Advertisement

Kolar: ಬಾಲಕಿಯರ ಖಾಸಗಿ ಫೋಟೋ ತೆಗೆದ ಶಿಕ್ಷಕ; ಪ್ರಕರಣ ರದ್ದುಪಡಿಸಲು ಹೈಕೋರ್ಟ್‌ ನಕಾರ

12:04 AM Sep 12, 2024 | Team Udayavani |

ಬೆಂಗಳೂರು: ಬಾಲಕಿಯರ ಖಾಸಗಿ ವೀಡಿಯೋ ಮತ್ತು ಫೋಟೋ ತೆಗೆದ ಆರೋಪದ ಮೇಲೆ ಶಿಕ್ಷಕರೊಬ್ಬರ ವಿರುದ್ಧ ದಾಖಲಾದ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್‌ ನಿರಾಕರಿಸಿದೆ. ಜತೆಗೆ ಪ್ರಕರಣವನ್ನು ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದೆ.

Advertisement

ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಸರಕಾರಿ ವಸತಿ ಶಾಲೆಯ ಚಿತ್ರಕಲಾ ಶಿಕ್ಷಕ ಮುನಿಯಪ್ಪ (46) ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರಕರಣವನ್ನು ರದ್ದುಪಡಿಸಲು ನಿರಾಕರಿಸಿ ಶಿಕ್ಷಕನ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ ಅರ್ಜಿದಾರರು ಯಾವುದೇ ತಪ್ಪೆಸಗಿಲ್ಲ. ಇಲ್ಲಿ ಅವರ ಮೊಬೈಲ್‌ ಫೋನ್‌ ವಶಪಡಿಸಿಕೊಂಡು ಸುಳ್ಳು ಅಪಾದನೆ ಮಾಡಿ ದೂರು ದಾಖಲಿಸಲಾಗಿದೆ. ಹೀಗಾಗಿ ಅವರ ವಿರುದ್ಧದ ಎಲ್ಲ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು. ಸರಕಾರದ ಪರ ವಕೀಲರು ವಾದ ಮಂಡಿಸಿ ಅರ್ಜಿದಾರರು ವಸತಿ ಶಾಲೆಯಲ್ಲಿ ಹುಡುಗಿಯರು ಬಟ್ಟೆ ಬದಲಾಯಿಸುವಾಗ ಅವರ ವೀಡಿಯೋ ಚಿತ್ರೀಕರಿಸಿ ಫೋಟೋ ತೆಗೆದಿದ್ದರು.

ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಪೋಕ್ಸೋ ಕಾಯ್ದೆಯ ಸೆಕ್ಷನ್‌ 12ರ ಅಡಿ ಪ್ರಕರಣ ದಾಖಲಾಗಿದೆ. ಅವರು ಹಲವಾರು ಮೊಬೈಲ್‌ಗ‌ಳನ್ನು ಹೊಂದಿದ್ದು ತನಿಖೆಗೆ ಸಮರ್ಪಕವಾಗಿ ಸಹಕರಿಸುತ್ತಿಲ್ಲ. ಪ್ರಕರಣ ಸಂಬಂಧ ಸಂಗ್ರಹಿಸಲಾದ ದಾಖಲೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್‌ಎಲ್‌) ಕಳುಹಿಸಲಾಗಿದೆ ಎಂದು ನ್ಯಾಯಪೀಠದ ಮುಂದೆ ವಿವರಿಸಿದರು.

ಕೇಳುವುದಕ್ಕೆ ಅಸಹ್ಯ
ವಾದ – ಪ್ರತಿವಾದ ಆಲಿಸಿದ ನ್ಯಾಯಪೀಠ, ಶಿಕ್ಷಕರಾಗಿರುವ ಅರ್ಜಿದಾರರು ಹೆಣ್ಣು ಮಕ್ಕಳು ಬಟ್ಟೆ ಬದಲಾಯಿಸುವಾಗ ಅವರ ವೀಡಿಯೊಗಳನ್ನು ಚಿತ್ರೀಕರಿಸಿದ್ದಾರೆ ಮತ್ತು ಚಿತ್ರಗಳನ್ನು ತೆಗೆದಿದ್ದಾರೆ ಎನ್ನುವ ಆರೋಪವೇ ಕೇಳಲು ಅಸಭ್ಯವಾಗಿದೆ. ಅಲ್ಲದೆ ಇಲ್ಲಿ ಅವರ ಬಳಿ ವಿವಿಧ ಬ್ರ್ಯಾಂಡ್‌ಗಳ 5ಮೊಬೈಲ್‌ ಫೋನ್‌ಗಳಿವೆ. ಎಲ್ಲವನ್ನೂ ವಶಪಡಿಸಿಕೊಂಡು ಎಫ್ಎಸ್‌ಎಲ್‌ಗೆ ಕಳುಹಿಸಲಾಗಿದೆ.

Advertisement

ಪ್ರತೀ ಫೋನಲ್ಲಿ ಸುಮಾರು 1,000 ಚಿತ್ರಗಳು ಮತ್ತು ನೂರಾರು ವೀಡಿಯೋಗಳಿವೆ. ಶಿಕ್ಷಕನಾಗಿರುವ ಆರೋಪಿಯ ಬಳಿ 5 ಮೊಬೈಲ್‌ಗ‌ಳು ಏಕೆ? ಅವುಗಳಲ್ಲಿರುವ ವೀಡಿಯೋ ಮತ್ತು ಚಿತ್ರಗಳ ಮಾಹಿತಿಯು ಸಂಪೂರ್ಣ ತನಿಖೆಯಿಂದ ಮಾತ್ರವೇ ಹೊರಬರಲು ಸಾಧ್ಯ ಎಂದು ಹೇಳಿ ಅರ್ಜಿ ವಜಾಗೊಳಿಸಿ ಆದೇಶಿಸಿತು.

Advertisement

Udayavani is now on Telegram. Click here to join our channel and stay updated with the latest news.