Advertisement
ಹಿಂದೆ ವಿಜಯನಗರ ಅರಸರ ಕಾಲದಲ್ಲಿ ಈ ಪ್ರಾಂತ್ಯದಲ್ಲಿ ವೀರಬಲ್ಲಾಳ ಎಂಬ ಪಾಳೆಗಾರ ಆಳ್ವಿಕೆ ನಡೆಸುತ್ತಿದ್ದನಂತೆ. ಆಗ ಹೊಲದಲ್ಲಿ ಉಳುಮೆ ಮಾಡುವಾಗ ಒಂದು ಹಿತ್ತಾಳೆಯ ಕೊಳಗ ಸಿಗುತ್ತದೆ. ಅದರ ಮೇಲೆ ಲಕ್ಷ್ಮಿ ಹಾಗೂ ಸೂರ್ಯ- ಚಂದ್ರರ ಚಿತ್ರವಿರುತ್ತದೆ. ಪಾಳೆಗಾರನಿಗೆ ರಾತ್ರಿ ಕನಸಿನಲ್ಲಿ ಲಕ್ಷ್ಮೀ ದೇವಿ ಕಾಣಿಸಿಕೊಂಡು, ಕೊಳಗದಲ್ಲಿ ತನ್ನ ಸಾನಿಧ್ಯವಿರುವುದಾಗಿಯೂ, ಅದನ್ನು ದಿನವೂ ಪೂಜಿಸಬೇಕೆಂದೂ ಆಜ್ಞಾಪಿಸುತ್ತಾಳೆ.
ಅಂದಿನಿಂದ ಪಾಳೆಗಾರ ಹಾಗೂ ಆತನ ಕುಟುಂಬ ಶ್ರೀಮಹಾಲಕ್ಷ್ಮಿಯ ಪೂಜೆ ಮಾಡಿಕೊಂಡು ಬರುತ್ತಿದೆ. ಕೊಳಗದಲ್ಲಿ ತನ್ನ ಕುರುಹನ್ನು ತೋರಿಸಿದ್ದಕ್ಕಾಗಿ ಈ ದೇಗುಲಕ್ಕೆ ಕೊಳಗ ಮಹಾಲಕ್ಷ್ಮೀ ದೇವಾಲಯ ಎಂಬ ಹೆಸರು ಬಂದಿದೆ. ಸ್ವಲ್ಪ ದಿನಗಳ ತರುವಾಯ ವೀರಬಲ್ಲಾಳರು ಬೇರೆ ಪ್ರಾಂತ್ಯಕ್ಕೆ ಹೋಗಬೇಕಾಗುತ್ತದೆ. ಆಗ ಮಹಾಲಕ್ಷ್ಮಿಯು ತಾನು ಇಲ್ಲೇ ನೆಲೆಸುತ್ತೇನೆ ಎಂದಾಗ, ದೇವಿಯನ್ನು ಬೇರೊಬ್ಬರಿಗೆ ಒಪ್ಪಿಸಿ ಪಾಳೆಗಾರರು ಹೋಗುತ್ತಾರೆ. ಆದರೆ ಅವರಿಂದ ಲಕ್ಷ್ಮಿಯ ಪೂಜೆ ಸಾಂಗವಾಗಿ ನಡೆಯದ ಕಾರಣ, ದೇವಿ ಮತ್ತೆ ವೀರಬಲ್ಲಾಳನ ಕನಸಿನಲ್ಲಿ ಬಂದು- ‘ನನಗೆ ಇಲ್ಲಿ ಸ್ಥಾನಮಾನ ಇಲ್ಲ. ನೀನು ಬಂದು ನನಗೆ ಮತ್ತೆ ಸ್ಥಾನಮಾನ ಸಿಗುವಂತೆ ಮಾಡಬೇಕು’ ಎನ್ನುತ್ತಾಳೆ.
Related Articles
Advertisement
ನವೀಕರಣ ಕಾರ್ಯ
ಕಲ್ಲು ಮಂಟಪದಲ್ಲಿದ್ದ ಕೊಳಗದ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಬೇಕೆನ್ನುವ ಸಂಕಲ್ಪದಿಂದ ಟ್ರಸ್ಟ್ ಸ್ಥಾಪಿಸಿದ ದೇವಸ್ಥಾನದ ಈಗಿನ ಧರ್ಮದರ್ಶಿಗಳಾಗಿರುವ ಮುದ್ದುರಂಗಯ್ಯನವರ ನೇತೃತ್ವದಲ್ಲಿ 2005ರಲ್ಲಿ ದೇವಸ್ಥಾನದ ನವೀಕರಣ ಮಾಡಲಾಗಿದ್ದು, ಸುಂದರವಾದ ಶ್ರೀ ಮಹಾಲಕ್ಷ್ಮಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ವಿಗ್ರಹದ ಹಿಂದೆ ಕೊಳಗವನ್ನು ಇಟ್ಟು ಪೂಜಿಸಲಾಗುತ್ತದೆ. ದೇವಸ್ಥಾನದ ಆವರಣವನ್ನು ಪ್ರವೇಶಿಸುತ್ತಿದ್ದಂತೆ ಬಲಗಡೆಯಲ್ಲಿ ಆಳೆತ್ತರದ ಸುಂದರ ಮೂರ್ತಿ ಗಳು ಭಕ್ತಾದಿಗಳನ್ನು ಸ್ವಾಗತಿಸುತ್ತವೆ. ನಾಗಲಾಂಬಿಕೆ ಹಾಗೂ ಅದರ ಅಕ್ಕಪಕ್ಕದಲ್ಲಿ ನಾಗಲಿಂಗೇಶ್ವರ ಹಾಗೂ ಸುಬ್ರಹ್ಮಣ್ಯ ವಿಗ್ರಹಗಳಿವೆ. ಈ ನಾಗಲಾಂಬಿಕೆ ಮೂರ್ತಿಯನ್ನು ಮಾಡಿಸಿದ ಕರ್ತೃಗಳಿಗೆ ಕನಸಿನಲ್ಲಿ ಬಂದ ನಾಗಲಾಂಬಿಕೆ, ತೋಟದಲ್ಲಿರುವ ಮಹಾಲಕ್ಷ್ಮಿಯ ಸನ್ನಿಧಿಯಲ್ಲಿಯೇ ತನ್ನನ್ನು ಪ್ರತಿಷ್ಠಾಪಿಸಬೇಕೆಂದು ಹೇಳಿದ್ದಕ್ಕಾಗಿ ಲಕ್ಷ್ಮಿ ದೇವಸ್ಥಾನದ ಆವರಣದಲ್ಲಿಯೇ ಈ ವಿಗ್ರಹ ಪ್ರತಿಷ್ಠಾಪಿಸಲಾಗಿದೆ ಎಂಬ ಕತೆಯೂ ಇದೆ. ವಿವಾಹವಾಗದವರು, ಸಂತಾನ ಭಾಗ್ಯವಿಲ್ಲದವರು ಇಲ್ಲಿ ಬಂದು ನಾಗಲಾಂಬಿಕೆಗೆ ಹರಕೆ ಹೊತ್ತರೆ ಫಲ ಸಿಗುತ್ತದೆ ಎಂಬುದು ಪ್ರತೀತಿ.
•ಪ್ರಕಾಶ್ ಕೆ ನಾಡಿಗ್, ತುಮಕೂರು