ಬೆಳ್ತಂಗಡಿ: ತಾಲೂಕಿನಲ್ಲಿ 2019ರ ಆಗಸ್ಟ್‌ನಲ್ಲಿ ಸಂಭವಿಸಿದ ಭೀಕರ ಜಲ ಪ್ರಳಯದಿಂದಾಗಿ ಮೃತ್ಯುಂಜಯ ನದಿ ನೀರಿನ ರಭಸಕ್ಕೆ ಚಾರ್ಮಾಡಿ ಗ್ರಾಮದ ಕೊಳಂಬೆ ಭೂ ಪ್ರದೇಶ ಕೊಚ್ಚಿ ಹೋಗಿತ್ತು. ಈ ಪ್ರದೇಶದಲ್ಲಿ ಸಣ್ಣ ನೀರಾವರಿ ಇಲಾಖೆಯ ಅನುದಾನದಡಿ ನಿರ್ಮಿಸಿದ ತಡೆಗೋಡೆ ಕಳೆದ ಒಂದೇ ವರ್ಷದ ಮಳೆಗಾಲದ ಅವಧಿಯಲ್ಲಿ ನದಿ ನೀರಿನ ಸೆಳೆತ ತಡೆಯಲಾಗದೆ ಬಿದ್ದುಹೋಗಿತ್ತು.
ಈ ಕುರಿತು “ಉದಯವಾಣಿ’ ಸುದಿನ ಆವೃತ್ತಿಯಲ್ಲಿ ಮಾ. 20ರಂದು “ಪ್ರವಾಹ ತಡೆಗೆ ರಚಿಸಿದ ತಡೆಗೋಡೆ ನೀರುಪಾಲು’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಪ್ರತಿ 100 ಮೀಟರ್‌ಗೆ 49 ಲಕ್ಷ ರೂ.ನಂತೆ ಒಟ್ಟು 300 ಮೀಟರ್ ತಡೆಗೋಡೆಗೆ 1.47 ಕೋ.ರೂ. ಮಂಜೂರಾಗಿ ಕಾಸರಗೋಡು ಗುತ್ತಿಗೆದಾರ ಕುಂಞಿ ಕೊಯತ್ತಂಗಲ್ ಅವರಿಗೆ ನೀಡಲಾಗಿತ್ತು.
ತಡೆಗೋಡೆಯೇನೋ ಸಮಯಕ್ಕೆ ಸರಿ ಯಾಗಿ ರಚನೆಯಾಗಿದ್ದರೂ, ಕಳೆದ ಮಳೆ ಗಾಲದಲ್ಲಿ 12 ಅಡಿ ಒಂದು ಪಾರ್ಶ್ವ ನದಿ ಪಾಲಾಗಿತ್ತು. ಉಳಿದ ತಡೆಗೋಡೆಯೂ ನದಿ ಬದಿಗೆ ವಾಲಿ ನಿಂತಿದ್ದು, ಮುಂದಿನ ಮಳೆಗಾಲಕ್ಕೆ ಅಪಾಯ ಎದುರಾಗುವ ಸಾಧ್ಯತೆ ಕುರಿತು ವರದಿಯಲ್ಲಿ ಎಚ್ಚರಿಸಲಾಗಿತ್ತು. ಸ್ಪಂದಿಸಿದ ಶಾಸಕ ಹರೀಶ್ ಪೂಂಜ, ಸಣ್ಣ ನೀರಾ ವರಿ ಇಲಾಖೆ ಅಧಿಕಾರಿಗಳ ಮೂಲಕ ಗುತ್ತಿಗೆದಾರರಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಅದರಂತೆ ಎ. 2ರಂದು ಸ್ಥಳದಲ್ಲಿ ಕಾಮಗಾರಿ ಆರಂಭಿಸ ಲಾಗಿದೆ.
ಬಿದ್ದಿರುವ 12 ಮೀಟರ್ ತಡೆ ಗೋಡೆಯನ್ನು ಗುತ್ತಿಗೆದಾರರೇ ಸಂಪೂರ್ಣ ವೆಚ್ಚ ಭರಿಸಿ ಮಳೆಗಾಲಕ್ಕೂ ಮುನ್ನ ಸರಿಪಡಿಸುವಂತೆ ಹಾಗೂ ಈಗಾಗಲೇ ಬಿರುಕು ಬಿಟ್ಟಿರುವ ಇನ್ನುಳಿದ ತಡೆಗೋಡೆಯನ್ನು ದುರಸ್ತಿ ಪಡಿಸುವಂತೆ ಇಲಾಖೆ ಸೂಚಿಸಿದೆ.
ಸೂಚಿಸಲಾಗಿದೆ
ಕೊಳಂಬೆ ಸಮೀಪ ಮೃತ್ಯುಂಜಯ ನದಿಗೆ ಕಟ್ಟಿದ ತಡೆಗೋಡೆ ಕಾರಣಾಂತರಗಳಿಂದ ಬಿದ್ದಿದ್ದು, 12 ಮೀಟರ್ ತಡೆಗೋಡೆ ಪುನರ್ ರಚನೆ ಹಾಗೂ ಬಿರುಕು ಬಿದ್ದಲ್ಲಿ ಸೂಕ್ತ ರೀತಿ ಕಾಮಗಾರಿ ನಿರ್ವಹಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ.
-ರಾಕೇಶ್, ಎಇ, ಸಣ್ಣ ನೀರಾವರಿ ಇಲಾಖೆ, ಬೆಳ್ತಂಗಡಿ ವಿಭಾಗ