Advertisement
ಈ ನಿಟ್ಟಿನಲ್ಲಿ ಕುಂದಾಪುರ ಪುರಸಭೆ ತುಸು ಮುನ್ನೆಚ್ಚರಿಕೆಯಾಗಿ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಸೇರುವಲ್ಲಿ ಭದ್ರತೆಗೆ ಆದ್ಯತೆ ನೀಡಿದ್ದಾರೆ. ದಿನವೊಂದರಲ್ಲಿ 10 ಸಾವಿರ ಪ್ರವಾಸಿಗರು ಸೇರಿದ ಇತಿಹಾಸವುಳ್ಳ ಕೋಡಿ ಸೀ ವಾಕ್‌ನಲ್ಲಿ ಬೆಳಕಿನ ವ್ಯವಸ್ಥೆ, ಸಿಸಿ ಕೆಮರಾ, ಸಂಚಾರಿ ಶೌಚಾಲಯ ಅಳವಡಿಸಲಾಗಿದೆ. ಇನ್ನಷ್ಟು ನಡೆಯಲಿದೆ. ಪ್ರವಾಸಿಗರಿಗೆ ಮೂಲ ಸೌಕರ್ಯ ಕಲ್ಪಿಸಲು ಪುರಸಭೆ ಕ್ರಮಕೈಗೊಂಡಿದೆ.
Related Articles
Advertisement
ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ವತಿಯಿಂದ ಸ್ವಯಂಸೇವಕರು ಸತತ 100 ವಾರಗಳಿಂದ ಸೀವಾಕ್ ಸಮೀಪ, ಲೈಟ್ ಹೌಸ್ ಸಮೀಪದ ಕಡಲತೀರದಲ್ಲಿ ಸ್ವಚ್ಛತೆ ಕಾರ್ಯ ನಡೆಸುತ್ತಿದ್ದಾರೆ. ಕೆಲವೇ ಗಂಟೆಗಳಲ್ಲಿ 3 ಟನ್ ಕಸ ಸಂಗ್ರಹವಾದುದೂ ಇದೆ. ಮಳೆಗಾಲದಲ್ಲಿ ಸಮುದ್ರದ ಮೂಲಕ ಬಂದ ಕಸದ ರಾಶಿ ಕಡಲತಡಿಯಲ್ಲಿ ಸಂಗ್ರಹವಾಗುತ್ತದೆ. ಇದನ್ನು ತೆಗೆದಾಗ ಅತ್ಯಂತ ಸುಂದರ ಬೀಚ್ ಆಗಿ ಇದು ಪರಿವರ್ತನೆಯಾಗಿ ಕಂಗೊಳಿಸುತ್ತದೆ.
ಉದ್ದನೆಯ ಕಡಲತಡಿ:
ಅತಿ ಉದ್ದ ವ್ಯಾಪ್ತಿ ಹೊಂದಿದ ಬೀಚ್ ಎಂಬ ಹೆಗ್ಗಳಿಕೆಗೆ ಕೋಡಿ ಬೀಚ್ ಪಾತ್ರವಾಗಿದೆ. ಸರಿಸುಮಾರು 3.5 ಕಿ.ಮೀ. ದೂರದಲ್ಲಿ ಬೀಚ್ ಹರಡಿಕೊಂಡಿದೆ. ಜನಸಂದಣಿ ಹೆಚ್ಚಿದ್ದು ಪ್ರವಾಸೋದ್ಯಮದ ದೃಷ್ಟಿಯಲ್ಲಿ ಉತ್ತಮ ಬೆಳವಣಿಗೆ. ಪ್ರವಾಸಿಗರ ಸಂಖ್ಯೆ ಏರುತ್ತಿರುವಂತೆಯೇ ಹೊಟೇಲ್, ಅಂಗಡಿ, ಮಳಿಗೆ ಸ್ಥಾಪನೆಗೆ ಅವಕಾಶ ಇದೆ. ರಿಕ್ಷಾ, ಪ್ರವಾಸಿ ವಾಹನಗಳಿಗೂ ಬಾಡಿಗೆ ದೊರೆಯಲಿದೆ. ಆಗಮಿಸಿದ ಪ್ರವಾಸಿಗರು ಸ್ವತ್ಛತೆ ಕಡೆಗೆ ಗಮನ ಹರಿಸಬೇಕಿದೆ.
ಸುದಿನ ವರದಿ:
ಕೋಡಿ ಕಡಲತಡಿಯ ಸೀವಾಕ್‌ನಲ್ಲಿ ಆಗಬೇಕಾದ ಅಭಿವೃದ್ಧಿ ಕಾಮಗಾರಿ, ಬೆಳಕಿನ ವ್ಯವಸ್ಥೆ ಇತ್ಯಾದಿ ಕುರಿತು “ಉದಯವಾಣಿ’ “ಸುದಿನ’ ವರದಿಗಳನ್ನು ಪ್ರಕಟಿಸಿದೆ. ಪುರಸಭೆ ಆಡಳಿತ ಇವುಗಳಿಗೆ ಸ್ಪಂದಿಸಿ ಜನೋಪಯೋಗಿ ಕಾರ್ಯ ನಡೆಸಿದೆ.
ಸಿಸಿ ಕೆಮರಾ ಅಳವಡಿಕೆ :
ಈಗ 5 ಸಿಸಿ ಕೆಮರಾಗಳನ್ನು ಅಳವಡಿಸ ಲಾಗಿದೆ. ಸೈನ್ ಇನ್‌ಸೆಕ್ಯುರಿಟಿ ಸಿಸ್ಟಂ ಮೂಲಕ ಸಿಸಿ ಕೆಮರಾ ಅಳವಡಿಸಲಾಗಿದ್ದು ಇದರ ಚಿತ್ರಣ ಪೊಲೀಸ್ ಠಾಣೆ ಹಾಗೂ ಸನ್ ಇನ್ ಸಂಸ್ಥೆಯಲ್ಲಿ ದೊರೆಯಲಿದೆ. ಈ ಮೂಲಕ ಪೊಲೀಸ್ ಕಣ್ಗಾವಲು ಕಲ್ಪಿಸಿದಂತಾಗಿದೆ. ಕೋಡಿ ಅಷ್ಟೇ ಅಲ್ಲದೆ ನಗರದ ಇತರೆಡೆ ಫೆರ್ರಿ ಪಾರ್ಕ್, ಪದೇ ಪದೇ ಸೌಹಾರ್ದ ಕದಡುವ ಸಂಘರ್ಷ ನಡೆಯುತ್ತಿದ್ದ ಜಾಗವಾದ ಕೋಡಿ, ಚರ್ಚ್ ರೋಡ್ ಕೋಡಿ ಸಂಪರ್ಕಿಸುವ ಸೇತುವೆ, ಚಕ್ರಮ್ಮ ದೇವಸ್ಥಾನ ಮೊದಲಾದೆಡೆಯೂ ಪುರಸಭೆ ವತಿಯಿಂದ ಸಿಸಿ ಕೆಮರಾ ಹಾಕಿ ನಿರ್ವಹಣೆ ಶುಲ್ಕ ಭರಿಸಲಾಗುತ್ತಿದೆ.
ಬೆಳಕಿನ ವ್ಯವಸ್ಥೆ: ರಂಗೇರಿದ ಕಡಲ ತೀರ :
ಸೀವಾಕ್‌ಗೆ ಕೋವಿಡ್ ಸಂಕಷ್ಟದಲ್ಲೂ ದೊಡ್ಡ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ. ಸಂಜೆಯ ವೇಳೆ ಕತ್ತಲು ಆವರಿಸಿ ಅವಘಡಗಳಾಗದಂತೆ, ಆಸ್ವಾದನೆಗೆ ಹೆಚ್ಚು ಸಮಯ ದೊರೆಯುವಂತೆ ಮೀನುಗಾರಿಕೆ ಇಲಾಖೆ ಮೂಲಕ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಮೂಲಕ ಲೈಟಿಂಗ್ ವ್ಯವಸ್ಥೆ ಮಾಡಿದ್ದರು. ಇದರ ಹಣ ಪಾವತಿ ಸಹಿತ ನಿರ್ವಹಣೆಯನ್ನು ಪುರಸಭೆ ಮಾಡುತ್ತಿದೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಹೆಚ್ಚುವರಿ ಲೈಟ್, ಹೈ ಮಾಸ್ಟ್ ಅಳವಡಿಕೆಗೂ ಮೀನುಗಾರಿಕಾ ಇಲಾಖೆಯಿಂದ ಅನುದಾನ ನೀಡುವ ಭರವಸೆಯಿತ್ತಿದ್ದರು. ಬೆಳಕಿನ ವ್ಯವಸ್ಥೆ ಮಾಡಿದ ಕಾರಣ ಸಮುದ್ರತೀರ ರಂಗೇರಿದೆ.
ಸಿಸಿ ಕೆಮರಾ ಅಳವಡಿಸಲಾಗಿದ್ದು ಪೊಲೀಸ್ ಇಲಾಖೆ ಹಾಗೂ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆ ಇದನ್ನು ನಿರ್ವಹಿಸುತ್ತಿದೆ. ಮೀನುಗಾರಿಕೆ ಇಲಾಖೆ ಲೈಟ್ ಅಳವಡಿಸಿದೆ. ಪುರಸಭೆ ಸಿಸಿ ಕೆಮರಾ ಹಾಗೂ ಲೈಟಿಂಗ್‌ನ ವೆಚ್ಚ ಭರಿಸುತ್ತಿದೆ. ಸಂಚಾರಿ ಶೌಚಾಲಯ ಇಡಲಾಗಿದೆ. ಶೌಚಾಲಯ, ಸ್ನಾನಗೃಹ, ಪೊಲೀಸ್ ಚೌಕಿ ನಿರ್ಮಾಣವಾಗಲಿದೆ. -ಗೋಪಾಲಕೃಷ್ಣ ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ
ಕೋಡಿ ಕಡಲತಡಿಯಲ್ಲಿ ಸುರಕ್ಷೆ , ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಇನ್ನಷ್ಟು ಅಭಿವೃದ್ಧಿ ಕೆಲಸ ನಡೆಯಬೇಕಿದೆ. -ವೀಣಾ ಭಾಸ್ಕರ ಮೆಂಡನ್, ಅಧ್ಯಕ್ಷರು, ಪುರಸಭೆ