ಸಾಗರ: ಈಗಿರುವ ಎಲ್ಲಾ ರಾಜಕೀಯ ಪಕ್ಷಗಳೂ ಬಂಡವಾಳಶಾಹಿಗಳ ಪರವಿರುವ ಸರ್ಕಾರವನ್ನು ಮಾಡಿಕೊಂಡು ಅಧಿಕಾರ ನಡೆಸುತ್ತಿವೆ. ಇಂತಹ ರಾಜಕೀಯ ಪಕ್ಷಗಳಿಂದ ರೈತರ ಪರ ತೀರ್ಮಾನಗಳನ್ನು ನಿರೀಕ್ಷಿಸುವುದು ಸಾಧ್ಯವೇ ಇಲ್ಲ. ರೈತರ ಉಳುವಿಗಾಗಿ ಉಳುಮೆಯ ಜತೆ ರಾಜಕಾರಣ ಮಾಡುವ ಸಮಯ ಬಂದಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಪ್ರತಿಪಾದಿಸಿದರು.
ಅವರು ತಾಳಗುಪ್ಪದ ಕದಂಬೇಶ್ವರ ಸಭಾಭವನದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಹಮ್ಮಿಕೊಂಡಿದ್ದ ರೈತ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ, ದೇಶದಲ್ಲಿ ಆಹಾರ ಧಾನ್ಯಗಳ ಹೊರತಾಗಿ ಮಿಕ್ಕ ಎಲ್ಲಾ ಬಂಡವಾಳಶಾಹಿಗಳ ಉತ್ಪನ್ನಗಳು ದಿನದಿಂದ ದಿನಕ್ಕೆ ಬೆಲೆಏರಿಕೆಯನ್ನು ಕಾಣುತ್ತಿವೆ. ಆದರೆ ರೈತ ಬೆಳೆದ ಬೆಳೆಗಳಿಗೆ ಕನಿಷ್ಠ ಬೆಲೆ ನಿಗದಿಪಡಿಸದೆ, ಅದನ್ನು ಜಾರಿಗೆ ತರದೆ ರೈತರನ್ನು ಕನಿಷ್ಠರನ್ನಾಗಿ ಮಾಡಲಾಗಿದೆ. ಈ ಅನಿಷ್ಠಗಳು ತೊರೆಯಲು ನಮ್ಮ ಸಂಕಷ್ಟಕ್ಕೆ ನಾವೇ ಪರಿಹಾರ ಹುಡುಕಲು ರಾಜಕೀಯ ಬಲವನ್ನು ಗಳಿಸಬೇಕಿದೆ ಎಂದರು.
ಈಗಿನ ಬಿಜೆಪಿ ಸರ್ಕಾರಕ್ಕೆ ರೈತರು ಭೂಮಿಯನ್ನು ಇಟ್ಟುಕೊಳ್ಳುವುದು ಬೇಕಿಲ್ಲ. ರೈತ ಕೃಷಿಯಿಂದ ವಿಮುಖನಾಗುವುದು ಅದಕ್ಕೆ ಬೇಕಿದೆ. ಆ ಕಾರಣದಿಂದ 61 ರ ಭೂ ಸುಧಾರಣಾ ಕಾನೂನಿಗೆ ತಿದ್ದುಪಡಿ ತಂದು ಕೃಷಿಕರಲ್ಲದವರೂ ಭೂಮಿ ಹೊಂದಬಹುದು ಎಂಬ ಕಾನೂನು ತಿದ್ದುಪಡಿ ಮಾಡಿದೆ. ಇದು ಮೇಲ್ನೋಟಕ್ಕೆ ಹಿತ ಎಂದೆನಿಸಿದರೂ ಆಳವಾಗಿ ಇದರಲ್ಲಿ ರೈತರ ವಿರೋಧಿ ಹುನ್ನಾರ ಅಡಗಿದೆ. ಈ ಮೂಲಕ ರೈತ ಭೂಮಿಯನ್ನು ಮಾರಾಟ ಮಾಡಿ ಹೋದರೆ ಕಂಪನಿಗಳು ಬಂದು ಕೃಷಿಯನ್ನಾರಂಭಿಸಿ ಶ್ರೀಮಂತರ ಹೊಟ್ಟೆ ತುಂಬಿಸುತ್ತದೆ ಎಂದು ಆರೋಪಿಸಿದರು.
ಆ ಕಾರಣದಿಂದ ಇದೇ ತಿಂಗಳ 21 ರಂದು ಬೆಂಗಳೂರಿನ ನ್ಯಾಷನಲ್ ಕ್ರೀಡಾಂಗಣದಲ್ಲಿ ಬೃಹತ್ ರೈತರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಅಷ್ಟರೊಳಗೆ ಮುಖ್ಯಮಂತ್ರಿಗಳು ಭೂ ಸುಧಾರಣಾ ಕಾನೂನನ್ನು ವಾಪಾಸು ಪಡೆಯಬೇಕು, ಇಲ್ಲದಿದ್ದರೆ ಅಂದು ಐತಿಹಾಸಿಕ ತೀರ್ಮಾನವನ್ನು ರೈತರು ಕೈಗೊಳ್ಳುತ್ತಾರೆ. ಪರ್ಯಾಯ ರಾಜಕೀಯ ಶಕ್ತಿ ಹುಟ್ಟುತ್ತದೆ. ಪ್ರತಿಶತ 60 ಜನಸಂಖ್ಯೆಯ ರೈತರು ಮುಂದಿನ ವರ್ಷದಲ್ಲಿ 170 ಕ್ಷೇತ್ರಗಳಲ್ಲಿ ಗೆಲ್ಲುತ್ತಾರೆ. ಮುಂದಿನ ತಲೆಮಾರಿಗೆ ರೈತಾಪಿ ಒಕ್ಕಲುತನ ಉಳಿಯಬೇಕು ಎಂದರೆ ರೈತರಾದ ನಮ್ಮ ಜೀವನವನ್ನು ನಾವೇ ಸುಭದ್ರ ಮಾಡಿಕೊಳ್ಳಬೇಕು. ಹಾಗಾಗಿ ಎಲ್ಲಾ ರೈತರು ಏ. 21 ಕ್ಕೆ ಬೆಂಗಳೂರಿಗೆ ಬರಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಸಾಗರ ತಾಲೂಕು ರೈತ ಸಂಘದ ಅಧ್ಯಕ್ಷ ಕನ್ನಪ್ಪ, ರೈತ ಸಂಘದ ಮುಖಂಡರಾದ ಗೂರ್ಲುಕೆರೆ ಚಂದ್ರಶೇಖರ್, ರಾಘವೇಂದ್ರ, ಎಂ.ಕೆ. ಮಂಜುನಾಥ, ಮಾಲತೇಶ ಪೂಜಾರ್, ನಾಗರಾಜ್, ವೀರಭದ್ರನಾಯ್ಕ್, ಈಶ್ವರಪ್ಪ ಸೊರಬ, ಇಂಧೂದರ, ಸುನೀತಾ, ಷಫಿಉಲ್ಲಾ, ಭಕ್ತರಹಳ್ಳಿ ಭೈರೇಗೌಡ್ರು, ಜಾಕೀರ್ ಮತ್ತಿತರರು ಇದ್ದರು.