Advertisement

ಅತಿರೇಕದ ಪ್ರತಿಕ್ರಿಯೆ ನೀಡಿದ ಕೊಹ್ಲಿ,ಶಾಸ್ತ್ರಿ

12:30 AM Jan 08, 2019 | Team Udayavani |

ಸಿಡ್ನಿ : ಆಸೀಸ್‌ ಟೆಸ್ಟ್‌ ಸರಣಿ ಜಯವನ್ನು 1983, 2011ರ ಏಕದಿನ ವಿಶ್ವಕಪ್‌ ಗೆಲುವಿಗಿಂತ ಶ್ರೇಷ್ಠ ಎಂದು ಬಣ್ಣನೆ
ಆಸ್ಟ್ರೇಲಿಯದಲ್ಲಿ ಟೆಸ್ಟ್‌ ಸರಣಿಯನ್ನು ಭಾರತ 2-1ರಿಂದ ಭಾರತ ಗೆದ್ದಿದೆ. ಆ ನೆಲದಲ್ಲಿ ಇದುವರೆಗೆ ಭಾರತ ಟೆಸ್ಟ್‌ ಸರಣಿ ಗೆದ್ದಿರಲಿಲ್ಲ ಎಂಬ ಹಿನ್ನೆಲೆಯಲ್ಲಿ ಈ ಎರಡೂ ರಾಷ್ಟ್ರಗಳ ಮಟ್ಟಿಗೆ ಇದು ಐತಿಹಾಸಿಕ ಸಾಧನೆ ಹೌದು. ಆದರೆ ಭಾರತ ಕ್ರಿಕೆಟ್‌ ಇತಿಹಾಸವನ್ನು ತೆಗೆದುಕೊಂಡರೆ, ಗೆದ್ದಿರುವ 2 ಏಕದಿನ ವಿಶ್ವಕಪ್‌ಗ್ಳಿಗಿಂತ ಇದು ಮಹತ್ವದ ಸಾಧನೆಯೇನಲ್ಲ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಇದು ಅದಕ್ಕೆ ಹತ್ತಿರವೂ ಬರುವುದಿಲ್ಲ. ಆದರೆ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ, ತರಬೇತುದಾರ ರವಿಶಾಸ್ತ್ರಿ ಗೆಲುವಿನ ಸಂಭ್ರಮದಲ್ಲಿ ಅತಿರೇಕದ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಈ ಜಯ ನನಗೆ ಎಷ್ಟು ಸಂತೃಪ್ತಿ ನೀಡಿದೆ ಎಂದು ಹೇಳಿಕೊಳ್ಳುತ್ತೇನೆ. ಪ್ರಸ್ತುತ ಟೆಸ್ಟ್‌ ಸರಣಿ ಜಯ, 1983ರ ಏಕದಿನ ವಿಶ್ವಕಪ್‌, 1985 ವಿಶ್ವಚಾಂಪಿಯನ್‌ ಶಿಪ್‌ ವಿಜಯದಷ್ಟೇ ಅಥವಾ ಅದಕ್ಕಿಂತ ದೊಡ್ಡ ಸಾಧನೆಯಾಗಿದೆ. ಟೆಸ್ಟ್‌, ಕ್ರಿಕೆಟ್‌ನ ನೈಜ ಮಾದರಿ, ಇದು ಅತ್ಯಂತ ಕಠಿಣವೂ ಹೌದು ಎಂದು ರವಿಶಾಸ್ತ್ರಿ ಹೇಳಿಕೊಂಡಿದ್ದಾರೆ.

ಮತ್ತೂಂದು ಕಡೆ ನಾಯಕ ವಿರಾಟ್‌ ಕೊಹ್ಲಿ, “ಇಂದು ನನ್ನ ಜೀವನದ ಅವಿಸ್ಮರಣೀಯ ದಿನವಾಗಿದೆ. 2011ರ ವಿಶ್ವಕಪ್‌ ಸಂದರ್ಭದಲ್ಲಿ ನಾನು ತಂಡದಲ್ಲಿದ್ದೆ. 28 ವರ್ಷಗಳ ಬಳಿಕ ವಿಶ್ವಕಪ್‌ ಗೆದ್ದ ಭಾವುಕತೆ ತಂಡದ ಉಳಿದೆಲ್ಲ ಹಿರಿಯ ಆಟಗಾರರಲ್ಲಿ ಇತ್ತು. ಆದರೆ ಆ ಭಾವುಕತೆ ನನ್ನಲ್ಲಿರಲಿಲ್ಲ. ಕಾರಣ ನಾನು ತಂಡದಲ್ಲಿ ಹೊಸ ಸದಸ್ಯನಾಗಿದ್ದೆ. ಆಸ್ಟ್ರೇಲಿಯ ನೆಲದಲ್ಲಿ ದೊರೆತ ಟೆಸ್ಟ್‌ ಸರಣಿ ಗೆಲುವು 2011ರ ವಿಶ್ವಕಪ್‌ ಗೆದ್ದ ಖುಷಿಗಿಂತಲೂ ದೊಡ್ಡದು’ ಎಂದು ಹೇಳಿಕೊಂಡಿದ್ದಾರೆ.

ಈ ಇಬ್ಬರ ಪ್ರತಿಕ್ರಿಯೆಗಳು ತೀರಾ ಉತ್ಪ್ರೇಕ್ಷೆ ಎನ್ನುವುದು ಹಲವರ ಅಭಿಪ್ರಾಯ. ಸರಣಿ ಜಯದ ಸಂಭ್ರಮದಲ್ಲಿ ಅದನ್ನು ಅಗತ್ಯಕ್ಕಿಂತ ಜಾಸ್ತಿ ಎಳೆದಾಡುತ್ತಿದ್ದಾರೆ ಎನ್ನುವುದು ಅಷ್ಟೇ ಸತ್ಯ. 1983ಕ್ಕೂ ಮುಂಚೆ ಭಾರತ ವಿಶ್ವ ಕ್ರಿಕೆಟ್‌ನಲ್ಲಿ ಗುರ್ತಿಸಿಕೊಂಡಿರಲಿಲ್ಲ. ಭಾರತ ಆಗ ಗೆಲ್ಲುತ್ತದೆಂದು ಕಲ್ಪನೆ ಮಾಡುವುದೂ ಸಾಧ್ಯವಿರಲಿಲ್ಲ. ಕ್ರಿಕೆಟ್‌ ಇತಿಹಾಸದ 3ನೇ ವಿಶ್ವಕಪ್‌ನಲ್ಲಿ ಆಡಿದರೂ ಸಾಕು, ಅದೇ ಭಾರತದ್ದು ಸಾಧನೆ ಎನ್ನುವ ಪರಿಸ್ಥಿತಿಯಿತ್ತು. ಅಂತಹ ಸಂದರ್ಭದಲ್ಲಿ ಕ್ರಿಕೆಟ್‌ನ ಪಥವನ್ನೇ ಬದಲಿಸಿದ ಜಯ ಅದು. 2011ರಲ್ಲಿನ ಗೆಲುವಿಗೆ ಇನ್ನೊಂದು ಮಹತ್ವವಿದೆ. 1983ರ ನಂತರ ಭಾರತ ಮತ್ತೆ ಗೆದ್ದೇ ಇರಲಿಲ್ಲ. ತಾನೇ ಕೂಟದ ಆತಿಥ್ಯ ವಹಿಸಿದ್ದಾಗಲೂ ಗೆಲ್ಲಲು ಸಾಧ್ಯವಾಗಿರಲ್ಲ. ಧೋನಿ ಪಡೆ 28 ವರ್ಷಗಳ ಕೊರತೆಯನ್ನು ನೀಗಿತು.

ಈ ಇಬ್ಬರೂ ತಮ್ಮ ವೈಯಕ್ತಿಕ ಸಂಭ್ರಮವನ್ನೇ ಆಧಾರವಾಗಿಟ್ಟುಕೊಂಡು, ವಿಶ್ವಕಪ್‌ ಗೆಲುವಿಗೆ ಹೋಲಿಸಿದ್ದು ಹೇಗೆ ನೋಡಿದರೂ ತಪ್ಪೆನಿಸುತ್ತದೆ. ಸ್ಟೀವ್‌ ಸ್ಮಿತ್‌ ಮತ್ತು ಡೇವಿಡ್‌ ವಾರ್ನರ್‌ ನಿಷೇಧದಿಂದ ಆಸ್ಟ್ರೇಲಿಯ ಸಂಪೂರ್ಣ ದುರ್ಬಲವಾಗಿದೆ. ಆ ತಂಡ ಈ ಸರಣಿಗೂ ಮುನ್ನ ಸತತವಾಗಿ ಸೋತು ಹೋಗಿದೆ. ಇಂತಹ ತಂಡವನ್ನು ತವರಿನಲ್ಲೇ ಸೋಲಿಸುವುದು ವಿಶ್ವ ನಂ.1 ಟೆಸ್ಟ್‌ ತಂಡ ಭಾರತಕ್ಕೆ ಕಷ್ಟದ ಕೆಲಸವೇನು ಆಗಿರಲಿಲ್ಲ. ಇದನ್ನೆಲ್ಲ ಗಮನದಲ್ಲೇ ಇಟ್ಟುಕೊಳ್ಳದೆ ಇಬ್ಬರೂ ಪ್ರತಿಕ್ರಿಯಿಸಿದ್ದು, ಇಬ್ಬರ ಹಿಂದಿನ ಹಲವು ಪ್ರತಿಕ್ರಿಯೆಗಳಂತೆ ತಿರಸ್ಕಾರಕ್ಕೆ ಕಾರಣವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next