ರಶೀದ್ ಬ್ಯಾಟಿನ ಕಥೆ: ‘ನಾವು ಬ್ಯಾಟಿಂಗ್ ಕಲಿಯುತ್ತಿರುವಾಗ, ಒಳ್ಳೆಯ ಬ್ಯಾಟ್ ಹೊಂದಿರುವುದು ಅನಿವಾರ್ಯ. ಹಾಗೆ ನನಗೆ ಹಲವು ಬ್ಯಾಟ್‌ಗಳು ಸಿಕ್ಕಿವೆ. ಕೊಹ್ಲಿಯೂ ಒಂದು ಬ್ಯಾಟ್ ನೀಡಿದ್ದಾರೆ. ಡೇವಿಡ್ ವಾರ್ನರ್, ಕೆ.ಎಲ್.ರಾಹುಲ್ರಿಂದಲೂ ಸಿಕ್ಕಿವೆ. ಅವೆಲ್ಲ ಬಹಳ ವಿಶೇಷ ಬ್ಯಾಟ್‌ಗಳು. ಈ ವಿಶ್ವಕಪ್‌ನಲ್ಲಿ ಆ ಬ್ಯಾಟ್‌ಗಳೆಲ್ಲ ಚೆನ್ನಾಗಿ ರನ್ ಗಳಿಸಲು ನೆರವು ನೀಡುವ ಭರವಸೆಯಿದೆ. ಒಮ್ಮೆ ಹೀಗಾಯಿತು. ನಾನು ಐರ್ಲೆಂಡ್ ವಿರುದ್ಧ ಬ್ಯಾಟಿಂಗ್ ಮಾಡುತ್ತಿದ್ದೆ. ಆಗ ಬೌಂಡರಿ ಹೊಡೆಯಲೆಂದು ಬಾರಿಸಿದೆ. ಅದು ನೋಡಿದರೆ ಸಿಕ್ಸರ್ ಆಗಿ ಬದಲಾಯಿತು. ಏನಾಯಿತು? ಹ್ಯಾಗೆ ಸಿಕ್ಸರ್ ಹೋಯಿತು? ಈ ಬ್ಯಾಟ್‌ನಲ್ಲಿ ಏನಾದರೂ ವಿಶೇಷವಿದೆಯಾ ಎಂದೆಲ್ಲ ಅನಿಸಿತು. ಮುಂದೆ ನಾನು ಬಾರಿಸಿದಾಗೆಲ್ಲ ಸಿಕ್ಸರ್ ಹೋಗುವಂತಹ ಅನುಭೂತಿಯುಂಟಾಯಿತು. ಹಾಗಾಗಿ ಆ ಬ್ಯಾಟ್ ಕಂಡರೆ ನನಗೆ ಬಹಳ ಪ್ರೀತಿ. ಆ ಪಂದ್ಯ ಮುಗಿದ ಮೇಲೆ ಆಗಿನ ನಾಯಕ ಅಸ್ಗರ್ ಆಫ‌್ಗನ್ ನನ್ನ ಬಳಿ ಬಂದು ಆ ಬ್ಯಾಟ್ ಕೊಡುವಂತೆ ಕೇಳಿದರು. ನಾನು ಕೊಡಲ್ಲ ಎಂದೆ. ಅಷ್ಟರಲ್ಲಾಗಲೇ ಅವರು ಅದನ್ನು ಎಗರಿಸಿ ತಮ್ಮ ಬ್ಯಾಗ್‌ಗೆ ಸೇರಿಸಿಕೊಂಡಾಗಿತ್ತು. ಅದು ನನಗೆ ವಿಶೇಷ ವ್ಯಕ್ತಿಯೊಬ್ಬನಿಂದ ಸಿಕ್ಕ ವಿಶೇಷ ಬ್ಯಾಟ್. ಅದನ್ನು ನನಗೆ ಮತ್ತೆ ವಾಪಸ್ ನೀಡುತ್ತಾರೆಂಬ ನಂಬಿಕೆಯಲ್ಲಿದ್ದೇನೆ’ ಎಂದು ರಶೀದ್ ಹೇಳಿದರು.
Advertisement