Advertisement
ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ನಾಯಕ ಫಾ ಡು ಪ್ಲೆಸಿಸ್ ಅವರ ಶತಕದ ನೆರವಿನಿಂದ 8ಕ್ಕೆ 269 ರನ್ ಮಾಡಿದರೆ, ಭಾರತ ಕೊಹ್ಲಿ ಸೆಂಚುರಿ ಸಾಹಸದಿಂದ 45.3 ಓವರ್‌ಗಳಲ್ಲಿ 4 ವಿಕೆಟಿಗೆ 270 ರನ್ ಪೇರಿಸಿ ಗೆಲುವು ಸಾಧಿಸಿತು. ಕೊಹ್ಲಿ 119 ಎಸೆತಗಳಿಂದ 112 ರನ್ (10 ಬೌಂಡರಿ) ಬಾರಿಸಿ ಹರಿಣಗಳ ಮೇಲೆರಗಿ ಹೋದರು. ಅಜಿಂಕ್ಯ ರಹಾನೆ 79 ರನ್ ಕೊಡುಗೆ ಸಲ್ಲಿಸಿದರು (86 ಎಸೆತ, 5 ಬೌಂಡರಿ). ಇವರಿಬ್ಬರ 3ನೇ ವಿಕೆಟ್ ಜತೆಯಾಟದಲ್ಲಿ 189 ರನ್ ಒಟ್ಟುಗೂಡಿತು.
ಈ ಸಂದರ್ಭದಲ್ಲಿ ತನ್ನ ಶತಕ ಪರಾಕ್ರಮದ ಬಗ್ಗೆ ಹೆಚ್ಚೇನೂ ಹೇಳದ ವಿರಾಟ್ ಕೊಹ್ಲಿ, ಇದು ತಂಡ ಸಾಧನೆಗೆ ಒಲಿದ ಜಯ ಎಂದಿದ್ದಾರೆ. ಮುಖ್ಯವಾಗಿ ರಹಾನೆ ಅವರ ಜವಾಬ್ದಾರಿಯುತ ಆಟಕ್ಕೆ ಹೆಚ್ಚಿನ ಅಂಕಗಳನ್ನು ನೀಡಿದ್ದಾರೆ. “ಜಿಂಕ್ಸ್ (ರಹಾನೆ) ಓರ್ವ ಟಾಪ್ ಕ್ಲಾಸ್ ಆಟಗಾರ. ಈ ಸರಣಿಯಲ್ಲಿ ವೇಗದ ಬೌಲಿಂಗ್ ಪಾತ್ರವೇ ನಿರ್ಣಾಯಕ. ಆದರೆ ರಹಾನೆ ಅಮೋಘ ರೀತಿಯಲ್ಲಿ ವೇಗದ ಬೌಲಿಂಗ್ ದಾಳಿಯನ್ನು ನಿಭಾಯಿಸಿದರು’ ಎಂದು ಕೊಹ್ಲಿ ಹೇಳಿದರು. “ಸರಣಿಯ ಮೊದಲ ಪಂದ್ಯ ಯಾವತ್ತೂ ಮುಖ್ಯವಾದುದು. 3ನೇ ಟೆಸ್ಟ್ ಪಂದ್ಯದಲ್ಲಿ ಕಂಡು ಕೊಂಡ ಲಯವನ್ನು ಇಲ್ಲಿಯೂ ಮುಂದುವರಿಸುವಲ್ಲಿ ಯಶಸ್ವಿಯಾದವು. ಬ್ಯಾಟಿಂಗ್ ಯೋಗ್ಯ ಪಿಚ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 269ಕ್ಕೆ ನಿಯಂತ್ರಿಸಿದ್ದು ದೊಡ್ಡ ಸಾಧನೆ ಆಗಿದೆ’ ಎಂದರು.
Related Articles
Advertisement
ರೋಹಿತ್-ಧವನ್ ಭಾರತಕ್ಕೆ ಉತ್ತಮ ಆರಂಭವನ್ನೇ ನೀಡಿದ್ದರು. ರೋಹಿತ್ ಸಿಡಿದರೂ ಬೇಗ ನಿರ್ಗಮಿಸಿದರು. ಕೊಹ್ಲಿ ಯಿಂದಾಗಿಯೇ ಧವನ್ ರನೌಟಾಗಬೇಕಾಯಿತು. ಆದರೆ ಶತಕ ಬಾರಿಸಿ, ತಂಡವನ್ನು ಗೆಲ್ಲಿಸುವ ಮೂಲಕ ಕೊಹ್ಲಿ ಆ ರನೌಟನ್ನು ಮರೆಯುವಂತೆ ಮಾಡಿದ್ದಾರೆ!
300 ರನ್ ಅಗತ್ಯವಿತ್ತು: ಡು ಪ್ಲೆಸಿಸ್“ನಮ್ಮ ಬೌಲರ್‌ಗಳನ್ನು ದೂರುವುದು ಸರಿಯಲ್ಲ. ನಮ್ಮ ಸ್ಕೋರ್‌ಬೋರ್ಡ್‌ನಲ್ಲಿ 300 ರನ್ ಇರಬೇಕಿತ್ತು’ ಎಂಬುದು ಆಫ್ರಿಕಾ ತಂಡದ ನಾಯಕ ಫಾ ಡು ಪ್ಲೆಸಿಸ್ ಅಭಿಪ್ರಾಯ. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಅಷ್ಟೇನೂ ಯಶಸ್ಸು ಕಾಣದಿದ್ದಾಗ ಏಕಾಂಗಿಯಾಗಿ ಹೋರಾಡಿದ ಡು ಪ್ಲೆಸಿಸ್ 120 ರನ್ ಬಾರಿಸಿದ್ದರು. “ನಮ್ಮ ಬೌಲಿಂಗ್ ನಿರೀಕ್ಷಿತ ಮಟ್ಟ ದಲ್ಲಿರಲ್ಲ. 2ನೇ ಅತ್ಯಧಿಕ ಮೊತ್ತ 30-40 ರನ್ ಆಗಿದ್ದನ್ನು ಕಂಡಾಗ ನಾವು ಉತ್ತಮ ಜತೆಯಾಟ ನಡೆಸಲಿಲ್ಲ ಎಂಬುದೂ ಸ್ಪಷ್ಟವಾಗುತ್ತದೆ. ಜತೆಗೆ ಸ್ಪಿನ್ನರ್‌ಗಳಾದ ಚಾಹಲ್, ಕುಲದೀಪ್ ಯಾದವ್ ಅವರನ್ನು ನಾವು ಹೆಚ್ಚು ಎಚ್ಚರಿಕೆಯಿಂದ ಎದುರಿಸಬೇಕಿದೆ’ ಎಂದರು. ಸ್ಕೋರ್‌ಪಟ್ಟಿ
ದಕ್ಷಿಣ ಆಫ್ರಿಕಾ 8 ವಿಕೆಟಿಗೆ 269
ಭಾರತ
ರೋಹಿತ್ ಶರ್ಮ ಸಿ ಡಿ ಕಾಕ್ ಬಿ ಮಾರ್ಕೆಲ್ 20
ಶಿಖರ್ ಧವನ್ ರನೌಟ್ 35
ವಿರಾಟ್ ಕೊಹ್ಲಿ ಸಿ ರಬಾಡ ಬಿ ಫೆಲುಕ್ವಾಯೊ 112
ಅಜಿಂಕ್ಯ ರಹಾನೆ ಸಿ ತಾಹಿರ್ ಬಿ ಫೆಲುಕ್ವಾಯೊ 79
ಹಾರ್ದಿಕ್ ಪಾಂಡ್ಯ ಔಟಾಗದೆ 3
ಎಂ.ಎಸ್. ಧೋನಿ ಔಟಾಗದೆ 4 ಇತರ 17
ಒಟ್ಟು (45.3 ಓವರ್‌ಗಳಲ್ಲಿ 4 ವಿಕೆಟಿಗೆ) 270
ವಿಕೆಟ್ ಪತನ: 1-33, 2-67, 3-256, 4-262. ಬೌಲಿಂಗ್:
ಮಾರ್ನೆ ಮಾರ್ಕೆಲ್ 7-0-35-1
ಕಾಗಿಸೊ ರಬಾಡ 9.3-0-48-0
ಕ್ರಿಸ್ ಮಾರಿಸ್ 7-0-52-0
ಇಮ್ರಾನ್ ತಾಹಿರ್ 10-0-51-0
ಆ್ಯಂಡಿಲ್ ಫೆಲುಕ್ವಾಯೊ 8-0-42-2
ಜೆಪಿ ಡ್ಯುಮಿನಿ 2-0-16-0
ಐಡನ್ ಮಾರ್ಕ್‌ಮ್ 2-0-20-0 ಪಂದ್ಯಶ್ರೇಷ್ಠ: ವಿರಾಟ್ ಕೊಹ್ಲಿ
2ನೇ ಪಂದ್ಯ: ಸೆಂಚುರಿಯನ್ (ಫೆ. 4) ಎಕ್ಸ್‌ಟ್ರಾ ಇನ್ನಿಂಗ್ಸ್: ಭಾರತ-ದ.ಆಫ್ರಿಕಾ ಡರ್ಬನ್ ಏಕದಿನ
* ದಕ್ಷಿಣ ಆಫ್ರಿಕಾ ತವರಿನಲ್ಲಿ ಸತತ 17 ಪಂದ್ಯಗಳನ್ನು ಗೆದ್ದು ದಾಖಲೆ ಸ್ಥಾಪಿಸಿದ ಬಳಿಕ ಮೊದಲ ಸೋಲನುಭವಿಸಿತು. 2016ರಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲೆರಡು ಪಂದ್ಯಗಳನ್ನು ಸೋತ ಬಳಿಕ ದಕ್ಷಿಣ ಆಫ್ರಿಕಾ ಗೆಲುವಿನ ಓಟ ಆರಂಭಿಸಿತ್ತು. * ಭಾರತ ತಂಡ ದಕ್ಷಿಣ ಆಫ್ರಿಕಾದಲ್ಲಿ 2ನೇ ಅತ್ಯಧಿಕ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿತು (270 ರನ್). ಇದಕ್ಕೂ ಮುನ್ನ 2003ರ ವಿಶ್ವಕಪ್‌ನಲ್ಲಿ ಪಾಕಿಸ್ಥಾನ ವಿರುದ್ಧ ಸೆಂಚುರಿಯನ್‌ನಲ್ಲಿ 274 ರನ್ ಬೆನ್ನಟ್ಟಿ ಗೆದ್ದದ್ದು ದಾಖಲೆ. * ದಕ್ಷಿಣ ಆಫ್ರಿಕಾ ವಿರುದ್ಧ ಡರ್ಬನ್‌ನಲ್ಲಿ ಭಾರತ ಮೊದಲ ಜಯ ದಾಖ ಲಿಸಿತು. ಈ ಅಂಗಳದಲ್ಲಿ ಅತ್ಯಧಿಕ ಮೊತ್ತವನ್ನು ಬೆನ್ನಟ್ಟಿ ಗೆದ್ದ ಪ್ರವಾಸಿ ತಂಡವೆಂಬ ದಾಖಲೆಯನ್ನೂ ನಿರ್ಮಿಸಿತು. 2002ರಲ್ಲಿ ಆಸ್ಟ್ರೇಲಿಯ 268 ರನ್ ಬಾರಿಸಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿತ್ತು. * ಕೊಹ್ಲಿ 33ನೇ ಶತಕ ಬಾರಿಸಿದರು. ಇದು ದಕ್ಷಿಣ ಆಫ್ರಿಕಾದಲ್ಲಿ ಅವರು ಹೊಡೆದ ಮೊದಲ ಶತಕ. ಇದರೊಂದಿಗೆ ಕೊಹ್ಲಿ ಒಟ್ಟು 9 ರಾಷ್ಟ್ರಗಳಲ್ಲಿ ಏಕದಿನ ಶತಕ ದಾಖಲಿಸಿದಂತಾಯಿತು. ಅವರು ಪಾಕಿಸ್ಥಾನದಲ್ಲಿ ಈವರೆಗೆ ಆಡಿಲ್ಲ. * ಅಜಿಂಕ್ಯ ರಹಾನೆ ಸತತ 5 ಇನ್ನಿಂಗ್ಸ್‌ಗಳಲ್ಲಿ ಅರ್ಧ ಶತಕ ಹೊಡೆದರು. ಅವರು ಈ ಸಾಧನೆಗೈದ ಭಾರತದ 3ನೇ ಬ್ಯಾಟ್ಸ್‌ಮನ್. ಉಳಿದಿಬ್ಬರೆಂದರೆ ಸಚಿನ್ ತೆಂಡುಲ್ಕರ್ ಮತ್ತು ವಿರಾಟ್ ಕೊಹ್ಲಿ. * ಕೊಹ್ಲಿ-ರಹಾನೆ ದಕ್ಷಿಣ ಆಫ್ರಿಕಾ ವಿರುದ್ಧ 3ನೇ ವಿಕೆಟಿಗೆ ಅತ್ಯಧಿಕ ರನ್ ಒಟ್ಟುಗೂಡಿಸಿದ ಭಾರತೀಯ ಜೋಡಿ ಎನಿಸಿತು (189 ರನ್). 2007ರ ಬೆಲ್‌ಫಾಸ್ಟ್ ಪಂದ್ಯದಲ್ಲಿ ತೆಂಡುಲ್ಕರ್-ದ್ರಾವಿಡ್ ಪೇರಿಸಿದ 158 ರನ್ ದಾಖಲೆ ಪತನಗೊಂಡಿತು. * ಕೊಹ್ಲಿ-ರಹಾನೆ ಡರ್ಬನ್‌ನಲ್ಲಿ 3ನೇ ವಿಕೆಟಿಗೆ ಅತ್ಯಧಿಕ ರನ್ ಒಟ್ಟು ಗೂಡಿಸಿದ ದಾಖಲೆ ಬರೆದರು. 1994ರಲ್ಲಿ ಪಾಕಿಸ್ಥಾನದ ಇಜಾಜ್ ಅಹ್ಮದ್-ಸಲೀಂ ಮಲಿಕ್ 136 ರನ್ ಪೇರಿಸಿದ ದಾಖಲೆ ಪತನಗೊಂಡಿತು. * ಕೊಹ್ಲಿ-ರಹಾನೆ 3ನೇ ವಿಕೆಟಿಗೆ ಸತತ 3ನೇ ಶತಕದ ಜತೆಯಾಟ ನಡೆಸಿದರು. ಇದಕ್ಕೂ ಮುನ್ನ 2015ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಚೆನ್ನೈಯಲ್ಲಿ 104 ರನ್, 2016ರಲ್ಲಿ ಆಸ್ಟ್ರೇಲಿಯ ವಿರುದ್ಧ ಮೆಲ್ಬರ್ನ್ನಲ್ಲಿ 109 ರನ್ ಪೇರಿಸಿದ್ದರು. * ಫಾ ಡು ಪ್ಲೆಸಿಸ್ ತವರಿನಲ್ಲಿ ಭಾರತದ ವಿರುದ್ಧ ಅತ್ಯಧಿಕ ರನ್ ಹೊಡೆದ ದಕ್ಷಿಣ ಆಫ್ರಿಕಾ ನಾಯಕನೆನಿಸಿದರು (120 ರನ್). 2013ರ ಸೆಂಚುರಿಯನ್ ಪಂದ್ಯದಲ್ಲಿ ಎಬಿಡಿ 109 ರನ್ ಗಳಿಸಿದ್ದು ಈವರೆಗಿನ ಅತ್ಯಧಿಕ ಮೊತ್ತವಾಗಿತ್ತು.