Advertisement
ಶ್ರೀ ಕೋಟಿಲಿಂಗೇಶ್ವರ ದೇವರ ರಥೋತ್ಸವ ಕರಾವಳಿ ಕರ್ನಾಟಕದ ರಥೋತ್ಸವಗಳಲ್ಲಿ ಹಿರಿದಾದುದೆಂದು ಪ್ರಸಿದ್ಧಿ. ಏಳು ದಿನಗಳ ಕಾಲ ನಡೆಯುವ ಭುವನೋತ್ಸವ ಖ್ಯಾತಿಯ ಈ ಜಾತ್ರೆಯ ಆಚರಣೆ ಅನುಷ್ಠಾನಗಳು ವಿಶಿಷ್ಟವಾಗಿವೆ.
ಹಾಕುವುದು) ನವಮಿಯ ದಿನ ಬೆಳಿಗ್ಗೆ ದ್ವಜಾರೋಹಣ (ಗರ್ನಕಟ್ಟುವುದು) ರಾತ್ರಿ ಕುಂಡಮಂಟಪದಲ್ಲಿ ಪುಣ್ಯಾಹ,
ಸಪ್ತಶುದ್ಧಿಸ್ನಾನ, ಪ್ರಸಾದ ಶುದ್ಧಿ , ವಾಸ್ತುಹೋಮ, ದಿಶಾಹೋಮ, ಬಿಂಬಶುದ್ಧಿ, ರಜ್ಜು ಬಂದನ, ಕೌತುಕ ಬಂಧನ ಮಾಡಿ, ಜಾತ್ರೆಯ ಅಧಿಕೃತ ಆಮಂತ್ರಣ ಮತ್ತು ದೇವರಿಗೆ ಪ್ರಿಯವಾದ ಬೇರಿತಾಡನ ನೆರವೇರುತ್ತದೆ. ಸಂಜೆ ಉತ್ಸವ ಬಲಿಯಾದ ನಂತರ ಬಿರುದು ಬಾವಲಿಗಳೊಂದಿಗೆ ಮಯೂರ ವಾಹನೋತ್ಸವ ನೆರವೇರುತ್ತದೆ.
Related Articles
ಸಂಪ್ರದಾಯ. ದಶಮಿಯದಿನ ಪನ್ನಗ ವಾಹನೋತ್ಸವ. ಏಕಾದಶಿಯಂದು ರಾತ್ರಿ ರಂಗಪೂಜೆ, ಪುಷ್ಪರಥೋತ್ಸವ
ನಂತರ ವೃಷಭವಾಹನೋತ್ಸವ. ದ್ವಾದಶಿಯದಿನ ಸಂಜೆಯ ಉತ್ಸವದ ನಂತರ ದೇವರು ತೆಂಕಣಕಟ್ಟೆ ಓಲಗಕ್ಕೆ ತೆರಳಿ (ಕಾಂತೇಶ್ವರದತನಕ ) ಮರಳಿಬಂದ ನಂತರ ರಂಗಪೂಜೆ, ಪುಷ್ಪರಥೋತ್ಸವ ಮತ್ತು ಕುಂಜರವಾಹನೋತ್ಸವ.
Advertisement
ತ್ರಯೋದಶಿಯ ಸಂಜೆ ಉತ್ಸವ, ಬಡಗಿನ ಕಟ್ಟೆ ಓಲಗ (ಕುಂದೇಶ್ವರ ತನಕ) ಮರಳಿ ಬಂದನಂತರ ರಂಗಪೂಜೆ, ಪುಷ್ಪರಥೋತ್ಸವಮತ್ತು ಅಶ್ವವಾಹನೋತ್ಸವ, ಚತುರ್ದಶಿ ದಿನ, ಮೂಡಣಕಟ್ಟೆ ಓಲಗ (ಕಾಳಾವರತನಕ) ಮರಳಿ ಬಂದ ನಂತರ ದೊಡ್ಡರಂಗಪೂಜೆ, ಪುಷ್ಪರಥೋತ್ಸವ ಮತ್ತು ಸಿಂಹ ವಾಹನೋತ್ಸವ ನೆರವೇರುತ್ತದೆ. ನಂತರ ಕೋಟಿತೀರ್ಥಕ್ಕೆ ಪವಿತ್ರೋದಕ ಪ್ರೋಕ್ಷಿಸಿದ ನಂತರ ಭಕ್ತರು ತೀರ್ಥಸ್ನಾನಮಾಡಿ ದೇವರ ದರ್ಶನಕ್ಕಾಗಿ ಬರುತ್ತಾರೆ. ರಥೋತ್ಸವದ ವಿಶೇಷ ಮಹಾಪೂಜೆಯನಂತರ ಬೆಳಗ್ಗಿನ ನಿಗದಿತ ಶುಭಮುಹೂರ್ತದಲ್ಲಿ ರಥಾರೋಹಣ ನೆರವೇರುತ್ತದೆ. ಗೋಳೆದೇವರು, ತ್ರಿಶೂಲ, ಬಿದಿರಕುಡಿ, ತಾಂಡವೇಶ್ವರ ಮತ್ತು ಉತ್ಸವ ಮೂರ್ತಿಗಳು ರಥವೇರಿದ ನಂತರ ನೆರೆದ ಭಕ್ತರು ರಥವೆಳೆದು ಧನ್ಯತಾಭಾವ ತಳೆಯುತ್ತಾರೆ. ಮಧ್ಯಾಹ್ನದ ಮಹಾ ಅನ್ನಸಂತರ್ಪಣೆಯ ನಂತರ, ಸಂಜೆ ರಥಾವರೋಹಣ ನಡೆಯುತ್ತದೆ. ಅಷ್ಠಾವಧಾನಸೇವೆಯ ನಂತರ ದೇವರು ದೇವಾಲಯ ಪ್ರವೇಶಿಸುವುದು. ಮಧ್ಯರಾತ್ರಿ ಭೂತ ಬಲಿಯ ನಂತರ ಶಯನೋತ್ಸವ (ದೇವಾಲಯದ ಗಂಟೆಗಳನ್ನು ಮೊಳಗಿಸಿ ಶಬ್ದ ಮಾಡದ ಹಾಗೆ ಕಟ್ಟಿ ಹಾಕುವುದು) ನೆರವೇರುತ್ತದೆ. ಮರುದಿನ ಬೆಳಿಗ್ಗೆ ಪ್ರಭೋದೋತ್ಸವ (ವಾದ್ಯ ಘೋಷಗಳ ಮೂಲಕ ದೇವರನ್ನು ಎಬ್ಬಿಸುವುದು) ನಂತರ ವಸಂತೋತ್ಸವ ಮಾಡಿ ಕಷಾಯ ಹಂಚುವುದು, ಗಣ್ಯರಿಗೆ ಅಂಕುರ ಪ್ರಸಾದ ವಿತರಣೆ, ರಾತ್ರಿ ಉತ್ಸ ವದ ನಂತರ ಓಕುಳಿಯಾಟ ನಂತರ ಅಲ್ಲಿಂದ ಅಂಕದಕಟ್ಟೆಗೆ ತೆರಳಿ ದೇವರ ಮೃಗಯಾತ್ರೆಯ ದಿಗ್ವಿಜಯದ ಸಂಕೇತವಾಗಿ ಬಾಳೆಯ ದಿಂಡನ್ನು ಕಡಿದು ಕಟ್ಟೆಯ ಸುತ್ತ ಬಲಿಹಾಕುತ್ತಾರೆ. ಮರಳಿ ಬರುವಾಗ ರಥಬೀದಿಯಲ್ಲಿ ಶಿವಪಾರ್ವತಿಯರ ಸಂವಾದ ನಡೆದು, ಕೋಟಿತೀರ್ಥಕ್ಕೆ ತೆರಳಿ ಅವಭೃತ ಸ್ನಾನ ತೆಪ್ಪೋತ್ಸವದ ನಂತರ ರಥೋತ್ಸವ ಸಂಬಂಧ ನಡೆಯುವ ಹೋಮಾದಿಗಳು ಪೂರ್ಣಗೊಂಡು ಮಂತ್ರಾಕ್ಷತೆ ಪ್ರಸಾದ ವಿತರಣೆಯಾದ ನಂತರ ಧ್ವಜಪಟ (ಗರ್ನಬಿಚ್ಚುವುದು) ಇಳಿಸಲಾಗುತ್ತದೆ. ನಾಲ್ಕಾರು ದಿನಗಳ ನಂತರ ಒಂದು ಶುಭಮುಹೂರ್ತದಲ್ಲಿ ದೇವಳದ ಒಳಸುತ್ತಿನ ತೀರ್ಥಬಾವಿಯ ನೀರನ್ನು ಆರಿಸಿ ಶುದ್ಧಿಗೊಳಿಸುವ ಸಂಪ್ರೋಕ್ಷಣೆಯೊಂದಿಗೆ ಜಾತ್ರೆಯ ವಿಧಿಗಳು ಮುಕ್ತಾಯಗೊಳ್ಳುತ್ತವೆ. ದ್ವಜಾರೋಹಣ ದಿನದಿಂದ ರಥೋತ್ಸವದವರಗಿನ ಏಳು ದಿನಗಳ ಕಾಲ ಕುಂಡಮಂಟಪದಲ್ಲಿ ದೇವರ ಕಲಾಭಿವೃದ್ಧಿಗಾಗಿ, ಭಕ್ತಜನರ ಶ್ರೇಯೋಭಿವೃದ್ಧಿಗಾಗಿ ನವಕುಂಡಾಧಿವಾಸ ಹೋಮಗಳು ನೆರವೇರುತ್ತವೆ. ಕುಂಡಮಂಟಪದಲ್ಲಿ ನವಕುಂಡಗಳಿದ್ದು ಅಲ್ಲಿ ನಡೆಯುವ ಒಂದೊಂದು ಹೋಮಗಳು ಒಂದೊಂದು ಆಶಯದಿಂದ ಕೂಡಿವೆ. ಚರುರಸ್ರಕುಂಡದಿಂದ ಸರ್ವಕಾರ್ಯಸಿದ್ಧಿ, ಯೋನ್ಯಾರ್ಧಕುಂಡದಿಂದ ಪುತ್ರಸಂತಾನ, ಚಂದ್ರಕುಂಡದಿಂದ ಸುಖಪಾಪ್ತಿ , ತ್ರಿಕೋನ ಕುಂಡದಿಂದ ಶತ್ರುನಾಶ, ವೃಕ್ಷಕುಂಡದಿಂದ ಶಾಂತಿಪ್ರಾಪ್ತಿ, ಷಡಸ್ರಕುಂಡದಿಂದ ಮರಣಚ್ಛೇದ (ಅಕಾಲ ಮರಣ ಪರಿಹಾರ) ಪದ್ಮಕುಂಡದಿಂದ ಸಕಾಲವೃಷ್ಟಿ, ಅಷ್ಟಾಶ್ರಕುಂಡದಿಂದ ರೋಗನಾಶ, ಸಪ್ತಾಶ್ರಕುಂಡದಿಂದ ಅಭಿಚಾರಿಕಾಶಾಂತಿ
(ಮಾಟ ಮಂತ್ರಗಳಿಗೆ ಪರಿಹಾರ) ಪಂಚಾಶ್ರಕುಂಡದ ಹೋಮದಿಂದ ಭೂತಪ್ರೇತಗಳ ಉಚ್ಛಾಟನೆಯಾಗುತ್ತದೆ. ಹೋಮಿಸುವ ¨ವೃಕ್ಷಗಳಾದ ಅತ್ತಿ, ಆಲ, ಅಶ್ವತ್ಥ, ಆಜ್ಯ, ಭತ್ತದ ಅರಳು, ಚರು, ಸಾಸಿವೆ, ಎಳ್ಳು, ಜವೆಗೋಧಿ, ಭತ್ತ, ಅರಳಿನಹುಡಿ, ಪುನಃ ಆಜ್ಯ ಇವುಗಳಿಂದ, ಮೃತ್ಯು, ದಾರಿದ್ರ್ಯ ಶಮನ, ಅಯುಷ್ಯಾಭಿವೃದ್ಧಿ, ಸಮೃದ್ಧಿ, ಮಂಗಲ, ಸರ್ವರಕ್ಷೆ, ಮೃತ್ಯುನಾಶ, ಪಾಪನಾಶ,
ರೋಗಶಾಂತಿ ಮತ್ತು ಬಲವರ್ಧನೆಯಾಗಿ ಸರ್ವಾಭಿಷ್ಠಗಳು ಪ್ರಾಪ್ತಿಯಾಗುತ್ತವೆ. ಈ ಸುಮುಹೂರ್ತದಲ್ಲಿ ಶ್ರೀ
ಕೋಟಿಲಿಂಗೇಶ್ವರನ ದರ್ಶನದಿಂದ ಹೋಮ ಆಶಯಗಳ ಹಿಂದಿರುವ ಎಲ್ಲಾ ಸತ್ಪಲಗಳೂ ಭಕ್ತಾದಿಗಳಿಗೆ ಪ್ರಾಪ್ತವಾಗುತ್ತವೆ ಅಲ್ಲದೆ ರಥಾರೂಡ ದೇವರಿಗೆ ಹಣ್ಣುಕಾಯಿ ಸಮರ್ಪಣೆ ಮಾಡಿ ದರ್ಶನಪಡೆಯುದರಿಂದ ವರ್ಷ ಪರ್ಯಂತ ನಿತ್ಯ ಸೇವೆ ಮಾಡಿದಷ್ಟು ಫಲ ಪ್ರಾಪ್ತಿಯೆನ್ನುವುದು ಪ್ರತೀತಿ. ಪೂಜೆ ಪುನಸ್ಕಾರ :
ತುಳುನಾಡಿನ ಈ ಪ್ರಾಚೀನ ದೇವಾಲಯದಲ್ಲಿ ಸನಾತನ ಶೈವಾಗಮನ ಪದ್ಧತಿಗಳಂತೆ ಪೂಜೆ ಪುನಸ್ಕಾರಗಳು ನೆರವೇರುತ್ತದೆ. ಹಿಂದೆ ಇಲ್ಲಿ ದಿನದ ಬೇರೆ ಬೇರೆ ಹೊತ್ತಿನಲ್ಲಿ ಪಂಚಪೂಜೆಗಳು ನೆರವೇರುತ್ತಿದ್ದವು. ಅರುಣೋದಯದ ಕಾಲದಲ್ಲಿ ದೇವಸ್ಥಾನದ ಬಾಗಿಲು ತೆರೆಯುವಾಗ ಮಂಗಳವಾದ್ಯ ನುಡಿಸುವುದು, ಪಂಚಾಂಗ ಪಠನ ಮಾಡುವುದು, ದೇವರ ಸ್ತೋತ್ರ ಹಾಡುವುದು ಮೊದಲಾದ ಪರಿಪಾಠಗಳಿದ್ದವು. ಅರ್ಚಕರು ಸ್ಥಾನಾದಿ ಆಹ್ನಿತಗಳನ್ನು ತೀರಿಸಿ ದೇವರ ನೈರ್ಮಲ್ಯ ವಿಸರ್ಜನೆ ಮಾಡಿ ಉಷಾಕಾಲದ ಪೂಜೆ ಮಾಡುವುದು. ಆಮೇಲೆ ಉದಯ ಪೂಜೆ ಮತ್ತು ಬಲಿ, ಅದನಂತರ ಭಕ್ತಾದಿಗಳ ಸೇವೆ, ಮಧ್ಯಾಹ್ನ ರುದ್ರಾಭಿಷೇಕ, ತುಳಸಿ ಬಿಲ್ವಾರ್ಚನೆ ಸಹಿತ ಅಷ್ಟೋತ್ತರ ಸಹಸ್ರನಾಮಾವಳಿ ಪೂರ್ವಕ ಮಹಾಪೂಜೆ, ಮಹಾನೈವೇದ್ಯ, ಮಹಾ ಮಂಗಳಾರತಿ ನಂತರ ಭಕ್ತಾದಿಗಳಿಗೆ ಪ್ರಸಾದವಿತರಣೆ. ಸಂಜೆಯ ಮುಸ್ಸಂಜೆ ಹೊತ್ತಿನಲ್ಲಿ ದೇವರಿಗೆ ದೀಪಾರಾಧನೆ, ದೀವಟಿಕೆ ಸೇವೆ, ಮಂಗಳಾರತಿಯೊಂದಿಗೆ ಪ್ರದೋಷ ಪೂಜೆ, ಆಮೇಲೆ ರಾತ್ರಿ ಮಹಾಪೂಜೆ, ಮಹಾಮಂಗಳಾರತಿ ಮತ್ತು ಬಲಿ,
ಹಿಂದೆ ಇದಾದ ನಂತರ ಅಷ್ಠಾವಧಾನ ಸೇವೆ ನಡೆಯುವ ಕ್ರಮವಿತ್ತಂತೆ. ಆಮೇಲೆ ಉತ್ತರ ಪೂಜೆಯಾಗಿ ಮಂಗಳಾರತಿಯ ನಂತರ ಪ್ರಸಾದ ವಿತರಣೆಯಾಗುತ್ತದೆ. ವಿಶೇಷ ಕಟ್ಟೆ ಪೂಜೆಗಳು:
ಸಂವತ್ಸರಾದ್ಯಂತದ ಪರ್ವಕಾಲಗಳಲ್ಲಿ ಅನೇಕ ವಿಶೇಷ ಪೂಜೆಗಳು ಇಲ್ಲಿ ನೆರವೇರುತ್ತದೆ. ಪ್ರತೀ ಸೋಮವಾರ ವಿಶೇಷ ಪೂಜೆ, ಪ್ರತಿ ತಿಂಗಳ ಶುದ್ಧ ಮತ್ತು ಬಹುಳ ತ್ರಯೋದಶಿ ದಿನದ ಸೂರ್ಯಾಸ್ತಮಾನದ ಮೂರು ಮುಕ್ಕಾಲು ಘಳಿಗೆ ಅವಧಿಯಲ್ಲಿ ಪ್ರದೋಷ ಪೂಜೆ, ಸಿಂಹಮಾಸದ ಸಂಕ್ರಮಣದಿಂದ ಕನ್ಯಾಮಾಸದ ಮೊದಲ ದಿನದ ತನಕ ಸೋಣೆ ಆರತಿ ಸೇವೆ, ಸಿಂಹಮಾಸದ ಬಹುಳ ಅಷ್ಠಮಿಯ ದಿನ ಗೋಪಾಲಕೃಷ್ಣ ದೇವರಿಗೆ ಕೃಷ್ಣ ಜನ್ಮಾಷ್ಠಮಿ ಪೂಜೆ, ಮರುದಿನ ವಿಟ್ಲಪಿಂಡಿ ಉತ್ಸವ, ಭಾದ್ರಪದ ಶುದ್ಧ ತದಿಗೆ ಮತ್ತು ಚೌತಿಯಲ್ಲಿ ಗೌರಿ ಪೂಜೆ ಮತ್ತು ಗಣೇಶ ಚತುರ್ಥಿ ಆಚರಣೆ, ಭಾದ್ರಪದ ಶುದ್ಧ ತ್ರಯೋದಶಿಯ ಶ್ರವಣ ನಕ್ಷತ್ರದಲ್ಲಿ ಪವಿತ್ರಾರೋಹಣ ಶ್ರೀ ದೇವರಿಗೆ ಯಜ್ಞೋಪವೀತ ಧಾರಣೆ, ಶ್ರಾವಣ ಮಾಸದ ಕೃಷ್ಣ ಪಕ್ಷದ ಕೊನೆಯ ಶನಿವಾರ ಶ್ರೀ ವೆಂಕಟರಮಣ ದೇವರಿಗೆ ವಡೆ ಪೂಜೆ. ಅಶ್ವಯುಜ ಮಾಸದ ಶುಕ್ಲಪಕ್ಷದ ಎರಡನೇ ದಿನ ಕದಿರು ಹಬ್ಬ, ಶುದ್ಧ ಪ್ರತಿಪದೆಯಿಂದ ನವಮಿ ತನಕ ಪಾರ್ವತಿ ಅಮ್ಮನವರಿಗೆ ನವರಾತ್ರಿ ಪೂಜೆ, ಮೂಲಾ ನಕ್ಷತ್ರದಿಂದ ಶ್ರವಣ ನಕ್ಷತ್ರದ ವರೆಗೆ ಶ್ರೀ ಶಾರದಾ ಪೂಜೆ, ಅಶ್ವಯುಜ ಶುದ್ಧ ದಶಮಿಯ ದಿನ ದುರ್ಗಾಹೋಮ, ಶಮಿ ಹಂಚುವಿಕೆ, ಅಶ್ವಯುಜ ಶುದ್ಧ ದ್ವಾದಶಿಯಿಂದ ಕಾರ್ತಿಕ ಶುದ್ಧ ದ್ವಾದಶಿಯ ತನಕ ಪಶ್ಚಿಮ ಜಾರಗಣೆ ಪೂಜೆ, ಅಶ್ವಯುಜ ಬಹುಳ ಚತುದರ್ಶಶಿಯಂದು ಮಧ್ಯಾಹ್ನ ಸೀಗೆಕೊಡಿಗೆ ಪೂಜೆ ಮರುದಿನ ದೀಪಾವಳಿ. ಅಮಾವಾಸ್ಯೆಯಂದು ಸೀಗೆ ಕೊಡಿಗೆ ನೈವೇದ್ಯ ಮಾಡಿ ಪೂಜೆಯ ನಂತರ ಬಲಿಮೂರ್ತಿ, ತಾಂಡವೇಶ್ವರ ಮತ್ತು ಗೋಳೆ ದೇವರೊಂದಿಗೆ ಸಮುದ್ರ ಸ್ನಾನಕ್ಕೆ ತೆರಳುವುದು. ಕಾರ್ತಿಕ ಶುದ್ಧ ಪಾಡ್ಯದಿಂದ ಬಹುಳ ಅಮಾವಾಸ್ಯೆಯ ತನಕ ತುಳಸೀ ಪೂಜೆ. ಕಾರ್ತಿಕ ಶುದ್ಧ ಹುಣ್ಣಿಮೆಯ ದಿನ ಶಿಖರೇಶ್ವರನಿಗೆ ಶಿಖರದೀಪ, ಮಾರ್ಗಶಿರ ಶುದ್ಧ ಷಷ್ಠಿಯದಿನ ಸುಬ್ರಹ್ಮಣ್ಯ ದೇವರಿಗೆ ಷಷ್ಠಿ ಪೂಜೆ, ಧನುರ್ಮಾಸದ ಒಂದು ತಿಂಗಳು ಧನುರ್ಮಾಸ ಪೂಜೆ, ಕಾರ್ತಿಕ ಬಹುಳ ತ್ರಯೋದಶಿಯಂದು ದೀಪೋತ್ಸವ. ಮಾಘ ಮಾಸದ ಬಹುಳ ಚತುರ್ದಶಿಯ ದಿನ ಮಹಾ ಶಿವರಾತ್ರಿ ಆಚರಣೆ, ಮೇಷ ಸಂಕ್ರಮಣದ ಮರುದಿನ ಯುಗಾದಿ ಆಚರಣೆ, ಪಂಚಾಂಗ ಪಠಣ ಹೀಗೆ ಸಂವತ್ಸರಾದ್ಯಂತ ಬರುವ ಪರ್ವಕಾಲದ ಸರ್ವ ದಿನಗಳಲ್ಲಿಯೂ ದೇವಸ್ಥಾನದಲ್ಲಿ ವಿಶೇಷ ಕಟ್ಲೆ ವಿನಿಯೋಗಗಳು ನೆರವೇರುತ್ತವೆ. ಇಲ್ಲಿ ಶಿವನ ಸನ್ನಿಧಾನ ಪ್ರಧಾನವಾಗಿದ್ದರೂ ಸಹ, ಶಾಕ್ತ, ಗಾಣಪತ್ಯರಾದಿಯಾಗಿ ಎಲ್ಲರಿಗೂ
ವಿಶೇಷವಾದ ಶ್ರದ್ಧಾಭಕ್ತಿಯ ಕೇಂದ್ರವಾಗಿದೆ. ಬ್ರಹ್ಮರಥೋತ್ಸವ:
ಶಿವನ ಸಾನ್ನಿಧ್ಯ ಸೃಷ್ಠಿಯಾದ ದಿನದಂದು ಇಲ್ಲಿ ಬ್ರಹ್ಮ ರಥೋತ್ಸವ ನೆರವೇರುತ್ತದೆ. ಸೌರಮಾನದ ವೃಶ್ಚಿಕಮಾಸದ ಹುಣ್ಣಿಮೆ, ಚಾಂದ್ರಮಾಸದ ಕಾರ್ತಿಕ ಅಥವಾ ಮಾರ್ಗಶಿರ ಮಾಸದ ಹುಣ್ಣಿಮೆ ದಿನ ಈ ರಥೋತ್ಸವ ನೆರೆವೇರುತ್ತದೆ. ಧ್ವಜಾರೋಹಣದಿಂದ ರಥೋತ್ಸವದವರೆಗೆ ಏಳು ದಿನ ಪರ್ಯಂತ ನಡೆಯುವ ಹಬ್ಬವಾದ ಕಾರಣ ಇದನ್ನು ಭುವನೋತ್ಸವ ಎಂದು ಕರೆಯಲಾಗಿದೆ. ಚಲಿಸುವ ದೇವಾಲಯವೆಂದೇ ಪ್ರತೀತಿ ಪಡೆದ ರಥದಲ್ಲಿ ರಥಾರೂಢನಾದ ಶಿವನ ದರ್ಶನ, ಅರ್ಚನೆ, ಆರಾಧನೆಗಳು
ವರ್ಷವಿಡಿ ನಿತ್ಯ ನಿರಂತರ. ದೇವರ ದರ್ಶನ ಮಾಡಿದ ಮಹಾಭಾಗ್ಯಕ್ಕೆ ಸಮವೆಂದು ನಂಬಿಕೆಗಳಿವೆ. ಇಲ್ಲಿಯ ಬ್ರಹ್ಮರಥ ಸುಮಾರ 5 ಶತಮಾನಗಳಷ್ಟು ಹಿಂದಿನದಾಗಿದ್ದು ಅಪೂರ್ವ ಕಾಷ್ಠಶಿಲ್ಪದ ಕಲಾಕೃತಿಗಳಿಂದ ಪ್ರಸಿದ್ಧಿ ಪಡೆದಿದೆ. ಹಿಂದೆ ಸುಮಾರು 120 ಅಡಿಗಳಷ್ಟು ಎತ್ತರವಿದ್ದ ಈ ರಥ ಈಗ ಗಾತ್ರದಲ್ಲಿ ಸುಮಾರು 95 ಅಡಿಗಳಿಗೆ ಸೀಮಿತಗೊಂಡಿದೆ. ಹಬ್ಬದ ವೈಭವ:
“ಕೊಡಿಹಬ್ಬ ಕಾಣಲು ಕಣ್ಣೆರಡು ಸಾಲದು” ಇದೊಂದು ಜಾನಪದ ಉಕ್ತಿ ಮಾತ್ರವಲ್ಲ ನೂರಕ್ಕೆ ನೂರು ಸತ್ಯವಾದ ಮಾತು.
ಜನಮರುಳೋ ಜಾತ್ರೆ ಮರುಳೋ ಎಂಬ ಮಾತಿನಂತೆ ಲಕ್ಷಾಂತರ ಜನರ ಸಂದೋಹ ಇಲ್ಲಿ ಕಾಣಬಹುದು. ಐದಾರು ದಶಕಗಳ ಹಿಂದೆ ಈ ಜಾತ್ರೆ ತಿಂಗಳಿಗೂ ಮಿಕ್ಕಿ ನಡೆಯುತ್ತಲಿತ್ತು. “ಹಸ್ರ’ ಎಂದು ಕರೆಯುವ ಹಬ್ಬದ ಅನಂತರದ ಒಂದು ತಿಂಗಳು ರಥಬೀದಿಯಲ್ಲಿ ವ್ಯಾಪಾರ ವ್ಯವಹಾರಗಳು ಜೋರಾಗಿ ನಡೆಯುತ್ತಿದ್ದವು. ಕೋಟೇಶ್ವರ ಘಟ್ಟದ ಕೆಳಗಿನವರಿಗೆ ವಾರ್ಷಿಕ ವ್ಯಾಪಾರದ ದೊಡ್ಡ ಕೇಂದ್ರವಾಗಿತ್ತು. ಈ ಹಬ್ಬ ಮನುಕುಲದ ಹತ್ತು ಹಲವು ಆಶೋತ್ತರಗಳಿಗೆ ಆಶ್ರಯತಾನ. ಒಂದೆಡೆ ತಮ್ಮ ಚೆಲುವು ಚಂದ ನೋಡಲೆಂದೇ ಶೃಂಗರಿಸಿಕೊಂಡ ಹೆಣ್ಣು ಗಂಡುಗಳ ತಾಳೆ ನೋಡುವ ಸಂಭ್ರಮ. ಘಟ್ಟದಿಂದ ಇಳಿದು ಬರುವ ಖರ್ಜೂರ, ಬೇಳೆಕಾಳು, ಘಾಟಿ ಮೆಣಸು, ಸಂಬಾರಜಿನಸುಗಳನ್ನು ಕೊಂಡೊಯ್ಯುವ ಸಡಗರ, ಊರಿನ, ಮಂಡಕ್ಕಿ ಕಾರ್ಕಡ್ಡಿ ಸಕ್ಕರೆ ಕಡ್ಡಿ, ಸಕ್ಕರೆ ಮಿಠಾಯಿ, ಬತ್ತಾಸು, ಜಿಲೇಬಿ, ಹುರಿಗಡಲೆಗಳನ್ನು ಸವಿಯುವ ಕಾತರ. ಬಾಯಾರಿದರೆ ಮುಸುಂಬಿ, ಕಿತ್ತಳೆ, ಕರ್ಗುಂಜಿ, ಹಣೆಕಣ್ಣು, ಸೋಡಾ ಶರ್ಭತ್ತುಗಳು ಸದಾ ಲಭ್ಯ. ಹೆಣ್ಣು ಮಗುವಿನ ಬಣ್ಣ, ಬಣ್ಣದ ರಿಬ್ಬನಿನಿಂದ ಅಜ್ಜಂದಿರ ಅಂಗಿಗುಂಡಿವರೆಗಿನ ಎಲ್ಲವೂ ಇಲ್ಲಿ ಲಭ್ಯ. ಹದಿಹರೆಯದ ಹೆಣ್ಮಕ್ಕಳ ಶೃಂಗಾರ ಸಾಧನಗಳ ಸಂಗ್ರಹದ ಲವಲವಿಕೆ. ಪದ್ಮಾಸನ ಹಾಕಿ ಬಳೆಗಾರ್ತಿಯರ ಮುಂದು ಕುಳಿತು ಬಳೆ ತೊಡಿಸಿಕೊಂಡು, ಬಳೆ ರಾಶಿಗೆ ನಮಸ್ಕಾರ ಮಾಡಿ ತೆರಳುವ ಆ ಭಾವನಾತ್ಮಕ ಸಂಬಂಧ ಅವಿಸ್ಮರಣೀಯ. ಪುಟ್ಟ ಮಕ್ಕಳಿಗಂತೂ ಸ್ವರ್ಗವೇ ಕೈಗೆ ಸಿಕ್ಕಿದಷ್ಟು ಸಂತೋಷ. ತಟ್ಟಿರಾಯನೊಂದಿಗೆ ಕುಣಿದು, ಅದರ ಒಳಗೇನಿದೆ, ಯಾರಿದ್ದಾರೆ ಎಂದು ಇಣಿಕಿ ನೋಡುವ ಪುಂಡಾಟಿಕೆ. ಅವರಿವರು ಕೊಟ್ಟ ಪುಡಿಕಾಸನ್ನು ಚೆಂಡು, ಗೋಲಿ, ಕೊಳಲು, ಪಿಂಪ್ರಿ ಅಂತ ಪುಡಿಮಾಡಿ, ಕಿಸೆ ಖಾಲಿ ಆದ ನಂತರ ಮನೆಯ ದಿಸೆ ಹಿಡಿಯುವುದು ಸಾಮಾನ್ಯ. ಮಕ್ಕಳಾಟಿಕೆಯ ಈ ಸುಖ ಜೀವಿತಾವಧಿಯಲ್ಲಿ ಮತ್ತೆಂದೂ ಮರುಕಳಿಸದಂಥಹಾ ಅನುಭವ. ಅದಕ್ಕೆಂದೇ ಕೋಟೇಶ್ವರದ ಕೊಡಿಹಬ್ಬ ನೋಡಿದ ಮಹಾನ್ ಸಾಹಿತಿ ಶಿವರಾಮ ಕಾರಂತರು ಹೇಳಿದ್ದರು “ಭುವನೇಶ್ವರಕ್ಕೆ ಹೋದರೂ ಕೋಟೇಶ್ವರ
ಮರೆಯೆ” ಎಂದು. ರಾಜ್ಯದ ಅತೀ ದೊಡ್ಡ ಕೋಟಿತೀರ್ಥ ಪುಷ್ಕರಿಣಿ ನಾಲ್ಕೂವರೆ ಎಕರೆ ವಿಸ್ತೀರ್ಣದ ಇಲ್ಲಿನ ಕೋಟಿ ತೀರ್ಥ ಪುಷ್ಕರಿಣಿ ಪುರಾಣ ಕಾಲದಲ್ಲಿ ಬ್ರಹ್ಮತೀರ್ಥ, ಬ್ರಹ್ಮಸರೋವರ, ಶಿವಗಂಗೆ, ಕೋಟಿ ಸರೋವರ ಮುಂತಾದ ಹೆಸರುಗಳಿಂದ ಗುರುತಿಸ್ಪಟ್ಟಿತ್ತು. ಈ ಕೆರೆಯ ಆಗ್ನೇಯ ದಿಕ್ಕಿನ ಮೂಲೆಯಲ್ಲಿ ಒಂದು ಸುರಂಗವಿದ್ದು, ಅದರ ಇನ್ನೊಂದು ತುದಿ ಕೋಟ ಸಮೀಪದ ವಂಡಾರು ಎಂಬಲ್ಲಿ ಇದ್ದು ಇದರಲ್ಲಿ ಮೊಸಳೆ ವಾಸವಾಗಿತ್ತು ಎಂಬ ಪ್ರತೀತಿ ಇದೆ. ವಂಡಾರು ಕಂಬಳವಾದಾಗ
ಕೋಟಿತೀರ್ಥ ಪುಷ್ಕರಿಣಿ ನೀರು ಕೆಸರಾಗುತ್ತಿದ್ದು ಇಲ್ಲಿ ಕೊಡಿಹಬ್ಬದ ದಿನ ರಥ ಎಳೆದಾಗ ವಂಡಾರು ಕಂಬಳ ಗದ್ದೆಯಲ್ಲಿ ಧೂಳು ಏಳುತ್ತಿತ್ತು ಎಂದು ವಿರ್ಮಶಕರು ವಿಶ್ಲೇಷಿಸಿದ್ದಾರೆ. ಕೋಟಿತೀರ್ಥ ಪುಷ್ಕರಿಣಿಯಲ್ಲಿ ನವ ವಧೂವರರಿಂದ ಅಕ್ಕಿ ಚೆಲ್ಲುವ ಆಚರಣೆ ಸೌರಮಾನ ವೃಶ್ಚಿಕ ಮಾಸದಲ್ಲಿ ಚಾಂದ್ರಮಾನ ಕಾರ್ತಿಕ ಅಥವಾ ಮಾರ್ಗಶಿರ ಹುಣ್ಣಿಮೆಯಂದು ಕೋಟೇಶ್ವರ ರಥೋತ್ಸವ ನಡೆಯುವುದು ಸಂಪ್ರದಾಯ. ಬ್ರಹ್ಮಾ ದಿದೇವತೆಗಳಿಗೂ, ಋಷಿಮುನಿಗಳಿಗೂ ಈಶ್ವರನು ಕೊಡಿಹಬ್ಬದಂದು ಕೋಟಿಲಿಂಗಾಕಾರ ವಾಗಿ ಕಾಣಿಸಿಕೊಂಡಿದ್ದನೆಂದು, ನಾರದರು ವಸು ಚಕ್ರವರ್ತಿಗೆ ಇದೇ ದಿನ ಹಬ್ಬ ಆಚರಿಸಬೇಕೆಂದು ಹೇಳಿದ್ದರೆಂದು ಸ್ಥಳ ಪುರಾಣದಲ್ಲಿ ವಿಶ್ಲೇಷಿಸಿರುವುದು ರಥೋತ್ಸವ ಆಚರಿಸುವ ದಿನ ಆಯ್ಕೆಯ ವಿಶೇಷತೆಯಾಗಿದೆ. ಪರಶುರಾಮ ಸೃಷ್ಟಿಯ ಸಪ್ತ ಕ್ಷೇತ್ರಗಳಲ್ಲಿ ರಥೋತ್ಸವ ಆಚರಿಸಲಾಗುತ್ತಿದ್ದರೂ ಆಯ್ಕೆ ಮಾಡಿಕೊಂಡ ದಿನಗಳಲ್ಲಿ ವಿಶೇಷತೆ ಇದೆ. ಸುಬ್ರಹ್ಮಣ್ಯ (ಮಾರ್ಗಶಿರ ಶುದ್ಧ ಷಷ್ಠಿ) ಕೊಲ್ಲೂರು (ಫಾಲ್ಗುಣ ಬಹುಳ ಸಪ್ತಮಿ) ಹಾಗೂ ಗೋಕರ್ಣದಲ್ಲಿ (ಫಾಲ್ಗುಣ ಶುದ್ಧ ಪಾಡ್ಯ) ಚಾಂದ್ರಮಾನ ಮಾಸಗಳ ಲೆಕ್ಕದಲ್ಲಿ ರಥೋತ್ಸವವಾಗುವುದಾದರೆ ಉಡುಪಿ (ಮಕರ ಸಂಕ್ರಮಣ ದಿನ) ಶಂಕರನಾರಾಯಣ ಮತ್ತು ಕುಂಭಾಶಿ (ಮಕರಮಾಸ ಎರಡು ಸಲುವ) ದಿನಗಳಲ್ಲಿ ಸೌರಮಾನ ಪದ್ಧತಿಯಂತೆ ರಥೋತ್ಸವ ಜರಗುವುದು. ಕೊಡಿಹಬ್ಬದ ಧಾರ್ಮಿಕ ಆಚರಣೆಯು ಬಹಳಷ್ಟು ವಿಶೇಷತೆಯಿಂದ ಕೂಡಿದ್ದು, ಪರಂಪರಾಗತವಾಗಿ ನಡೆದು ಬಂದ ಧರ್ಮಶ್ರದ್ಧೆ ಹಾಗೂ ನಿಷ್ಠೆಗೆ ಕ್ಷೇತ್ರದ ಇತಿಹಾಸ ಪ್ರಮುಖ ಆಧಾರವಾಗಿದೆ. ವಧು-ವರ ಅನ್ವೇಷಣೆ
ಕೊಡಿಹಬ್ಬದ ದಿನದಂದು ಕೋಟಿಲಿಂಗೇಶ್ವರನ ಸಾನ್ನಿಧ್ಯದಲ್ಲಿ ವಧು-ವರರ ಕಡೆಯವರು ಆಗಮಿಸಿ ಪರಸ್ಪರ ಅರಿತು ಇಷ್ಟವಾದಲ್ಲಿ ಕೈಜೋಡಿಸುವ ತಾಂಬೂಲ ವಿನಿಮಯ ಕಾರ್ಯಕ್ರಮ ಇಂದು ರೂಢಿಯಲ್ಲಿದೆ.ವಧು ಕೈಗೂಡಿ ಬಂದರೆ ಮದುವೆಯಾದ ಅನಂತರದ ಕೊಡಿಹಬ್ಬದ ಸಮಯದಲ್ಲಿ ಇಲ್ಲಿಗೆ ಆಗಮಿಸಿ ಕೋಟಿತೀರ್ಥ ಪುಷ್ಕರಣಿಯ ನಾಲ್ಕು ಭಾಗಗಳಿಗೆ
ಅಕ್ಕಿಯನ್ನು ಚೆಲ್ಲಿ ದೇವರ ದರ್ಶನ ಪಡೆದು ಕಬ್ಬಿನ ಕೊಡಿಯೊಂದಿಗೆ ಮನೆಗೆ ಸಾಗುವ ಪದ್ದತಿಯು ಇಂದಿಗೂ ಮುಂದುವರಿದಿದೆ.
*ಮಾರ್ಕೋಡು ಗೋಪಾಲಕೃಷ್ಣ ಶೆಟ್ಟಿ
ಮಾಹಿತಿ:ಪ್ರೊ.ಎಸ್.ಎನ್. ಉಡುಪ ಸುಬ್ರಹ್ಮಣ್ಯ