Advertisement

ಅಕಾಲಿಕ ಮಳೆಗೆ ನೆಲಕಚ್ಚಿದ ದ್ರಾಕ್ಷಿ

02:42 PM Apr 07, 2020 | Naveen |

ಕೋಹಳ್ಳಿ: ಅಥಣಿ ತಾಲೂಕಿನಲ್ಲಿ ರವಿವಾರ ಸಂಜೆ ಸುರಿದ ಅಕಾಲಿಕ ಮಳೆಗೆ ದ್ರಾಕ್ಷಿ ಹಾಗೂ ದಾಳಿಂಬೆ ಬೆಳೆಗಳು ನೆಲಕ್ಕಚ್ಚಿದ್ದು, ಗೋವಿನ ಜೋಳ ಹಾನಿಗಿಡಾಗಿದೆ. ಇದರಿಂದಾಗಿ ರೈತರು ವರ್ಷದಿಂದ ಬೆಳೆದ ಬೆಳೆಯೂ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಅಥಣಿ ತಾಲೂಕಿನಲ್ಲಿ ಸುಮಾರು 2,500 ಹೆಕ್ಟೇರ್‌ ಪ್ರದೇಶದಲ್ಲಿ ದ್ರಾಕ್ಷಿ ಬೆಳೆ ಬೆಳೆಯಲಾಗುತ್ತಿದೆ. ಅದರಲ್ಲಿ ತಾಲೂಕಿನ ಪೂರ್ವ ಭಾಗದ ಯಕ್ಕಂಚಿ, ಯಲಿಹಡಲಗಿ, ಅಡಹಳ್ಳಿ, ಕೋಹಳ್ಳಿ, ಐಗಳಿ, ಕಕಮರಿ, ರಾಮತೀರ್ಥ, ಕೊಟ್ಟಲಗಿ ಗ್ರಾಮಗಳಲ್ಲಿ ರವಿವಾರ ಸಂಜೆ ಸುರಿದ ಬಾರಿ ಬಿರುಗಾಳಿ ಸಹಿತ ಮಳೆಗೆ ದ್ರಾಕ್ಷಿ, ದಾಳಿಂಬೆ, ಗೋವಿನ ಜೋಳ ಬೆಳೆಗಳು ಹಾನಿಗೊಂಡಿವೆ. ಈ ಎಲ್ಲ ಗ್ರಾಮಗಳ ಸುಮಾರು 950 ಹೆಕ್ಟೇರ್‌ ಪ್ರದೇಶ ದ್ರಾಕ್ಷಿ ಹಾಗೂ ದಾಳಿಂಬೆ ನಾಶವಾಗಿದ್ದು, ಕೋಟ್ಯಂತರ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

Advertisement

ಈ ಭಾಗದ ಅನೇಕ ರೈತರು ದ್ರಾಕ್ಷಿಯನ್ನು ಮಾರುಕಟ್ಟೆಯಲ್ಲಿಯೂ ಮಾರುತ್ತಾರೆ. ಜತೆಗೆ ಒಣದ್ರಾಕ್ಷಿ (ಮನುಕ) ತಯಾರಿಸುತ್ತಾರೆ. ಹಣ್ಣಾದ ದ್ರಾಕ್ಷಿಯನ್ನು ಕಟಾವು ಮಾಡಿ ಶೆಡ್‌ನ‌ಲ್ಲಿ ಒಣಗಿಸುತ್ತಾರೆ. ರವಿವಾರ ಸಂಜೆ ಆಕಸ್ಮಿಕವಾಗಿ ಸುರಿದ ಮಳೆಗೆ ಕೋಟ್ಯಂತರ ಮೌಲ್ಯದ ದ್ರಾಕ್ಷಿ ಮತ್ತು ದಾಳಿಂಬೆ ಹಣ್ಣು ಹಾನಿಗೊಂಡಿದೆ. ಕೋಹಳ್ಳಿಯ ಕಲ್ಯಾಣ ನಗರದಲ್ಲಿ ಒಣದ್ರಾಕ್ಷಿ (ಮನುಕ) ಮಳೆಗೆ ತೊಯ್ದು ಹಾಳಾಗಿದೆ. ಅಥಣಿ ತಾಲೂಕಿನ ಪೂರ್ವ ಭಾಗದ ರೈತರಾದ ಕೋಹಳ್ಳಿಯ ಉಮ್ಮಯ್ಯ ಪೂಜಾರಿ, ಮೈನುದ್ದೀನ್‌ ಡೊಂಗರಗಾಂವ, ನೂರಅಹ್ಮದ್‌ ಡೊಂಗರಗಾಂವ, ಕೊಟ್ಟಲಗಿಯ ಗುರಬಸು ಬಂಡಗೊಟ್ಟಿ ಸೇರಿದಂತೆ ವಿವಿಧ ಹಳ್ಳಿಗಳ ಅನೇಕ ರೈತರ ಒಣ ದ್ರಾಕ್ಷಿ (ಬೆದಾಣಿ) ಹಾಗೂ ದ್ರಾಕ್ಷಿ ಹಣ್ಣು ಹಾಳಾಗಿದೆ.

ಬೆಲೆ ಕುಸಿತ: ರೈತ ಬೆಳೆದ ಒಣ ದ್ರಾಕ್ಷಿಯೂ ಹವಾಮಾನ ಆಧಾರಿತವಾಗಿ ತಯಾರಾಗುತ್ತದೆ. ಇದರ ಗುಣಮಟ್ಟದಿಂದ ಮಾರುಕಟ್ಟೆಯಲ್ಲಿ ಬೆಲೆಯೂ
ನಿರ್ಧಾರವಾಗುತ್ತದೆ. ಗುಣಮಟ್ಟವಿದ್ದರೆ ಮಾತ್ರ ರೈತರಿಗೆ ಹೆಚ್ಚಿನ ದರ ಸಿಗುತ್ತದೆ. ಸದ್ಯ ಮಾರುಕಟ್ಟೆಯಲ್ಲಿ ಒಣದ್ರಾಕ್ಷಿ ಬೆದಾಣಿಯೂ ಕೆಜಿಗೆ 150 ರಿಂದ 200 ರೂ. ವರೆಗೆ ಮಾರಾಟವಾಗುತ್ತಿದೆ. ಆದರೆ ಶನಿವಾರ ಸಂಜೆ ಸುರಿದ ಅಕಾಲಿಕ ಮಳೆಯಿಂದ ಒಣದ್ರಾಕ್ಷಿಯ ಗುಣಮಟ್ಟ ಹಾಳಾಗಿದೆ. ಇದರಿಂದ ಇದರ ಬೆಲೆ ಮಾರುಕಟ್ಟೆಯಲ್ಲಿ 80 ರಿಂದ 100 ರೂ. ವರೆಗೆ ಮಾತ್ರ ಮಾರಾಟವಾಗುತ್ತದೆ. ಒಂದು ಎಕರೆ ದ್ರಾಕ್ಷಿ ಬೆಳೆಯಲೂ ಸುಮಾರು 2 ಲಕ್ಷದವರೆಗೂ
ಖರ್ಚವಾಗುತ್ತದೆ. ಆದರೆ ಅಕಾಲಿಕ ಮಳೆಯಿಂದ ಬೆಳೆಯೂ ಹಾಳಾಗಿದ್ದು, ಮುಂದೆ ದರ ಕುಸಿತದಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next