ಕೋಲಾರ: ನಗರದಲ್ಲಿ ಜೂ.26 ರಂದು 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ಆಚರಿಸಲು ಪ್ರತಿಯೊಬ್ಬರು ಸಹಕರಿಸಬೇಕು ಎಂದು ತಹಶೀಲ್ದಾರ್ ಗಾಯತ್ರಿ ಕೋರಿದರು.
ನಗರದಲ್ಲಿ 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸಮೇಳನದ ದಿನದಂದು ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಬೇಕು, ಯಾವುದೇ ರೀತಿಯ ಲೋಪ ಜರುಗದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗಾನಂದ ಕೆಂಪರಾಜ್ ಮಾತನಾಡಿ, ಸಮ್ಮೇಳನದ ಪೂರ್ವಭಾವಿ ಸಭೆಗೆ ವಿವಿಧ ಇಲಾಖೆಗಳ ತಾಲೂಕು ಅಧಿಕಾರಿಗಳು ಗೈರು ಆಗಿದ್ದಾರೆ, ಇನ್ನು ಸಮ್ಮೇಳಕ್ಕೆ ಎಷ್ಟು ಮಾತ್ರ ಸಹಕಾರ ನೀಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮ್ಮೇಳನಾಧ್ಯಕ್ಷರಾಗಿ ಡಾ.ಎಂ.ಎಸ್.ಕಾಮರೂಪಿ ಪ್ರಭಾಕರ ಅವರನ್ನು ಆಯ್ಕೆ ಮಾಡಲಾಗಿದ್ದು, ಪ್ರವೇಶದ್ವಾರಕ್ಕೆ ದಿವಂಗತ ಜಿ.ವಿ.ಜೋಶಿ ಹಾಗೂ ವೇದಿಕೆಗೆ ಕಾಮರೂಪಿ ಎಂದು ಹೆಸರಿಡಲಾಗಿದೆ ಎಂದರು.26ರಂದು ಬೆಳಗ್ಗೆ 9ಕ್ಕೆ ಧ್ವಜಾರೋಹಣ, ಬೆಳಗ್ಗೆ 11.30ಕ್ಕೆ ವೇದಿಕೆ ಕಾರ್ಯಕ್ರಮ, ಮಧ್ಯಾಹ್ನ 12ಕ್ಕೆ ಸಮ್ಮೇಳನ ಅಧ್ಯಕ್ಷರ ಬದುಕು, ಬರಹ, ಸಾಧನೆ ಕುರಿತು ಗೋಷ್ಠಿ, ಮಧ್ಯಾಹ್ನ 2.30ಕ್ಕೆ ಕವಿಗೋಷ್ಠಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ, ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆ ಯಲಿದ್ದು, ತಾಲೂಕಿನ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸುತ್ತಾರೆ ಎಂದು ವಿವರಿಸಿದರು. ಸಭೆಯಲ್ಲಿ ಪರಿಷತ್ತಿನ ಜಿಲ್ಲಾ ಘಟಕದ ಕೋಶಾಧ್ಯಕ್ಷ ರತ್ನಪ್ಪ ಮೇಲಾಗಾಣಿ, ಗೌರವ ಕಾರ್ಯ ದರ್ಶಿ ಆರ್.ಎಂ.ವೆಂಕಟಸ್ವಾಮಿ, ಗೌರವಾಧ್ಯಕ್ಷ ಕೆ.ಎನ್.ಪರಮೇಶ್ವರನ್, ತಾಲೂಕು ಘಟಕದ ಅಧ್ಯಕ್ಷ ಪ್ರೊ.ಎಂ.ಮುನಿರತ್ನಪ್ಪ, ಹುತ್ತೂರು ಹೋಬಳಿ ಅಧ್ಯಕ್ಷ ಎಸ್.ಸಿ.ವೆಂಕಟಕೃಷ್ಣಪ್ಪ, ಸಿರಿ ಗನ್ನಡ ವೇದಿಕೆ ಅಧ್ಯಕ್ಷ ಡಾ.ಕೆ.ಎಂ.ಜೆ.ಮೌನಿ ಹಾಜರಿದ್ದರು.