Advertisement

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಾದಯಾತ್ರೆ

05:02 PM Feb 24, 2021 | Team Udayavani |

ಜಗಳೂರು: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೆ ನಿರಂತರ ಹೋರಾಟ ಹಾಗೂ ಒತ್ತಡ ಅನಿವಾರ್ಯ. ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಹರಿಹರದಿಂದ ಬೆಂಗಳೂರು ವಿಧಾನ ಸೌಧದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯೂರು ಕೋಡಿಮಠದ ಶ್ರೀ ಷಡಕ್ಷರಮುನಿ ಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ಡಾ| ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾದಿಗ ಸಮುದಾಯದ ನೂತನ ಗ್ರಾಪಂ ಸದಸ್ಯರಿಗೆ ಅಭಿನಂದನೆ ಹಾಗೂ ಪಾದಯಾತ್ರೆ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಸಂವಿಧಾನದ ಆಶಯದಂತೆ ಮೀಸಲಾತಿ ಕಲ್ಪಿಸದೇ ಇರುವುದರಿಂದ ನಮ್ಮ ಸಮಾಜ ಸೌಲಭ್ಯ ವಂಚಿತವಾಗಿದೆ. ಮಾದಿಗ ಸಮುದಾಯದ ಜೊತೆಗೆ ಇನ್ನೂ 49 ಸೋದರ ಸಮುದಾಯಗಳಿದ್ದು, ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಹಿನ್ನಡೆ ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಒಳಮೀಸಲಾತಿಗಾಗಿ ಕಳೆದ 30 ವರ್ಷಗಳಿಂದ ಆಗ್ರಹಿಸುತ್ತಲೇ ಇದ್ದೇವೆ. ಇದುವರೆಗೂ ಆಡಳಿತ ನಡೆಸಿದ ಸರ್ಕಾರಗಳು ನ್ಯಾಯ ಒದಗಿಸಿಲ್ಲ. ಕೇವಲ ಬೆಣ್ಣೆ ಸವರುವ ಕೆಲಸ ಮಾಡಿವೆ ಎಂಬುದನ್ನು ಸಮುದಾಯದವರು ಅರ್ಥ ಮಾಡಿಕೊಳ್ಳಬೇಕಾದ ಕಾಲ ಬಂದಿದೆ. ಹೋರಾಟವಿಲ್ಲದೆ ನಮ್ಮ ಸಮಾಜಕ್ಕೆ ಅಗತ್ಯ ಮೀಸಲಾತಿ ದೊರಕದು ಎಂಬುದನ್ನು ಮನಗಂಡು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.

ನೂತನವಾಗಿ ಆಯ್ಕೆಯಾಗಿರುವ ಗ್ರಾಪಂ ಸದಸ್ಯರು ತಮ್ಮ ಗ್ರಾಮಗಳಲ್ಲಿ ಎಲ್ಲರ ವಿಶ್ವಾಸ ಗಳಿಸುವುದರ ಜೊತೆಗೆ ಸಮಾಜದ ಸಂಘಟನೆಗೆ ಒತ್ತು ನೀಡಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಬೇಕು. ತಾಲೂಕಿನಲ್ಲಿ ಮಾದಿಗ ಸಮುದಾಯದ 47  ಗ್ರಾಪಂ ಸದಸ್ಯರು ಆಯ್ಕೆಯಾಗಿರುವುದು ಸಂತಸದ ಸಂಗತಿಯಾಗಿದ್ದು,  ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಗುರುತಿಸಿಕೊಳ್ಳಬೇಕು. ಮಾ. 25 ರಂದು ಹರಿಹರದಲ್ಲಿ ಪ್ರಾರಂಭವಾಗುವ ಪಾದಯಾತ್ರೆಗೆ ತಾಲೂಕಿನಿಂದ ಕನಿಷ್ಠ 10 ಸಾವಿರ ಜನರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.

ಐಮಂಗಲದ ಶ್ರೀ ಹರಳಯ್ಯ ಸ್ವಾಮೀಜಿ ಮಾತನಾಡಿ, ಪ್ರಸ್ತುತ ವಿದ್ಯಮಾನದಲ್ಲಿ ಸಮಾಜದ ಪರಿಸ್ಥಿತಿ ಚಿಂತಾಜನಕವಾಗಿದೆ. ಕೆಲವು ಸ್ಪÅಶ್ಯ ಸಮುದಾಯದವರು ನಮ್ಮ ಸವಲತ್ತುಗಳನ್ನು ಪಡೆದು  ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಬಡತನ, ನಿರುದ್ಯೋಗಕ್ಕೆ ಕಡಿವಾಣ ಹಾಕಲು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕಿದೆ. ಶೇ. 3 ರಷ್ಟು ಜನಸಂಖ್ಯೆ ಹೊಂದಿದವರಿಗೆ ಯಾವುದೇ ಹೋರಾಟ, ಮನವಿ, ಒತ್ತಡ ಇಲ್ಲದಿದ್ದರೂ ಶೇ. 10 ರಷ್ಟು ಮೀಸಲಾತಿ ಕಲ್ಪಿಸುವ ಸರ್ಕಾರಗಳು 30 ವರ್ಷಗಳಿಂದ ನಿರಂತರವಾಗಿ ಒಳ ಮೀಸಲಾತಿ ಜಾರಿಗೆ ಆಗ್ರಹಿಸುತ್ತಿದ್ದರೂ ಅ ಧಿಕಾರದ ಚುಕ್ಕಾಣಿ ಹಿಡಿದವರು ಜಾಣ ಕುರುಡು ಪ್ರದರ್ಶಿಸುತ್ತಾ ಬಂದಿದ್ದಾರೆ. ಈಗಲಾದರೂ ಜಾಗೃತಗೊಂಡು ಸಂಘಟನೆ, ಹೋರಾಟದ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ ಎಂದರು.

Advertisement

ಈ ಸಂದರ್ಭದಲ್ಲಿ ಕಲಘಟಗಿ ಮಠದ ನಂದಾ ಮಾತಾಜಿ, ಸಮಾಜದ ಮುಖಂಡರಾದ ಜಿ.ಎಚ್‌. ಶಂಭುಲಿಂಗಪ್ಪ, ಹನುಮಂತಾಪುರ ತಿಪ್ಪೇಸ್ವಾಮಿ, ಹಟ್ಟಿ ತಿಪ್ಪೇಸ್ವಾಮಿ, ನೌಕರರ ಸಂಘದ ಅಧ್ಯಕ್ಷ ಕೋಟಿರಾಜ್‌, ಕಾರ್ಯದರ್ಶಿ ಪ್ರಕಾಶ್‌, ಗ್ಯಾಸ್‌ ಓಬಣ್ಣ, ಪಲ್ಲಾಗಟ್ಟೆ ಶೇಖರಪ್ಪ, ಆದಿಜಾಂಬವ ವಿದ್ಯಾರ್ಥಿ ನಿಲಯದ ಕಾರ್ಯದರ್ಶಿ ಚಂದ್ರಪ್ಪ, ದಸಂಸ ಸಂಚಾಲಕ ಸತೀಶ್‌ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next