ಕೋಲಾರ: ಬಾಲಕಾರ್ಮಿಕ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಪಣತೊಡಬೇಕು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬಾಲಕಾರ್ಮಿಕರ ನೇಮಕಾತಿ ನಿರ್ಮೂಲನಾ ಪ್ರಚಾರ ಸಂಘ, ಕಾರ್ಮಿಕ ಇಲಾಖೆ ಹಾಗೂ ವಕೀಲರ ಸಂಘ ಹಮ್ಮಿಕೊಂಡಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ನೀಡಿ: ಸ್ವಾತಂತ್ರ್ಯ ಬಂದು 72 ವರ್ಷಗಳಾದರೂ ಇಂದಿಗೂ ಬಾಲ ಕಾರ್ಮಿಕ ಪದ್ಧತಿಯು ಒಂದು ಪಿಡುಗಾಗಿ ಬೆಳೆಯುತ್ತಿದೆ. ಇದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸಲು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಹೇಳಿದರು.
ಜೈಲು ವಾಸ: ಸರ್ಕಾರವು ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಿದೆ. ಅದರಂತೆ 14 ವರ್ಷದೊಳಗಿನ ಮಕ್ಕಳನ್ನು ಯಾವುದೇ ಕ್ಷೇತ್ರದಲ್ಲಿ ಹಾಗೂ 14 ರಿಂದ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರಗಳಲ್ಲಿ ದುಡಿಸಿಕೊಳ್ಳುವಂತಿಲ್ಲ. ಒಂದು ವೇಳೆ ದುಡಿಮೆ ಮಾಡಿಸಿಕೊಂಡಿದ್ದು ಕಂಡು ಬಂದಲ್ಲಿ 6 ತಿಂಗಳಿಂದ 2 ವರ್ಷದವರೆಗೆ ಜೈಲು ಹಾಗೂ 50 ಸಾವಿರ ರೂ. ದಂಡ ವಿಧಿಸಲಾಗುತ್ತದೆ ಎಂದು ಹೇಳಿದರು.
ಉತ್ತಮ ಭವಿಷ್ಯ ಕಟ್ಟಲು ಶ್ರಮಿಸಿ: ಮಕ್ಕಳಿಗೆ ಬಾಲ್ಯದಲ್ಲಿ ಉತ್ತಮ ಶಿಕ್ಷಣವನ್ನು ಮೊಟಕುಗೊಳಿಸಿ ಮುಂದಿನ ಜೀವನಕ್ಕೆ ಬಿಡದೆ ಅವರನ್ನು ದುಡಿಮೆಗೆ ತಳ್ಳುವುದು ಸರಿಯಲ್ಲ. ಮಕ್ಕಳ ಜೀವನಕ್ಕೆ ಮಾರಕವಾಗುವ ಕೆಲಸವನ್ನು ಯಾರೊಬ್ಬರೂ ಮಾಡಬಾರದು. ಒಂದು ದೀಪದಿಂದ ಸಹಸ್ರ ದೀಪ ಬೆಳಗಿಸುವ ಕೆಲಸವನ್ನು ಮಾಡುವಂತೆ ಶಿಕ್ಷಣವನ್ನು ಕೊಡಿಸುವ ಮೂಲಕ ಉತ್ತಮ ಭವಿಷ್ಯವನ್ನು ಕಟ್ಟಲು ಶ್ರಮಿಸೋಣ ಎಂದು ಹೇಳಿದರು.
ಜಾಗೃತಿ ವಹಿಸಿ: ಪ್ರತಿಯೊಬ್ಬ ಮಕ್ಕಳಿಗೂ ಶಿಕ್ಷಣವನ್ನು ಕೊಡಬೇಕು ಎಂಬುವುದು ಮೂಲಭೂತ ಹಕ್ಕಾಗಿದೆ. ಈ ಶಿಕ್ಷಣವನ್ನು ಕೊಡಿಸುವುದ ಪೋಷಕರ ಮೂಲಭೂತ ಕರ್ತವ್ಯವಾಗಿದೆ. ಹಾಗಾಗಿ ಯಾವುದೇ ಮಗು ಶಾಲೆಯಿಂದ ಹೊರಗುಳಿಯದೆ ಜಾಗೃತಿ ವಹಿಸಬೇಕು. ಶಾಲೆಗೆ ಸೇರ್ಪಡೆಯಾಗಿ ಮಧ್ಯದಲ್ಲಿ ಶಾಲೆಯನ್ನು ಬಿಡುವಂತಹ ಮಕ್ಕಳ ಸಮಸ್ಯೆಗಳನ್ನು ಗುರುತಿಸಿ ಪರಿಹಾರ ನೀಡುವ ಮೂಲಕ ಶಿಕ್ಷಣವನ್ನು ಕೊಡಬೇಕು ಎಂದು ತಿಳಿಸಿದರು.
ಅಗತ್ಯತೆ ಪೂರೈಸಿ: ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಕುಟುಂಬದಲ್ಲಿ ಯಾವುದೇ ರೀತಿಯ ಸಮಸ್ಯೆಗಳಿದ್ದರೆ ಅದನ್ನು ಗಮನಿಸಿ ಅವರ ಅಗತ್ಯತೆಗಳನ್ನು ಪೂರೈಸಬೇಕು. ಅದರ ಜೊತೆಗೆ ಮಕ್ಕಳ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಬೇಕು. ಇದು ಕೇವಲ ಒಬ್ಬರು ಮಾಡುವ ಕೆಲಸವಲ್ಲ. ಎಲ್ಲರ ಸಹಕಾರ ಅವಶ್ಯಕ ಎಂದರು.