ಕೋಲಾರ: ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಆದರೆ ಮುಖಗವಸು (ಮಾಸ್ಕ್) ಹಾಗೂ ಕೈ ಶುದ್ಧೀಕರಣ ದ್ರಾವಣ (ಸ್ಯಾನಿಟೈಸರ್)ಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಹೆಚ್ಚಿದ್ದು, ಕಾಸುಕೊಟ್ಟರೂ ಮುಖಗವಸು ಸಿಗತ್ತಿಲ್ಲ ಎಂಬುದು ಜಿಲ್ಲೆಯ ಜನರ ಚಿಂತೆಗೆ ಕಾರಣವಾಗಿದೆ.
ಸುದ್ದಿವಾಹಿನಿ, ಜಾಲತಾಣ ಸೇರಿದಂತೆ ಎಲ್ಲೆಡೆ ಕೊರೊನಾ ವೈರಸ್ ಕುರಿತಂತೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಆದರೆ ಈವರೆಗೂ ಜಿಲ್ಲೆಯ ಜನ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಕೊರೊನಾ ವೈರಸ್ ಶಂಕಿತ ಹಾಗೂ ದೃಢಪಟ್ಟವರು ಪತ್ತೆಯಾಗಿರುವುದರಿಂದ ಮುಂಜಾಗ್ರತೆ ಕ್ರಮ ಕೈಗೊಳ್ಳುವಲ್ಲ ನಿರತರಾಗಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಮುಖಗವಸುಗಳು ಹಾಗೂ ಕೈ ಶುದ್ದೀಕರಣ ದ್ರಾವಣಕ್ಕೆ ಸಹಜವಾಗಿಯೇ ಬೇಡಿಕೆ ಹೆಚ್ಚಿದೆ. ಸಂಗ್ರಹ ಇದ್ದವರು ಬೇಕಾಬಿಟ್ಟಿ ದರ ನಿಗದಿ ಪಡಿಸಿ, ಮಾರಾಟ ಮಾಡುತ್ತಿರುವುದು ಸಾಮಾನ್ಯ ವಾಗಿದೆ. ಕೆಲವೆಡೆ ದುಪ್ಪಟ್ಟು ದರ ನೀಡುತ್ತೇವೆ ಎಂದರೂ, ಮಾಸ್ಕ್, ಕೈ ಶುದ್ಧೀಕರಣ ದ್ರಾವಣ ಸಿಗುತ್ತಿಲ್ಲ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೈಶುದ್ಧಿ ದ್ರಾವಣ, ಮಾಸ್ಕ್ ದುಬಾರಿ: ಜಿಲ್ಲೆಯ ಪ್ರತಿ ಔಷಧ ಅಂಗಡಿಯಲ್ಲಿ ತಿಂಗಳು ಸರಾಸರಿ ಐದರಿಂದ ಹತ್ತು ಮಾಸ್ಕ್ಗಳು ಮಾತ್ರವೇ ಮಾರಾಟವಾಗುತ್ತಿದ್ದವು. ಅದೂ ಧೂಳಿನ ಅಲರ್ಜಿ ಸಮಸ್ಯೆ ಇರುವವರು ಮಾತ್ರವೇ ಅವುಗಳನ್ನು ಖರಿದೀಸುತ್ತಿದ್ದರು. ಬೇಡಿಕೆಯಿಲ್ಲದ ಕಾರಣ ಹೆಚ್ಚಿನ ಸ್ಟಾಕ್ ಔಷಧ ಅಂಗಡಿಗಳಲ್ಲಿ ಇರಲಿಲ್ಲ. ಆದರೆ, ಈಗ ಮೂರು ನಾಲ್ಕು ದಿನಗಳಿಂದ ಮಾಸ್ಕ್ಹಾ ಗೂ ಕೈ ಶುದ್ದೀಕರಣ ದ್ರಾವಣ ಕೇಳಿ ಬರುವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಆದರೂ, ಸ್ಟಾಕ್ ಇಲ್ಲವೆಂಬ ಉತ್ತರ ಸಿಗುತ್ತಿದೆ. ಹೆಚ್ಚಿನ ಬೆಲೆಗೆ ಮಾರಾಟ: ಲಭ್ಯವಿದ್ದ ದಾಸ್ತಾನನ್ನು ದುಬಾರಿ ಬೆಲೆಗೆ ಮಾರಾಟ ಮಾಡಿಬಿಟ್ಟಿದ್ದಾರೆ. 5 ರೂ. ಗಳ ಮಾಸ್ಕ್ 30ರಿಂದ 50 ರೂ.ಗಳಿಗೆ, 100 ರೂ.ಗಳ ಮಾಸ್ಕ್ 300 ರಿಂದ 500 ರೂ. ವರೆಗೂ ಮಾರಾಟ ವಾಗುತ್ತಿದೆ. ಕೈ ಶುದ್ಧೀಕರಣ ದ್ರಾವಣಕ್ಕೆ ಅಷ್ಟಾಗಿ ಬೇಡಿಕೆ ಇಲ್ಲದಿದ್ದರೂ, ಈಗ ಎಂಆರ್‌ಪಿಗಿಂತಲೂ ದುಪ್ಪಟ್ಟು, ಮೂರು ಪಟ್ಟು ಬೆಲೆಗೆ ಮಾರಾಟವಾಗುತ್ತಿದೆ. ಪ್ರಸ್ತುತ ಇಡೀ ಜಿಲ್ಲೆಯಲ್ಲಿ ಕೇಳಿದಷ್ಟು ಹಣ ನೀಡುತ್ತೇವೆ ಎಂದರೂ, ಮಾಸ್ಕಾಗಳು ಸಿಗುತ್ತಿಲ್ಲವೆನ್ನು ವುದು ಸದ್ಯದ ಸ್ಥಿತಿಯಾಗಿದೆ.
ಆಸ್ಪತ್ರೆ ಬಳಕೆಗೆ ಲಭ್ಯ: ಖಾಸಗಿ ಮಾರಾಟಕ್ಕೆ ಮಾಸ್ಕಾಗಳು ಸಿಗದಿದ್ದರೂ, ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆ ಸೇರಿದಂತೆ ಬಹುತೇಕ ಖಾಸಗಿ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಂಗಳು ತಮ್ಮ ಬೇಡಿಕೆಗೆ ತಕ್ಕಷ್ಟು ಮಾಸ್ಕಾಗಳನ್ನು ದಾಸ್ತಾನು ಇಟ್ಟುಕೊಂಡಿರುವುದು ವಿಶೇಷವಾಗಿದೆ. ಈ ದಾಸ್ತಾನಿಂದ ಸ್ವಲ್ಪ ಪ್ರಮಾಣದ ಖಾಸಗಿ ಬೇಡಿಕೆ ತೀರಿಸಲಾಗುತ್ತಿದೆ.
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಎನ್-95, ತ್ರಿಪಲ್ ಮಾಸ್ಕ್ಗಳು ಕೊರೊನಾ ಚಿಕಿತ್ಸೆಗಾಗಿಯೇ ನೂರು ಸಂಖ್ಯೆಯಲ್ಲಿ ದಾಸ್ತಾನಿಟ್ಟುಕೊಳ್ಳಲಾಗಿದೆ. ಕೊರೊನಾ ಚಿಕಿತ್ಸೆಗಾಗಿ ಈಗಾಗಲೇ ಜಿಲ್ಲಾಸ್ಪತ್ರೆಯಲ್ಲಿ ಐದು ಬೆಡ್ ಗಳ ಪ್ರತ್ಯೇಕ ಕೋಣೆ, ಟ್ಯಾಮಿಫ್ಲೋ ಮಾತ್ರೆ, ಸಿರಪ್, ರೋಗಿಗಳು ಮತ್ತು ವೈದ್ಯರಿಗೆ ಸಿಬ್ಬಂದಿಗೆ ವ್ಯಯಕ್ತಿಕ ರಕ್ಷಣೆ ವಸ್ತುಗಳ ಕಿಟ್, ಕೈ ಶುದ್ಧೀಕರಣ ದ್ರಾವಣ, ಆರೋಗ್ಯ ರಕ್ಷಕ ಸಾಧನ(ವೆಂಟಿಲೇಟರ್), ಅಮ್ಲಜನಕ ಸಿಲೆಂಡರ್, ಜೀವ ರಕ್ಷಕ ಔಷಧ, ತೂಕದ ಯಂತ್ರ ಇತ್ಯಾದಿಗಳ ದಾಸ್ತಾನು ಇಟ್ಟುಕೊಂಡು ಸಜ್ಜುಗೊಳಿಸಲಾಗಿದೆ.
ಕೆ.ಎಸ್.ಗಣೇಶ್