Advertisement

ಕೋಡಿಬೆಂಗ್ರೆ-ಹಂಗಾರಕಟ್ಟೆ ಮಿನಿ ಬಾರ್ಜ್‌ ಸ್ಥಗಿತ

11:30 PM May 22, 2020 | Sriram |

ಕೋಟ: ಕೋಡಿಬೆಂಗ್ರೆ ಯಿಂದ ಹಂಗಾರಕಟ್ಟೆಯನ್ನು ಸಂಪರ್ಕಿ ಸುವ ಮಿನಿ ಬಾರ್ಜ್‌ ಸೇವೆ ಲಾಕ್‌ಡೌನ್‌ನ ಕಾರಣಕ್ಕೆ ಸ್ಥಗಿತಗೊಂಡಿದ್ದು ಇದೀಗ ಲಾಕ್‌ಡೌನ್‌ ಸಡಿಲಗೊಂಡು ಬಸ್ಸು ಮುಂತಾದ ಸಾಮೂಹಿಕ ಸೇವೆಗಳು ಪುನರಾರಂಭಗೊಂಡರೂ ಪುನರಾರಂಭಗೊಂಡಿಲ್ಲ. ಇದರಿಂದಾಗಿ ಎರಡು ಪ್ರದೇಶಗಳ ನೂರಾರು ಮಂದಿ ಕಾರ್ಮಿಕರು, ಸ್ಥಳೀಯರಿಗೆ ಪ್ರತಿ ದಿನ ಸಮಸ್ಯೆಯಾಗುತ್ತಿದೆ.

Advertisement

ಸ್ಥಳೀಯರಿಗೆ ಸಮಸ್ಯೆ
ಅರಬ್ಬಿ ಸಮುದ್ರವನ್ನು ಸೇರುವ ಸೀತಾನದಿಯ ಅಳಿವೆ ಹಾಗೂ ಸುತ್ತಲೂ ಸಮುದ್ರದಿಂದ ಆವೃತ್ತವಾದ ದ್ವೀಪ ಪ್ರದೇಶ ಕೋಡಿ ಬೆಂಗ್ರೆ. ಇಲ್ಲಿ ನೂರಾರು ಮನೆಗಳಿದ್ದು ಇಲ್ಲಿನ ನಿವಾಸಿಗಳು ಮೀನುಗಾರಿಕೆ, ಗ್ರಾ.ಪಂ. ಕಚೇರಿ, ಬ್ಯಾಂಕ್‌ಗಳಿಗೆ ಭೇಟಿ ಮುಂತಾದ ನಿತ್ಯ ಕೆಲಸಗಳಿಗೆ ಮಿನಿ ಬಾರ್ಜ್‌ ಮೂಲಕ ಹಂಗಾರಕಟ್ಟೆ, ಮಾಬುಕಳ, ಸಾಸ್ತಾನಕ್ಕೆ ಭೇಟಿ ನೀಡುತ್ತಾರೆ. ಇವರು ಬಾರ್ಜ್‌ ಹೊರತುಪಡಿಸಿ ಹಂಗಾರಕಟ್ಟೆ-ಕೋಡಿ ಕನ್ಯಾಣವನ್ನು ಸಂಪರ್ಕಿಸ ಬೇಕಾದರೆ ಕೆಮ್ಮಣ್ಣು, ನೇಜಾರು,ಸಂತೆಕಟ್ಟೆ ಬ್ರಹ್ಮಾವರ ಮೂಲಕ ಸುಮಾರು25 ಕಿ.ಮೀ ಸುತ್ತುವರಿದು ಪ್ರಯಾಣಿಸಬೇಕು ಮತ್ತು ರಿಕ್ಷಾದವರಿಗೆ 300-400ರೂ ನೀಡಬೇಕು. ಆದರೆ ಬಾರ್ಜ್‌ ಮೂಲಕ 4-5 ಕಿ.ಮೀ ಪ್ರಯಾಣದಲ್ಲೆ ತಲುಪಬಹುದು. ಇದೀಗ ಸೇವೆ ಸ್ಥಗಿತಗೊಂಡಿರುವುದರಿಂದ ಕೆಲವರು ಸ್ವಂತ ದೋಣಿಯ ಮೂಲಕ ಸಂಚರಿಸುತ್ತಿದ್ದಾರೆ ಹಾಗೂ ಮತ್ತೆ ಕೆಲವರಿಗೆ ಸಂಪರ್ಕ ಸಾಧ್ಯವಾಗದೆ ಸಾಕಷ್ಟು ಸಮಸ್ಯೆಯಾಗುತ್ತಿದೆ.

ಬಸ್ಸು ಸೇವೆ
ರೀತಿಯಲ್ಲೇ ಆರಂಭಿಸಿ
ಮಿನಿ ಬಾರ್ಜ್‌ ಪುನರಾರಂಭದ ಕುರಿತು ಸ್ಥಳೀಯರು ಒಳನಾಡು ಜಲಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗಲಿದೆ. ಇದೇ ಕಾರಣಕ್ಕೆ ಸೇವೆ ಪುನರಾರಂಭಗೊಂಡಿಲ್ಲ ಎನ್ನುತ್ತಿದ್ದಾರೆ. ಆದರೆ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್‌ ಬಳಕೆಯನ್ನು ಕಡ್ಡಾಯಗೊಳಿಸುವ ಮೂಲಕ ಬಸ್ಸು ಸೇವೆ ಅವಕಾಶ ನೀಡಿದಂತೆ ಬಾರ್ಜ್‌ ಸೇವೆಯನ್ನು ಆರಂಭಿಸಬೇಕು ಎನ್ನುವುದು ಸ್ಥಳೀಯರ ಮನವಿಯಾಗಿದೆ.

ಶೀಘ್ರ ಕ್ರಮಕೈಗೊಳ್ಳಲಿ
ಮಿನಿ ಬಾರ್ಜ್‌ ಸೇವೆ ಸ್ಥಗಿತಗೊಂಡಿರುವುದರಿಂದ ಸ್ಥಳೀಯ ನೂರಾರು ಮಂದಿಗೆ ಪ್ರತಿದಿನ ಸಮಸ್ಯೆಯಾಗುತ್ತಿದೆ. ಈ ಕುರಿತು ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದರೂ ಪೂರಕ ಪ್ರತಿಕ್ರಿಯೆ ಇಲ್ಲ. ಆದ್ದರಿಂದ ಜಿಲ್ಲಾಡಳಿತ ಈ ಕುರಿತು ಸೂಕ್ತ ಕ್ರಮಕೈಗೊಳ್ಳಬೇಕು.
-ನವೀನ್‌ ಕುಂದರ್‌, ಸ್ಥಳೀಯ ಗ್ರಾ.ಪಂ. ಸದಸ್ಯ

ಸೂಚನೆ ನೀಡಿದರೆ ಸಿದ್ಧ
ಕೋವಿಡ್-19 ವೈರಸ್‌ ಸಮಸ್ಯೆಯ ಕಾರಣಕ್ಕೆ ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಎಲ್ಲ ಬಾರ್ಜ್‌ಗಳ ಸೇವೆಯನ್ನು ಮೇ 31ರ ತನಕ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಆದರೆ ಹಂಗಾರಕಟ್ಟೆಯಲ್ಲಿ ಪುನರಾರಂಭಕ್ಕೆ ಸ್ಥಳೀಯರಿಂದ ಬೇಡಿಕೆ ಇದೆ. ಜಿಲ್ಲಾಡಳಿತ ಸೂಚನೆ ನೀಡಿದರೆ ಕ್ರಮಕೈಗೊಳ್ಳಲಾಗುವುದು.
-ಥೋಮಸ್‌, ಫೆರ್ರಿ ತಪಾಸಕ

Advertisement
Advertisement

Udayavani is now on Telegram. Click here to join our channel and stay updated with the latest news.

Next