ಬೆಂಗಳೂರು: ಕೋಲಾರದಲ್ಲಿ ಕೆ.ಎಚ್.ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಬಣಕ್ಕೆ ಟಿಕೆಟ್ ನೀಡಿಲ್ಲ. ಗುಂಪು ರಾಜಕಾರಣ ನಮ್ಮಲ್ಲಿಲ್ಲ. ಯಾರೇ ಆದರೂ ಪಕ್ಷದ ಲಕ್ಷ್ಮಣ ರೇಖೆ ದಾಟಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೀಟು ಗೆಲ್ಲುವುದು ಬಿಡುವುದು ಅನಂತರದ್ದು. ಆದರೆ ಪಕ್ಷದಲ್ಲಿ ಶಿಸ್ತು ಬಹಳ ಮುಖ್ಯ. ಶಿಸ್ತನ್ನು ಯಾರೇ ಉಲ್ಲಂಘಿಸಿದರೂ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕೋಲಾರದ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದಿರುವ ಗೌತಮ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿದ್ದು, ಮಾಜಿ ಮೇಯರೊಬ್ಬರ ಪುತ್ರ. ಇವರ ಪರವಾಗಿ ಎಲ್ಲರೂ ಯಾವ ಒಳ ಏಟು ಇಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ಕೆಲಸ ಮಾಡುತ್ತಾರೆ. ದಲಿತ ಬಲಗೈ ಸಮುದಾಯಕ್ಕೆ ಟಿಕೆಟ್ ನೀಡುವಂತೆ ಕೇಳಿದ್ದರು. ಸುಮಾರು ಕ್ಷೇತ್ರದಲ್ಲಿ ಎಡಗೈ ದಲಿತ ಸಮುದಾಯದ ಹೆಚ್ಚಾಗಿದೆ. ಬಿಜೆಪಿ ಎಡಗೈ ಸಮುದಾಯಕ್ಕೆ ಎರಡು ಟಿಕೆಟ್ ನೀಡಿದೆ. ಹಾಗಾಗಿ ನಾವು ಕೂಡ ಎರಡು ಸೀಟು ಕೊಟ್ಟಿದ್ದೇವೆ ಎಂದು ಹೇಳಿದರು.
ಮತ್ತೆ ಐಟಿ ನೋಟಿಸ್:
1,800 ಕೋಟಿ ರೂ. ತೆರಿಗೆ ವಿಚಾರವಾಗಿ ಆದಾಯ ತೆರಿಗೆ ಇಲಾಖೆ ದಿಲ್ಲಿಯಲ್ಲಿ ನೋಟಿಸ್ ನೀಡಿದೆ. ಕೇಂದ್ರ ಸರಕಾರ ಈ ದೇಶದ ಪ್ರಜಾಪ್ರಭುತ್ವ ಹಾಗೂ ಕಾನೂನನ್ನು ಹರಾಜು ಮಾಡುತ್ತಿದೆ. ಅಧಿಕಾರ ಯಾವತ್ತೂ ಶಾಶ್ವತವಲ್ಲ. ಹಾಗಿರುವಾಗ ವಿಪಕ್ಷಗಳನ್ನು ಯಾಕೆ ಗುರಿ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದ ಅವರು, ಸೋಲಿನ ಭಯದಿಂದಲೇ ಎನ್‌ಡಿಎ ಮೈತ್ರಿಕೂಟ ಹತಾಶವಾಗಿದೆ ಎಂದರು.
ಬಗೆಹರಿದ ವಿಚಾರಕ್ಕೂ ನೋಟಿಸ್: ಡಿಕೆಶಿ:
ಬಗೆಹರಿದ ವಿಚಾರಕ್ಕೂ ನಿನ್ನೆ ರಾತ್ರಿ ನನಗೆ ಐಟಿ ನೋಟಿಸ್ ಬಂದಿದೆ. ಬಿಜೆಪಿ ನಾಯಕರ ಮೇಲೂ ಸಿಬಿಐ ತನಿಖೆ ನಡೆಯುತ್ತಿದೆ. ಆದರೆ ಅವರನ್ನು ವಿಚಾರಣೆಗೆ ಕರೆಯುವುದಿಲ್ಲ. ಕೇವಲ ಕಾಂಗ್ರೆಸ್ ನಾಯಕರನ್ನು ಮಾತ್ರ ಗುರಿ ಮಾಡಲಾಗುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಟೀಕಿಸಿದರು.