Advertisement
ವಿಶ್ವಕಪ್ ದಾಖಲೆ2011ರಲ್ಲಿ ಮೊದಲ ವಿಶ್ವಕಪ್ ಆಡುವಾಗ ವಿರಾಟ್ ಕೊಹ್ಲಿ ತಂಡದ ಓರ್ವ ಸಾಮಾನ್ಯ ಸದಸ್ಯ. ಅಂದು ಭಾರತ ಢಾಕಾದಲ್ಲಿ ಬಾಂಗ್ಲಾದೇಶ ವಿರುದ್ಧ ತನ್ನ ಆರಂಭಿಕ ಪಂದ್ಯವಾಡಿತ್ತು. ಈ ಪಂದ್ಯದಲ್ಲಿ ಸೆಹವಾಗ್ 175 ರನ್ ಬಾರಿಸಿ ಮೆರೆದರೆ, ಕೊಹ್ಲಿ ಅಜೇಯ 100 ರನ್ ಹೊಡೆದು ಸಂಭ್ರಮಿಸಿದರು. ಇದರೊಂದಿಗೆ ತಾನಾಡಿದ ಮೊದಲ ವಿಶ್ವಕಪ್ ಪಂದ್ಯದಲ್ಲೇ ಶತಕ ಬಾರಿಸಿದ ಮೊದಲ ಭಾರತದ ಆಟಗಾರನೆಂಬ ಹಿರಿಮೆ ಕೊಹ್ಲಿ ಅವರದಾಯಿತು.
2015ರ ವಿಶ್ವಕಪ್ ವೇಳೆ ಈ ವಿರಾಟ್ ಕೊಹ್ಲಿ ಭಾರತ ತಂಡದ ಉಪನಾಯಕ. ಭಾರತಕ್ಕೆ ಮೊದಲ ಎದುರಾಳಿಯೇ ಪಾಕಿಸ್ಥಾನ. ಸ್ಥಳ ಅಡಿಲೇಡ್. ಭಾರತಕ್ಕೆ ಮೊದಲು ಬ್ಯಾಟಿಂಗ್ ನಡೆಸುವ ಅವಕಾಶ. 3ನೇ ಕ್ರಮಾಂಕದಲ್ಲಿ ಆಡಲಿಳಿದ ಕೊಹ್ಲಿ 107 ರನ್ ಬಾರಿಸಿ ಪಾಕ್ ದಾಳಿಯನ್ನು ಪುಡಿಗುಟ್ಟಿದರು. ಇದರೊಂದಿಗೆ ಮೊದಲೆರಡು ವಿಶ್ವಕಪ್ ಕೂಟದಲ್ಲಿ ಭಾರತದ ಆರಂಭಿಕ ಪಂದ್ಯದಲ್ಲೇ ಸೆಂಚುರಿ ಹೊಡೆದ ದಾಖಲೆ ಕೊಹ್ಲಿಯದ್ದಾಯಿತು. ಇದೀಗ ಹ್ಯಾಟ್ರಿಕ್ ಸರದಿ. ಭಾರತ ಈ ಬಾರಿ ಜೂ. 5ರಂದು ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಇಲ್ಲಿಯೂ ಶತಕ ಬಾರಿಸಿದರೆ ಕೊಹ್ಲಿ ಅಮೋಘ ಹ್ಯಾಟ್ರಿಕ್ ಒಂದನ್ನು ಸಾಧಿಸಿದಂತಾಗುತ್ತದೆ.