ಕೋಲಾರ: ನಗರದಲ್ಲಿ ಸೋಮವಾರ ನಡೆದ ಜಿಲ್ಲಾಮಟ್ಟದ ಜನತಾ ದರ್ಶನ ಕಾರ್ಯಕ್ರಮ ಸಂಸದ ಹಾಗೂ ಶಾಸಕರ ನಡುವಿನ ಜಟಾಪಟಿಗೆ ಸಾಕ್ಷಿಯಾಯಿತು.
ಮಾತಿನ ನಡುವೆ “ಭೂಗಳ್ಳರು’ ಎಂದು ಪ್ರಸ್ತಾವಿಸಿದ್ದಕ್ಕೆ ಸಂಸದ ಎಸ್.ಮುನಿಸ್ವಾಮಿ ವಿರುದ್ಧ ಶಾಸಕ ಎಸ್.ಎನ್.ನಾರಾಯಣ ಸ್ವಾಮಿ ತಿರುಗಿ ಬಿದ್ದರು. ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆದು ಕಾರ್ಯಕ್ರಮ ಗೊಂದಲದ ಗೂಡಾಯಿತು.
ಸೋಮವಾರ ಬೆಳಗ್ಗೆ ಇಲ್ಲಿನ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜನತಾದರ್ಶನ ಏರ್ಪಡಿಸಲಾಗಿತ್ತು. ಉದ್ಘಾಟನೆಯ ಬಳಿಕ ಸಚಿವ ಬೈರತಿ ಸುರೇಶ್ ಅವರು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸುತ್ತಿದ್ದರು. ಶ್ರೀನಿವಾಸಪುರದ ರೈತರ ಜತೆ ಸಂಸದ ಎಸ್.ಮುನಿಸ್ವಾಮಿ ಮನವಿ ಸಲ್ಲಿಸಲು ಆಗಮಿಸಿದ್ದರು.
ರೈತರ ಭೂಮಿಯನ್ನು ಉಳಿಸಿಕೊಡಿ ಎಂದು ಮನವಿ ಸಲ್ಲಿಸಿ ವೇದಿಕೆಯಿಂದ ಕೆಳಗೆ ಇಳಿಯುತ್ತಿದ್ದಾಗ ಸಂಸದ ಮುನಿಸ್ವಾಮಿ ಅವರು, “ಭೂಗಳ್ಳರನ್ನು ವೇದಿಕೆಯಲ್ಲಿ ಕೂರಿಸಿಕೊಂಡು ಜನತಾದರ್ಶನ ನಡೆಸಿದರೆ ಯಶಸ್ವಿಯಾಗಲು ಹೇಗೆ ಸಾಧ್ಯ’ ಎಂದು ಲೇವಡಿ ಮಾಡಿದರು. ಇದರಿಂದ ಕೆರಳಿದ ಶಾಸಕ ಎಸ್.ಎನ್.ನಾರಾಯಣ ಸ್ವಾಮಿ, “ನಿಮ್ಮ ಅಪ್ಪ ಹಾಗೂ ನೀನು ಭೂಗಳ್ಳ’ ಎಂದು ಆಕ್ರೋಶದಿಂದ ಹೇಳಿದರು. ಇದು ಇಬ್ಬರ ನಡುವೆ ವಾಗ್ವಾದ ಉಂಟು ಮಾಡಿತು. ಪರಿಸ್ಥಿತಿಯು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಸಂಸದರನ್ನು ಎಸ್ಪಿ ನಾರಾಯಣ್ ಅವರು ವೇದಿಕೆಯಿಂದ ಕೆಳಕ್ಕಿಳಿಸಿದರಲ್ಲದೆ, ರಂಗ ಮಂದಿರದಿಂದ ಹೊರಕ್ಕೆ ನೂಕಿದರು.
ಪೊಲೀಸರ ವರ್ತನೆಯಿಂದ ಮತ್ತಷ್ಟು ಕೆರಳಿದ ಮುನಿಸ್ವಾಮಿ, ನಾನು ಯಾರ ಹೆಸರನ್ನೂ ಉಲ್ಲೇಖೀಸಿ ಭೂಗಳ್ಳ ಎಂದು ಹೇಳಿಲ್ಲ. ಪೊಲೀಸರು ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳಬೇಕು ಹಾಗೂ ಜನಪ್ರತಿನಿಧಿಗಳಿಗೆ ಗೌರವ ನೀಡಬೇಕು ಆಕ್ರೋಶಭರಿತರಾಗಿ ಹೇಳಿದರು.
ಒತ್ತುವರಿ ತೆರವು ಹೆಸರಲ್ಲಿ ಶ್ರೀನಿವಾಸಪುರದ ರೈತರ ಮೇಲೆ ದಬ್ಟಾಳಿಕೆ ಮಾಡಿ ರುವ ಸರಕಾರ ಮತ್ತು ಅಧಿ ಕಾರಿಗಳಿಗೆ, ಶಾಸಕ ಎಸ್.ಎನ್. ನಾರಾಯಣ ಸ್ವಾಮಿ ಮಾಡಿಕೊಂಡಿರುವ ಒತ್ತುವರಿ ಕಾಣಿಸುತ್ತಿಲ್ಲವೇ? ಶಾಸಕರು ಗುಂಡುತೋಪು, ಸರಕಾರಿ ಜಮೀನು ಹಾಗೂ ಕೆರೆಯನ್ನು ಕಬಳಿಸಿಲ್ಲವೇ? -ಎಸ್. ಮುನಿಸ್ವಾಮಿ, ಸಂಸದ