Advertisement
ಬಜಪೆಯ ಅದ್ಯಪಾಡಿಯ ಸುಮಾರು 10 ಯುವಕರ ತಂಡ ಇಲ್ಲಿಗೆ ಬಂದಿದ್ದು, ನಾಲ್ವರು ಮರುವಾಯಿ ಹೆಕ್ಕುವುದಕ್ಕಾಗಿ ಸಸಿಹಿತ್ಲು ಮುಂಡಾ ಬೀಚ್ ಬಳಿಯ ಅಳಿವೆಯ ಬಳಿ ನದಿಗೆ ಇಳಿದಿದ್ದರು. ಉಳಿದ ಆರು ಮಂದಿ ದಡದಲ್ಲಿಯೇ ಇದ್ದರು. ಈ ಯುವಕರ ತಂಡ ಮುಂಜಾನೆ 7 ಗಂಟೆಯ ಸುಮಾರಿಗೆ ಇಲ್ಲಿಗೆ ಬಂದಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ನೀರಿಗೆ ಇಳಿದವರಲ್ಲಿ ಈಜು ಬಾರದ ಧನುಷ್, ಜೀವನ್ ಮತ್ತು ಇನ್ನೊಬ್ಬರು ಅಳಿವೆಯ ನೀರಿನ ಸೆಳೆತದ ಅರಿವು ಇಲ್ಲದೆ ಮುಳುಗಡೆಯಾದರು. ಆಗ ಈಜು ಬಲ್ಲ ಅಭಿಲಾಷ್ (24) ಉಳಿದವರನ್ನು ಬದುಕಿಸಲು ಹೋಗಿ ತಾನು ಜೀವ ಕಳೆದುಕೊಂಡಿದ್ದಾರೆ. ಯುವಕರ ಬೊಬ್ಬೆ ಕೇಳಿ ಧಾವಿಸಿ ಬಂದ ಮೀನುಗಾರರು ಮೂವರನ್ನು ರಕ್ಷಿಸಿದ್ದಾರೆ. ನೀರುಪಾಲಾಗಿರುವ ಅಭಿಲಾಷ್ ಅವರ ಪತ್ತೆ ರಾತ್ರಿಯ ವರೆಗೆ ಆಗಿಲ್ಲ ಎಂದು ಮೂಲಗಳು ತಿಳಿಸಿವೆ. ಅವರು ಅವಿವಾಹಿತರಾಗಿದ್ದು, ಮಂಗಳೂರು ರೈಲ್ವೇಯಲ್ಲಿ ಗುತ್ತಿಗೆ ಆಧಾರದ ಸಿಬಂದಿಯಾಗಿದ್ದಾರೆ.
Related Articles
ಕೊಳಚಿಕಂಬಳ ಬಳಿ ನದಿಯಲ್ಲಿ ನೀರು ಇಳಿತದ ಸಮಯ ಸುಮಾರು 2 ಕಿ.ಮೀ. ನದಿ ಪ್ರದೇಶ ಖಾಲಿಯಾಗಿ ಮೈದಾನದಂತಿರುತ್ತದೆ. ಈ ಸಂದರ್ಭದಲ್ಲಿ ಜನರು ಇಲ್ಲಿ ಇಳಿದು ಅಳಿವೆಯ ತನಕ ನಡೆದುಕೊಂಡು ಹೋಗುತ್ತಾರೆ. ಆದರೆ ಭರತ ಆರಂಭವಾದರೆ ನಾಲ್ಕು ದಿಕ್ಕಿನಿಂದಲೂ ಸುಮಾರು ನಾಲ್ಕೈದಡಿ ನೀರು ತುಂಬಿಕೊಳ್ಳುತ್ತಿದ್ದು, ಈ ಹಿಂದೆಯೂ ಹಲವಾರು ಅವಘಡಗಳು ಇಲ್ಲಿ ನಡೆದ ಉದಾಹರಣೆಗಳು ಇವೆ. ಈ ಬಗ್ಗೆ ಎಚ್ಚರಿಸಿ ನೀರಿಗೆ ಇಳಿಯದಂತೆ ಸೂಚಿಸಿದರೆ ಯಾರೂ ಕೇಳುವುದಿಲ್ಲ ಸ್ಥಳೀಯರು ಹೇಳುತ್ತಾರೆ.
Advertisement
ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.