ಕೊಂಡ್ಲಹಳ್ಳಿ: ಸಮೀಪದ ಕೋನಸಾಗರ ಗ್ರಾಮದಲ್ಲಿ ಓವರ್‌ಹೆಡ್ ಟ್ಯಾಂಕ್ ಶಿಥಿಲಗೊಂಡಿದ್ದು, ಅಪಾಯದ ಭೀತಿ ಸೃಷ್ಟಿಸಿದೆ.
ಸುಮಾರು 15 ವರ್ಷಗಳ ಹಿಂದೆ ಎರಡನೇ ವಾರ್ಡ್‌ನಲ್ಲಿ ಕುಡಿಯುವ ನೀರು ಪೂರೈಕೆ ಸಲುವಾಗಿ ಈ ಓವರ್‌ಹೆಡ್ ಟ್ಯಾಂಕ್ ನಿರ್ಮಿಸಲಾಗಿದೆ. ಟ್ಯಾಂಕ್‌ನ ಕಂಬಗಳು ಹಾಗೂ ಸಿಮೆಂಟ್ ಕಳಚಿ ಬೀಳುತ್ತಿದ್ದು, ಕಬ್ಬಿಣದ ಸರಳುಗಳು ಹೊರ ಚಾಚಿವೆ.
ನೀರು ಸಂಗ್ರಹದ ತಳಪಾಯ ಸೇರಿ ಎಲ್ಲವೂ ಹಾಳಾಗಿವೆ. ಟ್ಯಾಂಕ್‌ನ ಮೇಲ್ಪದರ ಕಳಚಿ ಹೋಗಿ ಕಬ್ಬಿಣ, ಇಟ್ಟಿಗೆಗಳು ಹೊರಗೆ ಬಂದಿವೆ. ಇದರಿಂದಾಗಿ ನೀರು ಸೋರಿ ಹೋಗಿ ಪೋಲಾಗುತ್ತಿದೆ. ಜೋರಾಗಿ ಗಾಳಿ ಬೀಸಿದರೆ ಸಿಮೆಂಟ್ ಪದರಗಳು ಅಕ್ಕಪಕ್ಕದ ಮನೆಯಂಗಳಕ್ಕೆ ಬೀಳುತ್ತಿರುತ್ತವೆ.
ಈ ಟ್ಯಾಂಕ್‌ನಿಂದ ಅಪಾಯ ಗ್ಯಾರಂಟಿ. ನಾವು ಮತ್ತು ನಮ್ಮ ಮಕ್ಕಳು ಇಲ್ಲಿ ಓಡಾಡುವುದಕ್ಕೆ ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಟ್ಯಾಂಕ್ ದುಸ್ಥಿತಿ ಬಗ್ಗೆ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಗಮನ ನೀಡುತ್ತಿಲ್ಲ. ಏನಾದರೂ ಅಪಾಯವಾದ ಮೇಲೆಯೇ ಅವರ ಗಮನಕ್ಕೆ ಬರಬೇಕೇನೋ ಎಂಬುದು ಗ್ರಾಮಸ್ಥರಾದ ಪಾಲಣ್ಣ, ಕರಿಮಾರಣ್ಣ, ಕುಮಾರ್ ಆರೋಪ.
ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛಗೊಳಿಸದೆ ವರ್ಷಗಳೇ ಕಳೆದಿವೆ. ಈ ಟ್ಯಾಂಕ್‌ನಿಂದ ಪೂರೈಕೆಯಾಗುವ ನೀರು ಅಶುದ್ಧವಾಗಿರುತ್ತದೆ. ಗ್ರಾಮ ಪಂಚಾಯತ್‌ದವರು ಈ ಬಗ್ಗೆ ನಿರ್ಲಕ್ಷ್ಯ ತಾಳಿದ್ದಾರೆ. ಇನ್ನಾದರೂ ಶಿಥಿಲಗೊಂಡಿರುವ ಟ್ಯಾಂಕ್ ತೆರವುಗೊಳಿಸಲು ಸಂಬಂಧಿಸಿದವರು ಕೂಡಲೇ ಕಾರ್ಯಪ್ರವೃತ್ತರಾಗಬೇಕಿದೆ.
ಈ ನೀರಿನ ಟ್ಯಾಂಕ್ ಅನ್ನು ಗ್ರಾಮ ಪಂಚಾಯತ್‌ನವರು ನೆಲಸಮ ಮಾಡಬೇಕು. ಅದು ನಮ್ಮ ಜವಾಬ್ದಾರಿಯಲ್ಲ. ಗ್ರಾಮದಲ್ಲಿ ಹೊಸದಾಗಿ ಒಂದು ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಪ್ರಸ್ತಾವನೆ ಮಾಡಲಾಗುವುದು.
•
ಸುಕುಮಾರ್,
ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ನಿರ್ದೇಶಕ.
ನಾನು ಹೊಸದಾಗಿ ಇಲ್ಲಿಗೆ ಬಂದಿದ್ದೇನೆ. ನೀರಿನ ಟ್ಯಾಂಕ್ ಇರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಟ್ಯಾಂಕ್ ಸ್ವಚ್ಛಗೊಳಿಸುವಂತೆ ಗ್ರಾಪಂ ಸಿಬ್ಬಂದಿಗಳಿಗೆ ಸೂಚಿಸುತ್ತೇನೆ.
•
•ಸರ್ವೇಶ್,
ಕೋನಸಾಗರ ಗ್ರಾಪಂ ಗ್ರೇಡ್-1 ಕಾರ್ಯದರ್ಶಿ.