ಕೋಲಾರ: ದೇಶದಲ್ಲಿ ರೈತರು ಹೈನುಗಾರಿಕೆ ಯಿಂದ ತಮ್ಮ ಜೀವನ ರೂಪಿಸಿಕೊಳ್ಳುತ್ತಿದ್ದು ಈ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸರ್ಕಾರವು ಜಾರಿಗೊಳಿಸುತ್ತಿರುವ ಯೋಜನೆಗಳನ್ನು ಸೂಕ್ತವಾಗಿ ಅನುಷ್ಠಾನ ಮಾಡಬೇಕು ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ತಾಲೂಕಿನ ಟಮಕ ಬಳಿ ಇರುವ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಳ್ಳ ಲಾಗಿದ್ದ ಭಾರತ ಸರ್ಕಾರದ ನೂತನ ಕಾರ್ಯಕ್ರಮ ವಾದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರೈತ ದೇಶದ ಬೆನ್ನೆಲುಬಾಗಿದ್ದು ದೇಶಕ್ಕೆ ಅನ್ನ ನೀಡುತ್ತಾನೆ. ಇಂತಹ ರೈತರು ಅವಲಂಭಿಸಿರುವ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರವು ಸಾಕಷ್ಟು ಯೋಜ ನೆಗಳನ್ನು ಜಾರಿಗೆ ತರುತ್ತಿದೆ. ಇದನ್ನು ಸೂಕ್ತವಾಗಿ ರೈತರಿಗೆ ತಲುಪುವಂತೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ಅಧಿಕಾರಿಗಳ ಮೇಲಿದೆ. ಈ ಜವಾಬ್ದಾರಿಯನ್ನು ಪ್ರಾಮಾ ಣಿಕವಾಗಿ ನಿಬಾಯಿಸಬೇಕು ಎಂದರು.
ವದಂತಿಗಳಿಗೆ ಕಿವಿಗೊಡದಿರಿ: ಈ ಹಿಂದೆ ಒಂದು ಜಾನುವಾರಿಗೆ ಕಾಯಿಲೆ ಬಂದರೆ ಅದು ಗ್ರಾಮದ ಎಲ್ಲಾ ಜಾನುವಾರುಗಳಿಗೆ ಹರಡಿ ಜಾನುವಾರುಗಳು ಮೃತಪಡುವ ಪರಿಸ್ಥಿತಿ ಇತ್ತು. ವೈದ್ಯಕೀಯ ಕ್ಷೇತ್ರ ಬೆಳೆದಂತೆ ಇದನ್ನು ಹಂತಹಂತವಾಗಿ ನಿಯಂತ್ರಿಸುವ ಕೆಲಸವನ್ನು ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಕಾಲುಬಾಯಿ ರೋಗವು ಜಾನುವಾರುಗಳನ್ನು ಕಾಡುತ್ತಿದೆ. ಇದನ್ನು ನಿಯಂತ್ರಿಸಲು ಲಸಿಕೆ ಹಾಕುವ ಕಾರ್ಯವನ್ನು ಮಾಡಲಾಗುತ್ತಿದೆ. ಹಾಗಾಗಿ ಹೈನೋದ್ಯ ಮಿಗಳು ವದಂತಿಗಳಿಗೆ ಕಿವಿಗೊಡದೆ ಲಸಿಕೆ ಯನ್ನು ಹಾಕಿಸುವಂತಾಗಬೇಕು ಎಂದರು.
ಅಭಿಯಾನ ನಿರಂತರ: ದೇಶದಲ್ಲಿ 13 ಕೋಟಿಗೂ ಅಧಿಕ ಜಾನುವಾರುಗಳಿದ್ದು, ಇವುಗಳಿಗೆ ಬರುವ ಕಾಯಿಲೆಗಳನ್ನು ಏಕಕಾಲ ದಲ್ಲಿ ನಿಯಂತ್ರಿಸಬೇಕು ಎಂಬ ಉದ್ದೇಶದಿಂದ ಪ್ರಧಾನ ಮಂತ್ರಿ ಅವರು ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮ ಜಾರಿಗೆ ತಂದಿದ್ದಾರೆ. ಕಾಲುಬಾಯಿ ಜ್ವರ ನಿಯಂತ್ರಣಕ್ಕೆ ಹಮ್ಮಿಕೊಂಡಿರುವ ಲಸಿಕಾ ಅಭಿಯಾನ ಶೇ.100 ಸಾಧನೆಯಾಗಬೇಕು. ಈ ಕಾರ್ಯವನ್ನು ನಿರಂತರವಾಗಿ ನಡೆಯುವಂತಾಗಬೇಕು ಎಂದು ಹೇಳಿದರು. ಕೋಲಾರ ಜಿಲ್ಲೆಯಲ್ಲಿ ಬರವಿದ್ದರೂ ಹಾಲು ಉತ್ಪಾದನೆ ಮಾತ್ರ ಹೆಚ್ಚಾಗುತ್ತಾ ಸಾಗಿದೆ. ಜಾನು ವಾರುಗಳಿಗೆ ರೋಗಗಳು ತಗಲುವುದರಿಂದ ಹಾಲಿನ ಉತ್ಪಾದನೆಯು ಕಡಿಮೆಯಾಗಲಿದೆ. ಇಂತಹ ರೋಗ ಗಳಿಗೆ ಜಾನುವಾರುಗಳು ತುತ್ತಾಗದಂತೆ ಜಾಗ್ರತೆ ವಹಿಸಿ ರೋಗಗಳನ್ನು ನಿಯಂತ್ರಿಸಿದರೆ ಹಾಲು ಉತ್ಪಾದನೆಯಲ್ಲಿ ಮತ್ತಷ್ಟು ಹೆಚ್ಚಳವನ್ನು ಕಾಣಬಹುದು ಎಂದರು.
ನಿಯಂತ್ರಣ ಅಗತ್ಯ: ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆಯ ಎಚ್.ಕ್ರಾಸ್ ಚಿಂತಾಮಣಿ ಹಾಗೂ ಕೋಲಾರ ತಾಲೂಕಿನ ರೋಜಾರನಹಳ್ಳಿಯಲ್ಲಿ ಜಾನುವಾರು, ಕುರಿ, ಮೇಕೆ ಹಾಗೂ ಹಂದಿಗಳ ವ್ಯಾಪಾರ ನಡೆಯುತ್ತಿರುತ್ತದೆ. ಈ ಭಾಗದಲ್ಲಿ ರೋಗ ನಿಯಂತ್ರಣವಾಗಿದ್ದರೂ ಹೊರ ರಾಜ್ಯಗಳಿಂದ ಬರುವ ಪ್ರಾಣಿಗಳಲ್ಲಿ ರೋಗ ಇದ್ದಾಗ ಅದು ಇಲ್ಲಿನ ಜಾನುವಾರುಗಳಿಗೆ ಹರಡು ಸಾಧ್ಯತೆ ಇರುತ್ತದೆ. ಹಾಗಾಗಿ ಇದನ್ನು ನಿಯಂತ್ರಿಸುವ ಅಗತ್ಯವಿದೆ ಎಂದರು. ಪಶುಪಾಲನಾ ಇಲಾಖೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ಮಧುಸೂಧನ್ ರೆಡ್ಡಿ, ಸಹಾಯಕ ನಿರ್ದೇಶಕ ಡಾ.ಆಂಜನೇಯರೆಡ್ಡಿ, ಕೃಷಿ ವಿಜ್ಞಾನ ಕೇಂದ್ರದ ಡೀನ್ ಪ್ರೊ.ಬಿ.ಜಿ.ಪ್ರಕಾಶ್, ಸಹ ವಿಸ್ತರಣಾ ನಿರ್ದೇಶಕ ಟಿ.ಬಿ.ಬಸವರಾಜು, ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದ ವಿಷಯ ತಜ್ಞ ಡಾ.ಗೌತಮ್, ಡಾ.ನಟರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.