Advertisement

ಕೊಹ್ಲಿಯೇ ಏಕೆ, ನೀವು ತಗೊಳ್ಳಿ ಟೈಮ್‌ಔಟ್‌!

02:32 PM Apr 24, 2018 | Team Udayavani |

ಈ ಲೈಫಿನ ಗುಟ್ಟೇ ಇಷ್ಟು. ಓಡುವ ಬದುಕಿಗೆ ಒಂದು ಪುಟ್ಟ ಬ್ರೇಕ್‌ ಸಿಕ್ಕಿಬಿಟ್ಟರೆ, ಮುಂದಿನದ್ದೆಲ್ಲ ಜಾದೂವೇ. ಒಂದು ವಿರಾಮ ಅಥವಾ ಬಿಡುವು ನಮ್ಮನ್ನು ಮತ್ತಷ್ಟು ಬೂಸ್ಟ್‌ ಮಾಡುತ್ತದೆ. ಇನ್ನಷ್ಟು ಹೆಚ್ಚು ಕೆಲಸ ಮಾಡುವಂತೆ  ಪ್ರೇರೇಪಿಸುತ್ತದೆ. ಅದಕ್ಕೆ ತಕ್ಕುನಾದ ಶಕ್ತಿ ಕೊಡುತ್ತದೆ. ಮೈಕೊಡವಿ ಏಳುವಂತೆ ಮಾಡಿ, ಅಸಾಧ್ಯವನ್ನೂ ಸಾಧ್ಯವಾಗಿಸುವಲ್ಲಿ ಈ ವಿರಾಮ ಸಫ‌ಲವಾಗುತ್ತದೆ…

Advertisement

ಎಲ್ಲರ ಎದೆಯೊಳಗೂ ಈಗ ಐಪಿಎಲ್‌ನ ಬ್ಯಾಟು ಕುಟು ಕುಟು ಎನ್ನುವುದೇ ಸದ್ದು. ಅದೇ ಗುಂಗು. ಕ್ರಿಕೆಟಿನ ಈ ಆಟದಲ್ಲಿ ನಡುವೆ ಎರಡೂವರೆ ನಿಮಿಷದ ಟೈಮ್‌ಔಟ್‌ ಬರುತ್ತದೆ. ತೀರಾ ಒತ್ತಡದ ಸನ್ನಿವೇಶದಲ್ಲಿಯೇ ಈ ಟೈಮ್‌ಔಟ್‌ ಅನ್ನು ಆಟಗಾರರು ತೆಗೆದುಕೊಳ್ತಾರೆ. ಆ ವಿರಾಮ ಪೂರ್ಣಗೊಂಡ ಮರುಕ್ಷಣವೇ, ಫೋರು- ಸಿಕ್ಸರುಗಳ ಜೋರು ಸುರಿಮಳೆ! ಬ್ಯಾಟ್ಸ್‌ಮನ್‌ಗೆ ಅದೆಲ್ಲಿರುತ್ತೋ ಆ ಸ್ಪಿರಿಟ್ಟು ಎಂದು ನಾವೆಲ್ಲ ಮೂಕವಿಸ್ಮಿತರಾಗುತ್ತೇವೆ. ಆ ಶಕ್ತಿಯನ್ನು ಧಾರೆಯೆರೆದಿದ್ದೇ, ಆ ಟೈಮ್‌ಔಟ್‌!

ಈ ಲೈಫಿನ ಗುಟ್ಟೇ ಇಷ್ಟು. ಓಡುವ ಬದುಕಿಗೆ ಒಂದು ಪುಟ್ಟ ಬ್ರೇಕ್‌ ಸಿಕ್ಕಿಬಿಟ್ಟರೆ, ಮುಂದಿನದ್ದೆಲ್ಲ ಜಾದೂವೇ. ಒಂದು ವಿರಾಮ ಅಥವಾ ಬಿಡುವು ನಮ್ಮನ್ನು ಮತ್ತಷ್ಟು ಬೂಸ್ಟ್‌ ಮಾಡುತ್ತದೆ. ಇನ್ನಷ್ಟು ಹೆಚ್ಚು ಕೆಲಸ ಮಾಡುವಂತೆ  ಪ್ರೇರೇಪಿಸುತ್ತದೆ. ಅದಕ್ಕೆ ತಕ್ಕುನಾದ ಶಕ್ತಿ ಕೊಡುತ್ತದೆ. ಮೈಕೊಡವಿ ಏಳುವಂತೆ ಮಾಡಿ, ಅಸಾಧ್ಯವನ್ನೂ ಸಾಧ್ಯವಾಗಿಸುವಲ್ಲಿ ಈ ವಿರಾಮ ಸಫ‌ಲವಾಗುತ್ತದೆ. 

ಬಿಡುವು ಎಂದರೆ, ಎಲ್ಲವನ್ನೂ ಬಿಟ್ಟು ಮೈಚಾಚಿ ಮಲಗಿಬಿಡುವುದಲ್ಲ. ಇಂಗ್ಲಿಷ್‌ಗಾದೆಯೊಂದು “rest is change of work’ ಅನ್ನುತ್ತದೆ. ನಾವು ಮಾಡುವ ಕೆಲಸದಲ್ಲಿ ಒಂಚೂರು ಬ್ರೇಕ್‌ ಪಡೆದು, ಬೇರೆಯದರ ಕಡೆಗೆ ತುಸು ಕಣ್ಣಾಡಿಸಿ, ಮತ್ತೆ ಕೆಲಸಕ್ಕೆ ನಿಂತುಬಿಡಬೇಕು. ಇಂಥ ಶಾರ್ಟ್‌ ಬ್ರೇಕ್‌ಗಳನ್ನು ಆಗಾಗ್ಗೆ ತೆಗೆದುಕೊಂಡಷ್ಟು, ನಾವು ಮಾಡುವ ಕೆಲಸವು ಅತ್ಯಂತ ಯಶಸ್ವಿಯಾಗಿ ದಡ ಮುಟ್ಟುತ್ತದೆ.

ಬಹುತೇಕ ಎಲ್ಲ ಸಂಶೋಧನೆಗಳೂ ಈ ವಿರಾಮದ ಅಗತ್ಯವನ್ನು ಒತ್ತಿ ಹೇಳಿವೆ; ಸತತವಾಗಿ 25 ನಿಮಿಷ ಕೆಲಸ ಮಾಡಿದರೆ 5 ನಿಮಿಷ, 50 ನಿಮಿಷ ಕೆಲಸ ಮಾಡಿದರೆ 10 ನಿಮಿಷ, 80 ನಿಮಿಷಕ್ಕೆ 25 ನಿಮಿಷದಂತೆ ವಿರಾಮ ಕೇಳುತ್ತದೆ ದೇಹ ಮತ್ತು ಮನಸ್ಸು! ಹೀಗೆ ನಿಗದಿಪಡಿಸಿದ ಅವಧಿ ಸಾಮಾನ್ಯವಾಗಿ ಆರೋಗ್ಯಯುತ ವ್ಯಕ್ತಿಯೊಬ್ಬ ಒಂದು ಕೆಲಸದಲ್ಲಿ ತೊಡಗಿಸಿಕೊಳ್ಳುವ ರೀತಿಯನ್ನು ಆಧರಿಸಿ ಹೇಳಿರುವಂಥದ್ದು!

Advertisement

ಹೀಗೆ ಮಾಡಿದ್ರೆ, ಬಿಡುವು ನಿಮ್ಮನ್ನು ಬೂಸ್ಟ್‌ ಮಾಡುತ್ತೆ! ಸಿಗುವ 5 ನಿಮಿಷದಿಂದ 30 ನಿಮಿಷದ ಬಿಡುವು ಅಥವಾ ಅದಕ್ಕಿಂತ ಹೆಚ್ಚಿನ ವಿರಾಮವನ್ನು ಹೇಗೆಲ್ಲಾ ಕಳೆಯಬಹುದು, ಬಳಸಿಕೊಳ್ಳಬಹುದು ಎಂಬುದಕ್ಕೆ ಇಲ್ಲಿ ಹಲವಾರು ಚಟುವಟಕೆಗಳ ಉದಾಹರಣೆಯಿದೆ. ಸಂಶೋಧನೆಗಳೂ ಅವುಗಳನ್ನು ಒಪ್ಪಿವೆ. ಅವುಗಳನ್ನು ನೀವು ಅನುಸರಿಸಿದ್ದೇ ಆದಲ್ಲಿ ಬಿಡುವು ನಿಮ್ಮನ್ನು ಮತ್ತೂಮ್ಮೆ ಫ್ರೆಶ್‌ ಆಗಿ ಕೆಲಸಕ್ಕೆ ಅಣಿ ಮಾಡಿ ನಿಲ್ಲಿಸುತ್ತದೆ.

1. ಐದು ನಿಮಿಷ ಬಿಡುವು ಸಿಕ್ಕರೆ…: ಜೇಬಿನಲ್ಲಿ, ಪರ್ಸ್‌ನ ಮೂಲೆಯಲ್ಲಿಟ್ಟುಕೊಂಡಿರುವ ಚಿಕ್ಕಚಿಕ್ಕ ಸ್ನಾಕ್ಸ್‌ನ ಮೊರೆ ಹೋಗಬಹುದು. ಚಾಕ್ಲೆಟ್‌, ಚೆರ್ರಿ, ನಟ್ಸ್‌, ದ್ರಾಕ್ಷಿ ಮುಂತಾದವುಗಳನ್ನು ಬಾಯಿಯಲ್ಲಿಟ್ಟುಕೊಂಡು ಅದರ ಸವಿಯನ್ನು ಅನುಭವಿಸಬಹುದು.

– ಎಂದೋ ಕಣ್ಣಾಡಿಸಲು ಅಂತ ಇಟ್ಟುಕೊಂಡ ಪತ್ರಿಕೆಯ ಪುಟ್ಟ ಪುಟ್ಟ ಬರಹಗಳನ್ನು ಓದಬಹುದು.

– ಅಲ್ಲಿಂದ ಎದ್ದು ನಾಲ್ಕಾರು ಹೆಜ್ಜೆ ಮುಂದೆ ಸಾಗಿ ಕತ್ತು ಮತ್ತು ಕೈಗಳಿಗೆ ಒಂದು ಸಣ್ಣ ಮಸಾಜ್‌ ಅನ್ನು ನೀವೇ ಕೊಟ್ಟುಕೊಂಡು ಬಂದು ಕೂರಬಹುದು.

2. ಹತ್ತು ನಿವಿಷ ಸಿಕ್ಕರೆ…
– ಓರಗೆಯವರೊಂದಿಗೆ ಒಂದು ಬೆಚ್ಚನೆಯ ಕಾಫಿ ಹೀರಬಹುದು.

– ನಿಮ್ಮ ಆಫೀಸ್‌ನ ಬೀರುವಿನಲ್ಲಿ, ನಿಮ್ಮದೇ ಬ್ಯಾಗಿನ ಕಡೆಒಂದು ಪರೀûಾ ದೃಷ್ಟಿ ಬೀರಿ, ಬೇಡವಾದದ್ದನ್ನು ಆಯ್ದು, ಅಲ್ಲೇ ಇರುವ ಕಸದ ಬುಟ್ಟಿಗೆ ಎಸೆಯಬಹುದು.

– ಪದಬಂದ, ಸುಡೋಕು ಅಥವಾ ಫ‌ಜಲ್ಲುಗಳನ್ನು ತುಂಬಬಹುದು.

3. ಹದಿನೈದು ನಿಮಿಷ ಸಿಕ್ಕರೆ…
– ನಿಮ್ಮ ಕಛೇರಿಯ ಮೆಟ್ಟಿಲಿಳಿದು ಆಚೆ ಬಂದು ಬಿಡಿ. ಹೊರಗಿನ ವಾತಾವರಣಕ್ಕೆ ಮುಖವೊಡ್ಡಿ. ಬೆಳೆದು ನಿಂತ ಮರಗಿಡ ಹೂ ಹಸಿರನ್ನು ನೋಡಿ ತಣ್ಣಗಾಗಿ.

– ನಿಮ್ಮ ಆತ್ಮೀಯರಿಗೆ ಫೋನ್‌ ಮಾಡಿ ಖುಷಿಯಿಂದ ಮಾತಾಡಿ, ಅವರ ಆನಂದ ಮಾತಿಗೆ ಕಿವಿಯಾಗಿ.

– ಕಿವಿಗೊಂದು ಹೆಡ್‌ಫೋನ್‌ ಸಿಕ್ಕಿಸಿಕೊಂಡು ಇತ್ತೀಚಿಗೆ ನಿಮ್ಮನ್ನು ಮತ್ತೆ ಮತ್ತೆ ಕಾಡಿದ ಹಾಡನ್ನು ಪುನಃ ಕೇಳಿಸಿಕೊಳ್ಳಿ.

4. ಬರೋಬ್ಬರಿ ಅರ್ಧ ಗಂಟೆ ಸಿಕ್ಕರೆ…
– ಸಹೋದ್ಯೋಗಿಗಳೊಂದಿಗೆ ಒಂದು ಚೆಂದದ ಹರಟೆ ಹೊಡೆಯಿರಿ. ಸಾಧ್ಯವಾಗುವುದಾದರೆ, ಅವರೊಂದಿಗೆ ಸಣ್ಣ ಸಣ್ಣ ಆಟಗಳಲ್ಲಿ ತೊಡಗಿಸಿಕೊಳ್ಳಿ.

– ನಿಮ್ಮ ಆತ್ಮೀಯನೊಬ್ಬನೊಂದಿಗೆ ಕೂತು ನಗುತ್ತಾ, ಮಾತಾಡುತ್ತಾ ಊಟ ಸವಿದು ಬಿಡಿ.

– ಆಚೆಯ ಕೆಫೆಯಲ್ಲಿ ಅಥವಾ ರೆಸ್ಟ್‌ರೂಮ್‌ನಲ್ಲಿ ಸುಮ್ಮನೆ ನಿಮ್ಮಷ್ಟಕ್ಕೆ ನೀವು ಕೂತು ಕಿಟಕಿಯ ಆಚೆ ಕಾಣುವ ಜಗತ್ತಿನ ಭಾವಗಳನ್ನು ಸುಮ್ಮನೆ ಹಾಗೆ ವೀಕ್ಷಿಸುವ ಸುಖದಲ್ಲಿ ಮುಳುಗಿ ಹೋಗಿ.

* ಸದಾಶಿವ್‌ ಸೊರಟೂರು

Advertisement

Udayavani is now on Telegram. Click here to join our channel and stay updated with the latest news.

Next