು ರಾಜ್ಯದ ಗಮನ ಸೆಳೆದಿತ್ತು. ಆದರೆ, ಈ ಗಡಿಯಾರ ಗೋಪುರದಲ್ಲಿ ಈಗ ಗಡಿಯಾರವೇ ಇಲ್ಲವೆನ್ನುವುದು ವಿಪರ್ಯಾಸದ ಸಂಗತಿಯಾಗಿದೆ.
ಗಡಿಯಾರ ಗೋಪುರದ ಮೇಲೆ ಇದ್ದ ಧಾರ್ಮಿಕ ಧ್ವಜ ತೆರವುಗೊಳಿಸಬೇಕು, ತ್ರಿವರ್ಣ ಧ್ವಜ ಹಾರಿಸಬೇಕು ಎಂದು ಪರ ವಿರುದ್ಧ ನಿಂತಿದ್ದ ಯಾವುದೇ ಗುಂಪಿಗೂ ಗಡಿಯಾರ ಗೋಪುರಕ್ಕೆ ಗಡಿಯಾರ ಮುಖ್ಯ ಎಂದು ಅನ್ನಿಸದಿರುವುದು ಟೀಕೆಗೆ ಕಾರಣವಾಗಿದೆ.
ಬೆಂಗಳೂರಿನಿಂದ ಕೋಲಾರಕ್ಕೆ ಆಗಮಿಸುವಾಗ ಸಿಗುವ ಮೊದಲ ವೃತ್ತದಲ್ಲಿ ಹಾಗೂ ಈಗಿನ ಹಳೆಯ ಬಸ್ ನಿಲ್ದಾಣದಲ್ಲಿ ಗಡಿಯಾರ ಗೋಪುರಗಳನ್ನು ಮೈಸೂರು ಮಹಾರಾಜರ ಕಾಲದಲ್ಲಿ ಸ್ಥಳೀಯ ಮುಖಂಡರು ನಿರ್ಮಾಣ ಮಾಡಲಾಗಿತ್ತು. ಕೋಲಾರ ನಗರದ ಹೆಗ್ಗುರುತಾಗಿರುವ ಈ ಗಡಿಯಾರ ಗೋಪುರಗಳನ್ನು ನಿರ್ಮಾಣ ಮಾಡಿ ಅವುಗಳಲ್ಲಿ ನಾಲ್ಕು ದಿಕ್ಕಿಗೂ ಕಾಣುವಂತೆ ಗಡಿಯಾರವನ್ನು ಅಳವಡಿಸಲಾಗಿತ್ತು. ಹಲವಾರು ದಶಕಗಳ ಕಾಲ ಈ ಗಡಿಯಾರವು ಕೋಲಾರ ನಗರದ ಜನತೆಗೆ ಸಮಯವನ್ನು ತೋರಿಸುವ ಮತ್ತು ಅಲಾರಾಂ ಬಾರಿಸುವ ಮೂಲಕ ಸ್ಥಳೀಯರನ್ನು ಎಚ್ಚರಿಸುವ ಕೆಲಸ ಮಾಡುತ್ತಿತ್ತು. ಎಲ್ಲರೂ ಕೈಗಡಿಯಾರ ಕಟ್ಟುವಷ್ಟು ಆರ್ಥಿಕ ಸ್ಥಿತಿವಂತರಲ್ಲದ ಅಂದಿನ ದಿನಗಳಲ್ಲಿ ಗಡಿಯಾರ ಗೋಪುರವೇ ಎಲ್ಲರಿಗೂ ಸಮಯ ತೋರಿಸುವ ಸಾಧನ ವಿನ್ಯಾಸಗೊಳಿಸಲಾಗಿತ್ತು.
ಕಾಲಕ್ರಮೇಣ ಈ ಗಡಿಯಾರಗಳು ಕೆಟ್ಟು ಹೋ ದವು, ಅವುಗಳನ್ನು ದುರಸ್ತ ಮಾಡಲು ಇಚ್ಛಾಶಕ್ತಿ ಕೊರತೆ ಎದುರಾಯಿತು. ಹಳೆಯ ಗಡಿಯಾರಗಳನ್ನು ಕೆಲವು ದಶಕಗಳ ಹಿಂದೆ ತೆರವುಗೊಳಿಸಿ ಆಧುನಿಕ ಗಡಿಯಾರಗಳನ್ನು ಅಳವಡಿಸಲಾಗಿತ್ತು. ಆದರೆ, ಸೂಕ್ತ ನಿರ್ವಹಣೆ ಇಲ್ಲದೆ ಅವು ಸಮಯ ತೋರಿಸಲು ವಿಫಲವಾದವು.
ಆನಂತರ ಈ ಗಡಿಯಾರ ಗೋಪುರ ಧಾರ್ಮಿಕ ಪ್ರದರ್ಶನದ ಗೋಪುರವಾಗಿ ಮಾರ್ಪಟ್ಟಿತ್ತು. ಇದನ್ನು ಸಂಸದ ಎಸ್.ಮುನಿಸ್ವಾಮಿ ವಿರೋಧಿಸುವ ಮೂಲಕ ತ್ರಿವರ್ಣಧ್ವಜ ಹಾರಿಸಲು ಒತ್ತಾಯಿಸಿದರು. ಎಚ್ಚೆತ್ತುಕೊಂಡ ಜಿಲ್ಲಾಡಳಿತ ತ್ರಿವರ್ಣ ಧ್ವಜವನ್ನು ಹಾರಿಸುವಲ್ಲಿ ಸಫಲರಾದರು. ಆದರೆ, ಇದೇ ಅವಧಿಯಲ್ಲಿ ನಾಲ್ಕು ದಿಕ್ಕುಗಳಲ್ಲೂ ಗಡಿಯಾರ ಅಳವಡಿಸಲು ಧಾರ್ಮಿಕ ಧ್ವಜ ಹಾರಿಸಿದವರೂ, ತ್ರಿವರ್ಣ ಧ್ವಜ ಬೇಕೆಂದವರೂ ಯಾರೂ ಒತ್ತಾಯಿಸಲಿಲ್ಲ ಎನ್ನುವುದನ್ನು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಕೋಲಾರ ನಗರದ ಹೆಗ್ಗುರುತಾಗಿರುವ ಕ್ಲಾಕ್ ಟವರ್ ಗಡಿಯಾರ ಗೋಪುರ ಮತ್ತು ಹಳೇ ಬಸ್ ನಿಲ್ದಾಣದ ಗಡಿಯಾರ ಗೋಪುರಗಳಲ್ಲಿ ಜಿಲ್ಲಾಡಳಿತ ಧ್ವಜ ಹಾರಿಸುವ ರೀತಿಯ ಉತ್ಸಾಹದಲ್ಲಿಯೇ ಗಡಿಯಾರಗಳನ್ನು ಅಳವಡಿಸುವ ಮೂಲಕ ಗೋಪುರಗಳ ಅಂದ ಹೆಚ್ಚಿಸಬೇಕೆಂದು ಸಾರ್ವ ಜನಿಕರು ಒತ್ತಾಯಿಸುತ್ತಿದ್ದಾರೆ.
ಧಾರ್ಮಿಕ ಧ್ವಜ ತೆರವುಗೊಳಿಸಿ ತ್ರಿವರ್ಣ ಧ್ವಜ ಹಾರಿಸಿದ ಕಾರಣಕ್ಕೆ ಪ್ರತಿಯೊಬ್ಬರ ಬಾಯಲ್ಲೂ ಗಡಿಯಾರ ಗೋಪುರದ್ದೇ ಸುದ್ದಿಯಾಗಿದೆ. ಆದರೆ, ಧ್ವಜ ಹಾರಿಸುವ ಮುತುವರ್ಜಿ ಇದೇ ಗೋಪುರಕ್ಕೆ ಅಂದವಾದ ಗಡಿಯಾರ ಅಳವಡಿಸಲು ತೋರಿಸಿದ್ದರೆ ಗೋಪುರವೂ ಅಂದವಾಗಿರುತ್ತಿತ್ತು. ಜಿಲ್ಲಾಡಳಿತ ಈಗಲಾದರೂ ಗಡಿಯಾರ ಅಳವಡಿಕೆಗೆ ಮನಸು ಮಾಡಬೇಕು.-
ಕುರುಬರಪೇಟೆ ವೆಂಕಟೇಶ್, ಶಾಶ್ವತ ನೀರಾವರಿ ಹೋರಾಟ ಸಮಿತಿ ಮುಖಂಡ.
-ಕೆ.ಎಸ್.ಗಣೇಶ್