Advertisement

ಕೋಲಾರಕ್ಕೆ ಬಂತು ಕೆ.ಸಿ.ವ್ಯಾಲಿ ನೀರು

06:55 AM Jun 03, 2018 | |

ಕೋಲಾರ: ಹಲವು ಹೋರಾಟಗಳ ನಂತರ ಕೊನೆಗೂ ಕೆ.ಸಿ.ವ್ಯಾಲಿ ಯೋಜನೆಯಡಿ ಜಿಲ್ಲೆಗೆ ನೀರು ಹರಿದು
ಬಂದಿದೆ. ಈ ಯೋಜನೆಯಲ್ಲಿ ಮೊಟ್ಟ ಮೊದಲ ಬಾರಿಗೆ ತಾಲೂಕಿನ ಲಕ್ಷ್ಮೀಸಾಗರ ಕೆರೆಗೆ ನೀರು ಹರಿಯಿತು.

Advertisement

ಸುಮಾರು 55 ಕಿ.ಮೀ.ದೂರ ಪೈಪ್‌ಗಳ ಮೂಲಕ ಹಾದು ಬಂದ ನೀರು,ಶನಿವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ
ಲಕ್ಷ್ಮೀಸಾಗರ ಕೆರೆಯ ಬಳಿ ಉಕ್ಕಿ ಹರಿಯುತ್ತಿದ್ದಂತೆ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ
ಅಭಿಯಂತರ ವೆಂಕಟೇಶ್‌ ನೇತೃತ್ವದಅಧಿಕಾರಿಗಳು ಪೂಜೆ ಸಲ್ಲಿಸಿ, ಹೂ ಚೆಲ್ಲಿ, ಕೈಮುಗಿದು ಸ್ವಾಗತಿಸಿದರು. ಜನ
ಸಂತೋಷದಿಂದ ಕುಣಿದಾಡಿದರು.

2013ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ, ಪ್ರಣಾಳಿಕೆಯ ಭರವಸೆಗೆ ತಕ್ಕಂತೆ ಕೋಲಾರಕ್ಕೆ ಕೆ.ಸಿ.ವ್ಯಾಲಿ ಯೋಜನೆಯಡಿ ಶುದ್ದೀಕರಿಸಿದ ತ್ಯಾಜ್ಯ ನೀರನ್ನು ಕೆರೆಗಳಿಗೆ ತುಂಬಿಸಿ, ಅಂತರ್ಜಲ
ಹೆಚ್ಚಿಸಲು ಮುಂದಾಯಿತು. 2016ರ ಮೇ 30 ರಂದು ನರಸಾಪುರ ಕೆರೆಯಂಗಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂದಿನಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಗೆ ಗುದ್ದಲಿ ಪೂಜೆ ನೆರವೇರಿಸಿದರು. ಆರಂಭದಲ್ಲಿ ಕುಂಟುತ್ತಾ ಸಾಗಿದ್ದ ಯೋಜನೆ ರಮೇಶ್‌ ಕುಮಾರ್‌ ಉಸ್ತುವಾರಿ ಸಚಿವರಾಗುತ್ತಿದ್ದಂತೆಯೇ ಚುರುಕುಕಂಡಿತು. ಪ್ರತಿಫ‌ಲವಾಗಿ ನಿರೀಕ್ಷೆಗೂ ಮೀರಿ ಟೆಂಡರ್‌ನಲ್ಲಿ ಸೂಚಿಸಿದ್ದಕ್ಕಿಂತಲೂ ಒಂದು ತಿಂಗಳು ಮೊದಲೇ ಕೋಲಾರದ ಲಕ್ಷ್ಮೀಸಾಗರ ಕೆರೆಗೆ ನೀರು ಹರಿದು ಬರುವಂತಾಗಿದೆ.

52.5 ಕಿ.ಮೀ.ಹರಿದು ಬಂದ ನೀರು:
ಬೆಳ್ಳಂದೂರು ಎಸ್‌ಟಿಪಿಯಿಂದ ವರ್ತೂರು ಎಸ್‌ಟಿಪಿವರೆಗೂ ಸುಮಾರು 10 ಕಿ.ಮೀ, ವರ್ತೂರು ಎಸ್‌ಟಿಪಿಯಿಂದ ಲಕ್ಷ್ಮೀಸಾಗರ ಕೆರೆವರೆಗೂ 40 ಕಿ.ಮೀ. ದೂರದವರೆಗೆ ಪೈಪ್‌ಲೈನ್‌ ಮೂಲಕವೇ ನೀರು ಹರಿದು ಬಂದು ಕೆರೆ
ಸೇರಿತು. ಲಕ್ಷ್ಮೀಸಾಗರ ಕೆರೆಯಿಂದ ಇನ್ನೂ 126 ಕಿ.ಮೀ.ದೂರ ಈ ನೀರು ಕೆರೆಯಿಂದ ಕೆರೆಗೆ ಹರಿದು
ಸಾಗಬೇಕಾಗಿದೆ. ಕೋಲಾರ ಜಿಲ್ಲೆಯ ಗಡಿ ಗ್ರಾಮ ನಂಗಲಿವರೆಗೂ 130 ಕೆರೆಗಳನ್ನು ತುಂಬಿಸುತ್ತಾ ಕೆ.ಸಿ.ವ್ಯಾಲಿ ನೀರು ಹರಿಯಲು ಒಂದು ವರ್ಷ ಅಗತ್ಯವೆಂದು ಅಧಿಕಾರಿಗಳು ವಿವರಿಸುತ್ತಾರೆ.

ಪ್ರಸ್ತುತ ಕೇವಲ ಐದನೇ ಒಂದು ಭಾಗದ ನೀರನ್ನು ಮಾತ್ರವೇ ಪ್ರಾಯೋಗಿ ಕವಾಗಿ ಪೈಪ್‌ಗ್ಳಲ್ಲಿ ಹರಿಸುತ್ತಿರುವುದರಿಂದ ಸೋಮವಾರದೊಳಗೆ ಲಕ್ಷ್ಮೀಸಾಗರ ಕೆರೆ ತುಂಬಲಿದೆ. ಒಂದು ವಾರದೊಳಗೆ ಮಧ್ಯ ದಲ್ಲಿರುವ ಎರಡು ಮೂರು ಚಿಕ್ಕ ಕೆರೆಗಳು ತುಂಬಿದ ನಂತರ ನೀರು ನರಸಾಪುರ ಕೆರೆಗೆ ಹರಿಯಲಿದೆ. ನರಸಾಪುರ ಸೇರಿದಂತೆ ಆರು ಲಿಫ್ಟ್ ಕೇಂದ್ರಗಳ ಕಾಮಗಾರಿಯೂ ಪೂರ್ಣಗೊಳ್ಳುತ್ತಿದ್ದು, ಯಂತ್ರಗಳ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ.

Advertisement

ಕಣ್ಣೀರಿಟ್ಟ ರಮೇಶ್‌ಕುಮಾರ್‌
ಕೆ.ಸಿ.ವ್ಯಾಲಿ ನೀರನ್ನು ನೋಡುತ್ತಿದ್ದಂತೆ ಭಾವುಕರಾದ ವಿಧಾನಸಭಾಧ್ಯಕ್ಷ ರಮೇಶ್‌ ಕುಮಾರ್‌, ಕಣ್ಣೀರಿಡುತ್ತಲೇ 
“ಇಂತಹ ಒಳ್ಳೆಯ ಕೆಲಸಕ್ಕಾಗಿ ನನ್ನ ತಾಯಿ ನನಗೆ ಜನ್ಮ ನೀಡಿದ್ದರು’ ಎಂದರು.

ಶನಿವಾರ ತಾಲೂಕಿನ ಲಕ್ಷ್ಮೀಸಾಗರ ಕೆರೆಗೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಯೋಜನೆ ಜಾರಿಗೆ ಬಂದ ಹಲವಾರು ಅಡ್ಡಿ ಆತಂಕಗಳನ್ನು ಸ್ಮರಿಸಿದರು. ಕೋಲಾರ ಜಿಲ್ಲೆಯ ಜನತೆ ನೀರಿಗಾಗಿ ಹಲವಾರು ವರ್ಷಗಳಿಂದ ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದೆ. ಬರದಿಂದ ತತ್ತರಿಸಿರುವ ಇಲ್ಲಿನ ಅಂತರ್ಜಲವೂ 1,500 ಅಡಿಗಳಿಗೆ ತಲುಪಿದೆ. ಅಲ್ಲಿ ಸಿಗುವ ನೀರು ವಿಷವಾಗಿದೆ. ತಾಯಿಯ ಎದೆಯ ಹಾಲಲ್ಲೂ ವಿಷವಿದೆ ಎಂದು ತಜ್ಞರು ತಿಳಿಸುವಷ್ಟರ ಮಟ್ಟಿಗೆ ಪರಿಸ್ಥಿತಿ ವಿಕೋಪಕ್ಕೆಹೋಗಿದೆ ಎಂದರು. ಜೂ.7ರಂದು ಮುಖ್ಯಮಂತ್ರಿಗ ಳಿಂದ ಯೋಜನೆಗೆ ಚಾಲನೆ ಸಿಗುವ ಸಾಧ್ಯತೆ ಇದೆ.

ಏನಿದು ಕೆ.ಸಿ ವ್ಯಾಲಿ?
ಬೆಂಗಳೂರಿನ ಕೋರಮಂಗಲ ಚಲ್ಲಘಟ್ಟ ಭಾಗದಲ್ಲಿ ಪ್ರತಿ ವರ್ಷವೂ ಸುಮಾರು 5 ಟಿಎಂಸಿ ತ್ಯಾಜ್ಯ ನೀರನ್ನು
ಸಂಸ್ಕರಿಸಿ ತಮಿಳುನಾಡಿನತ್ತ ಕಾಲುವೆಯಲ್ಲಿ ಹರಿಸಲಾಗುತ್ತಿತ್ತು. ಇದೇ ನೀರನ್ನು ಎರಡು ಬಾರಿ ಸಂಸ್ಕರಿಸಿ ಕೋರಮಂಗಲ ಚಲ್ಲಘಟ್ಟ ವ್ಯಾಲಿ ಎಂಬ ಹೆಸರಿನ ಯೋಜನೆಯಡಿ ಕೋಲಾರದ 130 ಕೆರೆಗಳಿಗೆ ಹರಿಸಲು ಸುಮಾರು 1,342 ಕೋಟಿ ರೂ.ಗಳ ವೆಚ್ಚದ ಯೋಜನೆಯನ್ನು ರೂಪಿಸಲಾಗಿತ್ತು. ಕೋಲಾರ ಜಿಲ್ಲೆಯ 125 ಮತ್ತು ಚಿಂತಾಮಣಿ ತಾಲೂಕಿನ 5 ಕೆರೆಗಳು ಸೇರಿದಂತೆ ಒಟ್ಟು 130 ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ಪಾಲಾರ್‌ ನದಿ ಕಣಿವೆ ಮಾರ್ಗದಲ್ಲಿಯೇ ಹರಿಸುವ ಯೋಜನೆಯಿದು. ಕೋಲಾರ ಜಿಲ್ಲೆಯ ಬಹುತೇಕ ಎಲ್ಲಾ ತಾಲೂಕುಗಳ ಎಲ್ಲಾ
ದೊಡ್ಡಕೆರೆಗಳಿಗೂ ನೀರು ಹರಿಸುವುದು ಈ ಯೋಜನೆಯ ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next