ಉಪ್ಪಿನಂಗಡಿ: ಪುತ್ತೂರು- ಉಪ್ಪಿನಂಗಡಿ ರಸ್ತೆಯ ಕೊಡಿಂಬಾಡಿಯಲ್ಲಿ ಕಾಮಗಾರಿಗೆ ಅಗತ್ಯವಿರುವ ಭೂಮಿಯ ಒತ್ತುವರಿಯನ್ನು ತೆರವುಗೊಳಿಸಲು ಶಾಸಕಿ ಶಕುಂತಳಾ ಟಿ. ಶೆಟ್ಟಿ ತಹಶೀಲ್ದಾರ್‌ಗೆ ಸೂಚನೆ ನೀಡಿದರು.
ಇಲ್ಲಿನ ಸಂಗಮ ಕೃಪಾ ಸಭಾಂಗಣದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ನಾಗರಿಕರ ದೂರಿಗೆ ಸ್ಪಂದಿಸಿದ ಅವರು, ಕಾಮಗಾರಿ ಕಾನೂನು ಪ್ರಕಾರವೇ ನಡೆಯಬೇಕು. ಇಂದೇ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ತಹಶೀಲ್ದಾರ್ ಅವರಿಗೆ ನಿರ್ದೇಶನ ನೀಡಿದರು.
ಸಮುದಾಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿರುವ ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯ ನಿರ್ಮಾಣ ಕಾಮಗಾರಿ ಕಳಪೆ ಎಂದು ಆರೋಪ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಎಂಜಿನಿಯರಿಂಗ್ ವಿಭಾಗಕ್ಕೆ ಮಾಹಿತಿ ನೀಡಲಾಯಿತು.
ಇಚ್ಲಂಪಾಡಿ ಗ್ರಾಮದ ವ್ಯಾಪ್ತಿಯ ಸಮಸ್ಯೆಯ ಬಗ್ಗೆ ನಾಗರಿಕರಿಂದ ವಿಚಾರ ಪ್ರಸ್ತಾಪವಾದಾಗ, ಧ್ವನಿ ವರ್ಧಕದಲ್ಲಿ ಹಲವು ಬಾರಿ ಗ್ರಾಮಕರಣಿಕರನ್ನು ಕರೆಯಲಾಯಿತು. ಬಳಿಕ ಅವರು ಗೈರು ಹಾಜರಾಗಿದ್ದಾರೆ ಎಂದು ತಿಳಿಸಿದಾಗ ಶಾಸಕಿ, ಯಾವುದೇ ಅಧಿಕಾರಿಯ ನಿಯಂತ್ರಣಕ್ಕೆ ಸಿಗದ ಗ್ರಾಮಕರಣಿಕರೊಬ್ಬರು ಇದ್ದಾರೆ ಯಲ್ಲ? ಅವರೇನಾ ಎಂದು ಪ್ರಶ್ನಿಸಿದಾಗ ಉಪ ತಹಶೀಲ್ದಾರ್, “ಹೌದು’ ಎಂದು ಹೇಳಿದರು. ಮೇಲಧಿಕಾರಿ ಮತ್ತು ಜನಪ್ರತಿನಿಧಿಗಳನ್ನು ನಿರ್ಲಕ್ಷಿಸಿ, ಗೈರು ಹಾಜರಾಗಿರುವ ಅವರ ವಿರುದ್ಧ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.
ಹಿರೆಬಂಡಾಡಿಯಲ್ಲಿ 94ಸಿ ಯೋಜನೆಯಲ್ಲಿ 350 ಅರ್ಜಿದಾರರ ಪೈಕಿ 200 ಮಂದಿಗೆ ಮಾತ್ರ ಹಕ್ಕು ಪತ್ರ ನೀಡಲಾಗಿದೆ. ಉಳಿದ ಅರ್ಜಿಗಳೇಕೆ ತಿರಸ್ಕೃತಗೊಂಡಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿಗಳು, ಬೇರೆಡೆ ವಾಸ್ತವ್ಯವಿದ್ದು, ಸುಳ್ಳು ಮಾಹಿತಿ ನೀಡಿ ಸಲ್ಲಿಸಲಾದ ಅರ್ಜಿಯನ್ನು ತಿರಸ್ಕರಿಸಿ ತಹಶೀಲ್ದಾರ್ ಅವರಿಗೆ ಹಿಂತಿರುಗಿಸಲಾಗಿದೆ ಎಂದರು.ಹಿರೇಬಂಡಾಡಿ ಗ್ರಾಮದ ಅಗರಿಯಲ್ಲಿ ದಲಿತ ಕಾಲೋನಿಗೆ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸದಿರುವ ಕುರಿತು ಸಭೆಯಲ್ಲಿ ಪ್ರಸ್ತಾಪವಾದಾಗ, ಸೂಕ್ತ ಕ್ರಮಕೈಗೊಳ್ಳಲು ಶಾಸಕಿ ಆದೇಶಿಸಿದರು.
ಸಭೆಯಲ್ಲಿ ವಿವಿಧ ಯೋಜನೆಗಳ ಫಲಾ ನುಭವಿಗಳಿಗೆ ಹಕ್ಕು ಪತ್ರ, ಮಂಜೂರಾತಿ ಪತ್ರ ವಿತರಿಸಲಾಯಿತು. ಸಭೆಯಲ್ಲಿ ಪುತ್ತೂರು ತಹಶೀಲ್ದಾರ್ ಅನಂತ ಶಂಕರ, ತಾಲೂಕು ಪಂಚಾಯತ್ ಸದಸ್ಯೆ ಸುಜಾತಾ ಕೃಷ್ಣ ಆಚಾರ್ಯ, ವಲ್ಸಮ್ಮ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಹಿಮಾನ್, ನೆಕ್ಕಿಲಾಡಿ ಗ್ರಾಮ ಪಂಚಾ ಯತ್ ಅಧ್ಯಕ್ಷೆ ರತಿ ಎಸ್. ನಾಯ್ಕ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.