Advertisement

ಪ್ರೀತಿ ಅಂದ್ರೆ ಬರೀ ಕೊಡೋದು!

03:45 AM Feb 07, 2017 | |

ಅದೊಂದು ದಿನ ನೀನು ನಿನ್ನ ಗೆಳತಿಯರ ಮಧ್ಯೆ ತಮಾಷೆ ಮಾಡುತ್ತಾ ಬರುತ್ತಿರುವಾಗ ಅದೆಲ್ಲಿತ್ತೋ ಧೈರ್ಯ “ಐಶ್‌ ಸ್ವಲ್ಪ ಮಾತಾಡ್ಬೇಕು ಬರ್ತೀಯಾ’ ಅಂತ ಕೇಳಿಬಿಟ್ಟೆ. ನನ್ನ ಈ ಧೈರ್ಯದ ಮಾತು ಕೇಳಿ ನಿನ್ನ ಗೆಳತಿಯರ ಗುಂಪು ಅಚ್ಚರಿಗೊಂಡಿದ್ದಂತೂ ಸತ್ಯ. 

Advertisement

ಎಲ್ಲ ಹುಡುಗರಂತೆಯೇ ನನಗೂ ಒಬ್ಬಳು ಗೆಳತಿಯಿರಬೇಕು. ಕಾಲೇಜಿನ ಆವರಣದಲ್ಲಿ ಕ್ಯಾಂಟೀನ್‌ನ ಮೂಲೆ ಕುರ್ಚಿಯಲ್ಲಿ, ಲೈಬ್ರರಿಯ ಮಧ್ಯದ ಸಾಲಿನಲ್ಲಿ, ಕ್ಯಾಂಪಸ್‌ನ ಕಲ್ಲು ಬೆಂಚಿನ ಮೇಲೆ ಅವಳೊಂದಿಗೆ ನಾನೂ ಹರಟಬೇಕು. ಆ ಮೂಲಕ ಹಲವರ ಮೆಚ್ಚುಗೆಗೆ, ಹೊಟ್ಟೆಕಿಚ್ಚಿಗೆ ಕಾರಣವಾಗಿರಬೇಕು ಎಂಬ ಆಸೆಯೊಂದು ನನ್ನಲ್ಲಿ ಮೊದಲಿನಿಂದಲೂ ಇತ್ತು. ಆ ಆಸೆಯ ಹೂವು ಅರಳಿದ ಕೆಲವೇ ದಿನಗಳಲ್ಲಿ ನೀನು ಪರಿಚಯವಾದದ್ದು. ಆವತ್ತಿನಿಂದ ಪ್ರತಿದಿನವೂ ಇವತ್ತು ಪ್ರೊಪೋಸ್‌ ಮಾಡಿಯೇಬಿಡಬೇಕು ಎಂದುಕೊಂಡೇ ಕಾಲೇಜಿಗೆ ಬರುತ್ತಿದ್ದೆ. ಆದರೆ ಅದೇನೇ ತಿಪ್ಪರಲಾಗ ಹಾಕಿದರೂ ಐ ಲವ್‌ ಯೂ ಎಂಬ ಮಾತು ತುಟಿಯಿಂದಾಚೆಗೆ ಬರುತ್ತಲೇ ಇರಲಿಲ್ಲ. ನಾನು ಮನದ ಮಾತು ಹೇಳುವುದೇ ತಡವಾಗಿ, ಅದೇ ಕಾರಣಕ್ಕೆ ಆ ಹುಡುಗಿ ನನ್ನ ಕೈತಪ್ಪಿ ಹೋದರೆ ಗತಿಯೇನು ಎಂಬ ಚಿಂತೆಯಲ್ಲಿ ನಾನು ದಿನದಿನವೂ ಒದ್ದಾಡಿಹೋಗುತ್ತಿದ್ದೆ…

ಚುಮು ಚುಮು ನಸುಕಿನಲ್ಲಿ, ಗಾಢ ನಿದ್ರೆಯಲ್ಲಿರುವಾಗ ತಾಯಿ, “ಕಾಲೇಜಿಗೆ ಲೇಟಾಯ್ತು ಮಗಾ. ಓದೋ ಹುಡುಗರು ಹೆಚ್ಚು ಹೊತ್ತು ಮಲಗಬಾರದು’ ಎಂಬ ತನ್ನ ಹಳೆಯ ರಾಗವನ್ನೇ ಹೊಸ ಟ್ಯೂನ್‌ನಲ್ಲಿ ಬಡಬಡಿಸಿದಾಗ, ಹಾಳಾದ ಈ ಬೆಳಗು ಇಷ್ಟು ಬೇಗ ಯಾಕಾದರೂ ಆಗುತ್ತೋ ಎಂದು ಶಪಿಸುತ್ತಾ ಕಾಲೇಜಿಗೆ ಹೋಗಲು ಅಣಿಯಾಗುತ್ತೇನೆ. ರಾತ್ರಿ ಪೂರಾ ಕನಸಿಗೆ ಬಾರದ ನೀನು ಬೆಳಗಿನ ಜಾವದ ಸಕ್ಕರೆ ನಿದ್ರೆಯಲ್ಲಿ ಮೆಲ್ಲಗೆ ಇಣುಕಿ, ತೋಳಲ್ಲಿ ಬಂಧಿಯಾಗಿ, ಹೂ ಮುತ್ತನೊಂದ ಕೆನ್ನೆಗೆ ಕೊಟ್ಟು, ಕಾಲೇಜಿನಲ್ಲಿ ಕಾಯ್ತಾ ಇರಿ¤àನಿ ಬೇಗ ಬಾ ಎಂಬ ಸೂಚನೆ ನೀಡಿ ಮಾಯವಾದದ್ದನ್ನು ನೆನಪಿಸಿಕೊಂಡು ಯಾವಾಗ ನಿನ್ನ ಮುಖ ಕಂಡೇನೋ ಎಂಬ ಧಾವಂತದಲ್ಲಿ ಕಾಲೇಜಿನತ್ತ ಧಾವಿಸಿ ಬರುತ್ತೇನೆ.

ಕಾಲೇಜಿಗೆ ಎದುರಿನ ಕಲ್ಲು ಬೆಂಚುಗಳ ಮೇಲೆ ಎಲ್ಲೆಂದರಲ್ಲಿ, ಜೋಡಿಹಕ್ಕಿಗಳಂತೆ ಕುಳಿತು, ಪಿಸುಮಾತಿನಲ್ಲಿ ಪ್ರೀತಿಗರೆಯುತ್ತಿರುವ ಹುಡುಗ- ಹುಡುಗಿಯರು ನನ್ನ ಕಂಡು ಹುಸಿನಕ್ಕಂತಾಗುತ್ತದೆ. “ನಿನಗೆಲ್ಲಿಂದ ಬರಬೇಕು ಇಂಥ ಧೈರ್ಯ?’ ಎಂದು ಗೇಲಿ ಮಾಡಿದಂತೆನಿಸುತ್ತದೆ ಅವರ ನಗೆ. ನೀನು ಇದಿರು ಸಿಕ್ಕಾಗ ಕಣ್ಣಿಗೆ ಕಣ್ಣು ಕೂಡಿಸಿ, ಎರಡು ಮಾತು ಆಡುವುದರಲ್ಲಿಯೇ ಬೆವರಿ ನೀರಾಗಿರುತ್ತೇನೆ. ಮಾತು ತೊದಲುತ್ತಿರುತ್ತದೆ, ಕಾಲುಗಳು ನಡುಗುತ್ತಿರುತ್ತವೆ, ಯಾರಾದರೂ ನೋಡಿದರೆ ಏನು ಗತಿ ಎಂಬ ಹೆದರಿಕೆ ಒಳಗೊಳಗೆ ನಡುಕ ಹುಟ್ಟಿಸಿರುತ್ತದೆ. ಅದೆಷ್ಟು ಸಲ ನೀನು ಹೇಳಿಲ್ಲ? ಆಕಾಶ್‌, “ಒಂದಾರಿಯಾದ್ರೂ ನನ್ನ ಜೊತೆ ಕೂತು ಚೆನ್ನಾಗಿ ಮಾತಾಡೋ, ಯಾವುದಾದ್ರು ಫಿಲ್ಮ್ಗೆ ಹೋಗೋಣ, ಪಾರ್ಕಲ್ಲಿ ಸುತ್ತಾಡೋಣ, ಐಸ್‌ಕ್ರೀಮ್‌ ತಿನ್ನೋಣ. ನೀನು ಈ ರೀತಿ ಪುಕ್ಕಲನ ತರಹ ಹೆದರ್ತಾ ಇದ್ರೆ ನಮ್ಮ ಪ್ರೀತಿ ಮುಂದುವರಿಯೋಕೆ ಹೇಗೆ ಸಾಧ್ಯ?’ ಅಂತ. ಆದರೆ ಐಶು, ಅವನ್ನೆಲ್ಲ ನೆನಪಿಸಿಕೊಂಡರೆ ತುಂಬಾ ಭಯವಾಗುತ್ತೆ. ನಮ್ಮಪ್ಪ ಮೊದಲೇ ದೂರ್ವಾಸ ಮುನಿ. ಅವನ ಕಣ್ಣಿಗೇನಾದ್ರೂ ಬಿದ್ರೆ ಅಷ್ಟೇ. ಇರು, ಒಂದಲ್ಲ ಒಂದಿವ್ಸ ನಿನ್ನ ಕೈ ಹಿಡ್ಕೊಂಡು ಊರೆಲ್ಲಾ ಸುತ್ತಿಸ್ತೀನಿ ಅಂತ ಹೇಳ್ಳೋವಾಗ ನಿನ್ನ ಕೊಂಕು ನಗೆ ನನ್ನ ಅಣಕಿಸುತ್ತಿರುತ್ತೆ.

ಅದೊಂದು ದಿನ ನೀನು ನಿನ್ನ ಗೆಳತಿಯರ ಮಧ್ಯೆ ತಮಾಷೆ ಮಾಡುತ್ತಾ ಬರುತ್ತಿರುವಾಗ ಅದೆಲ್ಲಿತ್ತೋ ಧೈರ್ಯ “ಐಶ್‌ ಸ್ವಲ್ಪ ಮಾತಾಡ್ಬೇಕು ಬರ್ತೀಯಾ’ ಅಂತ ಕೇಳಿಬಿಟ್ಟೆ. ನನ್ನ ಈ ಧೈರ್ಯದ ಮಾತು ಕೇಳಿ ನಿನ್ನ ಗೆಳತಿಯರ ಗುಂಪು ಅಚ್ಚರಿಗೊಂಡಿದ್ದಂತೂ ಸತ್ಯ. ಅವರಷ್ಟೇ ಅಲ್ಲ ನಿನ್ನಂಥ ನೀನೂ ಕೂಡಾ ಬೆಕ್ಕಸ ಬೆರಗಾಗಿ ನನ್ನ ಬೆನ್ನು ತಟ್ಟಿದ್ದು ತುಂಬಾ ಖುಷಿ ನೀಡಿತು. ಅವತ್ತು ನೀ ಕೊಟ್ಟ ಮುತ್ತುಗಳಿಗೆ ಲೆಕ್ಕವೇ ಸಿಗಲಿಲ್ಲ. ಅದಾದ ಮೇಲೆ ನೋಡು; ಇಡೀ ಕಾಲೇಜೇ ನಮ್ಮನ್ನು ಕಂಡು ಮಾತಾಡಿಕೊಂಡದ್ದು ಸುಳ್ಳಲ್ಲ. ಎಲ್ಲಿ ಹೋದರೂ ನಿನ್ನ ಕೈಗಳನ್ನು ಗಟ್ಟಿಯಾಗಿ ಅವುಚಿಕೊಂಡೇ ಇರುತಿದ್ದ ನಾನು ತುಂಬಾ ಧೈರ್ಯಶಾಲಿಯಾಗಿಬಿಟ್ಟಿದ್ದೆ. ಪ್ರೀತಿ ಇಷ್ಟೆಲ್ಲ ಧೈರ್ಯ ಕೊಡುತ್ತಾ? ಎಂಬ ಪ್ರಶ್ನೆಗೆ ನೀನು ನಕ್ಕು ಮೌನವಾಗಿದ್ದೆ. ನೀಲಿಯಾಗಸದ ಕೆಳಗೆ, ಮೈಚಾಚಿ ಮಲಗಿದ ನದಿಯ ದಂಡೆಯ ಮೇಲೆ, ಕಲರವದ ಕಚಗುಳಿಯಿಡುತ್ತಾ ಉಲಿಯುವ ಹಕ್ಕಿಗಳಿಂಚರದ ಧ್ವನಿಗೆ ಕಿವಿಯಾಗಿ, ಸೂರ್ಯ ಅಸ್ತಂಗತನಾಗುವವರೆಗೂ ಒಬ್ಬರಿಗೊಬ್ಬರು ಮುಖ ನೋಡುತ್ತಾ ಕುಳಿತುಬಿಡುತ್ತಿದ್ದೆವು. 

Advertisement

ನಮ್ಮೊಳಗಿನ ಮಾತುಗಳೆಲ್ಲ ಮೌನದಲ್ಲಿಯೇ ಮಾತಾಡಿಕೊಳ್ಳುತ್ತಿದ್ದವು. ಕಣ್ಣೊಳಗಿನ ಕನಸುಗಳು ಬಾನಿಗೇರಲು ಹಂಬಲಿಸುತ್ತಿದ್ದವು. ಆಕಾಶ್‌, ಅದೆಷ್ಟು ದಿನ ಇರ್ತಿà ಈ ಭೂಮಿ ಮೇಲೆ? ಇರುವಷ್ಟು ದಿನ ಪ್ರೀತಿಯನ್ನು ಮೊಗೆ ಮೊಗೆದು ನಿನಗೆ ಕೊಡಬೇಕು ಅನ್ನೋ ಆಸೆ. ದುಃಖಗಳೇ ಬಂದು ಬೆದರಿಸಲಿ, ಸಂತಸಗಳೇ ಕೈಹಿಡಿದು ಅರಳಿಸಲಿ ಕೊನೆವರೆಗೂ ನನ್ನ ಜೊತೆ ಬಾಳ್ತೀಯಲ್ಲ ಅಂತ ನೀನು ಅಂದಾಗ, ಕಣ್ಣೊಳಗೆ ಸಣ್ಣಗೆ ಹನಿಯುವ ನೀರು. ನನ್ನ ಒರಟು ಕೈಗಳಿಂದ ನಿನ್ನ ಬೆಣ್ಣೆ ಹಸ್ತಗಳನ್ನು ಮೃದುವಾಗಿ ಒತ್ತಿ ಧೈರ್ಯ ತುಂಬುತ್ತಿದ್ದೆ. “ಪ್ರೀತಿ ಅಂದ್ರೆ ಬರೀ ಕೊಡೋದು’ ಎನ್ನುವ ಸಾಲು ಒಳಮನಸ್ಸಿನಲ್ಲಿ ಗಿರಕಿ ಹೊಡೆಯುತ್ತಿತ್ತು.

ಕಾಲೇಜು ದಿನಗಳು ಮುಗಿಯುತ್ತಾ ಬಂದ ಹಾಗೆ ನಿನ್ನದೊಂದೇ ವರಾತ. ಮನೆಗೆ ಬಂದು ಅಪ್ಪನ ಹತ್ರ ಮಾತಾಡು. ನೀ ಹೇಳಿದ್ರೆ ಅಪ್ಪ ಖಂಡಿತ ಒಪ್ತಾರೆ, ಅಂತ. ಐಶು ಈಗ ತಾನೆ ಡಿಗ್ರಿ ಮುಗಿದಿದೆ. ಒಂದೆರಡು ವರ್ಷ ಸುಮ್ಮನಿರು, ಎಲ್ಲಾದ್ರೂ ಕೆಲಸಕ್ಕೆ ಅಪ್ಲೆ„ ಮಾಡ್ತೀನಿ. ಕೆಲ್ಸ ಸಿಕ್ಕ ನಂತರ ನಾನೇ ಖುದ್ದಾಗಿ ಬಂದು ನಿನ್ನಪ್ಪನ ಹತ್ತಿರ ಮಾತಾಡ್ತೀನಿ. ನಿಮ್ಮನೆ ಬೆಳಕನ್ನ ನಮ್ಮನೆಗೆ ಕಳಿಸಿಕೊಡಿ ಅಂತ ಕೇಳ್ತೀನಿ. ಅಲ್ಲೀ ತನಕ ಸುಮ್ಮನಿರು ಎಂದು ನಿನ್ನ ಒಪ್ಪಿಸೋದರಲ್ಲಿ ಸಾಕುಸಾಕಾಗಿ ಹೋಯ್ತು. ಈಗ ಕೆಲಸದ ಶೋಧನೆಯಲ್ಲಿ ನಾನಿದ್ದೇನೆ. ಕೆಲಸ ಸಿಕ್ಕೇ ಸಿಗುತ್ತದೆಂಬ ನಂಬಿಕೆಯೂ ಕೂಡಾ ನನಗಿದೆ. ಇನ್ನೇನು ನಿಮ್ಮನೆಗೆ ಬರೋದೊಂದೇ ಬಾಕಿ. ಪ್ಲೀಸ್‌, ಸ್ವಲ್ಪ ದಿನ ತಾಳ್ಮೆಯಿಂದಕಾಯಿ… 

-ನಾಗೇಶ್‌ ಜೆ. ನಾಯಕ

Advertisement

Udayavani is now on Telegram. Click here to join our channel and stay updated with the latest news.

Next