ಕೂಡ್ಲಿಗಿ: ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದೇ ತೀವ್ರ ಕುತೂಹಲ ಕೆರಳಿಸಿದ್ದ ಕೂಡ್ಲಿಗಿ ಪಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಕುರಿತ ಚರ್ಚೆಗೆ ಬಹುತೇಕ ತೆರೆಬಿದ್ದಂತಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡು ಅಧಿಕಾರದ ಗದ್ದುಗೆ ಏರುವುದು ಬಹುತೇಕ ನಿಚ್ಚಳವಾಗಿದೆ.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 20 ವಾರ್ಡ್ ಗಳಿದ್ದು, ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆ ಮತ್ತು ಉಪಾಧ್ಯಕ್ಷರ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಪಪಂಗೆ ಆಯ್ಕೆ ಆಗಿರುವ 20 ಸದಸ್ಯರಲ್ಲಿ ಕಾಂಗ್ರೆಸ್-6, ಬಿಜೆಪಿ-6 ಮತ್ತು ಜೆಡಿಎಸ್-4 ಪಕ್ಷೇತರರು ಇಬ್ಬರಿದ್ದಾರೆ. ಇವರಲ್ಲಿ ಬಿಜೆಪಿಯ ಒಬ್ಬರು ಮತ್ತು ಪಕ್ಷೇತರ ಸದಸ್ಯರೊಬ್ಬರು ಮೃತಪಟ್ಟಿದ್ದಾರೆ. ಬಿಜೆಪಿಯಲ್ಲಿ ಎಸ್ಸಿ ಮಹಿಳೆ ಸದಸ್ಯೆ ಒಬ್ಬರಿದ್ದು, ಪಕ್ಷೇತರ ಸದಸ್ಯೆಯೊಬ್ಬರೂ ಇದೇ ಮೀಸಲು ಅಡಿಯಲ್ಲಿ ಇದ್ದಾರೆ. ಬಿಜೆಪಿ ಸದಸ್ಯರ ಸಂಖ್ಯೆ 6. ಶಾಸಕರು ಮತ್ತು ಸಂಸದರ ಮತ ಸೇರಿ ಒಟ್ಟು ಎಂಟು ಮತಗಳು ಬಿಜೆಪಿಯದ್ದೇ ಆಗಲಿವೆ. ಇದರೊಂದಿಗೆ ಜೆಡಿಎಸ್-4 ಸದಸ್ಯರು ಮತ್ತು ಪಕ್ಷೇತರ 2 ಸದಸ್ಯರ ಬೆಂಬಲ ದೊರೆತಲ್ಲಿ ಒಟ್ಟು ಬಲ -12 ಆಗಲಿದ್ದು ಅಧಿಕಾರದ ಗದ್ದುಗೆ ಏರಬಹುದಾಗಿದೆ.
ಶಾಸಕರಾದ ಗೋಪಾಲಕೃಷ್ಣ ಪಟ್ಟಣ ಪಂಚಾಯಿತಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗಾಗಿ ಜೆಡಿಎಸ್ ಪ್ರಮುಖರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ಫಲಪ್ರದವಾದರೆ ಗದ್ದುಗೆ ಬಿಜೆಪಿ ಪಾಲಾಗುವುದು ಖಚಿತ. ಎರಡನೇ ವಾರ್ಡ್‌ನ ಬಿಜೆಪಿ ಸದಸ್ಯೆ ಎಂ. ಶಾರದಬಾಯಿ ಇವರಿಗೆ ಅಧ್ಯಕ್ಷ ಸ್ಥಾನ, 15ನೇ ವಾರ್ಡಿನ ಊರಮ್ಮ ಉಪಾಧ್ಯಕ್ಷರಾಗಿ ಆಯ್ಕೆ ಆಗುವುದು ಬಹುತೇಕ ಖಚಿತವಾಗಿದೆ. ಇನ್ನು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್ ಗೆ ಬಿಟ್ಟು ಕೊಟ್ಟಿದ್ದು, ಈ ಸ್ಥಾನಕ್ಕ ತಳಾಸ ವೆಂಕಟೇಶ ಹೆಸರು ಕೇಳಿ ಬರುತ್ತಿದೆ. ಶಾಸಕರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವನ್ನು ತಮ್ಮ ಪಕ್ಷಕ್ಕೆ ಇಟ್ಟುಕೊಂಡು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟು ಕೊಡುವ ಮೂಲಕ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.
ಹೀಗೆ ಬಿಜೆಪಿ ಮತ್ತು ಜೆಡಿಎಸ್ ಸೇರಿ ಹೊಂದಾಣಿಕೆ ಮಾಡಿಕೊಂಡು ಪಕ್ಷೇತರರನ್ನು ಸೆಳೆದು ಪಪಂ ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಸಾಧ್ಯತೆಗಳು ಇವೆ. ಬಿಜೆಪಿಗೆ ಅಧಿಕಾರ ಪಡೆಯಲು ಕೋರಂ ಬೆಂಬಲ ಇಲ್ಲದಿದ್ದರೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕೋ ಅಥವಾ ಬೇಡವೋ ಎಂಬುದನ್ನು ಪಕ್ಷ ತೀರ್ಮಾನಿಸಬೇಕಿದೆ.
ಒಳ ಒಪ್ಪಂದದ ಪ್ರಕಾರ ಈಗಾಗಲೇ ಜೆಡಿಎಸ್ ಮತ್ತು ಪಕ್ಷೇತರ ಸದಸ್ಯರು ಬಿಜೆಪಿಗೆ ಬೆಂಬಲಿಸಿದ್ದು, ಬಿಜೆಪಿ ಶಾಸಕರು, ಮುಖಂಡರು, ಸದಸ್ಯರು ಚರ್ಚಿಸಿ ತೀರ್ಮಾನಿಸಿದಂತೆ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವುದು ಪಕ್ಷದ ತೀರ್ಮಾನಕ್ಕೆ ಬಿಟ್ಟ ವಿಚಾರ. ಶಾಸಕರ ಸಮ್ಮುಖದಲ್ಲಿ ಚರ್ಚೆ ನಡೆದಿದ್ದು ಉಪಾಧ್ಯಕ್ಷ ಸ್ಥಾನಕ್ಕೆ ಮೊದಲ ಹಂತದಲ್ಲಿ ಇಬ್ಬರು ಇಷ್ಟು ತಿಂಗಳುಗಳ ಕಾಲ ಅಧಿಕಾರ ನಡೆಸುವಂತೆತೀರ್ಮಾನಿಸಲಾಗಿದೆ. 15ನೇ ವಾರ್ಡಿನ ಬಿಜೆಪಿ ಸದಸ್ಯ ಊರಮ್ಮ ಇವರು ಮೊದಲು ಅನಂತರದಲ್ಲಿ 14ನೇ ವಾರ್ಡಿನ ಬಿಜೆಪಿ ಸದಸ್ಯೆ ರೇಣುಕಾಶ್ರೀ ದುರುಗೇಶರವರಿಗೆ ಬಿಟ್ಟುಕೊಡಬೇಕು ಎಂದು ಒಳ ಒಪ್ಪಂದವಾಗಿದೆ ಎಂದು ತಿಳಿದು ಬಂದಿದೆ.
ಜೆಡಿಎಸ್‌ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡಲು ಬಿಜೆಪಿ ಮುಂದಾಗಿದೆ. ಅದರಲ್ಲಿ ಹಿರಿಯ ಸದಸ್ಯ 6ನೇ ವಾರ್ಡಿನ ಜೆಡಿಎಸ್ ಸದಸ್ಯ ತಳಾಸ ವೆಂಕಟೇಶ್‌ಗೆ ಕೊಡುವ ಬಗ್ಗೆ ತೀರ್ಮಾನಿಸಲಾಗಿದೆ. ಜೆಡಿಎಸ್‌ನಲ್ಲಿ ಸಹ ಮೊದಲು ಇಷ್ಟು ತಿಂಗಳು 20ನೇ ವಾರ್ಡಿನ ಸದಸ್ಯ ಬಾಸ್ಸು ನಾಯಕ್ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಪಡೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
-ಕೆ.ನಾಗರಾಜ್