ಕಡಬ: ದೇಶದ ಅಭಿವೃದ್ಧಿಯಲ್ಲಿ ಕ್ರೈಸ್ತ ಸಮುದಾಯದ ಪಾತ್ರ ಅತ್ಯಂತ ಮಹತ್ವದ್ದು. ಸೇವೆ, ಶಾಂತಿ ಹಾಗೂ ಸೌಹಾರ್ದ ಕ್ರೈಸ್ತರ ಮೂಲತಣ್ತೀಗಳೆಂದು ಸಂಸದೀಯ ಕಾರ್ಯದರ್ಶಿ (ಕಂದಾಯ ಇಲಾಖೆ) ಐವನ್ ಡಿ’ಸೋಜಾ ನುಡಿದರು.
ಮಂಗಳವಾರ ಪುತ್ತೂರು ಧರ್ಮ ಪ್ರಾಂತದ ಮಲಂಕರ ಸಿರಿಯನ್ ಕೆಥೋಲಿಕ್ ಧರ್ಮಸಭೆಯ ಅಧೀನದಲ್ಲಿರುವ ಕೋಡಿಂಬಾಳ ಸಂತ ಜಾರ್ಜ್ ಮಲಂಕರ ಕೆಥೋಲಿಕ್ ಚರ್ಚ್‌ನ ನೂತನ ಕಟ್ಟಡದ ಆಶೀರ್ವಚನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜಾತ್ಯತೀತ ಪರಂಪರೆ ಇರುವ ನಮ್ಮ ದೇಶದಲ್ಲಿ ಎಲ್ಲ ಜಾತಿ, ಪಂಥ, ಧರ್ಮಗಳ ಜನರು ಅನ್ಯೋನ್ಯವಾಗಿ ಬದುಕು ತ್ತಿರುವುದು ಇಡೀ ಜಗತ್ತಿಗೆ ಮಾದರಿ. ಈ ದೇಶದ ಸಂವಿಧಾನದಿಂದ ಜಾತ್ಯತೀತ ಕಲ್ಪನೆ ಉಳಿದು, ಅಭಿವೃದ್ಧಿಶೀಲ ರಾಷ್ಟ್ರವಾಗಿ ಮುಂದುವರಿಯಲು ಸಾಧ್ಯ. ನಮ್ಮಲ್ಲಿನ ಆರಾಧನಾ ಕೇಂದ್ರಗಳು ಶಾಂತಿ, ಸೌಹಾರ್ದಕ್ಕೆ ಪ್ರೇರಣೆಯಾಗಿ, ಸರಿದಾರಿ ತೋರಿಸಬೇಕು. ಶಿಕ್ಷಣ, ಆರೋಗ್ಯ, ಸಾಮಾಜಿಕ ಕ್ಷೇತ್ರಕ್ಕೆ ಕ್ರೈಸ್ತ ಸಮುದಾಯ ಮಾದರಿಯಾದ ಸೇವೆ ನೀಡಿದೆ ಎಂದರು.
ಬೆಸೇಲಿಯೋಸ್ ಕಾರ್ಡಿನಲ್ ಕ್ಲೀಮಿಸ್ ಕೆಥೋಲಿಕೋಸ್ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಧರ್ಮಪ್ರಾಂತದ ರೈ| ರೆ| ಡಾ| ಗೀವರ್ಗೀಸ್ ಮಾರ್ ಮಕ್ಕಾರಿಯೋಸ್ ಆಶೀರ್ವಚನ ನೀಡಿದರು. ಬೆಳ್ತಂಗಡಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಲಾರೆನ್ಸ್ ಮುಕ್ಕಝಿ ಸಂದೇಶ ನೀಡಿದರು. ಕೋಡಿಂಬಾಳ ರಹಮ್ಮಾನಿಯ ಜುಮಾ ಮಸೀದಿಯ ಖತೀಬ ಶಂಶುದ್ಧೀನ್ ಸಹದಿ ಶುಭ ಹಾರೈಸಿದರು. ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್, ತಾ.ಪಂ. ಸದಸ್ಯರಾದ ಫಝಲ್ ಕೋಡಿಂಬಾಳ, ಕೆ.ಟಿ. ವಲ್ಸಮ್ಮ, ಕೋಡಿಂಬಾಳ ಶ್ರೀ ಅಯ್ಯಪ್ಪ ಭಜನ ಮಂದಿರದ ಅಧ್ಯಕ್ಷ ವಸಂತ ಗೌಡ ಪಡೆಜ್ಜಾರ್ ಅತಿಥಿಗಳಾಗಿ ಆಗಮಿಸಿದ್ದರು.
ಕೋಡಿಂಬಾಳ ಸಂತ ಜಾರ್ಜ್ ಮಲಂಕರ ಕೆಥೋಲಿಕ್ ದೇವಾಲಯದ ಧರ್ಮಗುರು ವಂ| ಮಾಥ್ಯು ಕುರಿಯನ್ ಪಾಯಕ್ಕಪಾರ ಸ್ವಾಗತಿಸಿ, ಮನೋಜ್ ತೆಕ್ಕೆಪೂಕ್ಕಳಂ ವಂದಿಸಿದರು. ರೋಷನ್ ಕೆ.ಜೆ. ನಿರೂಪಿಸಿದರು.