ಕಲಬುರಗಿ: ಪ್ರಾಥಮಿಕ ವರದಿಯಂತೆ ಪ್ರವಾಹದಿಂದಾಗಿ ಜಿಲ್ಲೆಯಲ್ಲಿ ಸುಮಾರು 60 ಕೋಟಿ ರೂ. ನಷ್ಟ ಅಂದಾಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಹೇಳಿದರು.
ಕಲಬುರಗಿ ಆಕಾಶವಾಣಿಯಲ್ಲಿ ಆಗಸ್ಟ್ 16ರಂದು ನಡೆಸಿದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಫಜಲಪುರ, ಕಲಬುರಗಿ, ಜೇವರ್ಗಿ, ಚಿತ್ತಾಪುರ ತಾಲುಕುಗಳಲ್ಲಿ ಉಂಟಾದ ಹಾನಿ ಕುರಿತು ಪ್ರಾಥಮಿಕ ವರದಿ ಸಂಗ್ರಹಿಸಲಾಗಿದೆ. ಪ್ರಕೃತಿ ಪರಿಹಾರ ನಿಧಿಯಲ್ಲಿ 18 ಕೋಟಿ ರೂ. ಇದ್ದು, ಹೆಚ್ಚುವರಿಯಾಗಿ ಸರಕಾರ ಐದು ಕೋಟಿ ರೂ. ನೀಡಿದೆ. ಪ್ರವಾಹ ಪರಿಹಾರ ಕಾರ್ಯಕ್ಕೆ ಹಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪರಿಹಾರ ವಿತರಿಸಲು ಸಂತ್ರಸ್ತರು ಅರ್ಜಿ ಹಾಕುವ ಅಗತ್ಯವಿಲ್ಲ. ಸಂಬಂಧಪಟ್ಟ ತಾಲೂಕಿನಲ್ಲಿ ಪರಿಹಾರ ಕಾರ್ಯಕ್ಕಾಗಿ ತಂಡಗಳಿದ್ದು, ಸ್ವಯಂ ಪ್ರೇರಣೆಯಿಂದ ನೆರೆ ಹಾನಿ ಬಗ್ಗೆ ವರದಿ ಸಂಗ್ರಹಿಸಿ, ನೆರವು ನೀಡುತ್ತಿದ್ದಾರೆ. ನೆರೆನುಗ್ಗಿ ಹಾನಿ ಸಂಭವಿಸಿದ ಮನೆಗಳಿಗೆ ತಕ್ಷಣಕ್ಕೆ ಸ್ಪಂದನೆಯಾಗಿ 10 ಸಾವಿರ ರೂ., ದುರಸ್ತಿಗಾಗಿ ಒಂದು ಲಕ್ಷ ರೂ., ಹೊಸದಾಗಿ ಮನೆ ನಿರ್ಮಿಸಲು 5 ಲಕ್ಷ ರೂ. ವಿತರಿಸಲು ಮುಖ್ಯಮಂತ್ರಿಗಳು ಆದೇಶ ನೀಡಿದ್ದಾರೆ ಎಂದರು.
ಭೀಮಾ ನದಿ ಪಾತ್ರದ ತಗ್ಗು ಪ್ರದೇಶಗಳ ಸುಮಾರು 21 ಹಳ್ಳಿಗಳ ಸ್ಥಳಾಂತರ ಕೆಲಸ ಮುಗಿದಿದೆ. ಅವರಿಗಾಗಿ ಪ್ರತ್ಯೇಕ ನಿವೇಶನ, ಮನೆ ಹಾಗೂ ಸೌಲಭ್ಯ ಕಲ್ಪಿಸಲಾಗಿದೆ. ಮೂಲಭೂತ ಸೌಲಭ್ಯ ಒದಗಿಸಲು ಆದ್ಯತೆ ನೀಡಿ ಕೆಲಸ ನಿರ್ವಹಿಸಲಾಗುತ್ತಿದೆ. ಪ್ರವಾಹದಿಂದ ಬೆಳೆಹಾನಿ, ಬ್ರಿಡ್ಜ್ ಕಂ ಬ್ಯಾರೇಜ್, ರಸ್ತೆಗಳಿಗೆ ಹೆಚ್ಚಿನ ಹಾನಿ ಉಂಟಾಗಿದೆ. ಸಂಬಂಧಪಟ್ಟವರಿಗೆ ತಕ್ಷಣ ದುರಸ್ತಿ ಕೈಗೊಳ್ಳಲು ಆದೇಶಿಸಲಾಗಿದೆ ಎಂದು ಹೇಳಿದರು. ಪ್ರವಾಹ ಸಂತ್ರಸ್ತರ ನೆರವಿಗೆ ಸ್ಪಂದಿಸುವವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಜಿಲ್ಲಾಧಿಕಾರಿ ಮೂಲಕ ಆರ್ಥಿಕ ಹಾಗೂ ವಸ್ತುಗಳ ದೇಣಿಗೆ ನೀಡಬೇಕು. ಬೇನಾಮಿ ಹೆಸರಿನ ಮೂಲಕ ಹಣ ಸಂಗ್ರಹಿಸಿ ಸಂತ್ರಸ್ತರಿಗೆ ತಲುಪದಿದ್ದರೆ ಜಿಲ್ಲಾಡಳಿತ ಹೊಣೆಯಲ್ಲ ಎಂದು ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದರು. ಬೀದರ, ಕಲಬುರಗಿ, ಯಾದಗಿರಿ ಜಿಲ್ಲೆಗಳ ಕೇಳುಗರು ಕರೆ ಮಾಡಿ ಮಾತನಾಡಿದರು.
ನೇರಫೋನ್ ಇನ್ ಕಾರ್ಯಕ್ರಮವನ್ನು ಕಾರ್ಯಕ್ರಮ ನಿರ್ವಾಹಕರಾದ ರಾಜೇಂದ್ರ ಆರ್, ಕುಲಕರ್ಣಿ, ಡಾ| ಸದಾನಂದ ಪೆರ್ಲ ನಡೆಸಿಕೊಟ್ಟರು. ನಿಲಯದ ಮುಖ್ಯಸ್ಥರಾದ ಆರ್. ಅಖೀಲಾಂಡೇಶ್ವರಿ, ಅನಿಲಕುಮಾರ ಎಚ್.ಎನ್, ಸೋಮಶೇಖರ ಎಸ್. ರುಳಿ ಸಹಕರಿಸಿದರು. ಅಶಿಶ್ ಅಣಚಾಟೆ, ಮೇಘಾ ಪಾಟೀಲ, ತಾಂತ್ರಿಕ ವಿಭಾಗದ ಅಶೋಕಕುಮಾರ, ಗೋವಿಂದ ವಿ. ಕುಲಕರ್ಣಿ ನೆರವಾದರು.