Advertisement

ಕೋಡಿ ಸೀವಾಕ್‌ಗೆ ನಾವೀನ್ಯದ ಸ್ಪರ್ಶ

12:52 PM Oct 25, 2020 | Suhan S |

ಕುಂದಾಪುರ, ಅ. 24: ಕೋಡಿ ಕಡಲತೀರದಲ್ಲಿ ಬ್ರೇಕ್‌ವಾಟರ್‌ ಕಾಮಗಾರಿಯನ್ನು ಸೀವಾಕ್‌ ಮಾದರಿಯಲ್ಲಿ ಮಾಡಿದ ಕಾರಣ ಸಮುದ್ರದ ದಡದಲ್ಲಿ ಜನ ಸೇರಿ ಸಂಜೆಯ ಸೊಬಗನ್ನು ಸವಿಯಲು ಅನುಕೂಲವಾಗಿದೆ. ಈಗ ಇನ್ನಷ್ಟು ಪರಿಣಾಮಕಾರಿ ಬದಲಾವಣೆಗಳನ್ನು ಮಾಡಲಾಗಿದ್ದು ಬೀಚ್‌ಗೆ ಸ್ವತ್ಛತೆ ಹಾಗೂ ಬೆಳಕಿನ ನಾವೀನ್ಯದ  ಸ್ಪರ್ಶ ನೀಡಲಾಗಿದೆ. ಕೋಡಿ ಸೀವಾಕ್‌ ಮೂಲಕ ಗಂಗೊಳ್ಳಿ ಸೀವಾಕ್‌ನ್ನು ಕೂಡ ನೋಡಬಹುದು.

Advertisement

 ಸ್ವಚ್ಛತೆ ಯಂತ್ರ :  ಸಹಾಯಕ ಕಮಿಷನರ್‌ ಅಧ್ಯಕ್ಷತೆಯಲ್ಲಿ ಬೀಚ್‌ ಸಮಿತಿ ರಚನೆಯಾಗಲಿದ್ದು ಬಳಿಕ ಇಲ್ಲಿಗೆ ಸ್ವಚ್ಛತೆ ಯಂತ್ರ ಆಗಮಿಸಲಿದೆ. ಈಗಾಗಲೇ ಮಲ್ಪೆಯಲ್ಲಿ ಉಪಯೋಗಶೂನ್ಯವಾಗಿರುವ ಯಂತ್ರವನ್ನು ಇಲ್ಲಿಗೆ ನೀಡುವಂತೆ ಪುರಸಭೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ.

ಈ ಹಿಂದಿನ ಡಿಸಿ ಪ್ರಿಯಾಂಕಾ ಮೇರಿ ಅವರೇ ಯಂತ್ರ ನೀಡುವುದಾಗಿ ಹೇಳಿದ್ದರೂ ಈವರೆಗೂ ಈ ಪ್ರಕ್ರಿಯೆ ಮುಂದುವರಿದಿಲ್ಲ. ಈಗಿನ ಜಿಲ್ಲಾಧಿಕಾರಿ  ಜಿ. ಜಗದೀಶ್‌ ಅವರು ಕೂಡ ಇಲ್ಲಿನ ಪ್ರವಾಸೋದ್ಯಮ, ಬೀಚ್‌ನ ಅಭಿವೃದ್ಧಿ ಕುರಿತು ಆಸ್ಥೆ ವಹಿಸಿದ್ದು ಎರಡು ಬಾರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಸ್ತಾರದ ಬೀಚ್‌ :  ಅಭಿವೃದ್ಧಿ ಕಾರ್ಯಕ್ರಮಗಳು ನಡೆದಿದ್ದೇ ಆದಲ್ಲಿ ಅತಿ ಉದ್ದ ವ್ಯಾಪ್ತಿ ಹೊಂದಿದ ಬೀಚ್‌ ಎಂಬ ಹೆಗ್ಗಳಿಕೆಗೆ ಕೋಡಿ ಬೀಚ್‌ ಪಾತ್ರವಾಗಲಿದೆ. ಏಕೆಂದರೆ ಸರಿಸುಮಾರು 3.5 ಕಿ.ಮೀ. ದೂರದಲ್ಲಿ ಬೀಚ್‌ ವ್ಯಾಪಿಸಿಕೊಂಡಿದೆ. ಆದ್ದರಿಂದ ಯಾವುದೇ ಪ್ರದೇಶದಲ್ಲೂ ಸಮುದ್ರವಿಹಾರ ನಡೆಸಬಹುದಾಗಿದೆ. ಇದರೊಂದಿಗೆ ಇಲ್ಲಿ ಬ್ರೇಕ್‌ ವಾಟರ್‌ ಕಾಮಗಾರಿ ನಡೆದಂತೆಯೇ ಇಲ್ಲಿಗೆ ಸಂಜೆ ವೇಳೆಗೆ ಸೂರ್ಯಾಸ್ತ ವೀಕ್ಷಣೆಗೆ ಜನ ಬರಲಾರಂಭಿಸಿದ್ದಾರೆ. ವಾರಾಂತ್ಯವೂ ಇಲ್ಲಿ ಜನಸಂದಣಿ ಹೆಚ್ಚಿದೆ. ಸಂಸಾರ ಸಹಿತರಾಗಿ, ಮಕ್ಕಳು, ಸ್ನೇಹಿತರ ಜತೆಗೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದರಿಂದ ಇಲ್ಲಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಏರುತ್ತಿರುವಂತೆಯೇ ಹೊಟೇಲ್‌, ಅಂಗಡಿ, ಮಳಿಗೆ ಮೊದಲಾದವುಗಳು ಸ್ಥಾಪನೆಯಾಗಲು ಅವಕಾಶ ಇದೆ. ಜತೆಗೆ ರಿಕ್ಷಾ ಹಾಗೂ ಇತರ ಪ್ರವಾಸಿ ವಾಹನಗಳಿಗೂ ಬಾಡಿಗೆ ದೊರೆಯಲಿದೆ.

ಮೂಲಸೌಕರ್ಯ :  ಪ್ರವಾಸಿಗರಿಗೆ ಮೂಲ ಸೌಕರ್ಯ ಗಳನ್ನು ತುರ್ತಾಗಿ ಕಲ್ಪಿಸಬೇಕಾದ ಅಗತ್ಯವಿದೆ. ವಿಶ್ರಾಂತಿಗೆ ಕುಳಿತು ಕೊಳ್ಳುವ ಬೆಂಚ್‌ಗಳ ವ್ಯವಸ್ಥೆ, ಬಟ್ಟೆ ಬದಲಾಯಿಸಲು, ಸಮುದ್ರ ಸ್ನಾನದ ಬಳಿಕ ಸ್ನಾನದ ವ್ಯವಸ್ಥೆ ಮಾಡಲು, ವಾಹನ ನಿಲುಗಡೆಗೆ, ಬೆಳಕಿಗೆ ದೀಪ ಅಳವಡಿಕೆ, ಕುಡಿಯುವ ನೀರು, ಶೌಚಾಲಯ ಸಹಿತ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಬೇಕಿದೆ. ಇದಕ್ಕಾಗಿ ಪುರಸಭೆ ಲೈಟ್‌ಹೌಸ್‌ ಪಕ್ಕದಲ್ಲಿ ಸುಮಾರು ಅರ್ಧ ಎಕರೆ ಜಾಗ ಮೀಸಲಿಡಲು ನಿರ್ಧರಿಸಿದೆ. ಅಲ್ಲಿ ಸ್ನಾನಗೃಹ, ಶೌಚಾಲಯದ ನಿರ್ಮಾಣ ನಡೆಯಲಿದೆ.

Advertisement

ಸ್ವಚ್ಛತೆ :  ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್ ವತಿಯಿಂದ ಸ್ವಯಂಸೇವಕರು ಸತತ 6 ವಾರಗಳಿಂದ ಸೀವಾಕ್‌ ಸಮೀಪ, ಲೈಟ್‌ಹೌಸ್‌ ಸಮೀಪದ ಕಡಲತೀರದಲ್ಲಿ ಸ್ವಚ್ಛತೆ ಕಾರ್ಯ ನಡೆಸುತ್ತಿದ್ದಾರೆ. ಕೆಲವೇ ಗಂಟೆಗಳಲ್ಲಿ 3 ಟನ್‌ ಕಸ ಸಂಗ್ರಹವಾದುದೂ ಇದೆ. ಮಳೆಗಾಲದಲ್ಲಿ ಸಮುದ್ರದ ಮೂಲಕ ಬಂದ ಕಸದ ರಾಶಿ ಕಡಲತಡಿಯಲ್ಲಿ  ಸಂಗ್ರಹವಾಗುತ್ತದೆ. ಇದನ್ನು ತೆಗೆದಾಗ ಅತ್ಯಂತ ಸುಂದರ ಬೀಚ್‌ ಆಗಿ ಇದು ಪರಿವರ್ತನೆಯಾಗಿ ಕಂಗೊಳಿಸುತ್ತದೆ.

ಅನುದಾನ ಇದೆ  :  ಹೈಮಾಸ್ಟ್‌ ದೀಪ ಹಾಗೂ ಸೀವಾಕ್‌ಗೆ ದೀಪ ಅಳವಡಿಕೆಗೆ ಇಲಾಖೆಯಿಂದ ಅನುದಾನ ನೀಡಿ ಕಾಮಗಾರಿ ಮಾಡಲು ಬೇಡಿಕೆ ಬಂದಿದ್ದು ಲೈಟ್‌ ಅಳವಡಿಸಲಾಗಿದೆ. ಹೈ ಮಾಸ್ಟ್‌ ದೀಪ ಅಳವಡಿಸಲು ಸೂಚಿಸಲಾಗಿದೆ. –ಕೋಟ ಶ್ರೀನಿವಾಸ ಪೂಜಾರಿ,  ಬಂದರು ಹಾಗೂ ಮೀನುಗಾರಿಕಾ ಸಚಿವರು

ಮುತುವರ್ಜಿಯಿದೆ :  ಪ್ರವಾಸೋದ್ಯಮ ಇಲಾಖೆ ಜತೆಗೆ ಪುರಸಭೆ ಮುತುವರ್ಜಿ ವಹಿಸಿದ್ದು ಇಲ್ಲೊಂದು ಪ್ರವಾಸೋದ್ಯಮ ತಾಣದ ಸೃಷ್ಟಿಗೆ ಪ್ರಯತ್ನಿಸುತ್ತಿದೆ. ಡಿಸಿ, ಎಸಿ ಅವರು ಕೂಡಿ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದಾರೆ. ಸ್ವತ್ಛತಾ ಯಂತ್ರ ತರುವ ಕುರಿತೂ ಡಿಸಿ ಮೂಲಕ ಮಾತುಕತೆ ನಡೆದಿದೆ. -ಗೋಪಾಲಕೃಷ್ಣ ಶೆಟ್ಟಿ,

ಸ್ವಚ್ಛತೆಯೂ ಇರಲಿ :  ಪ್ರವಾಸೋದ್ಯಮಕ್ಕೆ ನೆರವಾಗುವ ನಿಟ್ಟಿನಲ್ಲಿ ಬೀಚ್‌ ಅಭಿವೃದ್ಧಿ ಮಾಡಲಿ. ಆದರೆ ಅದೇ ವೇಳೆ ಸ್ವತ್ಛತೆಗೂ ಆದ್ಯತೆ ನೀಡಬೇಕು. ಪ್ರವಾಸಿಗರಿಗೆ, ಇಲ್ಲಿ ಹಾಕಬಹುದಾದ ಅಂಗಡಿಯವರಿಗೆ ಸ್ವತ್ಛತೆಯ ಕಡ್ಡಾಯ ನಿರ್ವಹಣೆಗೆ ಸೂಚನೆ ಬೇಕು. —ಗಣೇಶ್‌ ಪುತ್ರನ್‌ ಗೋಪಾಡಿ, ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್‌ನ  ಸ್ವಯಂಸೇವಕರು ಮುಖ್ಯಾಧಿಕಾರಿ, ಪುರಸಭೆ

 

 –ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next