Advertisement
ದಕ್ಷಿಣಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳು ಅಧಿಕ ಸಂಖ್ಯೆಯಲ್ಲಿವೆ. ಬಾಲವಾಡಿಯಿಂದ ಉನ್ನತ ವೃತ್ತಿಪರ ಶಿಕ್ಷಣದ ವರೆಗೆ ಇಲ್ಲಿ ಪ್ರತೀ ದಿನ ಎಂಬಂತೆ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಹಾಗಾಗಿ ಕರಾವಳಿಯಲ್ಲಿ ನಿತ್ಯ ಹಬ್ಬದ ವಾತಾವರಣ. ಜಾತ್ರೋತ್ಸವಗಳೆಂದರೆ ಹಲವೆಡೆ 3ರಿಂದ 10 ದಿನಗಳ ವರೆಗೂ ನಡೆಯುತ್ತವೆ. ಬ್ರಹ್ಮಕಲಶೋತ್ಸವ ಕೂಡ. ಇನ್ನು ಕೆಲವು ನಿರ್ದಿಷ್ಟ ಮನೆತನಗಳವರು ವಾಡಿಕೆ ಮತ್ತು ಕಟ್ಟುಕಟ್ಟಲೆಯಂತೆ ಕುಲದೈವಗಳಿಗೆ ಪೂರ್ಣ ಕುಟುಂಬದ ಸಮ್ಮುಖದಲ್ಲಿ ನೇಮ ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸುತ್ತಾರೆ.
Related Articles
Advertisement
ಕರ್ನಾಟಕದ ಕರಾವಳಿಯ ಪ್ರದೇಶವು ಅನಾದಿಕಾಲದಿಂದಲೂ ತನ್ನದೇ ಆದ ಧಾರ್ಮಿಕ ಮತ್ತು ಜನಪದ ಪರಂಪರೆಯನ್ನು ಪೋಷಿಸುತ್ತಾ ಬಂದಿದೆ. ರಾಜ ಮಹಾರಾಜರ ಕಾಲದಲ್ಲಿಯೂ ಈ ಬಗ್ಗೆ ಆದ್ಯತೆ ಇರುತ್ತಿದ್ದರ ಉಲ್ಲೇಖಗಳ ಶಾಸನಗಳು ಲಭ್ಯವಿದೆ. ಮಾನವ ಮೂಲತಃ ಸಂಘಜೀವಿ. ಈ ಸಾಂಘಿಕವಾದ ಮನೋ ಭಾವವನ್ನು ವೃದ್ಧಿಸುವುದು ಈ ಎಲ್ಲ ಆಚರಣೆಗಳ ಆಶಯವೂ ಆಗಿದೆ. ಧಾರ್ಮಿಕ ಉಪನ್ಯಾಸಗಳು ಎಲ್ಲ ಧರ್ಮಗಳಲ್ಲೂ ಅಂತರ್ಗತಗೊಂಡಿರುತ್ತವೆ. ಈ ಆಚರಣೆಗಳ ಉದ್ದೇಶವೇನು? ಈ ಆಚರಣೆಗಳನ್ನು ಹೇಗೆ ನಡೆಸಬೇಕು? ಈ ಆಚರಣೆಗಳಿಂದ ದೊರೆಯುವ ಸಂತೃಪ್ತಿಯೇನು? ಎಂಬೆಲ್ಲ ವಿವರಗಳು ಆಯಾ ವೇದಿಕೆಗಳಲ್ಲಿ ಆಯಾ ಮತಗಳ ಧಾರ್ಮಿಕ ಚಿಂತಕರ ಮಾತುಗಳಿಂದ ವ್ಯಕ್ತವಾಗುತ್ತದೆ. ಹೀಗಾಗಿ ಅರ್ಥಪೂರ್ಣವಾಗಿ ಆಚರಣೆಯು ನಡೆಯುತ್ತದೆ.ಇಷ್ಟು ಮಾತ್ರವಲ್ಲದೆ ಪ್ರತೀ ವರ್ಷದ ಶಿವರಾತ್ರಿ, ಯುಗಾದಿ, ಅಷ್ಟಮಿ, ಚೌತಿ, ನವರಾತ್ರಿ, ದೀಪಾವಳಿ ಎಲ್ಲ ಸಂದರ್ಭಗಳಲ್ಲೂ ಬಹು ದಿನಗಳ ಬಹು ವೈಭವದ, ಬಹು ಅರ್ಥಪೂರ್ಣವಾದ ಆಚರಣೆಗಳು. ಕ್ರಿಸ್‌ಮಸ್ ಮುಂತಾದ ಹಬ್ಬಗಳೂ ಕೂಡ ಇಲ್ಲಿ ಉಲ್ಲೇಖನೀಯ. ಶಾಲಾ ಕಾಲೇಜುಗಳ ವೇದಿಕೆಗಳು ಕೂಡ ಇಂತಹ ಚಟುವಟಿಕೆಗಳಿಗೆ ಆದ್ಯತೆ ನೀಡುವ ಮೂಲಕ ಉತ್ಸವ ಮತ್ತು ಉತ್ಸಾಹದ ವಾತಾವರಣ ನಿರ್ಮಿಸಿ ವಿದ್ಯಾರ್ಥಿಗಳಿಗೆ ವೈಯಕ್ತಿಕ, ವ್ಯಕ್ತಿತ್ವ ವಿಕಸನವನ್ನು ಪ್ರಭಾವಿತಗೊಳಿಸುತ್ತವೆ. ಹಾಗಾಗಿ ಈ ಉತ್ಸವಗಳೆಂದರೆ ಕೇವಲ ಉತ್ಸವಗಳಲ್ಲ. ಇದು ಸದಾಶಯದ ಮತ್ತು ಸದ್ವಿಚಾರಗಳ ಉದ್ದೀಪನಗೊಳಿಸುವ ಸಂದರ್ಭವೂ ಆಗಿ ಸಹಜವಾದ ವಿನ್ಯಾಸಗಳನ್ನು ಹೊಂದಿರುತ್ತವೆ.
ಅಂದಹಾಗೆ: ಉತ್ಸವಗಳೆಂದರೆ ಸಾಮೂಹಿಕ ಸಹಭೋಜನಗಳು ಇರಲೇ ಬೇಕು. ಒಂದೊಂದು ಪ್ರದೇಶಗಳಲ್ಲಿ ಒಂದೊಂದು ರೀತಿಯ ಖಾದ್ಯ ವೈವಿಧ್ಯ ಇದ್ದೇ ಇರುತ್ತದೆ. ಹೀಗಾಗಿ ಉತ್ಸವಗಳಲ್ಲಿ ಒಂದಿಷ್ಟು ಉತ್ಸಾಹ ತುಂಬುವುದೂ ಕೂಡ ಈ ಭೋಜನ ಪ್ರಸಾದ! ಮನೋಹರ ಪ್ರಸಾದ್